ಕು.ಸ.ಮಧುಸೂದನ ರಂಗೇನಹಳ್ಳಿ
2019ರ ಲೋಕಸಭಾ ಚುನಾವಣೆಗಳಿಗೂ ಮೊದಲೇ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮೂರು ರಾಜ್ಯಗಳ ವಿದಾನಸಭಾ ಚುನಾವಣೆಗಳಿಗೆ ಈ ಬಾರಿ ವಿಶೇಷವಾದ ರಾಷ್ಟ್ರೀಯ ಮಹತ್ವವೊಂದು ಬಂದು ಬಿಟ್ಟಿದೆ. ಮದ್ಯಪ್ರದೇಶ, ರಾಜಾಸ್ಥಾನ್ ಮತ್ತು ಮಿಜೋರಾಂ ರಾಜ್ಯಗಳಲ್ಲಿ ನಡೆಯಲಿರುವ ವಿದಾನಸಭಾ ಚುನಾವಣೆಗಳು 2019ರ ಲೋಕಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗಬಹುದೆಂಬುದು ಬಹುತೇಕ ರಾಜಕೀಯ ವೀಕ್ಷಕರ ಅಭಿಪ್ರಾಯವಾಗಿದೆ.
ಇವುಗಳಲ್ಲಿ ಕೇವಲ ನಲವತ್ತು ಸ್ಥಾನಗಳನ್ನು ಹೊಂದಿರುವ ಈಶಾನ್ಯರಾಜ್ಯ ಮಿಜೋರಾಂ ಬಿಟ್ಟರೆ ಉಳಿದೆರಡು ರಾಜ್ಯಗಳಾದ ಮಧ್ಯಪ್ರದೇಶ(230ಸ್ಥಾನ) ರಾಜಾಸ್ಥಾನ(200ಸ್ಥಾನ)ಗಳಲ್ಲಿ ಬಾಜಪ ಅಧಿಕಾರದಲ್ಲಿದ್ದು 2019ರ ಲೋಕಸಭಾ ಚುನಾವಣೆಗಳಲ್ಲಿ ಸುಮಾರು 54 ಸಂಸತ್ ಸದಸ್ಯರನ್ನು ಆರಿಸಿ ಕಳಿಸಿಕೊಡಲಿವೆ. 2014ರ ಚುನಾವಣೆಯಲ್ಲಿ ರಾಜಾಸ್ಥಾನದ 24 ಸ್ಥಾನಗಳಲ್ಲಿ ಬಾಜಪ 20 ಸ್ಥಾನಗಳನ್ನು ಗೆದ್ದಿದ್ದರೆ, ಮಧ್ಯಪ್ರದೇಶದ 29 ಸ್ಥಾನಗಳ ಪೈಕಿ ಬಾಜಪ 26 ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಬಾಜಪ ಬಹುಮತ ಪಡೆಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದವು. ಹಾಗೆ ನೋಡಿದರೆ. 2013ರಲ್ಲಿ ಈ ರಾಜ್ಯಗಳಲ್ಲಿ ನಡೆದ ವಿದಾನಸಭೆಯ ಚುನಾವಣೆಗಳು 2014ರ ಸಾರ್ವತ್ರಿಕ ಚುನಾವಣೆಗಳಿಗೆ ಬಾಜಪಕ್ಕೆ ಪೂರ್ವಸಿದ್ದತೆಯ ಚುನಾವಣೆಗಳಾಗಿದ್ದು, ಶ್ರೀ ನರೇಂದ್ರ ಮೋದಿಯವರ ಜನಪ್ರಿಯತೆಯ ಮೊದಲ ರಿಹರ್ಸಲ್ ಆಗಿತ್ತೆನ್ನಬಹುದು.ಅವತ್ತು ಆ ಎರಡೂ ರಾಜ್ಯಗಳಲ್ಲಿ ಪಡೆದ ಬಾರಿ ಬಹುಮತದ ಆತ್ಮವಿಶ್ವಾಸವೇ ನಂತರದಲ್ಲಿ ಬಾಜಪ ರಾಷ್ಟ್ರದಾದ್ಯಂತ ಬಿರುಸಿನ ಆಕ್ರಮಣಕಾರಿ ಚುನಾವಣಾ ಪ್ರಚಾರ ಕೈಗೊಳ್ಳಲು ಸ್ಪೂರ್ತಿದಾಯಕವಾಗಿತ್ತು.
ಇದೀಗ ಬಾಜಪ ಈ ಎರಡೂ ರಾಜ್ಯಗಳಲ್ಲಿ ಹೆಚ್ಚುಕಡಿಮೆ ಐದು ವರ್ಷಗಳ ಕಾಲ ನಿರಾತಂಕವಾಗಿ ತನ್ನ ಆಳ್ಬಿಕೆ ನಡೆಸಿದೆ. ಇವತ್ತು ಬಾಜಪ ಮತ್ತು ಕಾಂಗ್ರೆಸ್ ಎಂಬ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಈ ರಾಜ್ಯಗಳ ಚುನಾವಣೆಗಳು ಹಲವು ಕಾರಣಗಳಿಗಿಂದಾಗಿ ಮಹತ್ವಪೂರ್ಣವಾಗಿವೆ. ಯಾಕೆಂದು ಸ್ವಲ್ಪ ನೋಡೋಣ:
ಕು.ಸ.ಮಧುಸೂದನ ರಂಗೇನಹಳ್ಳಿ ಯವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ನಾನು ಈ ಮೊದಲೇ ಹೇಳಿದಂತೆ 2019ಕ್ಕೆ ದೆಹಲಿಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಬಾಜಪಕ್ಕೆ ಈ ಎರಡೂ ರಾಜ್ಯಗಳಲ್ಲಿನ 54 ಸ್ಥಾನಗಳ ಪೈಕಿ ಆದಷ್ಟೂ ಹೆಚ್ಚಿನ ಸ್ಥಾನಗಳನ್ನು ಪಡೆಯಲೇಬೇಕಾದ ಅನಿವಾರ್ಯತೆ ಇದೆ. ಹಾಗೆ ಪಡೆಯಲು ಅದು ಮೊದಲಿಗೆ ವಿದಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕು. ಹೀಗಾಗಿ ಈ ಚುನಾವಣೆಗಳು ಬಾಜಪಕ್ಕೆ ನಿಜಕ್ಕೂ ಬಹಳ ಮುಖ್ಯವಾಗಿವೆ..ಇನ್ನು ಕಾಂಗ್ರೆಸ್ಸಿಗೆ ತನ್ನ ಗತವೈಭವ ಮರುಕಳಿಸಲು ಈ ರಾಜ್ಯಗಳಲ್ಲಿನ ಗೆಲುವು ಬಹಳ ಮುಖ್ಯ. ಈ ವಿದಾನಸಭಾ ಚುನಾವಣೆಗಳನ್ನು ಗೆಲ್ಲುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬೇಕಾದ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲು ಈ ರಾಜ್ಯಗಳಲ್ಲಿ ಗೆಲ್ಲಬೇಕಿರುವುದು ಅತ್ಯಗತ್ಯವಾಗಿದೆ. 2013ರಲ್ಲಿಯೇನೊ ಆಡಳಿತ ವಿರೋಧಿ ಅಲೆಯ ನೆಪ ಹೇಳಿ ಕಾಂಗ್ರೇಸ್ ತನ್ನ ಸೋಲನ್ನು ಸಮರ್ಥಿಸಿಕೊಳ್ಳಬಹುದಾಗಿತ್ತು. ಆದರೀಗ ಬಾಜಪಕ್ಕೆ ಆಡಳಿತ ವಿರೋಧಿ ಅಲೆಯ ಆತಂಕವಿದ್ದು, ಅದನ್ನು ನಗದೀಕರಿಸಿಕೊಳ್ಳುವ ಅವಕಾಶ ಕಾಂಗ್ರೆಸ್ಸಿಗಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಕಳೆದ ಐದು ವರ್ಷಗಳಲ್ಲಿ ನಡೆದ ಬಹುತೇಕ ಉಪಚುನಾವಣೆಗಳಲ್ಲಿ ಬಾಜಪ ಸೋಲುತ್ತ, ಕಾಂಗ್ರೆಸ್ ಗೆಲ್ಲುತ್ತಾ ಬಂದಿರುವುದು ಆಕಸ್ಮಿಕವೇನಲ್ಲ ಎಂದು ಕಾಂಗ್ರೆಸ್ ತೋರಿಸಿಕೊಡಬೇಕಿದೆ. ಅದೂ ಅಲ್ಲದೆ ರಾಜಾಸ್ಥಾನದ ಕಾಂಗ್ರೆಸ್ ಹೊಣೆಗಾರಿಕೆ ಹೊತ್ತಿರುವ ಯುವ ನಾಯಕ ಸಚಿನ್ ಪೈಲಟ್ ಅವರಿಗೆ ಈ ಚುನಾವಣೆಗಳು ಪೂರ್ಣ ಪ್ರಮಾಣದ ಅಗ್ನಿ ಪರೀಕ್ಷೆಯಾಗಿದ್ದು ಪಕ್ಷವನ್ನು ಗೆಲ್ಲಿಸಿ ವಿರೋಧಿಗಳ ಬಾಯಿ ಮುಚ್ಚಿಸಲು ಈ ಚುನಾವಣೆಗಳು ಸವಾಲಿನ ರೂಪದಲ್ಲಿ ಬಂದುನಿಂತಿವೆ.
ಇನ್ನು ಮಧ್ಯ ಪ್ರದೇಶಕ್ಕೆ ಬಂದರೆ 2005ರಿಂದಲೂ ಅಧಿಕಾರದಲ್ಲಿರುವ ಬಾಜಪದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚವಾಣ್ ಅವರು ಬಾಜಪ ಪಕ್ಷವನ್ನು ಮೀರಿದ ವರ್ಚಸ್ವೀ ನಾಯಕರಾಗಿ ಹೊರ ಹೊಮ್ಮಿದ್ದು ಕಳೆದ ಹದಿನೈದು ವರ್ಷಗಳಿಂದಲೂ ಸತತವಾಗಿ ಅಧಿಕಾರ ಹಿಡಿದು ಕೂತಿರುವ ಬಾಜಪಕ್ಕೆ ಮಧ್ಯಪ್ರದೇಶ ಭದ್ರಕೋಟೆಯಾಗಿದ್ದು, ಈ ರಾಜ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಈ ರಾಜ್ಯವನ್ನು ಬಾಜಪ ಏನಾದರೂ ಸೋತರೆ ದೇಶದ ಇತರೇ ರಾಜ್ಯಗಳಲ್ಲಿಯೂ ಇದುಪರಿಣಾಮ ಬೀರಲಿದೆ. ತನ್ನ ಭದ್ರಕೋಟೆ ಎನಿಸಿಕೊಂಡ ರಾಜ್ಯದಲ್ಲಿ ಗೆದ್ದು ತನ್ನ ಇತರೇ ರಾಜ್ಯಗಳ ಕಾರ್ಯಕರ್ತರುಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಾಗಿರುವುದರಿಂದ ಇಲ್ಲಿ ಗೆಲ್ಲುವುದು ಬಾಜಪಕ್ಕೆ ಮುಖ್ಯವಾಗಿದೆ. ಅದೇ ರೀತಿ 2003ರ ಹೊತ್ತಿಗೆ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿದ್ದ ಭಿನ್ನಮತೀಯ ಚಟುವಟಿಕೆಗಳು ಮತ್ತು ದಿಗ್ವಿಜಯಸಿಂಗ್ ಅವರ ಸರ್ವಾಧಿಕಾರಿ ನಡವಳಿಕೆ ಅವರ ಪಕ್ಷದೊಳಗೇ ಅವರಿಗೆ ಶತ್ರುಗಳನ್ನು ಸೃಷ್ಠಿಸಿತ್ತು. ಇದರ ಲಾಭ ಪಡೆದ ಬಾಜಪ ಅವತ್ತು ಸುಲಭವಾಗಿ ಅಧಿಕಾರಕ್ಕೆ ಏರಿತ್ತು. ಇದೀಗ ಬಾಜಪ ಸತತವಾಗಿ ಹದಿನೈದು ವರ್ಷಗಳನ್ನು ಪೂರೈಸುತ್ತ ಬಂದಿದ್ದು ಸಹಜವಾಗಿಯೇ ಆಡಳಿತ ವಿರೋಧಿ ಅಲೆಯೊಂದು ಸೃಷ್ಠಿಯಾಗಿದೆ. ಬಹುಶ: ಈ ಬಾರಿ ಆ ಅಲೆಯನ್ನು ಬಳಸಿಕೊಂಡು ಈ ರಾಜ್ಯವನ್ನು ಗೆಲ್ಲದೇ ಹೋದಲ್ಲಿ ಕಾಂಗ್ರೆಸ್ ಮಧ್ಯಪ್ರದೇಶದ ಮಟ್ಟಿಗೆ ಮತ್ತೆಂದೂ ತಲೆಯೆತ್ತಲಾರದು. ಈ ವಿದಾನಸಭೆಯಲ್ಲಿ ಕಾಂಗ್ರೆಸ್ ಮತ್ತೆ ಸೋತರೆ 2019ರ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷದ ಪರವಾಗಿ ಕೆಲಸ ಮಾಡಬಲ್ಲ ಕಾರ್ಯಕರ್ತರುಗಳೇ ಇಲ್ಲದಂತಾಗಬಹುದು. ಹೀಗಾಗಿ ಹೇಗಾದರು ಮಾಡಿ ಮತ್ತೆ ಮದ್ಯಪ್ರದೇಶವನ್ನು ಗೆದ್ದು ರಾಜ್ಯದ ಮತ್ತು ದೇಶದ ಉಳಿದ ರಾಜ್ಯಗಳ ಪಕ್ಷದ ನಾಯಕರುಗಳಿಗೆ ಮತ್ತು ಕಾರ್ಯಕರ್ತರುಗಳಿಗೆ ಧನಾತ್ಮಕ ಸಂದೇಶವೊಂದನ್ನು ಕಾಂಗ್ರೇಸ್ ನೀಡಲೇ ಬೇಕಾಗಿ ಬಂದಿದೆ, ಈ ಹಿನ್ನೆಲೆಯಲ್ಲಿ ಈ ರಾಜ್ಯದ ಚುನಾವಣೆ ಕಾಂಗ್ರೇಸ್ ಮಟ್ಟಿಗೆ 'ಮಾಡು ಇಲ್ಲವೇ ಮಡಿ' ಎನ್ನುವಂತಾಗಿದೆ.
ಇನ್ನು ಮಿಜೋರಾಮಿಗೆ ಬಂದರೆ ಅಲ್ಲಿ ಕೇವಲ ಒಂದೇ ಒಂದು ಲೋಕಸಭಾ ಸ್ಥಾನವಿದೆ. ಅದರೆ ಈಶಾನ್ಯ ಭಾರತದ ಒಂದೊಂದೇ ರಾಜ್ಯಗಳನ್ನು ಕಳೆದುಕೊಳ್ಳುತ್ತ ಬರುತ್ತಿರುವ ಕಾಂಗ್ರೆಸ್ಸಿಗೆ ಈ ರಾಜ್ಯವನ್ನು ಗೆದ್ದು ಉಳಿಸಿಕೊಂಡು ಮತ್ತೆ ಈಶಾನ್ಯ ರಾಜ್ಯದಲ್ಲಿ ತನ್ನ ಪ್ರಾಬಲ್ಯ ಸಾಧಿಸಬೇಕಿದೆ.
ಹೀಗೆ ಈ ವರ್ಷದ ಕೊನೆಯ ಭಾಗದಲ್ಲಿ ನಡೆಯಲಿರುವ ಈ ಚುನಾವಣೆಗಳು ಕಾಂಗ್ರೆಸ್ ಮತ್ತು ಬಾಜಪ ಪಕ್ಷಗಳ ಪಾಲಿಗೆ ಮಹತ್ವ ಪೂರ್ಣ ವಾಗಿದ್ದು, ಈ ವಿದಾನಸಭಾ ಚುನಾವಣೆಗಳನ್ನು ಗೆಲ್ಲಲು ಅವು ತಮ್ಮಿಂದ ಸಾದ್ಯವಾಗಬಹುದಾದ ಎಲ್ಲ ಪ್ರಯತ್ನಗಳನ್ನೂ ಮಾಡಲಿವೆ.
No comments:
Post a Comment