Nov 12, 2018

ಡ್ರಾಫ್ಟ್ ಮೇಲ್: ಭಾಗ 2 - ಡ್ರಾಫ್ಟ್ ಸೇರಿದ ಮೊದಲ ಪತ್ರ


ಚೇತನ ತೀರ್ಥಹಳ್ಳಿ. 

ಡಿಯರ್ ಫೆಲೋಟ್ರಾವೆಲರ್,

ನನ್ನ ತಿರುವಿನಲ್ಲಿ ತಿರುಗುತ್ತಿದ್ದೇನೆ. ಈ ತಿರುವೇ ನನ್ನ ನಿಲ್ದಾಣವೂ ಆಗಲಿದೆ. 

ನಂಗೆ ಸತ್ತುಹೋಗಬೇಕು ಅನಿಸುತ್ತಿದೆ. ಇದನ್ನು ನನ್ನ ಕೊನೆಯ ಪತ್ರ ಅಂದುಕೋ. 

ನೀನು ವಾಪಸ್ ಬರುವ ಹೊತ್ತಿಗೆ ನಾನು ಇರೋದಿಲ್ಲ. ಶೋಕೇಸಿನಲ್ಲಿ ನಿನ್ನ ಫೋಟೋ ಹಿಂದೆ ಡೆತ್ ನೋಟ್ ಬರೆದಿಟ್ಟಿದ್ದೀನಿ. ಅದನ್ನು ಪೊಲೀಸರಿಗೆ ಕೊಡು. 

ಅದರಲ್ಲೂ ವಿಶೇಷವೇನಿಲ್ಲ. ಯಾಕೆ ಬದುಕಬೇಕು ಅಂತ ಗೊತ್ತಿಲ್ಲದ ಕಾರಣ ಸತ್ತು ಹೋಗ್ತಿದ್ದೀನಿ ಅಂತ ಬರೆದಿದ್ದೀನಿ. 

ಇತ್ತೀಚೆಗೆ ನಮ್ಮ ನಡುವೆ ಜಗಳ ಜಾಸ್ತಿಯಾಗ್ತಿದೆ. ನೀನು ಇಷ್ಟು ಅಸಹನೆ ಮಾಡಿದರೆ ನಾನು ಹೇಗೆ ಬದುಕಿರಲಿ? ಖುಷಿಗೆ, ಬದುಕಿಗೆ, ಧೈರ್ಯಕ್ಕೆ ಜೊತೆ ಯಾರಿದ್ದಾರೆ?

ಆದರೆ ಡೆತ್ ನೋಟಿನಲ್ಲಿ ಇದನ್ನೆಲ್ಲ ಬರೆದಿಲ್ಲ.
ನಂಗೂ ಮೂವತ್ತಾಗುತ್ತ ಬಂತು. ಬೆಳಗಾದರೆ ಮುದುಕಿಯಾಗ್ತೀನಿ. ನೀನೂ ಮುನಿಸಿಕೊಂಡು ರಗಳೆ ಮಾಡ್ತಿದ್ದರೆ ನನಗೆ ಯಾರು ದಿಕ್ಕು? 

ಆಗ ಸಾಯಲಿಕ್ಕೂ ಧೈರ್ಯ ಬರದೆ ಹೋಗಬಹುದು.. ಅದಕ್ಕೇ, ಈಗಲೇ ಧೈರ್ಯ ಇರುವಾಗ ಹೊರಟುಬಿಡುತ್ತೇನೆ. 

ನೈಲ್ ಕಟರ್ ಕಂಪ್ಯೂಟರ್ ಟೇಬಲಿನ ಮೇಲಿದೆ. ಒಂದು ಸೆಟ್ ಬಟ್ಟೆ ಐರನ್ ಮಾಡಿಸಿಟ್ಟಿದ್ದೀನಿ. ಶಿವಾನಿ ಬಾಣಂತನ ಮುಗಿಸಿ ಬರುವವರೆಗೆ ಸಾಕಗ್ತವೆ. 

ನಿನ್ನ ಬುಕ್‍ಗಳನ್ನು ಆರ್ಡರಿನಲ್ಲಿ ಜೋಡಿಸಿಟ್ಟಿದೀನಿ.

ನೀನು ಯಾವಾಗಲೂ ಗಲಾಟೆ ಮಾಡುತ್ತಿದ್ದಂತೆ; ಕಮ್ಯುನಿಸ್ಟರದ್ದು ಒಂದು ಕಡೆ, ರಾಷ್ಟ್ರೀಯ ವಿಚಾರಧಾರೆ ಒಂದು ಕಡೆ… ಗೌತಮ ಅಂತ ಸ್ಟಿಕ್ಕರ್ ಹಚ್ಚಿರೋದು ಮಾತ್ರ ನಿನ್ನವು, ನನ್ನ ಬುಕ್ಕುಗಳ ತಂಟೆಗೆ ಹೋಗಬೇಡ. ನಿನ್ನ ಮನೆಗೆ ವಾಪಸ್ ಶಿಫ್ಟ್ ಆಗುವಾಗ ನಿನ್ನದೆಲ್ಲವನ್ನೂ ಮರೆಯದೆ ತಗೊಂಡು ಹೋಗು. 

ಕೊನೆಯದಾಗಿ ಒಂದು ಮಾತು. ಮೊನ್ನೆ ನಾನು ಶೇರ್ ಮಾಡಿದ್ದ ಲೇಖನದಲ್ಲಿ ನೀನು ಬೈಯುವಂಥದೇನೂ ಇರಲಿಲ್ಲ. ಅದರ ಶೀರ್ಷಿಕೆ ಓದಿಯೇ ನೀನು ಉರಿದುಬಿದ್ದಿದ್ದು ಯಾಕೆ!? ಮೂರು ದಿನಗಳಾದವಲ್ಲ, ನೀನು ನನ್ನನ್ನು ಮಾತಾಡಿಸದೆ!? ನಾನು ಯಾರದೋ ಗೆಳೆತನಕ್ಕೆ ಕಟ್ಟುಬಿದ್ದು ಅಭಿಪ್ರಾಯ ರೂಪಿಸಿಕೊಳ್ಳೋಹಾಗಿದ್ದರೆ…. ಜೀವ ನೀನು…. ನಿನ್ನ ಮುಲಾಜಿಗೆ ನೀನು ಹೇಳಿದ್ದಕ್ಕೆಲ್ಲ ಹೂಂಗುಟ್ಟಬಹುದಿತ್ತಲ್ವ? ಅದೇ ಸಾಧ್ಯವಿಲ್ಲ ಅಂದಮೇಲೆ ಇನ್ಯಾರದೋ ಹೌದುಗಳಲ್ಲಿ ಹೌದಾಗಲು ನನಗೇನು ದರ್ದು ಮಹರಾಯಾ!

ಆ ಲೇಖನವನ್ನು ಮತ್ತೊಮ್ಮೆ ಸಮಾಧಾನವಾಗಿ ಓದಿ ನೋಡು. ಹೆಸರು ನೋಡಿ ಉರಿದು ಬೀಳುವುದು ಕಡಿಮೆ ಮಾಡು. ಪೂರ್ವಗ್ರಹದಿಂದ ಹೊರಗೆ ಬರದೆಹೋದರೆ, ನೀನು ಅಚ್ಚಿನೊಳಗೆ ಎರಕವುಂಡು ಹೊಮ್ಮುವ ಮತ್ತೊಂದು ಗೊಂಬೆಯಾಗಿಬಿಡ್ತೀಯ… ಅಷ್ಟೆ. 

ನಿನ್ನಲ್ಲಿ ಶಕ್ತಿ ಮತ್ತು ಉತ್ಸಾಹ ಜಿಗಿದಾಡ್ತಿದೆ… ನೀನು ಬೆಳೆಯುವ ಎತ್ತರ ಊಹಿಸಬಲ್ಲೆ. 

ಆದರೆ, ಮಹರಾಯಾ.. ನಿನಗೆ ಕಬೀರರ ದೋಹೆ ನೆನಪಿಲ್ಲವಾ? ಪುರುಷೋತ್ತಮಾನಂದ ಜಿ ಕ್ಯಾಸೆಟ್ಟಿನಲ್ಲಿ ಎಷ್ಟು ಚೆಂದ ಹಾಡಿದ್ದಾರೆ.. “ಎತ್ತರ ಬೆಳೆದರೆ ಏನು ಬಂತು, ಖರ್ಜೂರದ ಮರದಂತೆ.. ದಾರಿಹೋಕನಿಗೆ ನೆರಳಿಲ್ಲ, ಹಣ್ಣೂ ಬಲು ದೂರ!” 

ನೀನು ಹಾಗೆ ಖರ್ಜೂರದ ಮರ ಆಗಿಬಿಡ್ತೀಯೇನೋ ಅನ್ನುವ ಭಯ ನನಗೆ. 

ಇರಲಿ ಬಿಡು… ನನಗೇನು? ನಾನಂತೂ ಸತ್ತುಹೋಗುವವಳು. ನಿನ್ನ ಜೊತೆ ರಾಷ್ಟ್ರ ಧರ್ಮ ಸಂಸ್ಕೃತಿ ಅಂತ ದಿನಾದಿನಾ ಹೊಡೆದಾಡಿ ಸಾಯೋದಕ್ಕಿಂತ ಒಟ್ಟು ಸಾಯೋದು ಒಳ್ಳೇದು!

ಅವೆಲ್ಲ ಇರಲಿ. ನಾನು ಸತ್ತುಹೋದ ಮೇಲೆ ಅಳಬೇಡ. ನಿನ್ನದು ಕಲ್ಲು ಹೃದಯವೇನಲ್ಲ, ಗೊತ್ತಿದೆ. ಶಿವಾನಿಗೆ ನಾನು ಇಷ್ಟವಿಲ್ಲ. ಇದ್ದಿದ್ದರೆ, ನಿನ್ನ ಮಗಳಾಗಿ ಹುಟ್ಟಿಬರ್ತಿದ್ದೆ. ಹಾಗಂತ ನಿನಗೆ ಹೆಣ್ಣು ಹುಟ್ಟಿದರೆ, ನನ್ನ ಹೆಸರು ಇಡಲೇನೂ ಹೋಗಬೇಡ. ನನಗೋಸ್ಕರ ನೀವಿಬ್ಬರು ಕಿತ್ತಾಡಿಕೊಳ್ಳೋದು ನನಗಿಷ್ಟವಿಲ್ಲ. 

ಸಾವಿನ ರೊಟ್ಟಿ ತಟ್ಟೆಯಲ್ಲಿಟ್ಟುಕೊಂಡಿದ್ದೀನಿ. ಈಗ ತಿನ್ನಬೇಕು. 

ಬೈ

ನಿನಗೇನೂ ಅಲ್ಲದ,



ಚಿನ್ಮಯಿ

No comments:

Post a Comment