ಚಿತ್ರಮೂಲ: election commission of India |
ಕಳೆದ ಐದು ವರ್ಷಗಳಿಂದ ರಾಜಾಸ್ಥಾನದಲ್ಲಿ ಆಡಳಿತ ನಡೆಸುತ್ತಿದ್ದ ಬಾಜಪದ ಶ್ರೀಮತಿ ವಸುಂದರಾ ರಾಜೆಯವರ ಸರಕಾರ ಈ ಬಾರಿ ಚುನಾವಣೆಯಲ್ಲಿ ಸೋತು ಕಾಂಗ್ರೆಸ್ಸಿಗೆ ಅಧಿಕಾರ ವಹಿಸಿಕೊಟ್ಟಿದೆ. ಚುನಾವಣೆಗಳಿಗು ಮೊದಲು ಬಿಡುಗಡೆಯಾದ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಮತದಾನದ ಸಂಜೆ ದೊರೆತ ಎಕ್ಸಿಟ್ ಪೋಲ್ ಸಹ ಬಾಜಪ ಸರಕಾರದ ಸೋಲನ್ನು ಖಚಿತ ಪಡಿಸಿದ್ದವು.
ಎಲ್ಲರೂ ಬಾಜಪ ಸೋಲಬಹುದೆಂದೇನೊ ನುಡಿದಿದ್ದರೂ ಅದು ಈ ಮಟ್ಟಿಗೆ ಸೋಲುತ್ತದೆಯೆಂಬ ನಿರೀಕ್ಷೆ ಇರಲಿಲ್ಲ. ಯಾಕೆಂದರೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟ 200 ಸ್ಥಾನಗಳ ಪೈಕಿ 163 ರಲ್ಲಿ ಬಾಜಪ ಗೆದ್ದಿದ್ದರೆ, ಕಾಂಗ್ರೆಸ್ 21 ರಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿತ್ತು. ಹೆಚ್ಚೂ ಕಡಿಮೆ ಅಂದು ಪ್ರದಾನಮಂತ್ರಿ ಅಭ್ಯರ್ಥಿಯಾಗಿದ್ದ ಶ್ರೀ ನರೇಂದ್ರ ಮೋದಿಯವರ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿತ್ತು. ಅಷ್ಟು ಬಲಿಷ್ಠವಾಗಿ ಹೊರಹೊಮ್ಮಿದ್ದ ಬಾಜಪ ಇವತ್ತು ಕೇವಲ ಐದೇ ವರ್ಷಗಳಲ್ಲಿ ಕಾಂಗ್ರೆಸ್ಸಿನೆದುರು ಮಂಡಿಯೂರಿದೆ. ಈ ಬಾರಿ ಚುನಾವಣೆ ನಡೆದ 199ಕ್ಷೇತ್ರಗಳ ಪೈಕಿ ಕಾಂಗ್ರೆಸ್ 99 ಸ್ಥಾನವನ್ನು, ಬಾಜಪ 73 ಸ್ಥಾನಗಳನ್ನು ಗೆದ್ದಿವೆ. ಇನ್ನು ಯಥಾ ಪ್ರಕಾರ ಇಲ್ಲಿ ಅಷ್ಟೇನು ಪ್ರಭಾವಶಾಲಿಯಲ್ಲದ ಬಹುಜನ ಪಕ್ಷ 6 ಸ್ಥಾನಗಳನ್ನೂ ಪಡೆದಿದೆ. ಇರಲಿ ಈಗ ನಾವು ರಾಜಾಸ್ಥಾನದಲ್ಲಿನ ಬಾಜಪ ಸೋಲಿಗೆ ಕಾರಣವಾದ ಅಂಶಗಳನ್ನು ನೋಡೋಣ:
1.ಆಡಳಿತ ವಿರೋಧಿ ಅಲೆ.
ಐದು ವರ್ಷ ಆಡಳಿತ ನಡೆಸಿದ ಯಾವುದೇ ಸರಕಾರಗಳನ್ನು ಕಾಡುವ ಆಡಳಿತ ವಿರೋಧಿ ಅಲೆ ಶ್ರೀಮತಿ ರಾಜೇಯವರ ಸರಕಾರವನ್ನು ಕಾಡಿದ್ದು ನಿಜ. ಆದರೆ ಈ ವಿರೋಧಿ ಅಲೆ ಸೃಷ್ಠಿಯಾಗಲು ರಾಜೇಯವರು ಆಡಳಿತ ನಡೆಸಿದ ರೀತಿಯೇ ಕಾರಣ ಮತ್ತು ಇದರಿಂದ ಹಲವು ವಿಚಾರಗಳು ಸರಕಾರದ ವಿರುದ್ದ ಹೋದವು.
ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
2.ತೀವ್ರಗೊಂಡ ಕೃಷಿ ಬಿಕ್ಕಟ್ಟು.
ಇಂಡಿಯಾದ ಬಹುತೇಕ ರಾಜ್ಯಗಳಂತೆ ಇಲ್ಲಿಯೂ ರೈತರು ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದರು. ಮೊದಲೇ ಕಡಿಮೆ ಇರುವ ಕೃಷಿ ಭೂಮಿ ಮತ್ತು ನೀರಾವರಿಯ ಕೊರತೆ ರೈತರ ಬವಣೆಯನ್ನು ಹೆಚ್ಚು ಮಾಡುತ್ತ ಹೋಗಿತ್ತು.
ಈ ಸರಕಾರ ಎದುರಿಸಿದ ದೊಡ್ಡ ರೈತ ಸಮಸ್ಯೆ ಎಂದರೆ ಮೊನ್ನಿನ ಮಾರ್ಚ ತಿಂಗಳಲ್ಲಿ ಬೆಳ್ಳುಳ್ಳಿ ಬೆಳೆ ಬಂದಾಗ ಕುಸಿದ ಬೆಲೆಯಿಂದಾಗಿ ರೈತರು ಆತ್ಮಹತ್ಯೆಗೆ ಶರಣಾಗಿಬಿಟ್ಟರು. ತಕ್ಷಣಕ್ಕೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಫಲವಾದ ಮುಖ್ಯಮಂತ್ರಿಯವರು ಸಹಕಾರಿ ಬ್ಯಾಂಕುಗಳಲ್ಲಿ ಐವತ್ತು ಸಾವಿರ ರೂಪಾಯಿಗಳ ಸಾಲಮನ್ನಾ ಘೋಷಣೆ ಮಾಡಿದರೂ ಬಹುತೇಕ ರೈತರಿಗೆ ಇದರ ಉಪಯೋಗವಾಗಲೇ ಇಲ್ಲ. ಶ್ರೀಮತಿ ರಾಜೇಯವರು ಸಾಲಮನ್ನಾ ಘೋಷಣೆ ಮಾಡಿದರೆ ಹೊರತು ರೈತರು ನಿರೀಕ್ಷಿಸಿದ್ದ ಪರಿಹಾರ ಧನ ನೀಡಲಿಲ್ಲ.ಅದರಲ್ಲೂ ರಾಜೇಯವರ ಪ್ರಬಲ ಪ್ರಭಾವ ಇದ್ದ ಹರೋತಿ ಮತ್ತು ಶೇಖಾವತಿ ಪ್ರದೇಶದಲ್ಲಿಯೇ ರೈತರು ತೀವ್ರವಾಗಿ ನೊಂದಿದ್ದು ಮುಖ್ಯಮಂತ್ರಿಗಳು ಅವರ ನೆರವಿಗೆ ದಾವಿಸದೇಹೋಗಿದ್ದು ಬಾಜಪ ಸರಕಾರಕ್ಕೆ ಹಿನ್ನಡೆಯಾಗುವಲ್ಲಿ ಪ್ರಮುಖ ಕಾರಣವಾಗಿ ಬಿಟ್ಟಿತು.
ಅದೂ ಅಲ್ಲದೆ ಈ ನವೆಂಬರಿನಲ್ಲಿ ತಾವು ಬೆಳೆದ ಉದ್ದಿನ ಬೆಳೆಯನ್ನು ರೈತರು ಮಾರಾಟ ಮಾಡುವುದೇ ಕಷ್ಟದ ಕೆಲಸವಾಗಿ ಬಿಟ್ಟಿತು ವಾಡಿಕೆಗಿಂತ ಹೆಚ್ಚು ಬೆಳೆ ಉದ್ದಿನಬೇಳೆಯ ಇಳುವರಿ ಮತ್ತು ಗುಣಮಟ್ಟವನ್ನು ಹಾಳು ಮಾಡಿತ್ತು ಈ ಸಮಸ್ಯೆಗು ಸರಕಾರ ತಕ್ಷಣಕ್ಕೆ ಸ್ಪಂದಿಸದೆ ಹೋಗಿದ್ದು ರೈತರು ಸರಕಾರದ ವಿರುದ್ದ ಆಕ್ರೋಶಭರಿತರಾಗುವಂತೆ ಮಾಡಿತು. ಮದ್ಯಪ್ರವೆಶಿಸಿದ ಕೇಂದ್ರ ಸರಕಾರ ಎಂ.ಎಸ್.ಪಿ.ಯನ್ನು ನಿಗದಿಗೊಳಿಸುವಷ್ಟರಲ್ಲಿಯೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ಇದರ ನಡುವೆ ಸರಿಯಾದ ಸಮಯಕ್ಕೆ ಫಸಲ್ ಭೀಮಾ ಯೋಜನೆಯ ಹಣ ತಲುಪದೇ ಹೋಗಿದ್ದು ರೈತರು ಸರಕಾರದ ವಿರುದ್ದ ಮತಚಲಾಯಿಸುವಂತೆ ಮಾಡಿತು.53ಸಾವಿರ ಜನರಿಗೆ ದೊರೆಯಬೇಕಿದ್ದ ಫಸಲ್ ಬಿಮಾ ಹಣ ತಲುಪಿದ್ದು ಕೇವಲ 19 ಸಾವಿರ ರೈತರಿಗೆ ಮಾತ್ರ. ಒಟ್ಟಿನಲ್ಲಿ ರಾಜಾಸ್ಥಾನದ ರೈತ ಸಮುದಾಯ ಆಡಳಿತಾರೂಢ ಪಕ್ಷದ ಬಗ್ಗೆ ಅಸಹನೆ ಹೊಂದಿದ್ದು ಆ ಸರಕಾರದ ಪತನಕ್ಕೆ ಕಾರಣವಾಯಿತು.
3. ನಿರುದ್ಯೋಗ ಸಮಸ್ಯೆ.
'ಸೆಂಟರ್ ಫಾರ್ ಮಾನಿಟರಿಂಗ್ ಎಕಾನಮಿ'ಯ ಪ್ರಕಾರ ಇಡಿ ರಾಷ್ಟ್ರದಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 6.6 ರಷ್ಟಿದ್ದರೆ ರಾಜಾಸ್ಥಾನದಲ್ಲಿ ಅದು ಎರಡರಷ್ಟು ಅಂದರೆ 13.7ರಷ್ಟು ಇತ್ತು. (2018 ಅಕ್ಟೋಬರ್ ತಿಂಗಳ ಅಂಕಿ ಅಂಶ). 2013ರ ಚುನಾವಣೆಯಲ್ಲಿ 15 ಲಕ್ಷ ಉದ್ಯೋಗಗಳ ಸೃಷ್ಠಿಯ ಭರವಸೆ ನೀಡಿದ್ದ ಶ್ರೀಮತಿ ರಾಜೇಯವರ ಸರಕಾರ ನೀಡಿದ್ದು ಕೇವಲ 2.17 ಲಕ್ಷ ಉದ್ಯೋಗಗಳನ್ನು ಮಾತ್ರ (ಇದು ಅವರ ಸರಕಾರವೇ ನೀಡಿದ ಅಂಕಿಅಂಶಗಳು) ರಾಜಾಸ್ಥಾನದ ನಿರುದ್ಯೋಗ ಸಮಸ್ಯೆಗೆ ತಾಜಾ ಉದಾಹರಣೆಯೆಂದರೆ ಕಳೆದ ವರ್ಷ 18 ಪೀಓನ್(ಡಿ ದರ್ಜೆಯ ನೌಕರ) ಹುದ್ದೆಗೆ ಅರ್ಜಿ ಕರೆದಾಗ ಬಂದ ಅರ್ಜಿಗಳ ಸಂಖ್ಯೆ 13000. ಇದರಲ್ಲಿ 129 ಇಂಜಿನಿಯರಿಂಗ್ ಪದವಿಧರರು, 23 ಜನ ಕಾನೂನು ಪಧವೀದರರು, ಒಬ್ಬ ಚಾರ್ಟೆಡ್ ಅಕೌಂಟೆಂಟ್, ಮತ್ತು 393 ಸ್ನಾತಕೋತ್ತರ ಪಧವೀದರರು ಇದ್ದರು. ಇನ್ನು ಕಳೆದ ವರ್ಷ ನರೇಗಾ ಯೋಜನೆಯಡಿಯಲ್ಲಿ ಜನರಿಗೆ ಕೆಲಸ ದೊರೆತದ್ದು ಕೇವಲ 50 ದಿನಗಳು ಮಾತ್ರ. ಇದರಿಂದ ನೀವು ರಾಜಾಸ್ಥಾನದ ನಿರುದ್ಯೋಗ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬಹುದು. ಇದು ಯುವಜನತೆ ಬಾಜಪದ ವಿರುದ್ದ ಮತಚಲಾಯಿಸುವಂತೆ ಮಾಡಿತು.
4. ಬಾಜಪದ ಒಳಗಿನ ಭಿನ್ನ ಮತ.
ಬಾಜಪದ ಕೇಂದ್ರ ನಾಯಕತ್ವ ಮತ್ತು ಶ್ರೀಮತಿ ರಾಜೇಯವರ ನಡುವಿನ ಭಿನ್ನ ಮತ ಬಾಜಪಕ್ಕೆ ಹೊಡೆತ ನೀಡಿತು. ಬಾಜಪದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾ ಸುಮಾರು ನೂರು ಜನ ಹಾಲಿ ಶಾಸಕರಿಗೆ ಟಿಕೇಟು ನೀಡುವುದು ಬೇಡ, ಹೊಸಬರಿಗೆ ನೀಡೋಣವೆಂದರೂ ಕೇಳದ ರಾಜೇಯವರು ವಿರೋಧಿ ಅಲೆಯಿದ್ದ ಶಾಸಕರಿಗೆ ಟಿಕೇಟ್ ಕೊಡಿಸಿದ್ದು ಸಹ ಬಾಜಪದ ಸೋಲಿಗೆ ಕಾರಣವಾಯಿತು.
5. ಶ್ರೀಮತಿ ರಾಜೇಯವರ ದಂತ ಗೋಪುರದ ಶೈಲಿ.
ಮುಖ್ಯಮಂತ್ರಿಗಳಾದ ಶ್ರೀಮತಿ ರಾಜೇಯವರ ಮೇಲಿದ್ದ ದೊಡ್ಡ ಆರೋಪವೆಂದರೆ ಅವರು ಸಾರ್ವಜನಿಕರಿಗಿರಲಿ, ತಮ್ಮದೇ ಸಂಪುಟ ಸದಸ್ಯರಿಗೂ ಸುಲಭದಲ್ಲಿ ಬೇಟಿಗೆ ಸಿಗುವುದಿಲ್ಲ ಎಂಬುದು.
6.ಗೋರಕ್ಷಣೆಯ ಹೆಸರಿನಲ್ಲಿ ಬಹಿರಂಗವಾಗಿ ನಡೆದ ದಾಳಿಗಳು.
ಕಳೆದ ಎರಡುಮೂರು ವರ್ಷಗಳಲ್ಲಿ ಗೋರಕ್ಷಕರೆಂದು ಹೇಳಿಕೊಂಡ ಗುಂಪುಗಳು ಬಹಿರಂಗವಾಗಿ ನಡೆಸಿದ ದಾಳಿಗಳು ಮತ್ತು ಹಲ್ಲೆಗಳು ಹೆಚ್ಚಾಗುತ್ತ ಹೋಗಿದ್ದು ಮತ್ತು ಸರಕಾರ ಇಂತಹ ಅಕ್ರಮಗಳನ್ನು ನಿಗ್ರಹಿಸಲು ವಿಫಲವಾಗಿದ್ದು ರಾಜಾಸ್ಥಾನದ ಸಾಮರಸ್ಯ ಸಮಾಜದ ಜನತೆಯ ಕೋಪಕ್ಕೆ ಕಾರಣವಾಗಿತ್ತು.
7. ಸರಕಾರಿ ಶಾಲೆಗಳನ್ನು ಮುಚ್ಚಿದ್ದು.
ಶ್ರೀಮತಿ ರಾಜೇಯವರ ಸರಕಾರ ಕಳೆದ ಮೂರುವರ್ಷಗಳಲ್ಲಿ ಹದಿನೇಳು ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಿದ್ದು ಸಾವಿರಾರು ಗ್ರಾಮೀಣ ಭಾಗದ ವಿದ್ಯಾಥಿಗಳ ಪಾಲಿಗೆ ಮುಳುವಾಯಿತು. ಇದು ಗ್ರಾಮೀಣಭಾಗದ ಪೋಷಕರಲ್ಲಿ ಅತೃಪ್ತಿ ಮೂಡಿಸಿತು.
ಹೀಗೆ ಕಳೆದ ಐದು ವರ್ಷಗಳಲ್ಲಿ ಶ್ರೀಮತಿ ವಸುಂದರ ರಾಜೇಯವರ ಬಾಜಪ ಸರಕಾರ ಜನಪರ ಕೆಲಸಗಳನ್ನು ಮಾಡದೆ ಹಲವಾರು ಜನವಿರೋಧಿ ಕೃತ್ಯಗಳಿಗೆ ಕೈ ಹಾಕಿದ್ದು ರಾಜಾಸ್ಥಾನದ ಮತದಾರರು ಸರಕಾರದ ವಿರುದ್ದ ಮತಚಲಾಯಿಸುವಂತೆ ಮಾಡಿತು. ಸರಕಾರದ ವಿರುದ್ದವಿದ್ದ ಜನರ ಬಾವನೆಗಳನ್ನು ಅರ್ಥ ಮಾಡಿಕೊಂಡಂತೆ ಕಾಂಗ್ರೆಸ್ ಭರಪೂರಾ ಭರವಸೆಗಳನ್ನು ನೀಡಿ ಮತದಾರರನ್ನು ಒಲಿಸಿಕೊಂಡಿತು. ಅಧಿಕಾರ ಹಿಡಿದ ಹತ್ತೇ ದಿನಗಳಲ್ಲಿ ಸಾಲಮನ್ನಾ ವರ್ಷಕ್ಕೆ ಲಕ್ಷ ಉದ್ಯೋಗ ನೀಡಿಕೆ ಮುಂತಾದ ದೊಡ್ಡ ಭರವಸೆಗಳನ್ನು ನೀಡಿದ ಕಾಂಗ್ರೆಸ್ ಅದಿಕಾರಕ್ಕೇನೊ ಬಂದಿದೆ. ಅದೀಗ ಎಷ್ಟರ ಮಟ್ಟಿಗೆ ತನ್ನ ಮಾತುಗಳನ್ನು ಉಳಿಸಿಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
No comments:
Post a Comment