Feb 25, 2019

ಒಂದು ಬೊಗಸೆ ಪ್ರೀತಿ - 7

ondu bogase preeti
ಡಾ. ಅಶೋಕ್. ಕೆ. ಆರ್ ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕೆಲವೊಮ್ಮೆ ಮದುವೆಯಾಗಿದ್ದಾದರೂ ಯಾವ ಸಂಭ್ರಮಕ್ಕೆ ಎನ್ನಿಸಿಬಿಡುತ್ತೆ. ಒಂದಿಷ್ಟು ಪ್ರೀತಿಯೂ ರಾಜೀವನಿಗೆ ನನ್ನ ಮೇಲೆ ಇಲ್ಲವೇನೋ ಎನ್ನುವ ಅನುಮಾನ ಬರುವುದು ಅಪರೂಪವಾದರೂ ಬರುತ್ತದೆಯೆನ್ನುವುದು ಯಾಕೋ ಎಲ್ಲವೂ ಸರಿ ಹೋಗ್ತಿಲ್ಲದಿರುವುದರ ಸೂಚನೆಯಾ? ನಮ್ಮ ಮನೆಯ ಪಕ್ಕವೇ ಅವರ ಮನೆಯಿದ್ದಿದ್ದು. ನಾನು ಎಂಟನೇ ತರಗತಿ ಓದುತ್ತಿರುವಾಗಲೇ ಅವರಿಗೆ ನನ್ನ ಮೇಲೆ ಮನಸ್ಸಿತ್ತಂತೆ. ಆಗವರು ಹತ್ತನೇ ಕ್ಲಾಸು. ‘ಏನ್ರೀ ನಾನು ದೊಡ್ಡೋಳಾಗ್ತಿದ್ದ ವಿಷಯ ಗೊತ್ತಾಗ್ತಿದ್ದಂತೆ ಲೈನ್ ಹೊಡೆಯೋಕೆ ಶುರು ಮಾಡಿದ್ರಾ’ ಎಂದು ರೇಗಿಸುತ್ತಿರುತ್ತೇನೆ. ಮೂಡ್ ಚೆನ್ನಾಗಿದ್ರೆ ನಕ್ಕು ಒಂದು ಮುತ್ತು ಕೊಡುತ್ತಾರೆ, ಎರಡೂ ಕೆನ್ನೆಗೊಂದೊಂದು. ನನಗೇನೋ ಮುತ್ತು ಎಂದರೆ ತುಟಿಗೆ ತುಟಿಗೆ ಒತ್ತಿ ಕಳೆದುಹೋಗೋದೇ ಚೆಂದ ಅನ್ನಿಸುತ್ತೆ. ಅವರಿಗದು ಅಷ್ಟು ಇಷ್ಟವಾಗಲ್ಲ, ಎಂಜಲಾಗುತ್ತೆ ಅಂತಾರೆ! ಮೂಡ್ಸರಿ ಇರಲಿಲ್ಲವಾ ಅದೇ ನಾನು ಜೀವನದಲ್ಲಿ ಮಾಡಿದ ಮೊದಲ ಮತ್ತು ಕೊನೆಯ ತಪ್ಪು. ನಿನ್ನ ಕಟ್ಕೊಳ್ಳದೇ ಹೋಗಿದ್ರೆ ಜೀವನ ಚೆನ್ನಾಗಿರ್ತಿತ್ತು ಅಂತ ಮುಖದ ಮೇಲೆ ಹೊಡೆದಂಗೆ ಹೇಳಿಬಿಡೋರು. ಇವತ್ತು ಸಂಜೆ ಅವರ ಮೂಡು ಸ್ವಲ್ಪವೂ ಸರಿಯಿರಲಿಲ್ಲ ಎನ್ನಿಸುತ್ತೆ. ಬಾಗಿಲು ತೆಗೆಯುತ್ತಿದ್ದಂತೆ ‘ವೆಲಕಮ್ ರಾಜಿ ಡಾರ್ಲಿಂಗ್’ ಎಂದ್ಹೇಳಿ ತಬ್ಬಿಕೊಳ್ಳಲು ಕೈಚಾಚಿದೆ. ಎಷ್ಟೇ ಕೋಪವಿದ್ದರೂ ಒಮ್ಮೆ ತಬ್ಬಿ ದೂರ ತಳ್ಳುತ್ತಿದ್ದರು. ಇವತ್ಯಾಕೋ ಪೂರ್ತಿ ಅನ್ಯಮನಸ್ಕರಾಗಿಬಿಟ್ಟಿದ್ದಾರೆ. ನೆಪಕ್ಕೂ ತಬ್ಬಿಕೊಳ್ಳದೆ “ಬರೀ ಪ್ರೀತಿ ಪ್ರೇಮದಿಂದ ಹೊಟ್ಟೆ ತುಂಬಲ್ಲ ಧರಣಿ. ಮೂರೊತ್ತು ತಬ್ಕೊಂಡು ಮಲಗಿಕೊಂಡ್ರೆ ಇಂತ ಚಿಕ್ಕ ಚಿಕ್ಕ ಬಾಡಿಗೆ ಮನೆಯಲ್ಲೇ ಸತ್ತು ಹೋಗಬೇಕಾಗುತ್ತೆ” ಎಂದ್ಹೇಳಿ ನನ್ನನ್ನು ಬದಿಗೆ ಸರಿಸಿ ಚಪ್ಪಲಿಯನ್ನು ಕಳಚಿ ಸೀದಾ ರೂಮಿಗೋಗಿ ಮಲಗಿಕೊಂಡರು. ಮಧ್ಯಾಹ್ನದ ಅಡುಗೆ ಮಾಡಿ ಸ್ವಲ್ಪೇ ಸ್ವಲ್ಪ ಊಟ ಮಾಡಿದ್ದೆ. ಎರಡು ಘಂಟೆ ಮಲಗಿ ಎದ್ದಾಗ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಬೇಕೆನ್ನಿಸಿತ್ತು. ಗೀಸರ್ ಆನ್ ಮಾಡಿ ಇಪ್ಪತ್ತು ನಿಮಿಷ ಪತ್ರಿಕೆ ಓದಿ ಸ್ನಾನಕ್ಕೆ ಹೋಗಿ ಬೆತ್ತಲಾದೆ. ನೀರು ಸುಡುವಷ್ಟು ಬಿಸಿಯಿತ್ತು. ತಣ್ಣೀರು ಬೆರೆಸಿಕೊಳ್ಳಬೇಕು ಎನ್ನಿಸಲಿಲ್ಲ. ಬಿಸಿ ಬಿಸಿ ನೀರನ್ನು ಸುರಿದುಕೊಳ್ಳುತ್ತಾ ದೇಹದ ಮೇಲೆಲ್ಲಾ ಸೋಪು ಸರಿಸುತ್ತಿರಬೇಕಾದರೆ ಕಾಮನೆಗಳು ಅರಳಿದವು. ನಾನೂ ರಾಜಿ ಸೇರಿ ಹತ್ತು ದಿನದ ಮೇಲಾಗಿತ್ತು. ಇವತ್ತವರು ಆರೂವರೆಗೆಲ್ಲ ಬಂದರೆ ಸಂಜೆಯೇ ಒಮ್ಮೆ ಸೇರಿ ತಬ್ಬಿಕೊಂಡು ಮಲಗಿ ಎದ್ದು ಊಟ ಮಾಡಿ ಮತ್ತೆ ರಾತ್ರಿ ಸುಸ್ತಾಗುವವರೆಗೆ ಸೇರಿಬಿಡಬೇಕು ಎಂದುಕೊಂಡಿದ್ದೆ. ಅದೇ ಮನಸ್ಸಿನಲ್ಲಿ ಅವರನ್ನು ತಬ್ಬಿಕೊಳ್ಳಲು ಬಾಗಿಲು ತೆರೆದರೆ ಈ ರೀತಿಯ ಮಾತುಗಳು. ರೂಮಿಗೆ ಹೋಗಿ ಏನಾಯ್ತುರೀ ಎಂದು ಕೇಳಲೂ ಮನಸ್ಸಾಗಲಿಲ್ಲ. ಹಾಲಿನಲ್ಲೇ ಟಿವಿ ನೋಡುತ್ತಾ ಕುಳಿತೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Feb 17, 2019

ಒಂದು ಬೊಗಸೆ ಪ್ರೀತಿ - 6

ondu bogase preeti
ಡಾ. ಅಶೋಕ್. ಕೆ. ಆರ್
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಮನೆಗೆ ಹೋದರೆ ರಾಜೀವ್ ಇನ್ನೂ ಎದ್ದಿರಲಿಲ್ಲ. ರಾತ್ರಿ ಪಾರ್ಟಿ ಜೋರಾಗಿರಬೇಕು, ಬಾಗಿಲು ತೆರೆದಾಗ ವಿಸ್ಕಿಯ ವಾಸನೆ ಗಮ್ಮೆನ್ನುತ್ತಿತ್ತು. ನಿದ್ರೆಯ ಮತ್ತಲ್ಲೇ ಮುತ್ತು ಕೊಡಲು ಬಂದರು, ‘ಮೊದ್ಲು ಸ್ನಾನ ಮಾಡ್ ನಡೀರಿ. ವಾಸ್ನೆ ಹೊಡೀತಿದೀರ. ಮುತ್ತೆಲ್ಲ ಆಮೇಲೆ’ ನಗುತ್ತ ದೂರ ತಳ್ಳಿದೆ. ರಾತ್ರಿ ಅವರಿಗೆಂದು ಮಾಡಿಟ್ಟಿದ್ದ ಅನ್ನ ಬೇಳೆಸಾರನ್ನು ಅವರು ಮುಟ್ಟೇ ಇರಲಿಲ್ಲ. ಕೆಲವೊಮ್ಮೆ ಬೇಸರವಾಗುತ್ತೆ. ಹೊರಗಡೆ ಕೆಲಸ, ಮನೇಲೂ ಕೆಲಸ. ರಾಜೀವ್ ಒಂದು ಲೋಟವನ್ನೂ ಅತ್ತಿತ್ತ ಜರುಗಿಸುವವರಲ್ಲ. ಇರೋದ್ರಲ್ಲಿ ಅಡುಗೆ ಬಗ್ಗೆ ತಕರಾರು ತೆಗೆಯದೇ ತಿನ್ನುತ್ತಾರೆ. ಮಾಂಸದ ಅಡುಗೆ ಚೆನ್ನಾಗೇ ಮಾಡ್ತೀನಿ ಈ ಸೊಪ್ಪು ತರಕಾರೀದೇ ಸಮಸ್ಯೆ. ನನಗೇ ತಿನ್ನೋದಿಕ್ಕೆ ಬೇಜಾರಾಗುತ್ತೆ ಅಷ್ಟು ಕೆಟ್ಟದಾಗಿ ಮಾಡ್ತೀನಿ. ಎಷ್ಟೇ ಕೆಟ್ಟದಾಗಿ ಮಾಡಿದರೂ ದೂಸರಾ ಮಾತನಾಡದೆ ತಿಂದು ಮುಗಿಸುತ್ತಾರೆ. ನಾನೇ ಕೆಲವೊಮ್ಮೆ ‘ಯಾಕೋ ಊಟ ಮಾಡಂಗಿಲ್ಲ ಕಣ್ರೀ’ ಅಂತ್ಹೇಳಿ ಹಣ್ಣೋ ಬಿಸ್ಕೆಟ್ಟೋ ತಿಂದು ಮಲಗಿಬಿಡ್ತೀನಿ. ನಿನ್ನೆ ಬರೀ ಬೇಳೆಸಾರು ಮಾಡಿದ್ದೆ ನೀರು ನೀರಾಗಿತ್ತು. ನನ್ನದೂ ನೈಟ್ ಡ್ಯೂಟಿ ಇತ್ತಲ್ಲ ಇವರು ಹೊರಗೇ ಕುಡಿದು ಊಟಾನೂ ಮುಗಿಸಿ ಬಂದಿರಬೇಕು. ‘ಅನ್ನ ಸಾರು ತಿನ್ನದೇ ಇದ್ರೆ ಫ್ರಿಜ್ಜಿನೊಳಗಿಡೋದಿಕ್ಕೂ ಆಗಲ್ವ’ ಅಡುಗೆ ಮನೆಯೊಳಗಿಂದ ಕೂಗಿ ಹೇಳಿದೆ. ‘ಮಲ್ತುಬುಟ್ಟೆ’ ಹಲ್ಲುಜ್ಜುತ್ತ ಉತ್ತರಿಸಿದ ರಾಜೀವ. ವಾಸನೆ ನೋಡಿದೆ ಅನ್ನ ಚೆನ್ನಾಗಿತ್ತು. ಸಾರು ಹಳಸಿತ್ತು. ಸದ್ಯ ಕೆಟ್ಟಿರದಿದ್ದರೆ ಇವತ್ತು ಮಧ್ಯಾಹ್ನ ಅದನ್ನೇ ತಿನ್ನಬೇಕಿತ್ತು! ‘ನೋಡಿ ನೀವು ಮಾಡೋ ಕೆಲಸಕ್ಕೆ ಸಾರು ಕೆಟ್ಟೇ ಹೋಗಿದೆ. ಮಧ್ಯಾಹ್ನಕ್ಕೆ ಮತ್ತೆ ಮಾಡಬೇಕು’ ಎಂದು ರೇಗಿದಂತೆ ಮಾಡಿ ‘ಡ್ಯೂಟಿಗೆ ಹೋಗೋ ಮೊದಲು ಒಂದಾರು ಮೊಟ್ಟೆನಾದರೂ ತಂದಿಟ್ಟು ಹೋಗಿ ಮೊಟ್ಟೆ ಸಾರಾದ್ರೂ ಮಾಡಿಡ್ತೀನಿ’ ಎಂದೆ. ಸ್ನಾನ ಮಾಡುತ್ತಿದ್ದರೇನೋ. ಉತ್ತರಿಸಲಿಲ್ಲ. ಸ್ನಾನ ಮಾಡುವಾಗ ಮೆಲ್ಲಗಿನ ದನಿಯಲ್ಲಿ ಹಾಡು ಗುನುಗುತ್ತಿರುತ್ತಾರೆ. ಅವರದೇ ಲೋಕ. ಹೊರಗೆ ಏನು ನಡೆದರೂ ಉತ್ತರಿಸುವುದಿಲ್ಲ. ತಲೆಯಲ್ಲಿರುವ ಸಾವಿರ ಚಿಂತೆಗಳನ್ನು ಮರೆತು ಅವರು ಸುಖವಾಗಿರುವುದು ಬಚ್ಚಲುಮನೆಯಲ್ಲಿ ಮಾತ್ರ! ಈ ಬಚ್ಚಲುಮನೆಯನ್ನು ಕಂಡರೆ ನನಗೆ ಸವತಿ ಮಾತ್ಸರ್ಯ! ಸ್ನಾನ ಮುಗಿಸಿ ಸೊಂಟಕ್ಕೊಂದು ಟವೆಲ್ ಸುತ್ತಿಕೊಂಡು ಹೊರಬರುವಾಗ “ಏನೋ ಹೇಳ್ತಿದ್ದೆ?” ಎಂದರು.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Feb 14, 2019

ಚೀನಾದ ಏರ್‌ ಫಿಲ್ಟರ್ರೂ ಇಂಡಿಯಾದ ಪ್ರತಿಮೆಗಳೂ…….


ಚೀನಾದ ಏರ್‌ ಫಿಲ್ಟರ್;‌ ಚಿತ್ರಮೂಲ: ಸೌತ್‌ ಚೀನಾ ಪೋಸ್ಟ್.
ಡಾ. ಅಶೋಕ್.‌ ಕೆ. ಆರ್ 
ಮೊನ್ನೆ ಟೀ ಅಂಗಡಿಯ ಬಳಿ ಒಂದಷ್ಟು ಇಂಜಿನಿಯರ್‌ ಹುಡುಗರು ಹರಟುತ್ತಿದ್ದರು.
'ಅಲ್ಲಾ ಗುರು… ಆ ಚೀನಾದ್‌ ನನ್‌ ಮಕ್ಳು ದೊಡ್ ದೊಡ್‌ ಏರ್‌ ಫಿಲ್ಟರ್ರುಗಳನ್ನು ಕಟ್ತಾ ಇದ್ರೆ ಈ ನನ್‌ ಮಕ್ಳು ಅಷ್ಟುದ್ದದ್‌ ಸ್ಟಾಚ್ಯೂ ಕಟ್ಕಂಡ್‌ ಕುಂತವ್ರಲ್ಲ….ʼ
'ಕಾಗೆ ಹಿಕ್ಕೆ ಹಾಕೋಕೆʼ
ನಗು…
'ಹಂಗೂ ಕಟ್ಲೇ ಬೇಕೂಂತಿದ್ರೆ ಕರ್ನಾಟಕದಲ್ಲೇ ಕಟ್ಬೋದಿತ್ತಪ್ಪ….. ಗುಜರಾತ್ಗೇ ಮಾಡ್ಬೇಕಿತ್ತಾ….. ಇಲ್ಲೀನೋರೇನು ವೋಟ್‌ ಹಾಕಿರ್ನಿಲ್ವ…..ʼ
'ಎಲ್ಲಾದ್ರೂ ಸರೀನೇ…ಯಾಕ್‌ ಕಟ್ಬೇಕು….ʼ
ಸ್ಟ್ಯಾಚು ಆಫ್‌ ಯೂನಿಟಿ; 
ಚಿತ್ರಮೂಲ: ಫೈನ್ಯಾನ್ಶಿಯಲ್‌  
ಹೌದಲ್ಲ ನಮ್ಮಲ್ಲೇನು ಮಾಲಿನ್ಯಕ್ಕೆ ಕೊರತೆಯಿದೆಯೇ? ಇಲ್ಲವಲ್ಲ. ದೆಹಲಿ, ಬೆಂಗಳೂರು, ಕೊಲ್ಕೊತ್ತಾ, ಚೆನ್ನೈ, ಮುಂಬೈಯಂತಹ ಪ್ರದೇಶಗಳಲ್ಲಿ ನಮ್ಮೆಲ್ಲರ ಕೊಡುಗೆಯಾಗಿ ಅಪಾರ ಪ್ರಮಾಣದ ಗಾಳಿ ಮಲಿನಗೊಂಡಿದೆ. ಈಗಾಗಲೇ ಅನೇಕರು ಮನೆಗಳಲ್ಲಿ ಏರ್‌ ಫಿಲ್ಟರ್ರುಗಳನ್ನು ಬಳಸಲಾರಂಭಿಸುತ್ತಿದ್ದಾರೆ. ಮನೆಯಿಂದ ಹೊರಬಂದಾಗ, ರಸ್ತೆಯಲ್ಲಡ್ಡಾಡುವಾಗ ಕೂಡ ಏರ್‌ ಫಿಲ್ಟರ್ರುಗಳ ಅವಶ್ಯಕತೆ ಇದ್ದೇ ಇದೆಯಲ್ಲ. ಸಾರ್ವಜನಿಕ ಏರ್‌ ಫಿಲ್ಟರ್ರುಗಳನ್ನು ದೊಡ್ಡ ಮಟ್ಟದಲ್ಲಿ ಸ್ಥಾಪಿಸುವುದು ಅನಿವಾರ್ಯವಾಗುತ್ತಿರುವ ದಿನಗಳಲ್ಲೂ ನಮ್ಮಲ್ಲೇಕೆ ಇನ್ನೂ ವಿಶ್ವದ ದೊಡ್ಡ ಪ್ರತಿಮೆ, ರಾಮನ ದೊಡ್ಡ ಪ್ರತಿಮೆ, ಕಾವೇರಿ ಮಾತೆಯ ದೊಡ್ಡ ಪ್ರತಿಮೆಯ ಬಗ್ಗೆಯೇ ತಲೆಕೆಡಿಸಿಕೊಳ್ಳಲಾಗುತ್ತಿದೆ? ಸಾರ್ವಜನಿಕ ಏರ್‌ ಫಿಲ್ಟರ್ರುಗಳ ಪ್ರಾಯೋಗಿಕ ಬಳಕೆ ನಮ್ಮದೇ ಬೆಂಗಳೂರಿನ ಕಬ್ಬನ್‌ ಪಾರ್ಕಿನಲ್ಲಿ ನಡೆಯುತ್ತಿದೆ, ಅದರ ಗಾತ್ರ ಚೀನಾದ ನೂರು ಮೀಟರ್‌ ಎತ್ತರದ ಏರ್‌ ಫಿಲ್ಟರ್ಗೆ ಹೋಲಿಸಿದರೆ ತುಂಬಾ ತುಂಬಾ ಸಣ್ಣದು. ಪೂರ್ತಿ ಗಾಳಿ ಗಬ್ಬೆದ್ದು ಹೋಗಲಿ ಎಂದು ಕಾಯುತ್ತಿದ್ದೇವಾ? ಅಥವಾ ನಮಗೆ ಪ್ರತಿಮೆಗಳೇ ಮುಖ್ಯವಾ?

Feb 12, 2019

ಉತ್ತರವೆಲ್ಲಿಂದ ತರುವುದು?

ಕು.ಸ.ಮಧುಸೂದನ ರಂಗೇನಹಳ್ಳಿ
ಮೊನ್ನೆಯಿನ್ನೂ ಆ ಊರ ತಿರುವಿನಲ್ಲಿ
ಬೇಟಿಯಾಗಿದ್ದೆವು
ಹಗಲಿನಿಂದ ಒದೆಸಿಕೊಂಡ ಸಂಜೆ
ಮುನಿಸಿಕೊಂಡು
ಮಬ್ಬುಗತ್ತಲ ಜೊತೆ ಜಗಳವಾಡುತ್ತ
ಇರುಳ ಕಪ್ಪನ್ನು ತಾನು ಮೆತ್ತಿಕೊಂಡಿದ್ದಲ್ಲದೆ
ನಮಗೂ ಮೆತ್ತಿ
ಮೌನ ಮೀರಿ ಬರಲಾಗದ ಶಬುದಗಳು

Feb 11, 2019

ಮತ್ತೆ ಮತ್ತೆ ಬೇಕೆನಿಸುತ್ತದೆ

ಪ್ರವೀಣಕುಮಾರ್ ಗೋಣಿ
ಸುಖಾಸುಮ್ಮನೆ ಕಾಲವಲ್ಲದ
ಕಾಲದೊಳಗೆ ಸುರಿದು
ಸುಮ್ಮನಾಗುವ ಮಳೆಯಂತೆ
ವಿನಾಕಾರಣ ಕಂಗಳೊದ್ದೆಯಾಗುವಾಗ
ನಿನ್ನ ಅಂಗೈಯ ಬಿಸಿಯನ್ನ ಕೆನ್ನೆ ಬಯಸುತ್ತದೆ .

ಜಿಗಿ ಜಿಗಿಯೆನಿಸುವ ನಗರವೆನ್ನುವ
ನಾಗಾಲೋಟದ ಜಾತ್ರೆಯು
ಸಾಕೆನಿಸಿ ಒಬ್ಬಂಟಿಯಾಗಿ
ತಿರುಗಿ ಬರಲು ದಾರಿಯೇ ಇರದ
ದುರ್ಗಮ ಕಾಡೊಳಗೆ ಕಳೆದುಹೋಗಿಬಿಡಬೇಕೆನ್ನುವ
ಕಾಂಕ್ಷೆ ಕಾಡಿದಾಗಲೆಲ್ಲ ನನ್ನಯ
ಕಿರುಬೆರಳು ನಿನ್ನ ಹಸ್ತದ ಕೊಂಡಿಗೆ ಕಾತರಿಸುತ್ತದೆ .

Feb 10, 2019

ಒಂದು ಬೊಗಸೆ ಪ್ರೀತಿ - 5

ಡಾ. ಅಶೋಕ್. ಕೆ. ಆರ್
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಮೀನು ಸಾರು ತಿನ್ನದೆ ಮನೆಗೆ ವಾಪಸ್ಸಾದೆ. ತಿನ್ನಮ್ಮ ಎಂದು ಹೇಳುವ ಮನಸ್ಸು ಯಾರಿಗೂ ಇರಲಿಲ್ಲ. ತಿನ್ನುವ ಮನಸ್ಸು ನನಗೂ ಇರಲಿಲ್ಲ. ರಾಜೀವ್ ಹೊರಗೆ ಸಿಗರೇಟ್ ಸುಡಲು ಹೋಗಿದ್ದರು. ಬಾಗಿಲು ತೆರೆದು ಸೋಫಾ ಮೇಲೆ ಮಲಗಿದೆ. ರಾಜೀವ್ ಫೋನಿನಲ್ಲಿ ಯಾರೊಡನೆಯೋ ಖುಷಿಖುಷಿಯಾಗಿ ಮಾತನಾಡುತ್ತಾ ಬರುತ್ತಿದ್ದರು. ಮನೆ ಬಾಗಿಲು ತೆಗೆದಿದ್ದನ್ನು ಕಂಡು ‘ಆಮೇಲೆ ಮಾಡ್ತೀನಿ’ ಅಂತ್ಹೇಳಿ ಫೋನ್ ಕಟ್ ಮಾಡಿದರು. ನನ್ನ ಮುಂದೆ ಅವರು ಮಾತನಾಡದೇ ಇರುವುದು ಅಶ್ವಿನಿಯೊಂದಿಗೆ ಮಾತ್ರ. ಅದು ನನಗೂ ಗೊತ್ತಿತ್ತು. ಎಲ್ಲರ ವಿಷಯಾನೂ ನನ್ನ ಬಳಿ ಹೇಳ್ತಾರೆ ಆದರೆ ಅಶ್ವಿನಿ ವಿಷಯ ಮಾತ್ರ ಯಾವೊತ್ತಿಗೂ ಮಾತನಾಡುವುದಿಲ್ಲ. ಹಂಗಂತ ಅವರ ಮೇಲೆ ಅನುಮಾನವೇನೂ ಇಲ್ಲ ನನಗೆ. ಸ್ವಲ್ಪ ಜಾಸ್ತೀನೇ ಕ್ಲೋಸ್ ಫ್ರೆಂಡ್, ಬಹುಶಃ ನಮ್ಮಿಬ್ಬರ ನಡುವಿನ ಜಗಳವನ್ನೂ ಹೇಳಿಕೊಳ್ಳುವಷ್ಟು ಕ್ಲೋಸ್. ಹಾಗಾಗಿ ನನ್ನ ಮುಂದೆ ಮಾತನಾಡುವುದಿಲ್ಲವೇನೋ ಎಂದುಕೊಂಡು ಸುಮ್ಮನಾಗಿದ್ದೆ. ಕೆಣಕಲು ಹೋಗಿರಲಿಲ್ಲ. ಸೋಫಾದ ಮೇಲೆ ಮಲಗಿ ತಾರಸಿ ನೋಡುತ್ತಿದ್ದವಳನ್ನು ಗಮನಿಸಿಯೇ ಅವರಿಗೆ ವಿಷಯದ ಅರಿವಾಗಿರಬೇಕು.

“ಬಯ್ಯಿಸಿಕೊಂಡು ಬಂದ”

‘ನಿಮಗೇಗ್ ಗೊತ್ತು’

“ನಿಮ್ಮಪ್ಪ ಬಯ್ದಾಗ ಉಪ್ ಅಂತಿರೋ ನಿನ್ನ ಮುಖ ನೋಡಿದ್ರೆ ಗೊತ್ತಾಗಿಬಿಡುತ್ತೆ ಡಾರ್ಲಿಂಗ್. ಯಾವ ವಿಷಯಕ್ಕೆ ಬಯ್ದರು”

‘ಶಶಿ – ಸೋನಿಯಾ ವಿಷಯ’
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Feb 3, 2019

ಒಂದು ಬೊಗಸೆ ಪ್ರೀತಿ - 4

ಡಾ. ಅಶೋಕ್. ಕೆ. ಆರ್ . 
ನಾನ್ ಸ್ವಲ್ಪ ಅಪ್ಪನ ಮನೆಗೆ ಹೋಗಿ ಬರ್ತೀನಿ ಅಂದಾಗ ಇವರು ‘ನಾನು ಬರ್ತೀನಿರು. ಒಬ್ಬನೇ ಏನ್ ಮಾಡ್ಲಿ’ ಅಂದ್ರು. ಬೇಡಾರೀ ಸ್ವಲ್ಪೇನೋ ಮಾತನಾಡೋದಿದೆ, ನಾನು ಬಂದು ನಿಮಗೆ ಎಲ್ಲ ವಿವರಿಸಿ ಹೇಳ್ತೀನಿ ಎಂದು ಸುಮ್ಮನಾಗಿಸಿ ಹೊರಟೆ. ಶಶಿ ಏನೂ ಆಗುತ್ತಿಲ್ಲವೆಂಬಂತೆ ಗಡದ್ದಾಗಿ ತಿಂದು ಟಿವಿ ನೋಡುತ್ತ ಕುಳಿತಿದ್ದ.

“ಇದೇನಮ್ಮ. ಏನೂ ಹೇಳದೆ ಬಂದುಬಿಟ್ಟೆ. ರಾಜೀವ್ ಬರಲಿಲ್ಲವಾ?” ಟಿವಿ ನೋಡುತ್ತ ಕುಳಿತಿದ್ದ ಅಮ್ಮ ಕೇಳಿದರು.

‘ಎಲ್ಲೋ ಫ್ರೆಂಡ್ಸ್ ನೋಡೋದಿಕ್ಕೆ ಹೋಗಿದ್ದರು. ಮನೇಲಿ ಒಬ್ಳಿಗೇ ಬೇಜಾರಾಗ್ತಿತ್ತು. ಹೊರಟು ಬಂದೆ’ ಎಂದು ಬಾಯಿಗೆ ಹೊಳೆದ ಸುಳ್ಳನ್ನು ಹೇಳಿದೆ.

“ಸರಿ. ಊಟ ಮಾಡ್ ನಡಿ”

‘ಇಲ್ಲಮ್ಮ. ಊಟ ಆಯ್ತು’

“ಮೀನ್ ಸಾರು ಮಾಡಿದ್ದೆ. ಸ್ವಲ್ಪ ತಿನ್ನು”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Feb 1, 2019

ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಮೈತ್ರಿಕೂಟ ರಚನೆಯಾಗುತ್ತದೆಯೇ?

ಕು.ಸ.ಮಧುಸೂದನರಂಗೇನಹಳ್ಳಿ
ತಮಿಳುನಾಡಿನ ಅಧಿಕಾರರೂಢಪಕ್ಷ ಎ.ಐ.ಎ.ಡಿ.ಎಂ.ಕೆ. ನಿದಾನವಾಗಿ ಬಾಜಪ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟದತ್ತ ಸರಿಯುತ್ತಿರುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರವಾಗುತ್ತಿವೆ. ಬಾಜಪ ಸಹ ಇದಕ್ಕೆ ಪೂರಕವಾಗಿಯೇ ತನ್ನ ರಾಜಕಾರಣದ ದಾಳಗಳನ್ನು ಉರುಳಿಸುತ್ತಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವುದು ಕಷ್ಟವೆಂಬುದು ಬಾಜಪಕ್ಕೆ ಮನವರಿಕೆಯಾಗಿದೆ. ಕೆಲತಿಂಗಳ ಹಿಂದೆ ನಡೆದ ಮದ್ಯಪ್ರದೇಶ, ರಾಜಾಸ್ಥಾನ, ಚತ್ತೀಸಗಡ ಮೂರು ರಾಜ್ಯಗಳ ವ್ಯತಿರಿಕ್ತ ಪಲಿತಾಂಶ, ದಿನದಿಂದ ದಿನಕ್ಕೆ ಗಟ್ಟಿಯಾಗುವತ್ತ ನಡೆದಿರುವ ವಿರೋಧಪಕ್ಷಗಳ ಮಹಾಮೈತ್ರಿಯ ಮಾತುಗಳು, ಉತ್ತರಪ್ರದೇಶದಲ್ಲಿ ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳ ನಡುವೆ ನಡೆದ ಸ್ಥಾನ ಹೊಂದಾಣಿಕೆಯ ಅಂತಿಮ ಪ್ರಕ್ರಿಯೆ, ಕೊಲ್ಕೊತ್ತಾದಲ್ಲಿ ತೃಣಮೂಲ ಕಾಂಗ್ರೇಸ್ಸಿನ ನಾಯಕಿ ಕುಮಾರಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ವಿರೋಧಪಕ್ಷಗಳ ಬೃಹತ್ ರ್ಯಾಲಿ, ಉತ್ತರ ಪ್ರದೇಶದ ರಾಜಕಾರಣಕ್ಕೆ ಕಾಂಗ್ರೇಸ್ಸಿನ ಪ್ರಿಯಾಂಕಗಾಂದಿ ಪ್ರವೇಶಿಸಿರುವುದು ಬಾಜಪ ನಾಯಕರುಗಳ ನಿದ್ದೆಗೆಡಿಸಿರುವುದು ನಿಜ. ಇದರ ಜೊತೆಗೆ ಅದರ ಕೆಲವು ಮಿತ್ರಪಕ್ಷಗಳು ದೂರವಾಗಿವೆ. ಆಂದ್ರಪ್ರದೇಶದ ತೆಲುಗುದೇಶಂ ಹಾಗು ಜಮ್ಮು ಕಾಶ್ಮೀರದ ಪಿ.ಡಿ.ಪಿ. ಪಕ್ಷಗಳು ಈಗಾಗಲೇ ಎನ್.ಡಿ.ಎ. ಮೈತ್ರಿಕೂಟದಿಂದ ಹೊರಬಂದಿವೆ.ಮಹಾರಾಷ್ಟ್ರದಲ್ಲಿ ಶಿವಸೇನೆ ಬಾಜಪದ ವಿರುದ್ದ ಸ್ವತಂತ್ರವಾಗಿ ಸ್ಪರ್ದಿಸುವುದಾಗಿ ಹೇಳಿಕೊಂಡಿದೆ. ಈ ನಡುವೆ ಬಿಹಾರದ ಮುಖ್ಯಮಂತ್ರಿಗಳಾದ ಸಂಯುಕ್ತ ಜನತಾದಳದ ಶ್ರೀ ನಿತೀಶ್ ಕುಮಾರ್ ತ್ರಿವಳಿ ತಲಾಖ್ ಮತ್ತು ಪೌರತ್ವ ಮಸೂದೆಗಳ ಬಗೆಗಿನ ಕೇಂದ್ರ ಸರಕಾರದ ನೀತಿಗಳನ್ನು ನೇರವಾಗಿಯೇ ಟೀಕಿಸುತ್ತಿದ್ದಾರೆ. ಈಗಾಗಲೇ ಬಾಜಪದೊಂದಿಗೆ ಮಾಡಿಕೊಂಡಿರುವ ಸ್ಥಾನ ಹೊಂದಾಣಿಕೆಯ ಕರಾರನ್ನು ಕೊನೆಗಳಿಗೆಯಲ್ಲಿ ಅವರು ಮುರಿದರೂ ಅಚ್ಚರಿಯೇನೂ ಇಲ್ಲ.

ನೋಡೊಮ್ಮೆ ನಿನ್ನೊಳಗೇ

 ಪ್ರವೀಣಕುಮಾರ್ .ಗೋಣಿ
ಮನಸು ಬೇಸತ್ತು ಹೋದಾಗ
ತನುವ ಸತುವೆಲ್ಲ
ಆವಿಯಾದಂತಾಗಿ ಬಳಲಿದಾಗ
ಬತ್ತದಂತಿರುವ ಉಲ್ಲಾಸದ
ನಿನ್ನದೇ ಅಂತರ್ಯವನ್ನೊಮ್ಮೆ ಇಣುಕಿ ನೋಡು .

ದಾರಿಗಳೇ ಕಾಣದಾಗಿ
ಕಣ್ಣಿಗೆ ಕಗ್ಗತ್ತಲಾವರಿಸಿ ನಿಂತು
ಸಾಕೆಂದು ಕೈಚೆಲ್ಲಿ ಕೂತಾಗ
ತಗ್ಗಿಸಿದ ನೆತ್ತಿ ಇಟ್ಟುಕೊಂಡೆ
ಒಂದು ಕ್ಷಣಕ್ಕೆ ಅಂತರ್ಯವನ್ನೊಮ್ಮೆ
ಇಣುಕಿ ನೋಡು .