ಪದ್ಮಜಾ ಜೋಯಿಸ್
ನಿನಗೇಕಿಂದು ನನ್ನ
ನೆನಪಾಗುವುದಿಲ್ಲ,??
ಅದೊಂದು ಕಾಲದಲ್ಲಿ
ಸುಳಿಯುವ ಕೋಲ್ಮಿಂಚಿಗೆ
ದಡಬಡಿಸುವ ಗುಡುಗಿಗೆ
ಸಿಡಿದ ಸಿಡಿಲಿನಾರ್ಭಟದಿಂದ
ಬೆಚ್ಚಿದೆಯಾ ಬೆದರಿದೆಯಾ
ಎಂದು ಮರಮರಳಿ ಸಾಂತ್ವನಿಸುತ್ತಿದ್ದ
ನಿನ್ನ ದನಿ ಇಂದೇಕೆ ಮೌನವಾಗಿದೆ ??
ಅಮಾಸ್ಯೆಯ ಕಾರಿರುಳಲ್ಲಿ
ನಿಃಶ್ಯಬ್ಧ ನೀರವ ರಾತ್ರಿಗಳಲ್ಲಿ
ಒಂಟಿ ಭೂತ ಬಂಗಲೆಯಲ್ಲಿ
ಸಾಕುನಾಯಿಯ ಆಸರೆಯಲ್ಲಿ
ಏಕಾಂತ ಬದುಕುವ ನನ್ನ
ನೆನಪಲಿ ರಾತ್ರಿಯೆಲ್ಲಾ ಬೆಚ್ಚಿ
ಕನವರಿಸಿ ಮಾತಿಗೆ ಭೇಟಿಗೆ
ಕಾತರಿಸುತ್ತಿದ್ದ ಜೀವವಿಂದು
ಇಷ್ಟೇಕೆ ನಿಷ್ಕರುಣಿಯಾಗಿದೆ ??
ನಿನಗಿಂದು ನೆನಪಾಗುವುದಿಲ್ಲವೆ ??
ಆಗಸ ಕವುಚಿಬಿದ್ದಂತೆ
ಭೋರೆಂದು ಸುರಿವ ಮಳೆ
ಗದಗುಡಿಸುವ ಚಳಿ
ಮರಗಟ್ಟಿಸುವ ನಿಶೆ
ದಡಭಡನೆ಼ಂದು ಭಯ
ತರುವ ಕಿಟಕಿಯ ಗಾಜುಗಳು
ಬೆದರಿ ಓಡೋಡಿ ಬಂದು
ಬಾಹುಗಳಲಿ ಅಡಗಿಸಿ
ಎದೆಗೊರಗಿಸಿಕೊಂಡು
ಭರವಸೆ ತುಂಬುತ್ತಿದ್ದ
ಜೀವವಿಂದು ಹೇಗೆ ಮರೆತಿದೆ ??
ನಿನಗಿದೆಲ್ಲ ನೆನಪಿಲ್ಲವೆ ??
ಅದೇ ಒಂಟಿ ಮನೆ
ಅದೇ ಏಕಾಂತ
ಕಂಗೆಡಿಸುವ ಕರಾಳ ಕತ್ತಲು
ಮಳೆಯ ಆರ್ಭಟ
ಗಾಳಿಯ ಭೋರ್ಗರೆತ
ಭಯದಲ್ಲಿ ತತ್ತರಿಸುವ ಜೀವ
ನಿನ್ನಪ್ಪುಗೆ ಬಯಸುವ ತನು
ನಿನ್ನಾಸರೆಗಾಗಿ ಚಡಪಡಿಸುವ ಮನ
ಕಾತರಿಸಿ ಧಾವಿಸುವ ಕರುಣಾರ್ದ್ರ
ಹೃದಯವಿಂದು ಹೇಗೆ ಮರೆತಿದೆ ??
ನಿನಗೇಕಿಂದು ನನ್ನ
ನೆನಪಾಗುವುದಿಲ್ಲ ???
No comments:
Post a Comment