Jan 27, 2019

ನಾನೂ-ನೀನೂ! ಎಂಬೋ ಎರಡು ಕವಿತೆಗಳು

ಕು.ಸ.ಮಧುಸೂದನರಂಗೇನಹಳ್ಳಿ
ಕವಿತೆ ಒಂದು-ನನ್ನದು!
ನಮ್ಮವಾಗಬೇಕಿದ್ದ ಅದೆಷ್ಟೋ ಇರುಳುಗಳು
ಅರಳದೆಯೇ ಇತಿಹಾಸವಾದವು
ಅರಸಿಹೊರಟ ಬೆಳಕಿನ ಕಿರಣಗಳು
ಬೆಳಗದೆಯೇ ಒರಗಿದವು.

ನಮ್ಮದೆಂದುಕೊಂಡ ಅದೆಷ್ಟೋ ಹಗಲುಗಳು
ಬೆಳಗಾಗುವ ಮೊದಲೇ ನೇಣಿಗೇರಿದವು
ಈಗ ಹುಡುಕಿ ಹೊರಟಿಹೆವು ನನ್ನ ನೀನು
ನಿನ್ನ ನಾನೂ
ಆರಿಹೋದ ದೊಂದಿ ಹಿಡಿದು
ಬೆಳಕಾಗಿ ಬರುವ ಮಿಂಚುಹುಳುಗಳ ನಂಬಿ
ನಡುವೆ ಹರಡಿದ ಕತ್ತಲ
ತೊಲಗಿಸುವಂತಹ ಮಾತೊಂದನಾಡಲು
ಕಾಯುತ್ತಿದ್ದೇವೆ ಹಗಲುಗಳಲ್ಲಿ ಇರುಳುಗಳಲ್ಲಿ
ಮೌನ ತುಂಬಿಹೋದ ಕತ್ತಲಿಗೀಗ ಬೇಕಿದೆ ಮಾತಿನ ಬೆಳಕೊಂದು!

ಕವಿತೆ ಎರಡು-ನಿನ್ನದು!ಇದ್ದಾಗ ಇರದಂತೆ
ಇಲ್ಲದಾಗ ಇದ್ದಂತೆ
ಕಡು ಬೇಸಿಗೆ ಕಳೆದ ಮೇಲೂ ಕಾಡುವ ಧಗೆಯಂತೆ
ತೀರಿಹೋದ ಚಳಿಗಾಲಕೂ ಕಂಬಳಿಯೊಂದ ಕೋರಿದಂತೆ
ಮುಗಿದರೂ ಮಳೆ ನಿಲ್ಲದೆ ಮಾಡಿನಿಂದುದುರುವ ಹನಿಗಳಂತೆ
ಇದ್ದವಳೆ ಹಾಗೇ ಇದ್ದು ಬಿಡು
ನೆಲೆಸ ಬರಬೇಡ
ನಕ್ಕ ಹಾಗೆ ಬುದ್ದ ನಾವು ನಗಲಾಗುವುದಿಲ್ಲ
ಹಾಗೆ ನಕ್ಕರೂ ನಾವೇನು ಬುದ್ದರಾಗಿ ಬಿಡುವುದಿಲ್ಲ
ಕಳೆದುಕೊಂಡ ಕನಸುಗಳಿಗೆ ಸುಂಕ
ತೆತ್ತವರ್ಯಾರೆಂಬ ಜಿಜ್ಞಾಸೆ ಬೇಡ
ನರಕದಲ್ಲಿ ನಿಂತು ಸ್ವರ್ಗವನೇಕೆ ಹುಡುಕೋಣ?
ಇಷ್ಟಾದರು ಉಳಿದುಹೋದ ಎಮ್ಮ ಹಂಬಲಗಳಿಗೆ
ಅರ್ಥ ಹೇಳಲಾಗದ ಹಮ್ಮುಗಳಿಗೆ
ವಿರಾಮವೊಂದ ಇಡೋಣ.

No comments:

Post a Comment