ಕು.ಸ.ಮಧುಸೂದನ ರಂಗೇನಹಳ್ಳಿ
ಜಾಗತೀಕರಣದ ಮತ್ತೊಂದು ಮಾರಕಾಯುಧ ನಮ್ಮ ರೈತರ ಬಲಿ ಪಡೆಯುವತ್ತ ಮುಂದಾಗಿದೆ.ಅದೇ ಆಕ್ಸಿಸ್ ಬ್ಯಾಂಕ್!
ತೊಂಭತ್ತರ ದಶಕದಲ್ಲಿ ಜಾರಿಗೊಂಡ ಮುಕ್ತ ಆರ್ಥಿಕ ನೀತಿಯ ಫಲವಾಗಿ 1993ರಲ್ಲಿ ಜನ್ಮ ತಳೆದ ಖಾಸಗಿ ವಲಯದ ಈ ಬ್ಯಾಂಕ್ ದೇಶದಾದ್ಯಂತ 1947 ಶಾಖೆಗಳನ್ನು ಹೊಂದಿದೆ. ಖಾಸಗಿ ವಲಯದ ಅತ್ಯಂತ ಪ್ರಮುಖ ಬ್ಯಾಂಕ್ ಎಂದು ಹೆಸರು ಮಾಡಿರುವ ಇದು ದೇಶದ ಬೇರೆಲ್ಲ ಬ್ಯಾಂಕುಗಳಿಗಿಂತ ಹೆಚ್ಚು ಎ.ಟಿ.ಎಂ. ಗಳನ್ನು ಸಹ ಹೊಂದಿದೆ. ಇದರ ಕೇಂದ್ರಕಛೇರಿ ಮುಂಬೈನಲ್ಲಿದೆ..ಇರಲಿ ನಾನೇನು ಇಲ್ಲಿಈ ಬ್ಯಾಂಕಿನ ಮಾಹಿತಿ ನೀಡಲು ಇದನ್ನು ಬರೆಯುತ್ತಿಲ್ಲ. ವಿಷಯಕ್ಕೆ ಹೋಗುವ ಮೊದಲು ಈ ಬ್ಯಾಂಕಿನ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಿರಲೆಂದು ಹೇಳಿದೆ.
ಇದೀಗ ಈ ಬ್ಯಾಂಕು ಕನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸುಮಾರು 181 ರೈತರ ವಿರುದ್ದ ಸಾಲ ಮರುಪಾವತಿ ಮಾಡಿಲ್ಲವೆಂದು ಕೋರ್ಟಿನಿಂದ ಬಂಧನದ ಆದೇಶವನ್ನು ಹೊರಡಿಸಿ ತನ್ನ ರಾಕ್ಷಸೀತನವನ್ನು ಮೆರೆದಿದೆ. ಇದೀಗ ರೈತಸಂಘ ಮತ್ತು ರಾಜ್ಯ ಸರಕಾರಗಳ ಮದ್ಯಸ್ಥಿಕೆಯಿಂದ ತನ್ನ ಕಾನೂನು ಹೋರಾಟವನ್ನು ಸ್ಥಗಿತಗೊಳಿಸುವುದಾಗಿ ಬ್ಯಾಂಕಿನ ಸ್ಥಳೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಅಷ್ಟು ಸುಲಭಕ್ಕೆ ಈ ಬಂಧನದ ವಾರೆಂಟುಗಳು ರದ್ದಾಗುವುದಿಲ್ಲ. ಯಾಕೆಂದರೆ ಈ ವಾರೆಂಟುಗಳನ್ನು ಹೊರಡಿಸಿರುವುದು ಎರಡು ಸಾವಿರ ಮೈಲುಗಳಷ್ಟು ದೂರವಿರುವ ಕೊಲ್ಕತ್ತಾದ ನ್ಯಾಯಾಲಯಗಳು. ಕಾರಣ ಕರ್ನಾಟಕದಲ್ಲಿನ ಈ ಬ್ಯಾಂಕುಗಳು ಕೊಲ್ಕತ್ತಾದ ಆಡಳಿತವಲಯಕ್ಕೆ ಸೇರಿರುವುದು. ಈಗ ಅಲ್ಲಿ ನ್ಯಾಯಾಲಯಗಳಿಗೆ ದೀಪಾವಳಿಯ ರಜೆ ಇರುವುದರಿಂದ ಅವುಗಳು ಮತ್ತೆ ತಮ್ಮಕಲಾಪಗಳನ್ನು ಪ್ರಾರಂಭಿಸುವವರೆಗು ನಮ್ಮ ರೈತರು ಬಂಧನದ ಭೀತಿಯಲ್ಲಿಯೇ ಬದುಕುವ ಅನಿವಾರ್ಯ ಸೃಷ್ಠಿಯಾಗಿದೆ.
ನಮ್ಮ ರಾಜ್ಯ ಸರಕಾರ ರೈತರ ಸಾಲಮನ್ನಾ ಮಾಡಿ ಆದೇಶ ಹೊರಡಿಸಿದೆ. ಹಾಗಿದ್ದೂ ಈ ಆಕ್ಸಿಸ್ ಬ್ಯಾಂಕ್ ಅದು ಹೇಗೆ ಬಂಧನದ ವಾರೆಂಟ್ ಕೊಡಿಸಿತು ಎಂಬುದನ್ನು ನೋಡುತ್ತಾ ಹೋದರೆ ತೆರೆದುಕೊಳ್ಳುವುದೇ ಜಾಗತೀಕರಣದ ಪೆಡಂಬೂತ ಮತ್ತದರ ಕೈಲಿರುವ ವಿವಿಧ ಬಗೆಯ ಹತ್ಯಾರಗಳು.
ಯಾಕೆಂದರೆ ನಾನು ಮೊದಲೇ ಹೇಳಿದಂತೆ ಆಕ್ಸಿಸ್ ಬ್ಯಾಂಕ್ ಖಾಸಗಿ ವಲಯದ ಬ್ಯಾಂಕ್. ಅದಕ್ಕೆ ನಮ್ಮ ರಾಜ್ಯ ಸರಕಾರದ ಕಾನೂನುಗಳು ಅನ್ವಯವಾಗುವುದಿಲ್ಲ. ನಮ್ಮ ಸರಕಾರ ಹೊರಡಿಸಿರುವ ಸಾಲ ಮನ್ನಾದ ಆಜ್ಞೆ ಅನ್ವಯವಾಗುವುದು ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್ಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ ಮಾತ್ರ. ಹೀಗಾಗಿ ರೈತರ ಬಂಧನಕ್ಕೆ ವಾರೆಂಟ್ ಹೊರಡಿಸುವಲ್ಲಿ ಆಕ್ಸಿಸ್ ಬ್ಯಾಂಕಿನ ಅಧಿಕಾರಿಗಳಿಗೆ ಯಾವ ಮತ್ತು ಯಾರ ಭಯವೂ ಇದ್ದಂತೆ ಕಾಣುತ್ತಿಲ್ಲ. ಖಾಸಗೀಕರಣದ ನೀತಿಯ ದೆಸೆಯಿಂದ ಸ್ಥಾಪಿತವಾಗಿರುವ ಇಂತಹ ಬ್ಯಾಂಕುಗಳಿಂದ ನಾವು ಕಲ್ಯಾಣರಾಜ್ಯದ ಜನಪರ ಕಾರ್ಯಕ್ರಮಗಳಿಗೆ ಸಹಾಯ ಸಹಕಾರವನ್ನು ನಿರೀಕ್ಷಿಸುವಂತೆಯೇ ಇಲ್ಲ. ಅದರಲ್ಲೂ ಇದೀಗ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಆರ್ಥಿಕ ನೀತಿಗಳನ್ನು ಮತ್ತು ದಿಕ್ಕೆಟ್ಟಂತೆ ವರ್ತಿಸುತ್ತಿರುವ ನಮ್ಮ ರಿಸರ್ವ್ ಬ್ಯಾಂಕಿನ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮುಂದೊಂದು ದಿನ ಈ ನೆಲದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳೇ ಇರುವುದಿಲ್ಲ ಎನಿಸುತ್ತದೆ. ಈಗಿರುವ ರಾಷ್ಟ್ರೀಕೃತ ಬ್ಯಾಂಕುಗಳೇ ರೈತರಿಗೆ ಕೃಷಿ ಸಾಲ ನೀಡುವಲ್ಲಿ ಅನಾಸಕ್ತಿ ತೋರಿಸುತ್ತ ದೊಡ್ಡ ದೊಡ್ಡ ಉದ್ಯಮದಾರರಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲವನ್ನು ನೀಡುತ್ತಿವೆ. ಜೊತೆಗೆ ಅನುತ್ಪಾದಕ ಆಸ್ತಿ ಹೆಸರಿನಲ್ಲಿ(ಎನ್.ಪಿ.ಎ.) ಪರೋಕ್ಷ ಸಾಲಮನ್ನಾ ಮಾಡುತ್ತ ಬ್ಯಾಂಕುಗಳನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದ್ದಲ್ಲದೆ ತಮ್ಮ ಠೇವಣಿಗಳನ್ನು ಹೆಚ್ಚಿಸಿಕೊಳ್ಳಲು ಗ್ರಾಹಕರಿಗೆ ಸೇವಾ ತೆರಿಗೆ,ದಂಡ ಮತ್ತಿತರೇ ಹೆಸರಿನಲ್ಲಿ ಸುಲಿಗೆ ನಡೆಸುತ್ತಿವೆ.
ಇದೆಲ್ಲ ಹೋಗಲಿ ರಾಷ್ಟ್ರೀಕೃತವೊ ಖಾಸಗಿಯೊ ಎಲ್ಲ ಬ್ಯಾಂಕುಗಳು ಸಾಲ ವಸೂಲಾತಿಗೆ ಅನುಸರಿಸಬೇಕಾದ ಗ್ರಾಹಕ ಸ್ನೇಹಿ ನಿಯಮಗಳನ್ನು ರಿಸರ್ವ್ ಬ್ಯಾಂಕ್ ಮಾಡಿಟ್ಟಿದೆ. ಹೀಗಾಗಿ ಯಾವುದೇ ಬ್ಯಾಂಕುಗಳೂ ತಮಗಿಚ್ಚೆ ಬಂದ ಹಾಗೆ ಸಾಲವಸೂಲಾತಿಗೆ ಮುಂದಾಗುವಂತಿಲ್ಲ. ಅದರಲ್ಲೂ ಕೃಷಿ ಸಾಲ ಪಡೆದ ರೈತರನ್ನು ಕ್ರಿಮಿನಲ್ಲುಗಳ ರೀತಿಯಲ್ಲಿ ಬಂದಿಸುವ ವಾರೆಂಟ್ ಹೊರಡಿಸುವ ಅಧಿಕಾರ ಬ್ಯಾಂಕಿಗಿಲ್ಲ. ಅದೇನಿದ್ದರೂ ಉದ್ದೇಶಪೂರ್ವಕವಾಗಿ ಬ್ಯಾಂಕಿಗೆ ಆರ್ಥಿಕ ವಂಚನೆ ಮಾಡಿದವರಿಗೆ ಮಾತ್ರ ವಾರೆಂಟ್ ಹೊರಡಿಸಬಹುದು. ಆದರಿಲ್ಲಿ ಆಕ್ಸಿಸ್ ಬ್ಯಾಂಕ್ ಈ ನಿಯಮವನ್ನೂ ಉಲ್ಲಂಘಿಸಿ ರೈತರ ಮೇಲೆ ದೌರ್ಜನ್ಯ ಎಸಗಿದೆ.
ನಮ್ಮ ಬ್ಯಾಂಕುಗಳಿಗೆ ವಿಜಯ ಮಲ್ಯ, ನೀರವ್ ಮೋದಿಗಳಿಗೂ ನಮ್ಮ ರೈತರಿಗೂ ವ್ಯತ್ಯಾಸಗಳೇ ಗೊತ್ತಿಲ್ಲವೆಂದರೆ ಅದಕ್ಕಿಂತ ದುರಂತ ಬೇರೇನಿದೆ? ಇದೀಗ ನಾವು ಒಗ್ಗಟ್ಟಾಗಿ ಹೋರಾಡಿ ಇಂತಹ ಬಂಡವಾಳಶಾಹಿಗಳ ಹಿಡಿತದಲ್ಲಿರುವ ಖಾಸಗಿ ಬ್ಯಾಂಕುಗಳ ಅಕ್ರಮಗಳಿಗೆ ಪ್ರತಿರೋಧ ಒಡ್ಡ ಬೇಕಾಗಿದೆ.
No comments:
Post a Comment