![]() |
ಚಿತ್ರ ೧: ಆಲದ ಮರದ ಹಣ್ಣು ಸವಿಯುತ್ತಿರುವ ಬೂದು ಮಂಗಟ್ಟೆ. |
ನಮ್ಮಲ್ಲಿ ಹೆಚ್ಚು ಕಂಡುಬರುವ ಆಕರ್ಷಕ ಬಣ್ಣಗಳಿಲ್ಲದ ಮಂಗಟ್ಟೆಗಳೆಂದರೆ ಅವು ಬೂದು ಮಂಗಟ್ಟೆಗಳು.
ಆಂಗ್ಲ ಹೆಸರು: Indian grey hornbill (ಇಂಡಿಯನ್ ಗ್ರೇ ಹಾರ್ನ್ ಬಿಲ್)
ವೈಜ್ಞಾನಿಕ ಹೆಸರು: Ocyceros birostris (ಒಸಿಕೆರಾಸ್ ಬಿರೋಸ್ಟ್ರಿಸ್)
ಎತ್ತರದ ಮರಗಳಲ್ಲಿ ಜೋಡಿಯಾಗಿ ಅಥವಾ ಕೆಲವೊಮ್ಮೆ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ ಬೂದು ಮಂಗಟ್ಟೆಗಳು. ಉದ್ದ ಕೊಕ್ಕಿನ ದೊಡ್ಡ ದೇಹದ ಈ ಪಕ್ಷಿಗಳ ಗುರುತಿಸುವಿಕೆ ಕಷ್ಟವಲ್ಲ. ಹೆಸರೇ ಸೂಚಿಸುವಂತೆ ಬೂದು ಬಣ್ಣದ ಪಕ್ಷಿಯಿದು. ದೇಹದ ತುಂಬ ಬೂದು ಬಣ್ಣದ ರೆಕ್ಕೆ ಪುಕ್ಕಗಳಿವೆ. ಎದೆಯ ಭಾಗದಲ್ಲಿ ಬೂದು - ಬಿಳಿ ಮಿಶ್ರಿತ ಬಣ್ಣವಿದೆ. ಬಾಗಿದ ಉದ್ದನೆಯ ಕೊಕ್ಕಿನ ಬಣ್ಣ ಗಾಢ ಬೂದು ಬಣ್ಣದಿಂದ ಕಪ್ಪು. ಕೊಕ್ಕಿನ ತುದಿಯ ಭಾಗ ತೆಳು ಹಳದಿ. ಕೊಕ್ಕಿನ ಮೇಲೊಂದು ಪುಟ್ಟ ಕಪ್ಪನೆಯ ಶಿರಸ್ತ್ರಾಣವಿದೆ. ಕೆಂಪು ಕಣ್ಣುಗಳು ಬೂದು ದೇಹದ ಪಕ್ಷಿಯಲ್ಲಿ ಎದ್ದು ಕಾಣಿಸುತ್ತವೆ. ದೇಹದಷ್ಟೇ ಉದ್ದದ ಬಾಲದ ಗರಿಗಳು ಇವಕ್ಕಿವೆ. ದೇಹದ ಬಣ್ಣಕ್ಕಿಂತ ಕೊಂಚ ಗಾಢ ಬಣ್ಣಗಳನ್ನು ಬಾಲದಲ್ಲಿ ಕಾಣಬಹುದು. ಹೆಣ್ಣಿಗೂ ಗಂಡಿಗೂ ಇರುವ ಪ್ರಮುಖ ವ್ಯತ್ಯಾಸ ಶಿರಸ್ತ್ರಾಣದ ಗಾತ್ರ. ಹೆಣ್ಣಿನಲ್ಲಿದರ ಗಾತ್ರ ಪುಟ್ಟದು.
ಮರದ ಪೊಟರೆಗಳಲ್ಲಿ ಗೂಡು ನಿರ್ಮಿಸಿಕೊಳ್ಳುತ್ತವೆ ಬೂದು ಮಂಗಟ್ಟೆಗಳು. ಹೆಣ್ಣು ಮಂಗಟ್ಟೆ ಮೊಟ್ಟೆ ಇಟ್ಟ ಬಳಿಕ ಗೂಡು ದಾಟಿ ಬರುವುದಿಲ್ಲ. ಗಂಡು ಮಂಗಟ್ಟೆ ಪೊಟರೆಯ ಬಾಗಿಲನ್ನು ಮುಚ್ಚಿಹಾಕುತ್ತದೆ, ಹೆಣ್ಣು ಮಂಗಟ್ಟೆಯ ಕೊಕ್ಕು ಹೊರಚಾಚುವಷ್ಟು ಜಾಗವನ್ನು ಬಿಟ್ಟು. ಮೊಟ್ಟೆ ಮರಿಯಾಗಿ ಸ್ವಸಾಮರ್ಥ್ಯದಿಂದ ಬದುಕುವಷ್ಟು ಬೆಳೆಯುವವರೆಗೂ ಹೆಣ್ಣು ಮಂಗಟ್ಟೆ ಗೂಡಿನೊಳಗೇ ಬಂಧಿಯಾಗಿರುತ್ತದೆ. ಕಾವು ಕೊಡುವ ಹೆಣ್ಣು ಮಂಗಟ್ಟೆಗೆ, ತದನಂತರ ಮರಿಗಳಿಗೆ ಆಹಾರ ಪೂರೈಸುವ ಪೂರ್ಣ ಜವಾಬ್ದಾರಿ ಗಂಡು ಮಂಗಟ್ಟೆಯದು. ಅಕಸ್ಮಾತ್ ಗಂಡು ಮಂಗಟ್ಟೆ ಸತ್ತು ಹೋದರೆ ಪೋಷಣೆಯಿಲ್ಲದೆ ಹೆಣ್ಣು ಮಂಗಟ್ಟೆ ಮತ್ತದರ ಮರಿಗಳೂ ಸಾವನ್ನಪ್ಪುತ್ತವೆ. ಸಂಗಾತಿ ಯಾಕೋ ಬರಲೇ ಇಲ್ಲವಲ್ಲ ಎಂದು ಹೆಣ್ಣು ಮಂಗಟ್ಟೆ ಗೂಡೊಡೆದುಕೊಂಡು ಬರುವುದೂ ಸಾಧ್ಯವಾಗುವುದಿಲ್ಲ, ಕಾರಣ, ಬೆಳೆಯುವ ಮರಿಗಳಿಗೆ ಸ್ಥಳಾವಕಾಶ ಇರಲೆಂಬ ಕಾರಣಕ್ಕೆ ಹೆಣ್ಣು ಮಂಗಟ್ಟೆ ತನ್ನೆಲ್ಲಾ ರೆಕ್ಕೆ ಪುಕ್ಕಗಳನ್ನೂ ಉದುರಿಸಿಕೊಂಡುಬಿಟ್ಟಿರುತ್ತದೆ.
ಹಣ್ಣುಗಳೇ ಇವುಗಳ ಪ್ರಮುಖ ಆಹಾರ. ಹಲ್ಲಿ, ಹುಳ, ಸಣ್ಣ ಪುಟ್ಟ ಹಾವುಗಳನ್ನೂ ತಿನ್ನುವ ಮಿಶ್ರಾಹಾರಿ ಪಕ್ಷಿಗಳಿವು.
![]() |
ಚಿತ್ರ ೨: ಹೊಂಬೆಳಕಿನಲ್ಲಿ ಬೂದು ಮಂಗಟ್ಟೆ |
ಅತ್ಯಾಕರ್ಷಕ ಬಣ್ಣಗಳಿರುವ ಹಲವು ಮಂಗಟ್ಟೆಗಳು ಭಾರತದಲ್ಲಿವೆ. ಆ ಬಣ್ಣಗಳ ಕಾರಣದಿಂದಲೇ ಬೇಟೆಗಾರರ ಬಲೆಗೆ ಸಿಲುಕಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುತ್ತಿವೆ. ಆಕರ್ಷಕ ಬಣ್ಣಗಳನ್ನೊಂದದ ಕಾರಣಕ್ಕೋ ಏನೋ ಬೂದು ಮಂಗಟ್ಟೆಗಳಿನ್ನೂ ಬೇಟೆಗಾರ ಮನುಷ್ಯರ ದೃಷ್ಟಿಗೆ ಸಿಲುಕಿಕೊಂಡಿಲ್ಲ. ಸದ್ಯಕ್ಕಂತೂ ಇವುಗಳ ಅಸ್ತಿತ್ವಕ್ಕೆ ಅಪಾಯವಿಲ್ಲ.
ಮತ್ತಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
ಚಿತ್ರನೆನಪು:
ಚಿತ್ರ ೧: ಮಂಡ್ಯದ ಹೊರವಲಯದಲ್ಲಿ ತೆಗೆದ ಪಟವಿದು. ಪಕ್ಷಿಗಳ ಫೋಟೋ ತೆಗೆಯಲಿರುವ ಸುಲಭ ತಾಣವೆಂದರೆ ಆಲದ ಮರಗಳು! ಆಲದ ಮರಗಳು ಹಣ್ಣು ಬಿಡುವ ಸಮಯದಲ್ಲಿ ಹತ್ತಲವು ಪಕ್ಷಿಗಳು ಅಲ್ಲಿ ನೆರೆಯುತ್ತವೆ. ಅವುಗಳಲ್ಲಿ ನಮ್ಮ ಬೂದು ಮಂಗಟ್ಟೆಯೂ ಒಂದು. ಉದ್ದನೆಯ ಕೊಕ್ಕಿನಿಂದ ಆಲದ ಕೆಂಪು ಹಣ್ಣನ್ನು ಕಚ್ಚಿ ಹಿಡಿದು ಹಣ್ಣನ್ನು ಹಿಂದೆ ಮುಂದೆ ತಿರುಗಿಸಿ ಸರಿಯಾಗಿ ಹಿಡಿದುಕೊಂಡು ಕೊನೆಗೊಮ್ಮೆ ಮೇಲೆಸೆದು ಕ್ಯಾಚ್ ಹಿಡಿದು ನುಂಗಿಕೊಳ್ಳುತ್ತವೆ! ಕ್ಯಾಚ್ ಹಿಡಿಯುವ ಕ್ಷಣ ಮುಂಚೆ ಕ್ಲಿಕ್ಕಿಸಿದ ಪಟವಿದು!
ಚಿತ್ರ ೨: ಮಂಡ್ಯದ ಸೂಳೆಕೆರೆಯ ಬಳಿ ತೆಗೆದ ಪಟವಿದು. ಎತ್ತರದ ಕೊಂಬೆಯೊಂದರ ಮೇಲೆ ಕುಳಿತ ಬೂದು ಮಂಗಟ್ಟೆಯ ಬೆನ್ನನ್ನು ಬೆಳಗಿನ ಸೂರ್ಯ ಕಿರಣಗಳು ಸ್ಪರ್ಶಿಸುತ್ತಿತ್ತು. ಕತ್ತು - ತಲೆಯನ್ನು ಅತ್ಲಾಗಿತ್ಲಾಗೆ ತಿರುಗಿಸುವಾಗ ಮಂಗಟ್ಟೆಯ ಕೆಂಪು ಕಣ್ಣುಗಳು ಹೊಳೆಯುತ್ತಿತ್ತು. ಸಧೃಡ ದೇಹ, ಉದ್ದನೆಯ ಬಾಲ, ಕೊಕ್ಕು, ಕೊಕ್ಕಿನ ಮೇಲಿನ ಶಿರಸ್ತ್ರಾಣಗಳೆಲ್ಲವನ್ನೂ ಈ ಚಿತ್ರದಲ್ಲಿ ಗಮನಿಸಬಹುದು.
No comments:
Post a Comment