ಚಿತ್ರ ೧: ಕೆಂಪು ಕಿಬ್ಬೊಟ್ಟೆಯ ಪಿಕಳಾರ |
ಡಾ. ಅಶೋಕ್. ಕೆ. ಆರ್
ಪಿಕಳಾರಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದು ಕೆಮ್ಮೀಸೆ ಪಿಕಳಾರವಾದರೆ ಅದರ ನಂತರದಲ್ಲಿ ಹೆಚ್ಚು ಕಣ್ಣಿಗೆ ಬೀಳುವುದು ಕೆಂಪು ಕಿಬ್ಬೊಟ್ಟೆಯ ಪಿಕಳಾರ.
ಆಂಗ್ಲ ಹೆಸರು: Red vented bulbul (ರೆಡ್ ವೆಂಟೆಡ್ ಬುಲ್ ಬುಲ್)
ವೈಜ್ಞಾನಿಕ ಹೆಸರು: Pycnonotus cafer (ಪಿಕ್ನೋನಾಟಸ್ ಕ್ಯಾಫರ್)
ಕಪ್ಪು ತಲೆ, ಕಪ್ಪು ಕೊಕ್ಕು ಹೊಂದಿರುವ ಈ ಪಕ್ಷಿಗಳ ದೇಹದ ಭಾಗದಲ್ಲಿ ಕಂದು ಬಣ್ಣವೇ ಪ್ರಮುಖವಾದುದು. ಬೆನ್ನಿನ ಭಾಗದಲ್ಲಿ ಗಾಢ ಕಂದು - ಕಪ್ಪು - ಬಿಳಿ ಬಣ್ಣಗಳ ಸಂಯೋಜನೆಯಿದೆ. ಎದೆ ಭಾಗದಲ್ಲಿ ತಿಳಿ ಕಂದು, ಬಿಳಿ ಬಣ್ಣಗಳಿವೆ. ಎದೆಯ ಮೇಲ್ಭಾಗ ಮತ್ತು ಇಡೀ ಬೆನ್ನಿನ ಮೇಲಿರುವ ಬಣ್ಣಗಳು ಮೀನಿನ ಹೊರಭಾಗದಂತೆ ಕಾಣಿಸುತ್ತದೆ. ಕಿಬ್ಬೊಟ್ಟೆಯ ಜಾಗದಲ್ಲಿರುವ ಕೆಂಪು ಬಣ್ಣದ ಸಹಾಯದಿಂದ ಈ ಪಕ್ಷಿಯನ್ನು ಸುಲಭವಾಗಿ ಗುರುತಿಸಬಹುದು. ಬಾಲದ ಬಣ್ಣು ಕಂದುಗಪ್ಪು. ತುದಿಯಲ್ಲಿ ಚೂರೇ ಚೂರು ಬಿಳಿ ಬಣ್ಣವಿದೆ. ಪುಟ್ಟ ಕಪ್ಪು ಕಾಲುಗಳಿವೆ.
ಹೆಣ್ಣು ಗಂಡಿನ ನಡುವೆ ವ್ಯತ್ಯಾಸಗಳಿಲ್ಲ.
ಮತ್ತಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
ಕೆಮ್ಮೀಸೆ ಪಿಕಳಾರಗಳಂತೆಯೇ ಈ ಪಿಕಳಾರಗಳೂ ಕೂಡ ಹುಲ್ಲು - ಕಡ್ಡಿ - ಒಣಗಿದ ಎಲೆ ಬಳಸಿಕೊಂಡು ಪೊದೆಯೊಳಗೆ ಅಥವಾ ನಗರದ ಮನೆಯಾವರಣದಲ್ಲಿರುವ ಬಳ್ಳಿಗಳೊಳಗೆ ಬುಟ್ಟಿಯಾಕಾರದ ಪುಟ್ಟ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ.
ಲಂಟಾನ, ಆಲ ಹಾಗೂ ಇನ್ನಿತರೆ ಮರದ ಹಣ್ಣುಗಳನ್ನು ತಿನ್ನಲಿಚ್ಛಿಸುವ ಕೆಂಪು ಕಿಬ್ಬೊಟ್ಟೆಯ ಪಿಕಳಾರಗಳು ಹುಳು ಹುಪ್ಪಟೆಗಳನ್ನೂ ಸೇವಿಸುವ ಮಿಶ್ರಾಹಾರಿ ಪಕ್ಷಿಗಳು. ಆಹಾರವನ್ನರಸುವ ಸಮಯದಲ್ಲಿ ಹೆಚ್ಚಿನಂಶ ಜೋಡಿಯಾಗೇ ಹಾರಾಡುತ್ತಿರುತ್ತವೆ.
ಚಿತ್ರ ೨: ಹೊಟ್ಟೆ ಡುಮ್ಮಣ್ಣ! |
ಕಣ್ಣಿನ ಬಳಿಯ ಕೆಂಪು ಕೆಮ್ಮೀಸೆ ಪಿಕಳಾರದ ಹೆಗ್ಗುರುತಾದರೆ (ಕೆಮ್ಮೀಸೆ ಪಿಕಳಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ) ಕಿಬ್ಬೊಟ್ಟೆಯ ಕೆಂಪು ಕೆಂಪು ಕಿಬ್ಬೊಟ್ಟೆಯ ಪಿಕಳಾರವನ್ನು ಸುಲಭವಾಗಿ ಗುರುತಿಸುವುದಕ್ಕೆ ನೆರವಾಗುತ್ತದೆ. ನಗರ ಪ್ರದೇಶದಲ್ಲಿ ಕೆಮ್ಮೀಸೆ ಪಿಕಳಾರದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇವುಗಳು ಕಂಡುಬರುವುದಿಲ್ಲವಾದರೂ ಮರಗಳು ಹೆಚ್ಚಿರುವ ಉದ್ಯಾನಗಳ ಬಳಿ ಕಾಣಬಹುದಾಗಿದೆ.
ಚಿತ್ರನೆನಪು:
ಚಿತ್ರ ೧: ಕುಣಿಗಲ್ಲಿನ ಹೊರವಲಯದ ಕೆರೆಯೊಂದರ ಬಳಿ ತೆಗೆದ ಪಟವಿದು. ಹಾರಾಡುತ್ತಿದ್ದ ಜೋಡಿ ಕೆಂಪು ಕಿಬ್ಬೊಟ್ಟೆಯ ಪಿಕಳಾರಗಳಲ್ಲಿ ಒಂದು ಪಿಕಳಾರ ವಿದ್ಯುತ್ ತಂತಿಯ ಮೇಲೆ ಕುಳಿತರೆ ಮತ್ತೊಂದು ವಿದ್ಯುತ್ ಕಂಬದ ಪಕ್ಕದಲ್ಲಿದ್ದ ಈ ಗಿಡದ ಮೇಲೆ ವಿಶ್ರಮಿಸಿತು. ಕೆಂಪು ಕಿಬ್ಬೊಟ್ಟೆ, ಎದೆ - ಬಾಲದ ವಿವರಗಳು ಸ್ಪಷ್ಟವಾಗಿ ಕಾಣಿಸುತ್ತಿರುವ ಚಿತ್ರವಿದು.
ಚಿತ್ರ ೨: ಮಂಡ್ಯದ ಹೊರವಲಯದಲ್ಲಿ ತೆಗೆದ ಪಟವಿದು. ಕಾರಿನಲ್ಲಿ ಕಿರಗಂದೂರು ಕೆರೆಯ ಕಡೆಗೆ ತೆರಳುತ್ತಿದ್ದಾಗ ಎಡಬದಿಯಲ್ಲಿದ್ದ ಒಣಗಿದ ಮರದ ಕೊಂಬೆಯ ಮೇಲೆ ಕೆಂಪು ಕಿಬ್ಬೊಟ್ಟೆಯ ಪಿಕಳಾರ ಕುಳಿತಿದ್ದು ಕಾಣಿಸಿತು. ಕಾರನ್ನು ಬದಿಗೆ ನಿಲ್ಲಿಸಿ ಕಾರಿನೊಳಗಿಂದಲೇ ಪಕ್ಷಿಯೆಡೆಗೆ ಗುರಿಯಿಟ್ಟು ತೆಗೆದ ಚಿತ್ರವಿದು. ಪಕ್ಷಿಯ ಸಂಪೂರ್ಣ ವಿವರಗಳು ಈ ಚಿತ್ರದಲ್ಲಿ ಕಾಣಿಸುತ್ತಿಲ್ಲ, ಹಿನ್ನೆಲೆಯೂ ಹೇಳಿಕೊಳ್ಳುವಂತಿಲ್ಲ. ಆದರೆ ಗಾಳಿಯನ್ನೆಳೆದುಕೊಂಡು ಹೊಟ್ಟೆ ಊದಿಸಿಕೊಂಡಂತೆ ಕಾಣಿಸುವ ಪಿಕಳಾರ ಮುದ್ದು ಮುದ್ದಾಗಿದೆಯಲ್ಲವೇ? ಹಿಂದಿನ ಚಿತ್ರಕ್ಕೆ ಹೋಲಿಸಿ ನೋಡಿದಾಗ ಎಷ್ಟು ಹೊಟ್ಟೆ ಊದಿಸಿಕೊಂಡಿದೆ ಎನ್ನುವುದು ಗಮನಕ್ಕೆ ಬರುತ್ತದೆ.
No comments:
Post a Comment