ಊರು ಕಾಗೆ. ಕೆನಾನ್ 550ಡಿ, ಕೆನಾನ್ 75 - 300 ಎಂ.ಎಂ ಲೆನ್ಸ್ ಎಫ್/5.6, 1/200, ಐ.ಎಸ್.ಓ 400 |
ಡಾ. ಅಶೋಕ್. ಕೆ. ಆರ್.
ಕಾಗೆಯನ್ನು ಪಕ್ಷಿಯೆಂದು ಪರಿಗಣಿಸುವುದೇ ನಮಗೆ ಮರೆತುಹೋಗುವಷ್ಟರ ಮಟ್ಟಿಗೆ ಅವುಗಳು ನಮ್ಮ ಜೀವನದಲ್ಲಿ ಬೆರೆತುಹೋಗಿವೆ. ನಮ್ಮಲ್ಲಿ ಕಾಣುವ ಕಾಗೆಗಳಲ್ಲಿ ಮುಖ್ಯವಾಗಿ ಎರಡು ವಿಧ - ಊರು ಕಾಗೆ ಮತ್ತು ಕಾಡು ಕಾಗೆ.
ಆಂಗ್ಲ ಹೆಸರು: -
ಊರು ಕಾಗೆ - House crow (ಹೌಸ್ ಕ್ರೊ)
ಕಾಡು ಕಾಗೆ - Jungle crow (ಜಂಗಲ್ ಕ್ರೊ)
ವೈಜ್ಞಾನಿಕ ಹೆಸರು: -
ಊರು ಕಾಗೆ - Corvus splendens (ಕಾರ್ವಸ್ ಸ್ಪ್ಲೆಂಡೆನ್ಸ್)
ಕಾಡು ಕಾಗೆ - Corvus macrorhynchos (ಕಾರ್ವಸ್ ಮ್ಯಾಕ್ರೊರಿಂಕೋಸ್)
ಎರಡೂ ವಿಧದ ಕಾಗೆಗಳು ಕಪ್ಪು ಬಣ್ಣದ್ದೇ ಆಗಿರುತ್ತವಾದರೂ ಊರು ಕಾಗೆಯ ಕತ್ತು ಮತ್ತು ಎದೆಯ ಭಾಗವು ಬೂದು ಬಣ್ಣದ್ದಾಗಿರುತ್ತದೆ. ಕಾಡು ಕಾಗೆಯ ಕಪ್ಪು ಊರು ಕಾಗೆಯ ಕಪ್ಪಿಗೆ ಹೋಲಿಸಿದರೆ ಹೆಚ್ಚು ಹೊಳಪಿನಿಂದ ಕೂಡಿದೆ.
ಜನನಿಬಿಡ ಪ್ರದೇಶದಲ್ಲೇ ಇರುವ ಮರಗಳ ಮೇಲೆ ದಪ್ಪನಾದ ಕಡ್ಡಿಗಳನ್ನುಪಯೋಗಿಸಿಕೊಂಡು ಒರಟೊರಟಾದ ಗೂಡು ಕಟ್ಟಿಕೊಳ್ಳುತ್ತವೆ. ಇನ್ನು ಇವುಗಳ ಆಹಾರದ ವಿಷಯಕ್ಕೆ ಬಂದರೆ ಮನುಷ್ಯ ತಿನ್ನುವ ಎಲ್ಲವನ್ನೂ, ಮನುಷ್ಯ ಬಿಸಾಡುವ ಎಲ್ಲಾ ತಿನ್ನುವ ಪದಾರ್ಥಗಳನ್ನೂ ತಿಂದು ಅರಗಿಸಿಕೊಳ್ಳುವ ಶಕ್ತಿ ಕಾಗೆಗಳಿಗಿದೆ. ಮನುಷ್ಯ ನಿಸರ್ಗಕ್ಕೆ ಬಿಸುಟುವ ಹಸಿ ಕಸದಲ್ಲಿನ ಬಹು ದೊಡ್ಡ ಭಾಗವನ್ನು ಸ್ವಚ್ಛಗೊಳಿಸುವಲ್ಲಿ ಇವುಗಳ ಪಾತ್ರ ಹಿರಿದು. ಹಣ್ಣುಗಳು, ಸತ್ತ ಪ್ರಾಣಿಗಳು, ಹಲ್ಲಿ, ಸಣ್ಣ ಪಕ್ಷಿಗಳೂ ಇವುಗಳ ಆಹಾರಕ್ರಮದಲ್ಲಿದೆ. ಇಂತದ್ದೇ ಆಹಾರ ಬೇಕೆಂಬ ಹಟವಿಲ್ಲ. ಸಿಕ್ಕ ಆಹಾರವನ್ನೂ ತನ್ನ ಸಹಚರ ಕಾಗೆಗಳೊಂದಿಗೆ ಹಂಚಿಕೊಂಡು ತಿನ್ನುತ್ತವೆ. ಗುಂಪಿನಲ್ಲಿರುವ ಕಾಗೆಗಳು ತನಗಿಂತ ಎಷ್ಟೋ ಪಟ್ಟು ದೊಡ್ಡದಾದ ಹದ್ದುಗಳನ್ನೂ ಹೆದರಿಸಿ ಓಡಿಸುವುದುಂಟು.
ಕಾಡು ಕಾಗೆ. ಕೆನಾನ್ 550ಡಿ, ಸಿಗ್ಮಾ 150 - 600 ಎಂ.ಎಂ ಲೆನ್ಸ್ ಎಫ್/8.0, 1/400, ಐ.ಎಸ್.ಓ 400 |
ಮನುಷ್ಯನ ಜೊತೆ ನಗರಗಳ ಜೊತೆಗೆ ಹೊಂದಿಕೊಂಡ ಕಾಗೆಗಳಿಗೆ ಸದ್ಯಕ್ಕಂತೂ ಯಾವುದೇ ರೀತಿಯ ಅಪಾಯವಿಲ್ಲ. ಆದರೂ ಮರಗಳೇ ಇಲ್ಲದ ನಗರಗಳ ಕೆಲ ಭಾಗಗಳಲ್ಲಿ ಕಾಗೆಗಳು ಕೂಡ ಕಾಣಿಸದ ಪರಿಸ್ಥಿತಿ ಇದೆ. ಕಾಲ ಸರಿದಂತೆ ಈ ಸ್ಥಿತಿ ಮತ್ತಷ್ಟು ಕಡೆ ಕಾಣಿಸಿದರೂ ಅಚ್ಚರಿಯೇನಿಲ್ಲ.
ಕಾಗೆಗಳೂ ಇಲ್ಲದ ಪರಿಸರದಲ್ಲಿ ನೀವು ಬದುಕುತ್ತಿದ್ದೀರಾ?!
ಚಿತ್ರನೆನಪು: -
ಊರು ಕಾಗೆ: ಡಿ.ಎಸ್.ಎಲ್.ಆರ್ ಕ್ಯಾಮೆರಾ ಕೊಂಡುಕೊಂಡ ಶುರುವಿನ ದಿನಗಳಲ್ಲಿ ತೆಗೆದ ಪಟವಿದು. ಸುಳ್ಯದ ಕೆ.ವಿ.ಜಿ ಕಾಲೇಜಿನಾವರಣದಲ್ಲೇ ಬಹಳಷ್ಟು ಕಾಗೆಗಳಿದ್ದವು. ತಾರಸಿಯ ಮೇಲೆ ಕುಳಿತಿದ್ದ ಊರು ಕಾಗೆಯ ಬಳಿ ಮೆಲ್ಲಮೆಲ್ಲನೆ ಕುಕ್ಕುರುಗಾಲಿನಲ್ಲಿ ಸಾಗಿ ಹತ್ತಿರವಾಗಿ ತೆಗೆದ ಪಟವಿದು. ಕಾಗೆಗಳು ಮನುಷ್ಯರಿಗೆ ಎಷ್ಟೇ ಹೊಂದಿಕೊಂಡಿದ್ದರೂ ಹತ್ತಿರವಾಗುತ್ತಿದ್ದಂತೆ ಹಾರಿ ಹೋಗುತ್ತವೆ, ಸಂಭಾವ್ಯ ಅಪಾಯದಿಂದ ತಪ್ಪಿಸಿಕೊಳ್ಳುವ ಸಲುವಾಗಿ. ಈ ಕಾಗೆ ಅವತ್ಯಾಕೋ ಎಲ್ಲಿಗೂ ಹಾರಿ ಹೋಗದೆ ಕುಳಿತಲ್ಲೇ ಇದ್ದು ಕ್ಯಾಮೆರಾ ಕೈಯಲ್ಲಿಟ್ಟುಕೊಂಡು ನಿಧನಿಧಾನಕ್ಕೆ ಹತ್ತಿರ ಹೋಗುತ್ತಿದ್ದವನನ್ನು ಆಗಾಗ್ಗೆ ತಿರುತಿರುಗಿ ನೋಡುತ್ತಿತ್ತು. ಹಾಗೆ ತಿರುಗಿ ನೋಡುವಾಗ ತೆಗೆದ ಪಟವಿದು.
ಕಾಡು ಕಾಗೆ: ಮಂಡ್ಯದ ಬಳಿಯ ಸೂಳೆಕೆರೆಯಲ್ಲಿ ತೆಗೆದ ಪಟವಿದು. ಒಂಚೂರು ಕ್ಯಾಮೆರಾದ ಬಳಕೆ ಕಲಿತು ವಿಧವಿಧದ ಪಕ್ಷಿಗಳ ಫೋಟೋ ತೆಗೆಯುವುದನ್ನು ಪ್ರಾರಂಭಿಸುತ್ತಿದ್ದಂತೆಯೇ ಕಾಗೆಗಳ ಫೋಟೋ ತೆಗೆಯೋ ಅಭ್ಯಾಸವೇ ಮರೆತುಹೋಗಿರ್ತದೆ. ಕಾಗೆ ಫೋಟೋ ಏನು ತೆಗೆಯೋದು ಎಂಬ ಉದಾಸೀನ!
ಬೇಸಿಗೆಯ ಸಮಯದಲ್ಲಿ ಸೂಳೆಕೆರೆಯಲ್ಲಿ ನೀರು ಕಡಿಮೆಯಿತ್ತು. ವಿವಿಧ ವಲಸೆ ಪಕ್ಷಿಗಳ ಫೋಟೋ ತೆಗೆದುಕೊಂಡು ವಾಪಸ್ಸಾಗುವಾಗ ಈ ಕಾಡು ಕಾಗೆ ಕಣ್ಣಿಗೆ ಬಿತ್ತು. ಮಣ್ಣಿನಲ್ಲಿದ್ದ ಹುಳುವನ್ನೋ ಮತ್ತೇನೋ ಆಹಾರವಸ್ತುವನ್ನೋ ಆಗಷ್ಟೇ ಕುಕ್ಕಿ ತಿಂದಿತ್ತು. ಕೆರೆಯಂಗಳದ ತೇವದ ಮಣ್ಣಿನ್ನೂ ಕಾಡುಕಾಗೆಯ ಕೊಕ್ಕಿಗೆ ಅಂಟಿಕೊಂಡಿತ್ತು.
No comments:
Post a Comment