ಪದ್ಮಜಾ ಜೋಯ್ಸ್ ದರಲಗೋಡು
ವಿಷಾದವೇ ಮಡುಗಟ್ಟಿದಂತೆ ನಿಸ್ಸಾರವಾಗಿ ಮಾಗಿದ ವಯಸ್ಸಿನ ದುಗುಡದ ಮನಸ್ಸಿನಿಂದೆಂಬಂತೆ ಸದ್ದಿಲ್ಲದೇ ಸರಿದು ಬಂದ ಅವನನ್ನು ಹೊತ್ತ ಕಾರೊಂದು ಆ ಕಟ್ಟಡದ ಎದುರು ಬಂದು ನಿ಼ಂತಾಗ ನಿರೀಕ್ಷೆಯಲ್ಲಿದ್ದಂತೇ ಒಳಗಿನಿಂದ ಎರಡು ಜೋಡಿ ಕಂಗಳು ಗಮನಿಸಿದ್ದವು.....ಅದೊಂದು ಮಾನಸಿಕ ಚಿಕಿತ್ಸಾ ಕೇಂದ್ರ....
ಗಮನಿಸಿದ, ನಿರೀಕ್ಷೆಯಲ್ಲೇ ಇದ್ದ ಒಂದು ಜೋಡಿ ಕಂಗಳಲ್ಲೊಂದು ಮನೋರೋಗ ತಜ್ಞರಾದರೇ... ಇನ್ನೊಂದು ಚಿಕಿತ್ಸೆ ಪಡೆಯುತ್ತಿರುವ ರೋಗಿಯದು.... ಇಂದವಳ ಹುಟ್ಟಿದ ಹಬ್ಬ , ಇದು ದಶಕದಿಂದಲೂ ಅನೂಚಾನವಾಗಿ ನೆಡೆಯುತ್ತಿರುವ ಘಟನೆಯೇ ಆದರೂ ಯಾವುದೋ ನಿರೀಕ್ಷೆ ಹೊತ್ತು ಬರುವವರಲ್ಲಿ ದಿನದಿನಕ್ಕೂ ನಿರಾಸೆ ಮಡುಗಟ್ಟುತ್ತಿರುವುದನ್ನು .. ತಜ್ಞರೂ .. ಗಮನಿಸಿ ಸತ್ಯವನ್ನು ಹೇಳಿಬಿಡಿಬೇಕೆಂಬ ತುಡಿತ ಅತಿಯಾದರೂ ರೋಗಿಗಿತ್ತ ವಾಗ್ದಾನ ನೆನಪಾಗಿ ಖೇದದಿಂದ ತುಟಿ ಬಿಗಿದುಕೊಂಡರು...
ಕಾರು ನಿಲ್ಲಿಸಿದವ ಏನನ್ನೋ ನಿರೀಕ್ಷಿಸುವಂತೆ "ಅವಳ" ರೂಮಿನ ಕಿಟಕಿಯತ್ತ ಕಣ್ಣು ಹಾಯಿಸಿ ನಿರಾಸೆಯಿ಼ಂದ ನಿಟ್ಟುಸಿರಿಟ್ಟು, ತಲೆಕೊಡವಿ ಅವನು "ಅವಳಿಗಾಗಿ" ತಂದ ವಸ್ತುಗಳನ್ನು ಎದೆಗವಚಿಕೊಂಡು ಹಿಂದೆ ಬ಼ಂದ ಇನ್ನೊಂದು ಕಾರು ಹಾಗೂ ಬ಼ಂದವರಿಗೆ ಕಾಯದೇ ಒಳನೆಡೆದ ,
ಮತ್ತುಳಿದವರು "ಆವಳ" ಬಳಗ ಅವರೂ ತ಼ಂದದ್ದೆಲ್ಲವನ್ನೂ ಎತ್ತಿಕೊಂಡು ಹಿ಼ಂದೆಯೇ ನೆಡೆದರು... ಎಲ್ಲ ಮೌನವಾಗಿ ಪರಸ್ಪರ ದಿಟ್ಟಿಸಿಕೊಂಡರೇ ವಿನಾ ಆಡಲ್ಯಾವ ಮಾತುಗಳಿರಲಿಲ್ಲ...