ಪ್ರವೀಣಕುಮಾರ್ .ಗೋಣಿ
ಪ್ರೀತಿಯೊಂದೇ ಅವನ
ತಲುಪಲು ಇರುವ
ಹಾದಿಯಾಗಿರುವಾಗ ಯಾಕೇ
ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .
ನಿನ್ನೊಳಗೆ ಅವನೇ ಬಿತ್ತಿದ
ಪ್ರೀತಿಯ ಬೀಜ ಇರುವಾಗ
ಅದಕ್ಕೆ ನೀರೆರೆದು ಮರವಾಗಿ ಬೆಳೆಸೋ
ಅದ್ಯಾವ ವಿವರಣೆಯ ಗೋಜಿಲ್ಲದೆ
ಬಯಕೆಗಳ ಹಂಗಿಲ್ಲದೆ
ಅರಳಿ ಪರಿಮಳ ಬೀರುವ ಹೂವಂತೆ
ನಿನ್ನ ನೀ ಅರಳಿಸಿಕೊಂಡು ನಲಿಯೋ
ಯಾಕೇ ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .
ನಮೂನೆಗಳೇ ಇಲ್ಲದ ಮೂಲ
ಗಂಗೆಯಂತಹುದದು ಪ್ರೀತಿ
ಸಕಲ ನದಿಗಳೆಲ್ಲ ಹರಿದು
ಸಾಗರದೊಳಗೆ ಬೆರೆತು ಒಂದಾಗುವಂತೆ
ನಿನ್ನ ತನುಮನದ ಕಣ ಕಣದೊಳಗೆ
ಸ್ಪುರಿಸುವ ಪ್ರೀತಿಯನ್ನ ಅವನ ಸಾಗರದೊಳಗೆ
ಅವಿಭಕ್ತಗೊಳಿಸಿ ಕೊಳ್ಳುವುದ ಮರೆತು
ಯಾಕೇ ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .
No comments:
Post a Comment