Jun 4, 2018

ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವ ಪಿಯು ಶಿಕ್ಷಣ!

ಕು.ಸ.ಮಧುಸೂದನ
ಸುದ್ದಿವಾಹಿನಿಯೊಂದರಲ್ಲಿ ಉಪಚುನಾವಣೆಯ ಪಲಿತಾಂಶ ನೋಡುತ್ತಿದ್ದಾಗ ಪ್ರಸಾರವಾದ ಜಾಹೀರಾತೊಂದು ನನ್ನ ಗಮನ ಸೆಳೆಯಿತು. ಅದು ಬೆಂಗಳೂರಿನ ಹಲವು ಶಿಕ್ಷಣ ಸಂಸ್ಥೆಗಳ ಜೊತೆ ಸೇರಿ ನಡೆಸುತ್ತಿರುವ ಬೃಹತ್ ಎಜುಕೇಶನ್ ಎಕ್ಸಪೊ ಕುರಿತದ್ದು. ಅದೇ ಸಮಯಕ್ಕೆ ಸರಿಯಾಗಿ ನನ್ನ ಪರಿಚಿತರೊಬ್ಬರು ಒಂದು ಸಮಸ್ಯೆಯೊಂದಿಗೆ ಮನಗೆ ಬಂದರು. ಅವರ ಮಗ ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡಾ 74ರಷ್ಟು ಅಂಕ ಪಡೆದಿದ್ದರೂ ಯಾವುದೇ ಒಳ್ಳೆಯ( ಅವರ ದೃಷ್ಠಿಯಲ್ಲಿ ನೂರಕ್ಕೆ ನೂರು ಪಲಿತಾಂಶ ನೀಡುವ) ಕಾಲೇಜುಗಳಲ್ಲಿ ಅವನಿಗೆ ಸೀಟು ಸಿಗಲು ಸಾದ್ಯವಿರಲಿಲ್ಲ. ಪ್ರವೇಶದ ಅರ್ಜಿ ಪಾರಂ ತರಲು ಹೋದಾಗಲೇ ಸಿಬ್ಬಂದಿ ಈ ಬಗ್ಗೆ ಅವರಿಗೆ ಸೂಚನೆ ನೀಡಿ ಮ್ಯಾನೇಜುಮೆಂಟ್ ಕೋಟಾದಲ್ಲಿ ಒಂದೂವರೆ ಲಕ್ಷ ಕಟ್ಟಿದರೆ ಮಾತ್ರ ಸೀಟು ಸಿಗುವುದಾಗಿಯೂ, ಅದಕ್ಕೆ ಮುಂಗಡವಾಗಿ ಟೋಕನ್ ಅಡ್ವಾನ್ಸ್ ನೀಡಿ(ಸೈಟು ವ್ಯಾಪಾರ ಮಾಡುವ ರಿಯಲ್ ಎಸ್ಟೇಟ್ ದಂದೆಯವರಂತೆ) ಸೀಟು ಬುಕ್ ಮಾಡಿ ಎಂದಿದ್ದಾರೆ. ಇವರೊ ನೋಡುವ ಮತ್ತೆ ಬರುವೆ ಅಂತ ಹೇಳಿ ಇನ್ನೂ ಮೂರ್ನಾಲ್ಕು ಕಾಲೇಜುಗಳಲ್ಲಿ ವಿಚಾರಿಸಿದಾಗ ಬಹುತೇಕ ಎಲ್ಲ ಪ್ರತಿಷ್ಠಿತ ಕಾಲೇಜುಗಳಲ್ಲಿಯೂ ಅಂತಹುದೇ ಉತ್ತರ ಸಿಕ್ಕಿದೆ. ಈಗೇನು ಮಾಡಲಿ ಎಂದು ಕೇಳಲು ಎಂದು ನನ್ನ ಮನೆಗೆ ಬಂದಿದ್ದರು. ನಾನು ನಿಮ್ಮ ಮಗನಿಗೆ ಸೈನ್ಸೇ ಆಗಬೇಕೆ ಆರ್ಟ್ಸ್ ಓದಲು ಆಗುವುದಿಲ್ಲವೇ ಎಂದಾಗ ಮುಖ ಕಿವುಚಿ (ನನ್ನನ್ನು ತಮ್ಮ ಹೊಸ ಶತ್ರುವಂತೆನೋಡುತ್ತ) ಏನು ಸಾರ್ ಹೀಗೆ ಹೇಳ್ತೀರಿ. ದುಡ್ಡಿಗಾಗಿ ಅವನ ಭವಿಷ್ಯ ಹಾಳು ಮಾಡೋಕಾಗುತ್ತ? ಅದಕ್ಕೆ ಬೆಲೆ ಎಲ್ಲಿದೆ? ಪಿಯುಸಿ ಆದ ಮೇಲೆ ಬಿಎ, ಎಂಎ ಬಿಟ್ಟರೆ ಬೇರೇನು ಓದೋಕಾಗುತ್ತೆ. ಅವನ್ನು ಓದಿದರೆ ಕೆಲಸ ಎಲ್ಲಿ ಸಿಗುತ್ತೆ? ಅಂತ ನನಗೇನೆ ಹತ್ತಾರು , ಉತ್ತರವಿರದ ಪ್ರಶ್ನೆಗಳನ್ನು ಕೇಳಿದರು. ಸದ್ಯದ ಸ್ಥಿತಿಯಲ್ಲಿ ಅವರ ಮಾತು ನಿಜ ಅನಿಸಿತು. ನನಗೂ ಬೇರೇನು ಹೇಳಲು ತೋಚದೆ ನೋಡುವ ತಡೆಯಿರಿ ಸೀಟುಗಳು ಅಧಿಕೃತವಾಗಿ ಅನೌನ್ಸ್ ಆಗಲಿ. ನಾನೂ ನಿಮ್ಮ ಜೊತೆ ಬರುತ್ತೇನೆ. ಹೇಗಾದರು ಮಾಡಿ ಫೀಸು ಕಡಿಮೆ ಮಾಡಿಸೋಣ ಅಂತ ಹೇಳಿ ಕಳಿಸಿ ನಿಟ್ಟುಸಿರುಬಿಟ್ಟೆ. 
ಕು.ಸ. ಮಧುಸೂದನ್ ರವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ನನಗಿದೇನು ಹೊಸ ವಿಷಯವಲ್ಲ! ಪ್ರತಿ ವರ್ಷ ಮೇ ತಿಂಗಳಲ್ಲಿ ಹತ್ತನೇ ತರಗತಿಯ ಪಲಿತಾಂಶ ಹೊರಬಿದ್ದು ಜೂನ್ ತಿಂಗಳು ಬಂದೊಡನೆ ಈ ಶಿಕ್ಷಣದ ರಿಯಲ್ ಎಸ್ಟೇಟ್ ವ್ಯಾಪಾರ ಶುರುವಾಗುತ್ತದೆ, ಬಹಳ ಜನ ಪರಿಚಿತರ ಒತ್ತಾಯದ ಮೇರೆಗೆ ಅಂತ ಕಾಲೇಜುಗಳಿಗೆ ಹೋಗಿ ಫೀಸಿನ ಚೌಕಾಸಿ ಮಾಡುವುದು ನನಗೂ ಈಗೀಗ ಅಭ್ಯಾಸವಾಗಿಬಿಟ್ಟಿದೆ. ಇದು ಶಿಕ್ಷಣ ಕ್ಷೇತ್ರಕ್ಕೆ ಅಂಟಿದ ರೋಗ. ಅನೇಕ ಖಾಸಗಿ ಪಿಯು ಕಾಲೇಜುಗಳು ಮೇ ಅಂತ್ಯದ ಹೊತ್ತಿಗೆ ಡಿಸ್ಕೌಂಟ್ ಬಟ್ಟೆ ಸೇಲಿನ ತಾತ್ಕಾಲಿಕ ಅಂಗಡಿಯವರ ತರ ತಮ್ಮ ಕಾಲೇಜು, ಅದು ಕೊಡುವ ಸೌಲಭ್ಯಗಳ ಕುರಿತು ಬಣ್ಣಬಣ್ಣದ ಪಾಂಪ್ಲೇಟುಗಳನ್ನು ಮಾಡಿ ಹಂಚುವುದು, ಫ್ಲೆಕ್ಸುಗಳನ್ನು ಹಾಕುವುದು ಶುರು ಮಾಡಿಕೊಂಡಿವೆ, ಬೆಂಗಳೂರಿನಂತ ನಗರಗಳಲ್ಲಿ ಶಿಕ್ಷಣದ ಎಕ್ಸಪೊಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳನ್ನು, ಪೋಷಕರನ್ನು ಆಕರ್ಷಿಸುವ ಹೊಸ ತಂತ್ರಕ್ಕೆ ಮೊರೆ ಹೋಗಿವೆ. ಇದು ಎಕನಾಮಿಕ್ಸಿನ ಬೇಡಿಕೆ ಪೂರೈಕೆಯ ಸೂತ್ರದ ಅನ್ವಯ ನಡೆಯುವ ವ್ಯಾಪಾರವಾಗಿದೆ. ಈಗಂತು ಕಾಲೇಜುಗಳು ಸಿ.ಇ.ಟಿ. ನೀಟ್ ಪರೀಕ್ಷೆಗಳಿಗೆ ತಾವೇ ತರಭೇತಿ ನೀಡುವ ಸ್ಕೀಮುಗಳನ್ನೂ ಹಾಕಿಕೊಂಡು ಪೋಷಕರಿಗೆ ವಿವಿಧ ರೀತಿಯ ಆಮೀಷಗಳನ್ನು ತೋರಿಸಲು ಶುರು ಮಾಡಿವೆ. ಇಂತಹ ಕಾಲೇಜುಗಳಲ್ಲಿ ಕಲಾ ಮಾದ್ಯಮದ ಶಿಕ್ಷಣವೆನ್ನುವುದು ಸಾಂಕೇತಿಕವಾಗಿ ಇರುವುದಷ್ಟೇ ಆಗಿದೆ. ಎಲ್ಲರೂ ವಿಜ್ಞಾನ ವಿಭಾಗವನ್ನೇ ಕೇಳುವುದರಿಂದ ಆ ಕಾಲೇಜುಗಳು ವಿಜ್ಞಾನ ವಿಭಾಗದ ಸಿಬ್ಬಂದಿಗೆ ಸೂಟುಬೂಟು ತೊಡಿಸಿದ ಪೋಟೊಗಳನ್ನು, ತಮ್ಮ ಕಾಲೇಜಿನ ಕ್ಲಾಸುರೂಂಗಳಿಂದ ಹಿಡಿದು ಟಾಯ್ಲೆಟ್ಟಿನ ಕಮೋಡ್ ವರೆಗಿನ ಬಣ್ಣದ ಪೋಟೊಗಳನ್ನು, ಕಳೆದ ವರ್ಷ ಹೆಚ್ಚು ಅಂಕ ಪಡೆದ ಹುಡುಗ-ಹುಡುಗಿಯರ ಪೋಟೊಗಳನ್ನು ಹಾಕಿದ ಬುಕ್ಲೆಟ್ಗಳನ್ನು ತಮ್ಮ ಅಜರ್ಿಫಾರಮ್ಮಿನ ಜೊತೆಗೆ ಕೊಡುವ ಮಟ್ಟಕ್ಕೆ ಇಳಿದಿವೆ. ಅಂತಹ ಸಮುಯದಲ್ಲಿ ನನ್ನಂತಹ ಮೂರ್ಖರು ಯಾರಾದರು ಪೋಷಕರಿಗೆ ನಿಮ್ಮ ಮಗುವನ್ನು ಕಲಾವಿಭಾಗಕ್ಕೆ ಸೇರಿಸಿ ಎಂದು ಸಲಹೆ ನೀಡಿದರಂತು ಮತ್ತೆ ಏಳೂ ಜನ್ಮಕ್ಕೂ ಅವರು ನಮ್ಮನ್ನು ಶತ್ರುಗಳಂತೆಯೇ ನೋಡುವುದು ಖಂಡಿತಾ. ಅಷ್ಟರ ಮಟ್ಟಿಗೆ ಇವತ್ತು ವಿಜ್ಞಾನದ ಶಿಕ್ಷಣಕ್ಕೆ ಮಹತ್ವ ಬಂದು ಕಲಾ ಪ್ರಕಾರಗಳು ಕೇಳುವವರಿಲ್ಲದೆ ತೀರಾ ಪೀಸು ಕಟ್ಟಲಾರದ ಬಡವರ ಮತ್ತು ಸರಕಾರಿ ಕಾಲೇಜುಗಳಲ್ಲಿಯೇ ಓದಬೇಕಾದ ಅನಿವಾರ್ಯತೆಗೆ ಸಿಲುಕಿರುವ ಮಕ್ಕಳ ವಿಭಾಗವಾಗಿ ಬಿಟ್ಟಿದೆ.

ಆರೋಗ್ಯಕರವಾಗಿ ಬೆಳೆಯುವ ಒಂದು ಸಮಾಜ ಮಾನವೀಯ ಶಾಸ್ತ್ರಗಳ ಅದ್ಯಯನಕ್ಕೆ ಹೆಚ್ಚು ಮಹತ್ವ ಕೊಡುವುದು ಸಹಜ. ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಪಡೆಯುವ ಭರದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ತತ್ವಜ್ಞಾನ, ಭೂಗೋಳಶಾಸ್ತ್ರದಂತಹ ವಿಷಯಗಳು ಇದೀಗ ನಿರ್ಲಕ್ಷ್ಯಕ್ಕೀಡಾಗಿವೆ.ಹಾಗಾದರೆ ಇಂತಹದೊಂದು ಸನ್ನಿವೇಶ ನಿರ್ಮಾಣವಾಗುವುದಕ್ಕೆ ಯಾರು ಕಾರಣ ಎಂಬುದನ್ನು ನೋಡುತ್ತಾ ಹೋದರೆ ಇದರಲ್ಲಿ ಸರಕಾರ, ಪೋಷಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣರೇ!.

ಮೊದಲಿಗೆ ಸರಕಾರದ ಶಿಕ್ಷಣದ ನೀತಿಯನ್ನೇ ನೋಡೋಣ. ಈಗಿನ ಸರಕಾರಗಳಿಗೆ ಶಿಕ್ಷಣ ನೀತಿಯೆಂಬುದೇ ಇಲ್ಲವಾಗಿದೆ. ಒಳ್ಳೆಯ ಕಾಲೇಜುಗಳನ್ನು ತೆರೆದು ಸರಿಯಾಗಿ ಅವನ್ನು ನಡೆಸಲು ಯೋಗ್ಯತೆಯಿರದ ಸರಕಾರಗಳು ಬೇಕಾ ಬಿಟ್ಟಿಯಾಗಿ ಕಾಲೇಜುಗಳನ್ನು ತೆರೆದು ದಂದೆ ನಡೆಸಲು ಖಾಸಗಿಯವರಿಗೆ ಅನುವು ಮಾಡಿಕೊಟ್ಟಿವೆ. ಖಾಸಗಿ ಕಾಲೇಜುಗಳನ್ನು ತೆರೆದು ನಡೆಸುವವರಿಗೂ ಇದು ಶಿಕ್ಷಣ ನೀಡುವ ಕ್ಷೇತ್ರ ಎನ್ನುವುದಕ್ಕಿಂತ ತಾವು ಹಾಕಿದ ಬಂಡವಾಳದ ಹತ್ತು ಪಟ್ಟನ್ನು ವಾಪಾಸು ಪಡೆದುಕೊಳ್ಳುವ ಹೂಡಿಕೆ ಕ್ಷೇತ್ರ ಎಂಬ ಬಾವನೆ ಬಂದುಬಿಟ್ಟಿದೆ. ಹೀಗಾಗಿ ಅವರು ಕಾಲೇಜುಗಳನ್ನು ಪಂಚತಾರಾ ಹೋಟೆಲ್ಲುಗಳ ರೀತಿ ಕಟ್ಟುತ್ತ ಸುಂದರವಾದ ಕಟ್ಟಡಗಳನ್ನು ನಿರ್ಮಿಸುತ್ತ ಪೋಷಕರನ್ನು ಸೆಳೆಯಲು ಸರ್ಕಸ್ ಮಾಡುತ್ತಿವೆ. ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಆಕರ್ಷಕವಾದ ಕಟ್ಟಡಗಳನ್ನು ಕಟ್ಟಿ ಕಾಲೇಜು ಶುರು ಮಾಡುವ ಖಾಸಗಿಯವರಿಗೆ ವಿದ್ಯಾರ್ಥಿಗಳು ಯಾವ ವಿಭಾಗದಲ್ಲಿ ಕಲಿತರೇನು? ಮಾರುಕಟ್ಟೆಯಲ್ಲಿ ಸದ್ಯಕ್ಕೆ ಬಾರಿ ಬೇಡಿಕೆ ಇರುವ ವಿಜ್ಞಾನ ವಿಭಾಗವೇ ಹೆಚ್ಚು ಲಾಭ ತಂದುಕೊಡುತ್ತಿರುವಾಗ ಕಲಾ ವಿಭಾಗದ ಬಗ್ಗೆ ಅವರಾದರು ಯಾಕೆ ತಲೆ ಕೆಡಿಸಿಕೊಳ್ಳಬೇಕು. ಖಾಸಗಿಯವರ ಬದಲಿಗೆ ಸರಕಾರವೇ ಕಾಲೇಜುಗಳನ್ನು ತೆರೆದರೆ ಈ ಸಮಸ್ಯೆ ಕಡಿಮೆಯಾಗುತ್ತದೆ,ನಿಜ. ಆದರೆ ಯಾರೇ ಶಿಕ್ಷಣ ಮಂತ್ರಿಯನ್ನು ಕೇಳಿ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಅಲ್ಪ ಮಟ್ಟದ ಅನುದಾನದಲ್ಲಿ ಈ ಕಾಲೇಜುಗಳನ್ನು ತೆರೆದು ನಡೆಸುವುದು ಸಾದ್ಯವಿಲ್ಲವೆಂಬ ಉತ್ತರ ಬರುತ್ತದೆ. ಸರಕಾರ ನಿರ್ವಹಿಸಬೇಕಾದ ಒಂದು ಸೇವಾ ಕ್ಷೇತ್ರವನ್ನು ಬಾರಿ ಬಂಡವಾಳ ಹೂಡಿಕೆಯಕ್ಷೇತ್ರವನ್ನಾಗಿ ಮಾರ್ಪಡಿಸಿ ಖಾಸಗಿಯವರ ಸುಪರ್ದಿಗೆ ಒಪ್ಪಿಸಿರುವ ನಾಲಾಯಕ್ ಸರಕಾರಗಳಿಂದ ಶಿಕ್ಷಣಕ್ಷೇತ್ರ ಉದ್ದಾರವಾಗುತ್ತದೆಯೆಂದು ನಾವು ನಿರೀಕ್ಷಿಸುವುದೇ ತಪ್ಪು ಎನಿಸುತ್ತದೆ.

ಇನ್ನು ಸರಕಾರದ ಮತ್ತೊಂದು ತಪ್ಪು ಎಂದರೆ ಕಲಾವಿಭಾಗದಲ್ಲಿ ಓದಿದವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ವಿಫಲರಾಗಿರುವುದಾಗಿದೆ. ಅನ್ನ ಕೊಡದ ಶಿಕ್ಷಣವನ್ನು ಯಾವ ಪೋಷಕ ತಾನೇ ತನ್ನ ಮಕ್ಕಳಿಗೆ ಕೊಡಿಸಲು ಬಯಸುತ್ತಾನೆ. ಇವತ್ತು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಓದಿದವರಿಗೆ ಮಾತ್ರ ಉದ್ಯೋಗ ದೊರೆಯುತ್ತದೆ ಎಂಬ ಸ್ಥಿತಿ ಇದ್ದು ಸಹಜವಾಗಿಯೇ ಪೋಷಕರು ಮಕ್ಕಳು ಅದನ್ನೇ ಓದಲು ಬಯಸುತ್ತಾರೆ. ನಾವಿದನ್ನು ತಪ್ಪು ಎನ್ನಲು ಸಾದ್ಯವಿಲ್ಲ.

ಇನ್ನು ಇದಕ್ಕೆ ತಕ್ಕಂತೆ ತಮ್ಮ ಮಕ್ಕಳನ್ನು ವಿಜ್ಞಾನ ವಿಭಾಗದಲ್ಲಿ, ಅದೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿಸುವುದು ಸಮಾಜದಲ್ಲಿ ತಮ್ಮ ಘನತೆ-ಗೌರವದ ಸಂಕೇತವೆಂದು ಬಾವಿಸಿರುವ ಪೋಷಕರೂ ಕೆಲಮಟ್ಟಿಗೆ ಇಂತಹ ಶಿಕ್ಷಣದ ದಂದೆಗೆ ಕಾರಣೀಭೂತರಾಗಿದ್ದಾರೆ.

ಕಾಲೇಜು ಶಿಕ್ಷಣವೇ ಈ ಮಟ್ಟದ್ದಾಗಿರುವಾಗ ಇನ್ನು ನಮ್ಮ ಪ್ರಾಥಮಿಕ ಶಿಕ್ಷಣದ ಗುಣಮಟ್ಟದ ಬಗ್ಗೆ ಹೆಚ್ಚು ಬರೆಯುವ ಅಗತ್ಯವೇ ಇಲ್ಲವೆನಿಸುತ್ತದೆ.

ತನ್ನ ಜನರಿಗೆ ಉಚಿತವಲ್ಲದಿದ್ದರೂ, ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಲಾಗದ ಒಂದು ಸರಕಾರವನ್ನು ಜನಪರವೆಂದು ಕರೆಯಲು ಸಾದ್ಯವಿಲ್ಲ.ನಮ್ಮನ್ನು ಆಳುವವರು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

No comments:

Post a Comment