ಚಿತ್ರ ೧: ಎಲೆಯೊಂದಿಗೆ ಕೆಂಬೂತ. |
ಕುಪ್ಪಳವೆಂದೂ ಕರೆಯಲ್ಪಡುವ ಈ ಪಕ್ಷಿ ರೆಕ್ಕೆಗೆ ಬಣ್ಣ ಬಳಿದುಕೊಂಡ ಕಾಗೆಯಂತೆ ಕಾಣಿಸುತ್ತದೆ!
ಆಂಗ್ಲ ಹೆಸರು: Crow pheasant (ಕ್ರೋ ಫೀಸೆಂಟ್)
Greater coucal (ಗ್ರೇಟರ್ ಕುಕೋಲ್)
Southern coucal (ಸದರ್ನ್ ಕುಕೋಲ್)
ವೈಜ್ಞಾನಿಕ ಹೆಸರು: Centropus sinensis (ಸೆಂಟ್ರೋಪಸ್ ಸಿನೆನ್ಸಿಸ್)
ಕಾಗೆಗಿಂತ ಕೊಂಚ ದೊಡ್ಡಕ್ಕಿರುವ ಕೆಂಬೂತಗಳನ್ನು ಅವುಗಳ ರೆಕ್ಕೆಯ ಬಣ್ಣದಿಂದ ಸುಲಭವಾಗಿ ಗುರುತಿಸಬಹುದು. ಕಪ್ಪು ತಲೆ, ಕಪ್ಪು - ಗಾಢ ನೀಲಿ/ನೇರಳೆ ಬಣ್ಣ ಮಿಶ್ರಿತ ಕತ್ತು - ಎದೆ - ದೇಹವನ್ನೊಂದಿರುವ ಕೆಂಬೂತಗಳ ರೆಕ್ಕೆಯ ಬಣ್ಣ ಕಂದು. ಅಗಲವಾದ ರೆಕ್ಕೆಗಳಿವಕ್ಕಿವೆ. ಕಪ್ಪು ಬಣ್ಣದ ಉದ್ದನೆಯ ಬಾಲದ ರೆಕ್ಕೆಗಳನ್ನಿವು ಹೊಂದಿವೆ. ಕಪ್ಪು ತಲೆಯಲ್ಲಿ ಕೆಂಪನೆಯ ಕಣ್ಣುಗಳು ಎದ್ದು ಕಾಣಿಸುತ್ತವೆ. ವಿಶಾಲ ರೆಕ್ಕೆಗಳಿದ್ದರೂ ಹಾರುವುದನ್ನು ಹೆಚ್ಚು ಇಷ್ಟಪಡದ ಪಕ್ಷಿಯಿದು. ಅಪಾಯದ ಸೂಚನೆ ಸಿಕ್ಕಾಗಷ್ಟೇ ಹಾರುತ್ತವೆ, ನಿಧಾನಗತಿಯಲ್ಲಿ. ಮಿಕ್ಕ ಸಮಯದಲ್ಲಿ ಘನ ಗಂಭೀರತೆಯಿಂದ ನಡೆದು ಹೋಗುವುದೇ ಕೆಂಬೂತಕ್ಕೆ ಪ್ರಿಯ. ನಡೆಯುವಿಕೆಯ ಮಧ್ಯೆ ಆಗಾಗ ಕುಪ್ಪಳಿಸುವುದರಿಂದ ಇದಕ್ಕೆ ಕುಪ್ಪಳವೆಂಬ ಹೆಸರು ಬಂದಿದೆ.
ಹೆಣ್ಣು ಗಂಡಿನ ನಡುವೆ ಗಾತ್ರದ ವ್ಯತ್ಯಾಸವಷ್ಟೇ ಇದೆ. ಗಂಡಿಗಿಂತ ಹೆಣ್ಣು ಕೆಂಬೂತ ಕೊಂಚ ದೊಡ್ಡದು.
ಎತ್ತರದ ಮರಗಳಲ್ಲಿ, ಬಿದಿರಿನಲ್ಲಿ ಕಡ್ದಿ, ಮರದ ಎಲೆ, ಇತರೆ ಪಕ್ಷಿಗಳ ಗೂಡಿನ ಭಾಗವನ್ನು ಬಳಸಿಕೊಂಡು ಒರಟೊರಟಾದ ಗೂಡನ್ನು ನಿರ್ಮಿಸಿಕೊಳ್ಳುತ್ತವೆ ಕೆಂಬೂತಗಳು.
ಚಿತ್ರ ೨: ಬೆಂಗಳೂರಿನ ತಾರಸಿಯಲ್ಲಿ ಕೆಂಬೂತ. |
ಹುಳ, ಹಣ್ಣು, ಕಾಳುಗಳನ್ನು ತಿನ್ನುವ ಕೆಂಬೂತಗಳು ಮಿಶ್ರಾಹಾರಿ ಪಕ್ಷಿಗಳು. ಸಣ್ಣ ಗಾತ್ರದ ಹಾವು, ಹಲ್ಲಿಯನ್ನೂ ಇವು ತಿನ್ನುತ್ತವೆ.
ಅರಣ್ಯದಂಚಿನಲ್ಲಿ, ಮರಗಳೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನಂಶ ಜೋಡಿಯಾಗಿಯೇ ಕಾಣಿಸಿಕೊಳ್ಳುವ ಈ ಪಕ್ಷಿಗಳು ನಗರದೊಳಗೂ ಉದ್ಯಾನಗಳ ಹತ್ತಿರ, ಖಾಲಿ ನಿವೇಶನಗಳ ಹತ್ತಿರ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತವೆ. ಬೆಂಗಳೂರಿನ ನಮ್ಮ ಮನೆಯ ತಾರಸಿಗೆ ಜೋಡಿ ಕೆಂಬೂತಗಳು ನಿಯಮಿತವಾಗಿ ಭೇಟಿ ಕೊಡುತ್ತವೆ!
ಮತ್ತಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
ಚಿತ್ರನೆನಪು:
ಚಿತ್ರ ೧: ಮಂಡ್ಯದ ಹೊರವಲಯದಲ್ಲಿ ತೆಗೆದ ಪಟವಿದು. ಎತ್ತರದ ಮರವೊಂದರಲ್ಲಿದ್ದ ಕೆಂಬೂತ ಆಹಾರವನ್ನರಸದೆ ಎಲೆಯನ್ನು ಕೀಳುತ್ತಿತ್ತು. ಒಂದೆರಡು ಎಲೆ ಕೀಳೋದು ಎಸೆಯೋದು… ಇದನ್ನೇ ಒಂದಷ್ಟು ಸಮಯ ಮಾಡಿತು. ಕೊನೆಗೊಂದು ಎಲೆಯನ್ನು ಕಚ್ಚಿ ಹಿಡಿದು ಹಾರಿ ಹೋಯಿತು, ಬಹುಶಃ ಗೂಡು ನಿರ್ಮಿಸುವ ಸಲುವಾಗಿ. ಮರದ ಎಲೆಗಳ ನೆರಳಿನಲ್ಲಿತ್ತು ಕೆಂಬೂತ. ಅತ್ತಿಂದಿತ್ತ ಸರಿದಾಡುವಾಗ ಕೆಂಬೂತದ ದೇಹದ ಮೇಲ್ಭಾಗಕ್ಕೆ ಸೂರ್ಯನ ಕಿರಣಗಳು ಬಿದ್ದಾಗ ತೆಗೆದ ಪಟವಿದು.
ಚಿತ್ರ ೨: ಬೆಂಗಳೂರಿನ ನಮ್ಮ ಮನೆಯ ತಾರಸಿಯಲ್ಲಿ ತೆಗೆದ ಪಟವಿದು. ಮನೆಯ ಸುತ್ತಮುತ್ತ ಒಂದಷ್ಟು ಖಾಲಿ ನಿವೇಶನಗಳಿವೆ. ಮಣ್ಣಿರುವೆಡೆ ಹುಳಗಳೂ ಇರ್ತಾವಲ್ಲ, ಅದನ್ನು ತಿನ್ನಲು ಈ ಕೆಂಬೂತ ಮತ್ತದ ಜೋಡಿ ಬರುತ್ತವೆ. ತಾರಸಿಯ ಮೇಲೆ ಒಂದಷ್ಟು ಗಿಡಗಳನ್ನು ಕುಂಡಗಳಲ್ಲಿ ಹಾಕಿದ್ದೇನೆ. ಆ ಗಿಡಗಳಲ್ಲಿ ಆಶ್ರಯ ಪಡೆದ ಹುಳಗಳೂ ಈ ಕೆಂಬೂತಗಳಿಗೆ ಆಹಾರ!
No comments:
Post a Comment