ಹೆಣ್ಣು ಗುಬ್ಬಚ್ಚಿ |
ಮನುಷ್ಯರ ಜೊತೆಗೆ ಸರಾಗವಾಗಿ ಬದುಕಲು ಕಲಿತು ಮನುಷ್ಯನ ವಾಸದ ರೀತಿಯಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಮಾರ್ಪಾಟುಗಳಿಂದ ಅಪಾಯಕ್ಕೊಳಗಾಗಿರುವ ಪಕ್ಷಿಗಳಲ್ಲಿ ಗುಬ್ಬಚ್ಚಿ ಪ್ರಮುಖವಾದುದು. ಆಧುನಿಕ ನಗರಗಳಿಂದ ಮರೆಯಾಗುತ್ತಿದ್ದ ಗುಬ್ಬಚ್ಚಿಗಳು ತಮ್ಮ ಅಸ್ತಿತ್ವವನ್ನುಳಿಸಿಕೊಳ್ಳುವ ಪ್ರಕ್ರಿಯೆಗೆ ನಿಧಾನಕ್ಕೆ ಚಾಲನೆ ನೀಡುತ್ತಿರುವಂತೆ ಕಾಣಿಸುತ್ತಿದೆ.
ಆಂಗ್ಲ ಹೆಸರು: House sparrow (ಹೌಸ್ ಸ್ಪ್ಯಾರೋ)
ವೈಜ್ಞಾನಿಕ ಹೆಸರು: Passer domesticus (ಪ್ಯಾಸರ್ ಡೊಮೆಸ್ಟಿಕಸ್)
ಪುಟ್ಟ ಮುದ್ದು ಪಕ್ಷಿಗಳಿವು. ಹೆಣ್ಣು ಗಂಡಿನ ನಡುವೆ ಹೆಚ್ಚಿನ ವ್ಯತ್ಯಾಸಗಳಿರುವುದರಿಂದಾಗಿ ಗುರುತಿಸುವಿಕೆ ಸುಲಭದ ಕೆಲಸ.
ಇನ್ನಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
ಹೆಣ್ಣು ಪಕ್ಷಿ ಕಂದು ಬಣ್ಣದ ದೇಹವನ್ನೊಂದಿದೆ. ರೆಕ್ಕೆಗಳ ಮೇಲೆ ಕಂಡು ಬಣ್ಣದ ಜೊತೆಗೆ ಕಪ್ಪು ಪಟ್ಟಿಗಳಿವೆ. ಕಂದು ಬಣ್ಣದ ಕಾಲುಗಳಿವೆ, ಕೊಕ್ಕಿನಲ್ಲಿ ಬುದು - ಕಪ್ಪು - ಗುಲಾಬಿ - ಹಳದಿ ಬಣ್ಣಗಳನ್ನು ಗುರುತಿಸಬಹುದು.
ಹೆಣ್ಣು ಗುಬ್ಬಚ್ಚಿಗೆ ಹೋಲಿಸಿದರೆ ಗಂಡು ಪಕ್ಷಿಯಲ್ಲಿ ಹೆಚ್ಚಿನ ವರ್ಣ ವೈವಿಧ್ಯತೆಯಿದೆ. ಗಂಡು ಗುಬ್ಬಚ್ಚಿಯ ನೆತ್ತಿ ಬೂದು ಬಣ್ಣದ್ದಾಗಿದೆ. ಕಣ್ಣಿನ ಸುತ್ತ ಮತ್ತು ಎದೆಯ ಮೇಲ್ಬಾಗದಲ್ಲಿ ಕಪ್ಪು ಬಣ್ಣವಿದೆ. ಎದೆ - ಕತ್ತಿನ ಉಳಿದ ಭಾಗ ಬಿಳಿ ಬೂದು ಬಣ್ಣವನ್ನೊಂದಿದೆ. ರೆಕ್ಕೆಯಲ್ಲಿ ಮತ್ತು ನೆತ್ತಿಯ ಕೆಳಗೆ ಕಂದು ಬಣ್ಣವಿದೆ. ಹೆಣ್ಣಿನಂತೆಯೇ ಗಂಡಿನ ರೆಕ್ಕೆಯಲ್ಲೂ ಕಪ್ಪು ಬಣ್ಣದ ಪಟ್ಟಿಗಳಿವೆ.
ಎರಡರಲ್ಲೂ ಕಂದು ಬಣ್ಣವಿದೆಯಾದರೂ ಗಂಡಿನ ಕಂಡು ಗಾಢವಾಗಿದೆ.
ಕಡ್ಡಿ, ಎಲೆ, ಹುಲ್ಲು, ಪಕ್ಷಿಗಳ ಉದುರಿದ ರೆಕ್ಕೆಗಳನ್ನು ಬಳಸಿಕೊಂಡು ಮನುಷ್ಯನ ವಾಸಸ್ಥಾನದ ಬಳಿಯೇ ಗೂಡು ಕಟ್ಟಿಕೊಳ್ಳುತ್ತವೆ. ಹೆಂಚಿನ ಮನೆಯ ಮಾಡು ಇವುಗಳಿಗೆ ಅಚ್ಚುಮೆಚ್ಚಿನ ವಾಸಸ್ಥಳ.
ಮಿಶ್ರಹಾರಿಯಾದ ಗುಬ್ಬಚ್ಚಿಗಳು ಸಣ್ಣ ಪುಟ್ಟ ಕೀಟ, ಕಾಳು, ಹಣ್ಣು, ಮನುಷ್ಯನೆಸೆದ ಆಹಾರ ಪದಾರ್ಥಗಳನ್ನು ಸೇವಿಸುತ್ತವೆ.
ನಗರೀಕರಣ ಪ್ರಕ್ರಿಯೆಯಿಂದಾಗಿ ಅದರಲ್ಲೂ ಮೊಬೈಲು ಟವರುಗಳಿಂದಾಗಿ ಇವುಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದೆ ಎನ್ನಲಾಗುತ್ತದೆ. ಹೆಂಚಿನ ಮನೆಗಳಿರುವ ಪ್ರದೇಶಗಳಲ್ಲಿ ಮೊಬೈಲು ಟವರಿನ ಕೆಳಗೇ ಕಾಣಿಸಿಕೊಳ್ಳುವುದೂ ಉಂಟು. ಮೊಬೈಲು ಟವರುಗಳಿಂದಾಗಿಯೇ ಇವುಗಳ ಸಂಖ್ಯೆ ಕುಸಿಯಿತಾ? ಅಥವಾ ಗೂಡು ಕಟ್ಟಿಕೊಳ್ಳಲು ಸೂಕ್ತ ಸ್ಥಳಾವಕಾಶವಿಲ್ಲದ 'ಆಧುನಿಕ' ಮನೆಗಳಿಂದ ಇವುಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆಯಾ?
ಚಿತ್ರನೆನಪು -
ಹೆಣ್ಣು ಗುಬ್ಬಚ್ಚಿ: ಸುಳ್ಯದಲ್ಲಿ ತೆಗೆದ ಪಟವಿದು. ಕೆ.ವಿ.ಜಿ ಆವರಣದಲ್ಲಿ ಮೊಬೈಲು ಟವರುಗಳಿದ್ದವಾದರೂ ಗುಬ್ಬಚ್ಚಿಗಳ ವಾಸಕ್ಕೇನೂ ಅದರಿಂದ ಅಡ್ಡಿಯಾದಂತಿರಲಿಲ್ಲ. 'ನಂದಿನಿ' ಹಾಲಿನ ಕೇಂದ್ರದ ಬಳಿಯ ರಸ್ತೆಯಲ್ಲಿ ಚಿಕ್ಕ ಚಿಕ್ಕ ಆಹಾರ ತುಣುಕುಗಳನ್ನು ಹುಡುಕುತ್ತಿದ್ದಾಗ ನನ್ನ ಕ್ಯಾಮೆರಾದಲ್ಲಿ ಸೆರೆಯಾದ ಹೆಣ್ಣು ಗುಬ್ಬಚ್ಚಿಯಿದು.
ಗಂಡು ಗುಬ್ಬಚ್ಚಿ |
ಗಂಡು ಗುಬ್ಬಚ್ಚಿ: ಮಲೆಮಹದೇಶ್ವರ ಬೆಟ್ಟದಲ್ಲಿ ತೆಗೆದ ಪಟವಿದು. ದೇವಸ್ಥಾನದೊರಗಿನ ಮೆಟ್ಟಿಲ ಮೇಲೆ ಕುಳಿತು ವಿರಮಿಸುತ್ತಿದ್ದಾಗ ಗುಬ್ಬಚ್ಚಿ ಹಾರಿ ಬಂದು ಬಹು ಹತ್ತಿರದಲ್ಲೇ ಕುಳಿತುಕೊಂಡಿತು. ಪ್ರಸಾದದ ರೂಪದ ಲಡ್ಡು ಅನ್ನು ಜನರು ತಿನ್ನುವಾಗ ಅಲ್ಲೊಂಚೂರು ಇಲ್ಲೊಂಚೂರು ಬಿದ್ದಿರುತ್ತಲ್ಲ ಅಂತಹ ಚೂರನ್ನು ತಿನ್ನುವುದರಲ್ಲಿ ಗುಬ್ಬಚ್ಚಿ ನಿರತವಾಯಿತು. ಬ್ಯಾಗಿನೊಳಗಿಂದ ಕ್ಯಾಮೆರಾ ತೆಗೆದು ಒಂದು ಫೋಟೋ ಕ್ಲಿಕ್ಕಿಸಿಕೊಂಡೆ.
No comments:
Post a Comment