ಕು.ಸ.ಮಧುಸೂದನ ರಂಗೇನಹಳ್ಳಿ
ಹಾಗೆ ಆತ್ಮವನ್ನು ಹಾಡಹಗಲೇ
ಬಟಾಬಯಲೊಳಗೆ ಬಿಚ್ಚಿಡಬಾರದೆಂಬುದನ್ನು
ಮರೆತಿದ್ದೆ.
ಬೀದಿಗೆ ಬಂದ ಅಪರೂಪದ ಆತ್ಮವನ್ನು
ಕಸಾಯಿ ಖಾನೆಯ ಚಕ್ಕೆಗಳೆದ್ದ ಮರದ ದಿಮ್ಮಿಯ ಮೇಲಿಟ್ಟು
ಕತ್ತು ಕತ್ತರಿಸಿದರು
ಮುಂಡದಿಂದ ಚಿಮ್ಮಿದ ರಕ್ತವನ್ನು ದೊಡ್ಡ
ಅಲ್ಯೂಮಿನಿಯಂ ಪಾತ್ರೆಯಲ್ಲಿ ಹಿಡಿದು
ಕೈ ಕಾಲುಗಳ ಹಬೆಯೊಳಗೆ ಬೇಯಿಸಿ
ಬಿಟ್ಟುಕೊಂಡ ರಸಕೆ ಸೂಪೆಂದು ಹೆಸರಿಟ್ಟು
ಕುಡಿದರು ಊಟಕ್ಕೆ ಮುಂಚೆ
ಹಾಗೆ ಕುಡಿದರೆ ಹಸಿವು ಹೆಚ್ಚಿ ಹೊಟ್ಟೆ ದೊಡ್ಡದಾಗುತ್ತಂತೆ
ಇನ್ನುಳಿದ ಮಾಂಸಖಂಡಗಳ ಕಡಾಯಿಯಲ್ಲಿ ಬೇಯಿಸಲಿಟ್ಟು
ಅರೆದಿಟ್ಟುಕೊಂಡ ಮಸಾಲೆಯ ಸುರಿದು
ಸುತ್ತ ಮೂರೂರಿಗೂ ಸಾರಿನ ಪರಿಮಳ ಹರಡಿಸಿ
ಔತಣದೂಟಕ್ಕೆ ತಮ್ಮವರ ಕರೆಸಿಕೊಂಡರು
ಸುಲಿದ ಚರ್ಮವ ಅವರ ನಡುಮನೆಯಲ್ಲಿ ಆರಾಮಖುರ್ಚಿಗೆ ಹಾಸಿ ಆಸೀನರಾದರು!
ಅವರು ತೇಗಿದ ಸದ್ದು
ಜಗದಗಲಕೂ ಹಬ್ಬಿ
ದಣಿಗಳು ಸಂತೃಪ್ತಗೊಂಡರೆಂಬುದು
ಅರಿತುಕೊಂಡ ಕಾಲಾಳುಗಳು
ಕಡಾಯಿಯೊಳಗೆ ಉಳಿದಿರಬಹುದಾದ
ಮಾಂಸದ ಚೂರುಗಳಿಗಾಗಿ ಕಡಾಯಿಯೊಳಗೆ ಕೈ ಇಳಿಬಿಟ್ಟು ತಡಕಾಡಿ
ಸಿಕ್ಕಿದ್ದ ತಿಂದೆದ್ದರು
ದಣಿಗಳ ರಾತ್ರಿಯೂಟಕೆ ಮತ್ತೊಂದು ಮಿಕವ ಬೇಟೆಯಾಡಲು
ಸಾಲುಗಟ್ಟಿ ಹೊರಟರು!
ಹಾಗೆ ಆತ್ಮವನ್ನು ಹಾಡಹಗಲೇ
ಬಟಾಬಯಲೊಳಗೆ ಬಿಚ್ಚಿಡಬಾರದೆಂಬುದನ್ನು
ಮರೆತಿದ್ದೆ!
No comments:
Post a Comment