ಪ್ರವೀಣಕುಮಾರ್ ಗೋಣಿ
ಮಾಯೆಯೆನ್ನುವ ಮಿಥ್ಯದ
ನರ್ತನದ ತೆಕ್ಕೆಗೆ ಸಿಕ್ಕಿ
ದುರುಳ ಮನಸಿನ
ವಶವಾಗುವ ಸ್ಥಿತಿಗಿಂತ
ಹೀನತೆ ಬೇರೊಂದು ಉಂಟೆ ?
ತೀರದ ದಾಹಕ್ಕೆ
ತೊರೆಯಲಾಗದ ಮೋಹಕ್ಕೆ
ಅಂತ್ಯವಿರದ ವಾಸನೆಗಳ
ಸೆರೆಯಿಂದ ಬಿಡಿಸಿಕೊಳ್ಳಲಾಗದ
ಪಾಮರತೆಗಿಂತ ಬೇರೆ ನಿಕೃಷ್ಟತೆಯುಂಟೆ ?
ಮಸ್ತಕದೊಳಗಿನ ಮಣಭಾರದ
ಜ್ಞಾನವನ್ನೇ ಅರಿವ ಕಿರೀಟವಾಗಿಸಿಕೊಂಡು
ತನ್ನ ತಾನೇ ಜ್ಞಾನಿಯೆಂದು
ಭಾವಿಸಿಕೊಂಡು ಬೀಗುವ ಭ್ರಮೆಗಿಂತ
ಮತ್ತೊಂದು ಅಜ್ಞಾನ ಉಂಟೆ ?
ಜ್ಞಾನ ಅಜ್ಞಾನದ ಗೊಡವೆ
ಇರದಂತೆ ವಿಹರಿಸುವ
ಹಕ್ಕಿಗಳ ಹಿಂಡು ಬೋಧಿಸುವ
ಸ್ವಚ್ಛಂದದ ಪಾಠಕ್ಕಿಂತ
ಮಿಗಿಲಾದ ಬೋಧೆ ಮತ್ಯಾವುದಾದರೂ ಉಂಟೆ ?
No comments:
Post a Comment