ಚೇತನ ತೀರ್ಥಹಳ್ಳಿ.
ಚಿನ್ಮಯಿ ಕಾಲು ನೀಡಿಕೊಂಡು, ಲ್ಯಾಪ್‍ಟಾಪ್ ತೆರೆದು ಕುಳಿತಿದ್ದಾಳೆ. ನಡು ಮಧ್ಯಾಹ್ನದ ಬಿಸಿಲು ಗೋಡೆಗೆ ಅಪ್ಪಳಿಸಿ, ಬಾಗಿಲುದ್ದ ನೆಲದ ಮೇಲೆ ಅಂಗಾತ ಬಿದ್ದಿದೆ.“ಅರೆ! ಬೆಳಕಿನ ಬಾಗಿಲು..” ತನ್ನೊಳಗೆ ಬೆರಗಾಗುತ್ತಾಳೆ.
ಹಗೂರ ಎದ್ದು, ಹೊಸ್ತಿಲಾಚೆ ಬಿಸಿಲಿಗೆ ಬೆನ್ನಾಗಿ ನಿಲ್ಲುತ್ತಾಳೆ. ಮನೆಯೊಳಗೆ ನೆಲದಲ್ಲಿ ಅವಳ ನೆರಳು!
ಮೊಬೈಲ್ ಕ್ಯಾಮೆರಾ ಆನ್ ಮಾಡಿ, ಸೆಲ್ಫಿ ಮೋಡಿನಿಂದ ಮಾಮೂಲಿಗೆ ಬರುತ್ತಾಳೆ.
ಯಾವ ಕೋನದಿಂದ ತೆಗೆದರೆ ಫೋಟೋ ಚೆನ್ನಾಗಿ ಬರುತ್ತದೆ ಅನ್ನೋದು ಅವಳಿಗೆ ಗೊತ್ತಿದೆ.
ತಮ್ಮದೇ ಫೋಟೋ ತೆಗೆದುಕೊಳ್ಳುವವರು ಛಾಯಾಗ್ರಹಣವನ್ನ ವಿಶೇಷವಾಗಿ ಅಭ್ಯಾಸ ಮಾಡಬೇಕಿಲ್ಲ.. ನಾರ್ಸಿಸಿಸ್ಟ್‍ಗಳಾದರೆ ಸಾಕು ಅನ್ನೋದು ಅವಳ ನಂಬಿಕೆ.
ಚಿನ್ಮಯಿ ತೆಗೆದ ಫೋಟೋ ಅದ್ಭುತವಾಗಿ ಬಂದೇಬಂದಿದೆ. ‘ದೇಹ ಮೀರಿದರೂ ನೆರಳಿಗೆ ಹೊಸ್ತಿಲು ದಾಟಲಾರದ ಭಯ’ ಅನ್ನುವ ಒಕ್ಕಣೆ ಕೊಟ್ಟು ಇನ್ಸ್ಟಾಗ್ರಾಮಿನಲ್ಲಿ ಶೇರ್ ಮಾಡುತ್ತಾಳೆ.
ಅವಳು ತೀರ ಪುರುಸೊತ್ತಿನಲ್ಲಿ ಇದ್ದಾಳೆಂದು ಇದನ್ನೆಲ್ಲ ಮಾಡುತ್ತಿಲ್ಲ. ಮಾಡಲೇಬೇಕಿರುವ ಕೆಲಸವೊಂದನ್ನು ಎಷ್ಟು ಸಾಧ್ಯವೋ ಅಷ್ಟು ಹೊತ್ತು ಮುಂದೂಡಲಿಕ್ಕಾಗಿ ಮಾಡುತ್ತಿದ್ದಾಳೆ. ಅದೊಂದು ಮಾಡಿಬಿಟ್ಟರೆ ಈ ದಿನದ ಕೆಲಸವೇ ಮುಗಿದುಹೋಗುತ್ತದೆ. ಆದರೆ ಚಿನ್ಮಯಿ ಯಾವುದನ್ನು ವಿಪರೀತ ಇಷ್ಟಪಡುತ್ತಾಳೋ ಅದನ್ನು ಹೊಂದಲು ಭಯಪಡುತ್ತಾಳೆ.
ಅವಳಿಗೆ ಖಾಲಿಯಾಗುವುದೆಂದರೆ ಇಷ್ಟ.
ಅವಳಿಗೆ ಖಾಲಿಯಾಗುವುದೆಂದರೆ ಭಯ.
ಇವತ್ತು ಚಿನ್ಮಯಿ ಏನಾದರಾಗಲಿ, ಮೇಲ್ ಕಳಿಸಿಯೇಬಿಡಬೇಕೆಂದು ನಿಶ್ಚಯಿಸಿದ್ದಾಳೆ. ಎಷ್ಟು ದಿನಗಳಿಂದ ಬರೆದಿಟ್ಟಿದ್ದ ಮೇಲ್! ದಿನಗಳೇನು.. ವರ್ಷವೇ ಆಯಿತೇನೋ. ಅಥವಾ, ವರ್ಷಗಳು?
ಈ ಹೊತ್ತು ಚಿನ್ಮಯಿ ಭಯದ ಮೂಡ್‍ನಲ್ಲೇನೂ ಇಲ್ಲ. ಆದರೂ ಅಂಥದೊಂದು ಒಕ್ಕಣೆ ಹೊಳೆದಿದ್ದು ಯಾಕೆ?
ತನ್ನೊಳಗಿನಲ್ಲಿ ಹಣಕುತ್ತಾಳೆ.
“ಮೇಲ್ ಮಾಡಲು ಮೀನಾಮೇಷ ಎಣಿಸ್ತಿರೋದು ಸಾಲದೇ?” ಅನ್ನುವ ಉತ್ತರ ಬರುತ್ತದೆ.
ಹೌದಲ್ಲ! ‘ದೇಹ ಮೀರಿದರೂ ನೆರಳಿಗೆ ಹೊಸ್ತಿಲು ದಾಟಲಾರದ ಭಯ..’ ಸೆಂಡ್ ಬಟನ್ ಒತ್ತಿಬಿಟ್ಟರೆ ಮುಗಿಯಿತು.
ಅದು ಹೊಸ್ತಿಲು. ಅದನ್ನು ದಾಟಲು ಹಿಂಜರಿಕೆ ಅಂದರೆ ಭಯವೇ ತಾನೆ!
“ಪ್ರೇಮ ನನ್ನನ್ನು ಎಲ್ಲ ಭಯಗಳಿಂದಲೂ ಮುಕ್ತಗೊಳಿಸಿತು.. ನನಗೆ ತಡೆಯಾಗಿದ್ದೆ ನಾನೇ, ಅದು ನನ್ನನ್ನೂ ನನ್ನಿಂದ ಮುಕ್ತಗೊಳಿಸಿತು!” ಮಾಹ್‍ಸತಿ ಗಂಜವಿಯ ಸಾಲು ಡೆಸ್ಕ್ ಟಾಪಿನಲ್ಲೇ ಇದೆ. ಖುದ್ದು ಚಿನ್ಮಯಿಯೇ ಮಾಡಿದ ಪೋಸ್ಟರ್.
“ಎದೆಯಾಳಕ್ಕಿಳಿಯದ ಮಾತುಗಳನ್ನು ಎಷ್ಟು ಅನುವಾದ ಮಾಡಿದರೆ ತಾನೆ ಏನು?” ಯೋಚಿಸುತ್ತಾಳೆ ಚಿನ್ಮಯಿ.
“ಹೃದ್ಗತವಾದರೂ ಹಾಗೊಮ್ಮೆ, ಕಾರ್ಯರೂಪಕ್ಕೆ ಇಳಿಯೋದು ಯಾವಾಗ!?”
ಪ್ರೇಮ ಹೊಸತಾಗಿ ಘಟಿಸಿದೆ. ಇಷ್ಟು ದಿನದ ಹಪಾಹಪಿಯನ್ನೆಲ್ಲ ನೀವಾಳಿಸಿ ಎಸೆದಿದೆ.
ನಲವತ್ತರ ಬೂದುಗೂದಲು ಸವರಿ ಕಿವಿಹಿಂದೆ ಸಿಗಿಸುತ್ತಾ ತುಟಿ ಕಚ್ಚುತ್ತಿದ್ದಾಳೆ.
ಹೌದಲ್ಲ! ಪ್ರೇಮ ಎಲ್ಲ ಭಯಗಳಿಂದಲೂ ಮುಕ್ತಗೊಳಿಸುತ್ತೆ!!
ಚಿನ್ಮಯಿಗೆ ಒಂದು ಎಳೆಯನ್ನು ಮತ್ತೆಲ್ಲಿಗೋ ಜೋಡಿಸುವುದು ಬಹಳ ಇಷ್ಟದ ಕೆಲಸ.
ಹಾಗೆ ಜೋಡಿಸುತ್ತಾ ಜೋಡಿಸುತ್ತಾ ಸಿಕ್ಕಿನೊಳಗೆ ಸಿಲುಕುವುದೂ ಮಾಮೂಲು.
ಅಲ್ಲಿಂದ ಹೊರಗೆ ಬರುವ ಹೊತ್ತಿಗೆ ಮೂಲ ವಿಷಯವೇ ಅಪ್ರಸ್ತುತವಾಗಿಬಿಟ್ಟಿರುತ್ತದೆ.
ಪುಣ್ಯವೆಂದರೆ, ಚಿನ್ಮಯಿಗೆ ತನ್ನ ಈ ಎಲ್ಲ ಆಟಗಳೂ ಚೆನ್ನಾಗಿ ಗೊತ್ತು.
ಮಾಹ್‍ಸತಿಯ ಹಿಂದೆ ಹೊರಟ ಮನಸ್ಸನ್ನು ಕಿವಿ ಹಿಂಡಿ ಮರಳಿ ತರುತ್ತಾಳೆ
ಹೊಸ ಬದುಕು ಶುರುವಾಗಬೇಕು. ಅದು ಆಗಬೇಕೆಂದರೆ, ಡ್ರಾಫ್ಟ್‍ನಲ್ಲಿರುವ ಮೇಲ್ ಕಳಿಸಲೇಬೇಕು.
ಡ್ರಾಫ್ಟ್ ವಿಂಡೋ ತೆರೆಯುತ್ತಾಳೆ ಚಿನ್ಮಯಿ. ಅದರಲ್ಲಿ ಹತ್ತಾರು ಮೇಲ್‍ಗಳು ಮುಖ ಮುರಿದು ಕುಂತಿವೆ. ಅವೆಲ್ಲವೂ ಅವಳ ಬದುಕಿನ ತುಣುಕುಗಳ ದಾಖಲೆ.
ಅವುಗಳಲ್ಲಿ ಕಳೆದ ತಿಂಗಳು ಅಪ್‍ಡೇಟ್ ಮಾಡಿಟ್ಟ ಒಂದು ಮೇಲ್ ತೆರೆಯುತ್ತಾಳೆ. ಎರಡು ಸಲ ಓದಿಕೊಳ್ಳುತ್ತಾಳೆ.
ಕೆನ್ನೆ ಮೇಲೆ ಹಾವಿನಂತೆ ಕಣ್ಣೀರು ಜಾರುತ್ತಿದೆ.
ಭಾಷೆ ಕಹಿಯಾಯಿತು ಅನಿಸಿ ಅಲ್ಲಲ್ಲಿ ಒಂದಷ್ಟು ನಯಗೊಳಿಸುತ್ತಾಳೆ. ಅಟ್ಯಾಚ್ ಮಾಡಿದ್ದ ಒಂದು ಫೋಟೋ ರಿಮೂವ್ ಮಾಡುತ್ತಾಳೆ. ಕಾಯಿಲೆ ಬಿದ್ದಾಗ ತೆಗೆದುಕೊಂಡಿದ್ದ ಸೆಲ್ಫೀ.
“ಅವನಿಗೆ ಪಾಠ ಮಾಡಲಿಕ್ಕೆ ನನ್ನನ್ನು ಯಾಕೆ ಕಡಿಮೆ ಮಾಡಿಕೊಳ್ಬೇಕು?” ಅನ್ನಿಸುತ್ತದೆ.
ಅಲ್ಲಿ ವಿದ್ರೋಹದ ಆರೋಪವಿದೆ. ಅದನ್ನು ತೆಗೆಯುತ್ತಾಳೆ.
ಚಿನ್ಮಯಿಗೆ ಈಗ ಪ್ರೇಮ ವಿದ್ರೋಹಕ್ಕೆ ಒಳಗಾಗೋದಿಲ್ಲವೆಂದು ಗೊತ್ತಿದೆ. ವಿದ್ರೋಹವೆಸಗುವವರು ಪ್ರೇಮಿಸಿಯೇ ಇರೋದಿಲ್ಲ! ಅದು ಪ್ರೇಮವಲ್ಲ ಎಂದಾದ ಮೇಲೆ ದುಃಖಿಸೋದು ಯಾಕಾಗಿ!?
ನೆಲದ ಮೇಲೆ ಬಿದ್ದ ಬೆಳಕಿನ ಚೌಕಟ್ಟು ಕರಗುತ್ತಿದೆ.
“ಈಗ ಇಲ್ಲದಿದ್ದರೆ ಮತ್ತೆಂದಿಗೂ ಇಲ್ಲ!” ಚಿನ್ಮಯಿ ಗಟ್ಟಿಯಾಗುತ್ತಾಳೆ.
ಸಬ್ಜೆಕ್ಟಿನಲ್ಲಿ ‘ಸ್ನೇಹಪೂರ್ಣ ವಿದಾಯ’ ಎಂದು ತುಂಬುತ್ತಾಳೆ. ಹಿಂದಿನ ಬಾರಿಯ ತಿದ್ದುಪಡಿಯಲ್ಲಿ ‘ಗುಡ್ ಬೈ’ ಎಂದಷ್ಟೇ ಇತ್ತು. ಹಲವು ತಿದ್ದುಪಡಿಗಳ ಹಿಂದೆ, ಮೊದಲ ಸಲ ಆ ಮೇಲ್ ಬರೆದಾಗ ಸಬ್ಜೆಕ್ಟಿನಲ್ಲಿದ್ದುದ್ದು ‘Fuck off… Good bye for ever’ ಎಂದು!
ಚಿನ್ಮಯಿಗೆ ತಾನು ಇದನ್ನು ಕಳಿಸಲು ತಡ ಮಾಡಿದ್ದೇ ಒಳ್ಳೆಯದಾಯಿತು ಅನ್ನಿಸುತ್ತದೆ. ತನ್ನ ವಾದಕ್ಕೆ ಪೂರಕವಾದ ದಾಖಲೆಗಳನ್ನೆಲ್ಲ ಯಾವತ್ತೋ ಸೇರಿಸಿಟ್ಟಿದ್ದಳಲ್ಲ.. ‘ಡಿಟ್ಯಾಚ್ ಆಗಲು ಎಷ್ಟೆಲ್ಲ ಅಟ್ಯಾಚ್‍ಮೆಂಟುಗಳ ಸಾಕ್ಷಿ ಬೇಕು!” ಅಂದುಕೊಂಡು ತಲೆ ಕೊಡವುತ್ತಾಳೆ.
ಹೊಕ್ಕುಳ ಮೇಲೆ ಕೈಯಿಟ್ಟು ಹಗೂರ ಉಸಿರಾಡಿ, ಕೊನೆಗೂ ಸೆಂಡ್ ಬಟನ್ ಒತ್ತೇ ಬಿಡುತ್ತಾಳೆ.
ಮುಂದುವರೆಯುವುದು....
No comments:
Post a Comment