ಕು.ಸ.ಮಧುಸೂದ ನರಂಗೇನಹಳ್ಳಿ
ರೆಕ್ಕೆ ಬಿಚ್ಚಿ ಹಗಲು
ಹಾರಲಾಗದೆ ಕೂತಲ್ಲೇ ಬೇರುಬಿಟ್ಟ ಬೆಟ್ಟ
ಕನಸೇನಲ್ಲ ಕಣ್ಣ ಮುಂದಿನ ನೋಟ
ಉಕ್ಕುವ ಯೌವನದ ಬೆಂಕಿ ಕಾವು
ಸರಿದ ಇರುಳುಗಳ ನೆರಳುಗಳ
ನಟ್ಟ ನಡುವೆ ಸರಳುಗಳ ಸರಸದಾಟ
ಎದೆಯುಬ್ಬಿಸಿ ನಿಂತ ದ್ವಾರಪಾಲಕರ ಭರ್ಜಿಗಳ
ಚೂಪಿಗೆ ಎದೆಯೊಡ್ಡಿ ನಿಂತ ಹರಯದ ಹುರುಪು
ಮಟಾಮಾಯ
ಇವನ ಕಡುಕಪ್ಪು ಕಬ್ಬಿಣದಂತ ತೋಳುಗಳಿಗೆ ಕಾದವಳು
ಕರಗಿದಂತೆ ಕಾಲ
ಜರುಗಿದಂತೆ ಗಡಿಯಾರದ ಮುರಿದ ಮುಳ್ಳು
ಕುಂತಲ್ಲೇ ಒದ್ದೆಯಾದಳು
ಬಸಿರು ಕಟ್ಟಲಿಲ್ಲ.
ಹಾಳು ಬಿದ್ದ ಊರಲ್ಲೀಗ ಸಾಮೂಹಿಕ ತಿಥಿಯೂಟದ
ಗಮ್ಮತ್ತು
ಹುಳುಬಿದ್ದ ಅನ್ನದ ತಪ್ಪಲೆ
ರಕ್ತದ ಬಣ್ಣದ ತಿಳಿಸಾರು
ಕುಷ್ಠ ಹತ್ತಿದ ದುಡಿಯಲಾರದ ಕೈಗಳು
ಬೊಗಸೆಯೊಡ್ಡಿ ಸಾಲುಗಟ್ಟಿವೆ
ನೀಡುವವನ ಗತ್ತು
ನಮ್ಮ ನಾಳೆಗಳ ಮೇಲೆ ಸ್ಪಷ್ಟವಾಗಿ ಕೆತ್ತಿಟ್ಟ
ಮರಣಶಾಸನ
ಕಂಡೂ ಕಾಣದಂತೆ ನಡೆದು ಹೋಗುವ ಯಜಮಾನ.
ಎಲ್ಲ ಎಲ್ಲಿ ಹೋಗುತ್ತಾರೆ ನನ್ನೂರ ಜನಗೋಳು
ಕಡಲೂರಲ್ಲಿ ಕತ್ತಲೆಯಿನ್ನು ಮುಗಿದಿಲ್ಲವಂತೆ
ಮೋಡದೂರಿನಲ್ಲಿ ಮಳೆಯಿಲ್ಲವಂತೆ
ಅಲ್ಲಿ ಕತ್ತಾಲೆ ಮುಗಿದು
ಇಲ್ಲಿ ಮತ್ತೆ ಮಳೆ ಹುಯಿದು
ಸೊಂಪಾದ ಬೆಳೆ ತೆಗೆಯೋತನಕ
ಮೂಡುವ ಸೂರ್ಯನಿಗೆ ಕೈಮುಗಿಯುತ್ತ
ಮುಳುಗುವ ಸೂರ್ಯನಿಗೆ ಶರಣೆನ್ನುತ್ತ
ಹಗಲ ಕಳೆಯಬೇಕು
No comments:
Post a Comment