ಕು.ಸ.ಮಧುಸೂದನ ರಂಗೇನಹಳ್ಳಿ
ಕಾಂಗ್ರೆಸ್ ಮತ್ತು ಜನತಾದಳದ ಮೈತ್ರಿಯ ದೆಸೆಯಿಂದ ಹಳೆಯ ಮೈಸೂರು ಭಾಗದಲ್ಲಿ ಬಾಜಪ ಬೇರೂರಲು ಸುವರ್ಣಾವಕಾಶವೊಂದು ಸೃಷ್ಠಿಯಾಗಿದೆಯೇ? ಹೌದೆನ್ನುತ್ತಾರೆ, ಹಳೆ ಮೈಸೂರು ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು! ಅವರುಗಳ ಈ ಭಯ ಅಕಾರಣವೇನಲ್ಲ.
ನವೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಮೂರು ಸಂಸತ್ ಸ್ಥಾನಗಳ ಮತ್ತು ಎರಡು ವಿದಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗಳಿಗೆ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಮೈತ್ರಿಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿಯುವುದು ಬಹುತೇಕ ಸ್ಪಷ್ಟವಾಗಿದೆ. ರಾಮನಗರ ವಿದಾನಸಭಾ ಕ್ಷೇತ್ರದಲ್ಲಿ ಜನತಾದಳವು (ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿ, ಮಾಜಿ ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ!) ಮಂಡ್ಯಮತ್ತು ಶಿವಮೊಗ್ಗ ಸಂಸತ್ ಕ್ಷೇತ್ರಗಳಲ್ಲಿ ಬಹುತೇಕ ಜನತಾದಳದ ಅಭ್ಯರ್ಥಿಗಳೇ ಕಣಕ್ಕಿಳಿಯಲಿರುವುದು ಖಚಿತವಾಗಿದೆ. ಅದರಲ್ಲೂ ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಇದುವರೆಗು ಕಾಂಗ್ರೆಸ್ ಮತ್ತು ಜನತಾದಳಗಳೇ ಸಾಂಪ್ರದಾಯಿಕ ಎದುರಾಳಿಗಳಾಗಿದ್ದು ಬಾಜಪ ಯಾವತ್ತಿಗೂ ಮೂರನೇ ಸ್ಥಾನದಲ್ಲಿರುತ್ತಿತ್ತು. ಇನ್ನು ಶಿವಮೊಗ್ಗದಲ್ಲಿ ಕಾಂಗ್ರೆಸ್ ಮತ್ತು ಬಾಜಪದ ನಡುವೆ ಹೋರಾಟವಿರುತ್ತಿದ್ದರೂ ಜನತಾದಳಕ್ಕೂ ಇಲ್ಲಿ ಬೇರು ಮಟ್ಟಿನ ಕಾರ್ಯಕರ್ತರುಗಳ ಪಡೆ ಇದೆ ಎನ್ನಬಹುದು.
ಇಂತಹ ರಾಮನಗರ ಮತ್ತು ಮಂಡ್ಯವನ್ನು ಜನತಾದಳಕ್ಕೆ ಬಿಟ್ಟುಕೊಟ್ಟಿದ್ದರ ಬಗ್ಗೆ ಸ್ಥಳೀಯ ಕಾಂಗ್ರೆಸ್ ನಾಯಕರುಗಳಲ್ಲಿ ಮತ್ತು ಕಾರ್ಯಕರ್ತರುಗಳಲ್ಲಿ ತೀವ್ರವಾದ ಅಸಮಾದಾನ ತಲೆಯೆತ್ತಿದೆ. ಕಳೆದ ಮೂರು ಮೂರೂವರೆ ದಶಕಗಳಿಂದ ಜನತಾದಳದ ವಿರುದ್ದ ಹೋರಾಡುತ್ತ ಬಂದ ಕಾಂಗ್ರೆಸ್ ಕಾರ್ಯಕರ್ತರಿಗೀಗ ಇಷ್ಟು ದಿನದ ತಮ್ಮ ಎದುರಾಳಿಯ ಪರವಾಗಿ ಮತಯಾಚನೆ ಮಾಡಬೇಕಾದ, ಮತಚಲಾಯಿಸಬೇಕಾದ ಸಂದಿಗ್ದತೆ ತಲೆದೋರಿದೆ. ಇದಕ್ಕೆ ಕಾರಣ ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಡೆದ ಮತಗಳ ಸಂಖ್ಯೆಯೇನು ಕಮ್ಮಿಯಿಲ್ಲ. ಮೊದಲು ರಾಮನಗರ ಕ್ಷೇತ್ರದ ಅಂಕಿ ಅಂಶಗಳನ್ನೇ ಒಂದಿಷ್ಟು ನೋಡೋಣ: ರಾಮನಗರದಿಂದ ಜನತಾದಳದ ಚಿಹ್ನೆಯ ಅಡಿಯಲ್ಲಿ ಆಯ್ಕೆಯಾದ ಸನ್ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಪಡೆದದ್ದು 92,626 ಮತಗಳನ್ನು (ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇಕಡಾ 53.96ರಷ್ಟು) ಇವರ ಸಮೀಪದ ಎದುರಾಳಿಯಾಗಿದ್ದ ಕಾಂಗ್ರೆಸ್ ಪಕ್ಷದ ಶ್ರೀ ಇಕ್ಬಾಲ್ ಹುಸೇನ್ ಪಡೆದ ಮತಗಳು 69,990 (ಶೇಕಡಾ 40.77ರಷ್ಟು) ಈ ಎರಡೂ ಪಕ್ಷಗಳ ನಡುವೆ ನಾಮಕಾವಸ್ಥೆಗೆ ಸ್ಪರ್ದಿಸಿದ್ದ ಬಾಜಪ ಗಳಿಸಿದ ಮತಗಳು ಕೇವಲ 4,871 (ಶೇಕಡಾ2.84 ಮಾತ್ರ). ರಾಮನಗರದಲ್ಲಿ ಜನತಾದಳಕ್ಕೆ ಇರುವಷ್ಟೇ ಶಕ್ತಿ ಕಾಂಗ್ರೆಸ್ ಪಕ್ಷಕ್ಕೂ ಇದೆ ಎಂಬುದನ್ನು ಈ ಮತಗಳಿಕೆಯ ಅಂಕಿಅಂಶಗಳೇ ಸ್ಪಷ್ಟ ಪಡಿಸುತ್ತವೆ. ವಸ್ತುಸ್ಥಿತಿ ಹೀಗಿರುವಾಗ ಬೇಷರತ್ತಾಗಿ ಈ ಸ್ಥಾನವನ್ನು ಜನತಾದಳಕ್ಕೆ ಬಿಟ್ಟು ಕೊಡಲು ಕಾಂಗ್ರೆಸ್ಸಿನ ಬಗ್ಗೆ ಅತೀವ ನಿಷ್ಠೆ ಇರುವ ಯಾವುದೇ ಸ್ಥಳೀಯ ನಾಯಕರಾಗಲಿ ಕಾರ್ಯಕರ್ತರಾಗಲಿ ಒಪ್ಪುವುದು ಸಾದ್ಯವೇ ಇಲ್ಲ. ನಿಜವಾದ ಸಮಸ್ಯೆ ಎದುರಾಗಿರುವುದೇ ಇಲ್ಲಿ. ಅದರಲ್ಲೂ ಡಿ.ಕೆ.ಶಿವಕುಮಾರ್ ಅಂತಹ ಹಿರಿಯ ನಾಯಕರುಗಳ ದಟ್ಟ ಪ್ರಭಾವ ಇರುವ ಈ ಕ್ಷೇತ್ರದ ಮಟ್ಟಿಗೆ ಮಾಜಿ ಸಚಿವ ಸಿ.ಎಂ.ಲಿಂಗಪ್ಪನವರು ಸಹ ಸಾಕಷ್ಟು ಜನಬೆಂಬಲ ಹೊಂದಿರುವ ನಾಯಕರು.ಚುನಾವಣೆ ಘೋಷಣೆಯಾದ ಮೊದಲ ದಿನದಿಂದಲೇ ಲಿಂಗಪ್ಪನಂತವರು ಮೈತ್ರಿಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಹಾಕಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಘಟಿಸಬಹುದಾದ ಮಹಾಮೈತ್ರಿಕೂಟವೊಂದರ ಹುಸಿ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಹೈಕಮ್ಯಾಂಡಿಗೆ ಕರ್ನಾಟಕದ ಉಪಚುನಾವಣೆಗಿಂತ ಮುಂದಿನ ಲೋಕಸಭಾ ಪಲಿತಾಂಶಗಳೇ ಮುಖ್ಯವೆನಿಸಿದ್ದು ಸ್ಥಳೀಯ ಕಾರ್ಯಕರ್ತರುಗಳ ಒತ್ತಾಯವನ್ನು ನಿರ್ಲಕ್ಷಿಸಿ ಜನತಾದಳಕ್ಕೆ ಈ ಸ್ಥಾನವನ್ನು ಬಿಟ್ಟು ಕೊಟ್ಟಿದೆ.ಇದರ ತಕ್ಷಣದ ಪರಿಣಾಮ ಈಗಾಗಲೇ ಕಾಂಗ್ರೆಸ್ ಪಕ್ಷದಮೇಲೆ ಆಗಿದ್ದು, ಸಿ.ಎಂ.ಲಿಂಗಪ್ಪನವರ ಪುತ್ರ ಶ್ರೀ ಚಂದ್ರಶೇಖರ್ ಈಗಾಗಲೇ ಬಾಜಪ ಸೇರಿದ್ದು, ಬಾಜಪದ ಅಧಿಕೃತ ಅಭ್ಯರ್ಥಿಯೂ ಆಗಿದ್ದಾರೆ.ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅವರು ಸಹ ಬಂಡಾಯ ಅಭ್ಯರ್ಥಿಯಾಗುವ ಎಚ್ಚರಿಕೆ ನೀಡಿದ್ದಾರೆ.
ಇನ್ನು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬಂದರೆ ಅಲ್ಲಿಯೂ ಚಿತ್ರಣವೇನು ಹೆಚ್ಚು ಬದಲಾಗುವುದಿಲ್ಲ. 2014ರಲ್ಲಿ ಜನತಾದಳದ ಸಿ.ಎಸ್.ಪುಟ್ಟರಾಜು ಅವರು5.24 ಲಕ್ಷ ಮತಗಳನ್ನು ಪಡೆದು ಆಯ್ಕೆಯಾಗಿದ್ದರೆ, ಅವರ ಎದುರಾಳಿ ಕಾಂಗ್ರೆಸ್ ಪಕ್ಷದ ರಮ್ಯಾರವರು 5.18 ಲಕ್ಷ ಮತಗಳನ್ನು ಗಳಿಸಿ ಸೋತಿದ್ದರು ಇಲ್ಲಿ ಬಾಜಪ ಪಡೆದಿದ್ದು ಕೇವಲ 84 ಸಾವಿರ ಮತಗಳನ್ನು ಮಾತ್ರ!. ಈ ಉಪಚುನಾವಣೆಯಲ್ಲಿ ಈ ಸ್ಥಾನವನ್ನೂ ಕಾಂಗ್ರೆಸ್ ಜನತಾದಳಕ್ಕೆ ಬಿಟ್ಟು ಕೊಟ್ಟಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ಉಂಟು ಮಾಡಿದೆ. ಇನ್ನು ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ದಿಸಲು ನಾಯಕರುಗಳೇ ತಯಾರಿಲ್ಲದೆ ಇರುವುದರಿಂದ ಈ ಕ್ಷೇತ್ರವನ್ನು ಜನತಾದಳಕ್ಕೆ ಬಿಟ್ಟು ಕೊಡಬಹುದಾಗಿದೆ.
ಹೀಗೆ ರಾಮನಗರ, ಮಂಡ್ಯ ಕ್ಷೇತ್ರಗಳನ್ನು ಜನತಾದಳಕ್ಕೆ ಬಿಟ್ಟು ಕೊಟ್ಟಿದ್ದರ ಪರಿಣಾಮಗಳನ್ನು ನೋಡುವುದಾದರೆ ಈ ಕ್ಷೇತ್ರಗಳ ಕಾರ್ಯಕರ್ತರುಗಳ ಆತ್ಮವಿಶ್ವಾಸ ಕುಗ್ಗಿ ಹೋಗುವುದು ನಿಶ್ಚಿತ. ಹತ್ತಾರು ವರ್ಷಗಳಿಂದ ಯಾವ ಪಕ್ಷದ ವಿರುದ್ದ ಹೋರಾಡುತ್ತ ಬಂದಿದ್ದರೋ ಆ ಪಕ್ಷವನ್ನು ಬೆಂಬಲಿಸಿ ಮತಕೇಳುವುದಾಗಲಿ, ಮತಚಲಾಯಿಸುವುದಾಗಲಿ ಆ ಭಾಗದ ಕಾಂಗ್ರೆಸ್ ಕಾರ್ಯಕರ್ತರ ಸ್ವಾಭಿಮಾನದ ಪ್ರಶ್ನೆಯಾಗುತ್ತದೆ. ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಈರೀತಿ ಮಾಡಿರಬಹುದಾದರೂ ದೀರ್ಘ ಕಾಲದಲ್ಲಿ ಅದಕ್ಕೆ ಈ ನಡೆ ಅದಕ್ಕೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುವುದು ಖಚಿತ. ಜನತಾದಳವನ್ನು ವಿರೋಧಿಸುವ ಕಾಂಗ್ರೆಸ್ಸಿನ ಕಾರ್ಯಕರ್ತರು ಮತ್ತು ಒಂದು ವರ್ಗ ಈ ಚುನಾವಣೆಯಲ್ಲಿ ತಟಸ್ಥವಾಗುಳಿಯುವುದು ಅಸಾದ್ಯ.. ಅದರ ಬದಲು ಅದು ಜನತಾದಳವನ್ನು ಎದುರಿಸಲು ಬಾಜಪದ ಪರ ನಿಲ್ಲುತ್ತ ಹೋಗುತ್ತಾರೆ. ಈ ಅವಕಾಶವನ್ನು ಬಳಸಿಕೊಳ್ಳುವ ಬಾಜಪ ಕಾಂಗ್ರೆಸ್ ಮತ್ತು ದಳದ ಅತೃಪ್ತ ನಾಯಕರುಗಳನ್ನು ತನ್ನತ್ತ ಸೆಳೆಯುತ್ತ ತನ್ನ ಪಕ್ಷದ ಸಂಘಟನೆಯನ್ನು ಬಲಪಡಿಸುತ್ತ ಹೋಗುತ್ತದೆ. ಇದರಿಂದ ಕಾಂಗ್ರೆಸ್ ಮತ್ತು ಜನತಾದಳಕ್ಕೆ ಈಗಿರುವಂತೆ ಬಾಜಪಕ್ಕೂ ಬೇರು ಮಟ್ಟದ ಕಾರ್ಯಕರ್ತರುಗಳ ಒಂಡು ಪಡೆ ರಚನೆಯಾಗುತ್ತ ಹೋಗುತ್ತದೆ.ಅಲ್ಲಿಗೆ ಸ್ಪರ್ದೆಯಿಂದ ದೂರ ಉಳಿದ ಕಾಂಗ್ರೆಸ್ ಸೃಷ್ಠಿಸಿದ ಒಂದು ನಿರ್ವಾತವನ್ನು ತುಂಬಲು ಬಾಜಪ ಶಕ್ತಿಮೀರಿ ಪ್ರಯತ್ನಿಸುತ್ತದೆ. ತನಗೆ ಅಸ್ಥಿತ್ವವೇ ಇರದಂತಹ ಕ್ಷೇತ್ರಗಳಲ್ಲಿ ಅದು ತನ್ನ ಅಸ್ಥಿತ್ವವನ್ನು ದಾಖಲು ಮಾಡುತ್ತ ಹೋಗುತ್ತದೆ. ಇದುವರೆಗು ಮತೀಯ ರಾಜಕಾರಣದ ಫಸಲನ್ನು ಬೆಳೆಯಲು ಸಾದ್ಯವೇ ಇರದಂತಹ ಮಂಡ್ಯ ರಾಮನಗರದಂತಹ ಪ್ರದೇಶಗಳಲ್ಲಿಯೂ ಬಾಜಪ ತನ್ನ ಉಗ್ರಮತೀಯವಾದವನ್ನು ಹರಡುತ್ತ ಯುವ ಪೀಳಿಗೆಯನ್ನುತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. 37 ಸ್ಥಾನಗಳನ್ನು ಪಡೆದೂ ಮುಖ್ಯಮಂತ್ರಿ ಪದವಿ ಗಿಟ್ಟಿಸಿಕೊಂಡ ಜನತಾದಳಕ್ಕೆ ಇದರಿಂದೇನು ನಷ್ಟವಾಗುವುದಿಲ್ಲ. ಯಾಕೆಂದರೆ ಮುಂದಿನ ಚುನಾವಣೆಗಳ ಹೊತ್ತಿಗೆ ಈ ಕ್ಷೇತ್ರಗಳಲ್ಲಿ ಬಾಜಪ ಬೆಳೆದರೂ ಅದು ಕಾಂಗ್ರೆಸ್ಸಿನ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತದೆಯೆ ಹೊರತು ದಳದ ಬುಟ್ಟಿಗೆ ಕೈ ಹಾಕುವುದು ಕಷ್ಟವೇ ಸರಿ! ಮೈತ್ರಿ ಸರಕಾರದ ಉಳಿವಿಗಾಗಿ ಕಾಂಗ್ರೆಸ್ ತನ್ನ ಅಸ್ಥಿತ್ವವನ್ನೇ ಬಲಿ ಕೊಡಲು ತಯಾರಾಗಿ ನಿಂತಂತಿದೆ.
ಒಟ್ಟಿನಲ್ಲಿ ಈ ಉಪಚುನಾವಣೆಗಳ ಪಲಿತಾಂಶಗಳೇನೇ ಇದ್ದರೂ ಅದು ಬಾಜಪಕ್ಕೆ ಒಂದಷ್ಟಾದರೂ ಲಾಭ ತಂದುಕೊಡುವುದಂತು ಗ್ಯಾರಂಟಿ!
No comments:
Post a Comment