May 3, 2018

ನೀನೊಮ್ಮೆ ಹೆಣ್ಣಾಗಿ ಬಾ

ಪಮ್ಮಿದರಲಗೋಡು 
ಅತ್ಯುನ್ನತ ಸ್ಥಾನಕ್ಕೇರಿ ಅತ್ಯದ್ಭುತ ಶಕ್ತಿ ಪಡೆದೂ.. 
ಸಮಾಜ ಸಂಸಾರ ಸಂಪ್ರದಾಯಗಳ, 
ಆವರಣದೊಳಗೆ ಅನಾವರಣಗೊಳ್ಳುವ 
ಹೆಣ್ಣಿನ ಜೀವನದ ವಿವಿಧ ಮಜಲುಗಳಲ್ಲಿ 
ಎಲೆಮರೆಯ ಕಾಯಾಗಿ ಎಲ್ಲಿಯೂ ಸಲ್ಲದವಳಾಗಿ 
ಕಳೆದೇ ಹೋಗುವ ಪರಿಯ ಅರಿಯಲು 
ನೀನೊಮ್ಮ ಹೆಣ್ಣಾಗಿ ಬಾ..... 
ನಸೀಬಿನ ನವಾಬನಾದ ವಿಧಿಯೇ 
ನೀನೊಮ್ಮೆ ಹೆಣ್ಣಾಗಿ ಬಾ.... 

ಸೊಸೆಯಾಗಿ ಮಗಳಾಗಿ ಅತ್ತಿಗೆ ನಾದಿನಿಯಾಗಿ
 ಎಲ್ಲಾ ಸಂಬಂಧಗಳನ್ನೂ ಪ್ರತಿನಿಧಿಸುವ ಹೆಂಡತಿಯಾಗಿ 
ಏಕವ್ಯಕ್ತಿ ಅಭಿನಯ ಅನೇಕ ಎನ್ನುವಂತೆ 
ಸಂಬಂಧಗಳನ್ನೆಲ್ಲಾ ಉಳಿಸಿಕೊಂಡು 
ನಿಭಾಯಿಸುವ ಭರದಲ್ಲಿ... 
ತನ್ನನ್ನೇ ತಾನು ಕಳೆದುಕೊಂಡು 
ಬೇರೆಬೇರೆ ಪರಿಸ್ಥಿತಿ ಮನಸ್ಥಿತಿಗಳಲಿ 
ತಮ್ಮೊಳಗೆ ಕಿತ್ತಾಡಿಕೊಂಡು ಹಗೆ ಸಾಧಿಸುವ 
ಮಕ್ಕಳಲ್ಲಿ ಯಾರನ್ನೂ ದೂರಲಾಗದೇ 
ದೂರೀಕರಿಸಲಾಗದೇ.... 
ತಳಮಳಿಸಿ ಕಳವಳಿಸಿ ಕಂಗೆಡುವ ಕರುಳ 
ಸಂಕಟವನ್ನೊಮ್ಮೆ ಅರಿಯಬಹುದು..... 
ಸಂಬಂಧಗಳ ಹಳವಂಡಗಳಲ್ಲಿ ರ‍್ತವ್ಯದ 
ಜವಾಬ್ದಾರಿ ಕಿರುಕುಳಗಳಲ್ಲಿ ನರಳೀ ನರಳೀ 
ನಾಶವಾಗುವ ಹೆಣ್ಣಿನ ನೋವನರಿಯಲು 
ಸಾಧ್ಯವಾದರೇ ತಿದ್ದಿ ತೀಡಲು ದಯೆತೋರಿ 
ನೀನೊಮ್ಮೆ ಹೆಣ್ಣಾಗಿ ಬಾ..... 

ಬಂಧನದ ಆವರಣದೊಳಗೆ ಅನಾವರಣಗೊಳ್ಳುವ 
ಹೆಣ್ಣಿನ ಬದುಕಿನ ಬವಣೆಗಳ ನೋಡಲು , 
ಕಂಬನಿ ನೀಗಿಸಲು , 

ನಸೀಬಿನ ನವಾಬನಾದ ವಿಧಿಯೇ 
ನೀನೊಮ್ಮೆ ಹೆಣ್ಣಾಗಿ ಬಾ...... 

No comments:

Post a Comment