May 3, 2018

ನಿರೀಕ್ಷೆ ಮತ್ತು ವಾಸ್ತವ......

ಸಾಂದರ್ಭಿಕ ಚಿತ್ರ 
ಡಾ. ಅಶೋಕ್. ಕೆ. ಆರ್. ಪೇಪರ್ರಿನವನು ಪತ್ರಿಕೆಯನ್ನು ಕಾಂಪೌಂಡಿನೊಳಗೆ ಎಸೆದ ಸದ್ದಿಗೆ ಎಚ್ಚರವಾಯಿತು. ಕಣ್ಣುಜ್ಜಿಕೊಂಡು ಬಾಗಿಲು ತೆರೆದು ಪತ್ರಿಕೆ ತೆಗೆದುಕೊಂಡು ಒಳಬಂದು ಓದಲಾರಂಭಿಸಿದೆ. ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳ ಮಾತುಗಳಲ್ಲದೆ ಬೇರೆ ಸುದ್ದಿಗಳನ್ನು ಕಾಣಲು ಸಾಧ್ಯವೇ?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾತುಗಳೇ ಇವತ್ತಿನ ಪ್ರಮುಖ ಸುದ್ದಿ: ‘ದೇಶವಾಸಿಯೋ..... ದಶಕಗಳ ನಂತರ ನಮ್ಮ ಪಕ್ಷಕ್ಕೆ ಪೂರ್ಣ ಬಹುಮತದೊಂದಿಗೆ ಸರಕಾರ ನಡೆಸುವ ಅವಕಾಶ ಕೊಟ್ಟಿದ್ದೀರಿ. ನಾಲ್ಕು ವರ್ಷಗಳಿಂದ ತಕ್ಕಮಟ್ಟಿಗೆ ಉತ್ತಮ ಆಡಳಿತವನ್ನೇ ನೀಡುತ್ತಾ ಬಂದಿದ್ದೀವಿ. ಕರ್ನಾಟಕದಿಂದ ಬಹಳಷ್ಟು ಸಂಸದರನ್ನು ನೀವು ಆರಿಸಿ ಕಳಿಸಿದ್ದರೂ ಕೂಡ ನಿಮ್ಮ ನಿರೀಕ್ಷೆಯಷ್ಟು ಕರ್ನಾಟಕಕ್ಕೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಇದರ ಬಗ್ಗೆ ನನಗೂ ವಿಷಾದವಿದೆ. ಮಹದಾಯಿ - ಕಾವೇರಿ ವಿಷಯದಲ್ಲಿ ನಾವು ಇನ್ನಷ್ಟು ಸಕ್ರಿಯರಾಗಿರಬೇಕಿತ್ತು. ಇನ್ನು ಮುಂದೆ ಸಕ್ರಿಯರಾಗಿರ್ತೀವಿ ಎಂಬ ಭರವಸೆ ಕೊಡುತ್ತೇನೆ. ಕಳೆದ ಬಾರಿ ಕರ್ನಾಟಕದಲ್ಲಿದ್ದ ಬಿಜೆಪಿ ಸರಕಾರದ ಬಗ್ಗೆ ನಿಮಗೆ ಅಸಹನೆ ಇದ್ದಿದ್ದು ನನಗೆ ತಿಳಿದಿದೆ. ಆಗಾದ ತಪ್ಪುಗಳು ಮತ್ತೆ ಪುನರಾವರ್ತನೆಯಾಗುವುದಿಲ್ಲ ಎಂದು ಯಡಿಯೂರಪ್ಪಾಜಿ ಮಾತು ಕೊಟ್ಟಿದ್ದಾರೆ. ಈ ಬಾರಿ ಬಿಜೆಪಿಗೊಂದು ಅವಕಾಶ ಮಾಡಿಕೊಡಬೇಕು' ಎಂದು ಹೇಳಿದ್ದರು.

ನರೇಂದ್ರ ಮೋದಿಯವರ ನಂತರ ಮಾತನಾಡಿದ್ದ ಯಡಿಯೂರಪ್ಪನವರು ‘ಬಂಧುಗಳೇ……’ ಅಂತ ಹೇಳುವಷ್ಟರಲ್ಲಿ ಅವರ ಕಣ್ಣಿಂದ ಎರಡನಿ ನೀರುದುರಿತ್ತು. ಕೈ ಚೌಕದಲ್ಲಿ ಹನಿಗಳನ್ನು ಒರೆಸಿಕೊಳ್ಳುತ್ತಾ ‘ಬಂಧುಗಳೇ… ಮೊಟ್ಟಮೊದಲನೆಯದಾಗಿ ನಾನು ನಿಮ್ಮಲ್ಲಿ ಮನಃಪೂರ್ವಕವಾಗಿ ಕ್ಷಮಾಪಣೆ ಕೇಳುತ್ತೇನೆ. ನೀವು……. ಮತದಾರ ಬಂಧುಗಳು……. ನಮಗೆ ಕೊಟ್ಟ ಮೊದಲ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲವಾಗಿದ್ದಕ್ಕೆ ನನ್ನನ್ನು ನಮ್ಮ ಪಕ್ಷವನ್ನು ದೊಡ್ಡ ಮನಸ್ಸು ಮಾಡಿ ಕ್ಷಮಿಸಿಬಿಡಿ. ಭ್ರಷ್ಟಾಚಾರಕ್ಕಿನ್ನು ತಾವಿಲ್ಲದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೊಡಿಸುವುದು ನಮ್ಮ ಜವಾಬ್ದಾರಿ. ನಮ್ಮ ಜವಾಬ್ದಾರಿಯನ್ನು ನಾವು ಸರಿಯಾದ ರೀತಿ ನಿರ್ವಹಿಸಲು ಪೂರ್ಣ ಬಹುಮತದೊಂದಿಗೆ ಆರಿಸಿ ಕಳಿಸುವ ಹೊಣೆಯಷ್ಟೇ ನಿಮ್ಮದಾಗಿರಲಿ. ಹಳೆಯ ತಪ್ಪುಗಳನ್ನು ಕ್ಷಮಿಸಿ, ಮತ್ತೊಮ್ಮೆ ತಪ್ಪು ಮಾಡುವುದಿಲ್ಲವೆಂದು ಧರ್ಮಸ್ಥಳದ ಮಂಜುನಾಥನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ’.

ಮೋದಿ ಮತ್ತು ಯಡಿಯೂರಪ್ಪನವರ ಮಾತುಗಳ ಪಕ್ಕದಲ್ಲಿ ಸಿದ್ಧರಾಮಯ್ಯನವರ ಮಾತುಗಳಿದ್ದವು. ‘ನೋಡಿ... ಕಳೆದ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನೀವು ಬಹುಮತ ಕೊಟ್ಟಿದ್ದೀರಿ. ಎಷ್ಟೋ ಕಾಲದ ನಂತರ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಮುಖ್ಯಮಂತ್ರಿ ನಾನು. ಇದಕ್ಕೆ ಕಾರಣ ಬಹುಮತದಿಂದ ನಮ್ಮನ್ನು ಆರಿಸಿ ಕಳಿಸಿದ ನೀವು ಮತ್ತು ಯಾವೊಂದು ಆಂತರಿಕ ಕಲಹವನ್ನೂ ನಡೆಸದ ನಮ್ಮ ಪಕ್ಷದ ಶಾಸಕರು. ಸಮಾಜದ ಎಲ್ಲಾ ಸ್ಥರದ ಜನರನ್ನೂ ತಲುಪುವ ಒಂದಷ್ಟು ಯೋಜನೆಗಳನ್ನು ನಾವು ಕೊಟ್ಟಿದ್ದೇವೆ. ಜನರ ಹಸಿವು ನೀಗಿಸುವ ಪ್ರಯತ್ನ ಮಾಡಿದ್ದೇವೆ. ಹಂಗಂತ ಎಲ್ಲಾ ಮಾಡಿ ಬಿಟ್ಟಿದ್ದೀವಿ ಅಂತಾನೂ ಅಲ್ಲ. ಇನ್ನೂ ಬಹಳಷ್ಟು ಮಾಡಬಹುದಿತ್ತು, ಮಾಡಬೇಕು. ಅವೆಲ್ಲಾ ಮಾಡೋದಿಕ್ಕೆ ನಮ್ಮ ಪಕ್ಷವನ್ನು ಮತ್ತೊಮ್ಮೆ ಗೆಲ್ಲಿಸಿ ಅಂತ ನಿಮ್ಮಲ್ಲಿ ಕೇಳಿಕೊಳ್ತೀನಿ’.

ಕೆಳಗಿನರ್ಧ ಪುಟದಲ್ಲಿ ಒಂದು ಬದಿಗೆ ಕಾಂಗ್ರೆಸ್ ಮತ್ತೊಂದು ಬದಿಯಲ್ಲಿ ಬಿಜೆಪಿಯ ಜಾಹೀರಾತುಗಳಿದ್ದವು. ಕರ್ನಾಟಕದ ಹಿತಕ್ಕಾಗಿ ಯಾವ್ಯಾವ ಯೋಜನೆಗಳನ್ನು ಜಾರಿಗೆ ತರಲಾಗುವುದೆಂದು ಅದರಲ್ಲಿ ಪ್ರಸ್ತಾಪಿಸಿದ್ದರು. ಜಾಹೀರಾತುಗಳನ್ನು ಓದಲಾರಂಭಿಸುವಷ್ಟರಲ್ಲಿ ಅತ್ತಿತ್ತ ತುಯ್ದಾಡಿದ ಅನುಭವ…. ಭೂಕಂಪವಾಗುತ್ತಿದೆಯಾ ಎಂದುಕೊಳ್ಳುವಷ್ಟರಲ್ಲಿ ದಿವ್ಯವಾಣಿಯೊಂದು ಕೇಳಿಬಂತು. ‘ರೀ ರೀ ಎದ್ದೇಳ್ರೀ….. ಟೈಮಾಯ್ತು… ಕಾಲೇಜಿಗೋಗಲ್ವಾ?…….’ ದಿವ್ಯವಾಣಿಯು ಹೆಂಡತಿಯ ಮಾಮೂಲಿ ದನಿಯಾಗಿ ಬದಲಿದ್ದು ಅರಿವಾಗುವಷ್ಟರಲ್ಲಿ ನಿದ್ರೆ ಹಾರಿ ಹೋಗಿತ್ತು. ಸ್ನಾನ ಮಾಡಿಕೊಂಡು ಬಂದು ಟೀಪಾಯಿಯ ಮೇಲಿದ್ದ ಪತ್ರಿಕೆಯನ್ನು ಎತ್ತಿಕೊಂಡೆ.

‘ರಾಹುಲ್ ಗಾಂಧಿ ಹದಿನೈದು ನಿಮಿಷ ಸಿದ್ಧರಾಮಯ್ಯ ಸರಕಾರದ ಸಾಧನೆಗಳ ಬಗ್ಗೆ ಪೇಪರ್ ನೋಡಿಕೊಳ್ಳದೆ ಹೇಳಲಿ ನೋಡೋಣ’ ಎಂದು ಸವಾಲೆಸಿದ್ದರು ಆದರಣೀಯ ಪ್ರಧಾನಮಂತ್ರಿಗಳು. ಪ್ರಧಾನಿಗಳ ಸವಾಲಿಗೆ ಪ್ರತಿಸವಾಲೆಸೆಯುತ್ತಾ ‘ನರೇಂದ್ರ ಮೋದಿಯವರು ಹಿಂದಿದ್ದ ಯಡಿಯೂರಪ್ಪ ಸರಕಾರದ ಸಾಧನೆಗಳ ಬಗ್ಗೆ ಪೇಪರ್ ನೋಡಿಕೊಂಡೆ ಹದಿನೈದು ನಿಮಿಷ ಮಾತನಾಡಲಿ’ ಎಂದು ಸನ್ಮಾನ್ಯ ಮುಖ್ಯಮಂತ್ರಿಗಳು ಟ್ವೀಟಿಸಿದ್ದರು. ಇವೆರಡರ ಪಕ್ಕದಲ್ಲಿ 'ರಾಜ್ಯದ ಹಿತದೃಷ್ಟಿಯಿಂದ ರೆಡ್ಡಿ ಸಹೋದರರನ್ನು ಕ್ಷಮಿಸಿದ್ದೀನಿ’ ಎಂಬ ಬಿಡಿಸಲಾರದ ಒಗಟಿನಂತಹ ಮಾತುಗಳನ್ನು ಮಾಜಿ ಮುಖ್ಯಮಂತ್ರಿಗಳಾಡಿದ್ದರು.

ಕೆಳಗಿನರ್ಧ ಪುಟದಲ್ಲಿ ಎರಡೂ ಪಕ್ಷಗಳ ಜಾಹೀರಾತುಗಳಿದ್ದವು. ‘ಅತ್ಯಾಚಾರ ಪ್ರಕರಣಗಳನ್ನು ರಾಜಕೀಯಗೊಳಿಸಬೇಡಿ’ ಎಂದಿದ್ದ ಪ್ರಧಾನಿಯವರ ಬಿಜೆಪಿ ಪಕ್ಷ ‘ಅತ್ಯಾಚಾರ'ವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು 'ಸಿದ್ಧ ಸರ್ಕಾರದ ನಿದ್ದೆ’ ಎಂಬ ಅಸಂಬದ್ಧ ಸಾಲುಗಳ ಜಾಹೀರಾತು ನೀಡಿದ್ದರು. ಪಕ್ಕದಲ್ಲಿದ್ದ ಕಾಂಗ್ರೆಸ್ ಪಕ್ಷದ ಜಾಹೀರಾತಿನಲ್ಲಿ ‘ಫೇಕು ಭರವಸೆಗಳ ಚಡ್ಡಿ ಸರ್ಕಾರ’ ಎಂಬ ವ್ಯರ್ಥ ಪ್ರಲಾಪವಿತ್ತು.
ಸಾಂದರ್ಭಿಕ ಚಿತ್ರ


ತಾವು ನೀಡಿದ ಆಡಳಿತದ ಆಧಾರದ ಮೇಲೆ ಮತ ಕೇಳಲಾರದಂತಹ ಸರಕಾರಗಳ ಚುನಾವಣಾ ಪ್ರಚಾರ ಬೇರೆ ರೀತಿಯಲ್ಲಿರಬೇಕೆಂದು ನಿರೀಕ್ಷೆ ಮಾಡುವುದು ನಮ್ಮದೇ ತಪ್ಪೇನೋ……

No comments:

Post a Comment