ಕು.ಸ.ಮಧುಸೂದನ ರಂಗೇನಹಳ್ಳಿ
ಯಾವತ್ತೂ ಅಚಲವಾಗಿ ಎದ್ದು ನಿಲ್ಲದೆ
ಗಟ್ಟಿ ದ್ವನಿಯಲ್ಲಿ ಮಾತಾಡದೆ
ನಡುಬಾಗಿಸಿ ನಿಂತವರಿಗೆ
ನೋವುಗಳೇನು ಅಪರಿಚಿತ ನೆಂಟರಲ್ಲ
ಒಡಹುಟ್ಟಿದ ಒಡನಾಡಿಗಳು.
ಮೂಗು ಹಿಡಿದರೆ ಬಾಯಿ ತಾನಾಗೆ ಬಿಡುತ್ತದೆಯೆಂದು ಗೊತ್ತಿದ್ದರು
ಹಿಡಿಯುವ ಧೈರ್ಯ ಸಾಲದೆ
ಬಂದ ನಾಯಕರುಗಳೊ
ಬಾಷಣ ಬಿಗಿಯುತ್ತಿದ್ದಾರೆ
ತಳೆಯಬೇಕಾದ ದೇಶಭಕ್ತಿಯ ಬಗ್ಗೆ
ತುಳಿಯಬೇಕಾದ ದೇಶದ್ರೋಹಿಗಳ ಬಗ್ಗೆ
ಶಾಂತಿಯ ಮಾತಾಡುತ್ತಲೇ ಕತ್ತಿಯ ಝಳಪಿಸುತ್ತಿದ್ದಾರೆ ಗಾಳಿಯಲ್ಲಿ
ಮುನ್ನಡೆಸಬೇಕಾದ ವಿಚಾರವಂತರು
ಪ್ಯಾನೆಲ್ಲುಗಳ ಚರ್ಚೆಯೊಳಗೆ
ಶಬ್ದಗಳ ಮಾಲಿನ್ಯತೆಗೆ ಕೊಡುಗೆ ನೀಡುತ್ತಿದ್ದಾರೆ
ತೋಳು ಮಡಚಿ ಮುಂದೆ ನಿಲ್ಲಬೇಕಿದ್ದ ಯುವಕರು
ಬಣ್ಣಗಳ ಬಾವುಟಗಳ ಬೀಸುತ್ತ ಬಳಲಿದ್ದಾರೆ......
ಇಷ್ಟಾದರೂ ಜನ ಕಾಯುತ್ತಲೇ ಇದ್ದಾರೆ
ತಮ್ಮನ್ನು ಉದ್ದರಿಸಬಲ್ಲ ಅವತಾರ ಪುರುಷನಿಗಾಗಿ
ಹಾಗೆ ದಿಡೀರನೆಉದ್ಭವಿಸಿದ ಅವತಾರ ಪುರುಷರೆಲ್ಲ
ಮುಖವಾಡದಾರಿಗಳೆಂಬುದು ಬಯಲಾಗಿ
ತಮ್ಮ ನಿಜರೂಪ ತೋರಿದ ಮೇಲೂ
ಕಾಯುತ್ತಲೇ ಕೂತಿದ್ದಾರೆ
ಕಪ್ಪೆಗಳಂತೆ ವಟಗುಟ್ಟುತ್ತ
ಗೊಣಗುತ್ತ
ಕಾಯುತ್ತಲೇ ಇರುತ್ತಾರೆ
ಮತ್ತೊಂದು ಶತಮಾನ ಉರುಳಿಹೋದರೂ
No comments:
Post a Comment