Nov 17, 2017

ಇಂಡಿಯಾದಲ್ಲಿ ಮತೀಯವಾದದ ರಾಜಕಾರಣದ ಬೆಳವಣಿಗೆಗೆ ಕಾರಣವಾದ ಅಂಶಗಳು!

ಕು.ಸ.ಮಧುಸೂದನರಂಗೇನಹಳ್ಳಿ
(ಇಂಡಿಯಾದ ರಾಜಕಾರಣದಲ್ಲಿ ಮತೀಯವಾದವೇನು ಇದ್ದಕ್ಕಿದ್ದಂತೆ ಸೃಷ್ಠಿಯಾಗಿದ್ದಲ್ಲ. ಬದಲಿಗೆ ಎಪ್ಪತ್ತರ ದಶಕದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರುಗಳು ತೆಗೆದುಕೊಂಡ ತಪ್ಪು ನಿರ್ದಾರಗಳಿಂದಾಗಿ ಮತ್ತು ತದನಂತರದಲ್ಲೂ ಸಿದ್ದಾಂತಕ್ಕಿಂತ ಅಧಿಕಾರವೇ ಮುಖ್ಯ ಎನ್ನುವ ರೀತಿಯಲ್ಲಿ ನಡೆದುಕೊಂಡಿದ್ದರಿಂದ ಮತೀಯವಾದ ಎನ್ನುವುದು ನಿದಾನವಾಗಿ ಇಂಡಿಯಾದ ರಾಜಕಾರಣದಲ್ಲಿ ವಿಷದಂತೆ ತುಂಬಿಕೊಳ್ಳತೊಡಗಿತು. ಇಂದಿನ ಯುವಜನತೆಗೆ ಇದರ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದಷ್ಟೆ ಈ ಲೇಖನದ ಉದ್ದೇಶ)

ಅದು ಶಕ್ತಿ ರಾಜಕಾರಣದ ಪಡಸಾಲೆಯೇ ಇರಲಿ, ವಿಚಾರವಂತರು ಮತ್ತು ಪ್ರಗತಿಪರರ ವೈಚಾರಿಕಗೋಷ್ಠಿಗಳಿರಲಿ, ಇಲ್ಲ ಅತಿ ಸಾಮಾನ್ಯಜನರ ಸರಳ ಮಾತುಕತೆಗಳ ಪಟ್ಟಾಂಗದಲ್ಲಿರಲಿ ಒಂದುಮಾತು ಮಾತ್ರ ಪದೆಪದೇ ಪುನರುಚ್ಚರಿಸಲ್ಪಡುತ್ತಿದೆ ಮತ್ತು ತೀವ್ರ ರೀತಿಯ ಚರ್ಚೆಗೆ ಗ್ರಾಸವಾಗುತ್ತಲಿದೆ: ಅದೆಂದರೆ ಇಂಡಿಯಾದಲ್ಲಿ ಮತಾಂಧ ರಾಜಕಾರಣ ಮೇಲುಗೈ ಸಾದಿಸುತ್ತಿದೆಮತ್ತು ಅದರ ಕಬಂದ ಬಾಹುಗಳು ಈ ನೆಲದ ಬುಡಕಟ್ಟುಜನಾಂಗಗಳನ್ನೂ ಸಹ ಆವರಿಸಿಕೊಳ್ಳುತ್ತಿದೆ ಅನ್ನುವುದಾಗಿದೆ.ನಿಜ ಇವತ್ತು ಮತೀಯ ರಾಜಕಾರಣ ಮಾಡುತ್ತಲೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಾಜಪ ದಿನೇದಿನೇ ತನ್ನ ಶಕ್ತಿಯನ್ನು ಮತ್ತು ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ.ಎಂಭತ್ತರ ದಶಕದಲ್ಲಿ ಶುರುವಾದ ಬಾಜಪದ ಕೋಮುರಾಜಕಾರಣವೀಗ ತನ್ನ ಉತ್ತುಂಗ ಸ್ಥಿತಿಯನ್ನು ತಲುಪಿದ್ದು ಈ ನಾಡಿನ ಜಾತ್ಯಾತೀತ ನೇಯ್ಗೆಯನ್ನು ಚಿಂದಿ ಮಾಡಿದೆ ಮತ್ತು ಮಾಡುತ್ತಿದೆ. ಈಹಿನ್ನೆಲೆಯಲ್ಲಿಯೇ ನಾವು ಬಾಜಪ ಹೇಗೆ ಬೆಳೆಯುತ್ತಬಂದಿತು ಮತ್ತು ಹೇಗೆ ತನ್ನ ಮತೀಯ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ಭಾರತೀಯರು ಒಪ್ಪುವಂತೆಮಾಡುವಲ್ಲಿ ಯಶಸ್ವಿಯಾಯಿತು ಎನ್ನುವುದನ್ನು ವಿಶ್ಲೇಷಿಸಿ ನೋಡಬೇಕಿದೆ. 
ಇದನ್ನು ಎರಡು ಹಿನ್ನೆಲೆಯಲ್ಲಿ ನೋಡಬಹುದಾಗಿದೆ, ಮೊದಲನೆಯದು ಎಪ್ಪತ್ತರ ದಶಕದಲ್ಲಿ ಪ್ರಾರಂಭಗೊಂಡ ರಾಜಕೀಯ ದೃವೀಕರಣ ಹೇಗೆ ಬಾಜಪಕ್ಕೆ ಅನುಕೂಲಕರವಾಗಿ ಪರಿಣಮಿಸಿತು ಎನ್ನುವುದಾದರೆ, ತೊಂಭತ್ತರ ದಶಕದಲ್ಲಿ, ಅನಿವಾರ್ಯತೆಯ ಹೆಸರಿನಲ್ಲಿ ನಾವು ಒಪ್ಪಿ-ಅಪ್ಪಿಕೊಂಡ ಜಾಗತೀಕರಣದ ನೀತಿಗಳು ಸಹ ಬಾಜಪದ ಮತೀಯವಾದದ ಬೆಳವಣಿಗೆಗೆ ಸಹಕಾರಿಯಾಗುತ್ತ ಹೋಯಿತು ಎನ್ನುವುದಾಗಿದೆ. ತೀರಾ ಕೂದಲು ಸೀಳುವಂತಹ ವಿಶ್ಲೇಷಣೆ ಮಾಡಲು ಹೋಗದೆ ಈ ಎರಡು ಸಂಗತಿಗಳು ಮತ್ತು ಅದಕ್ಕೆ ಪೂರಕವಾದ ಬೆಳವಣಿಗೆಗಳನ್ನು ಅವಲೋಕಿಸುತ್ತ ಹೋದರೆ ವಾಸ್ತವತೆ ಅರ್ಥವಾಗುತ್ತದೆ.

ಮೊದಲಿಗೆ ರಾಜಕೀಯ ಕಾರಣಗಳನ್ನೇ ನೋಡೋಣ:

ಮೊದಲ ಭಾಗ(1951ರಿಂದ1980)

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿಯವರು 1951ರಲ್ಲಿ ಭಾರತೀಯ ಜನಸಂಘ ಎಂಬ ಬಲಪಂಥೀಯ ಪಕ್ಷವನ್ನು ಸ್ಥಾಪಿಸಿದರು(ನಂತರದಲ್ಲಿ ಇದೇ ಪಕ್ಷ ಬಾಜಪ ಆಗಿ ಪರಿವರ್ತನೆಯಾಯಿತು) ರಾಷ್ಟ್ರೀಯವಾದದ ಹಿನ್ನೆಲೆಯಲ್ಲಿ ಸ್ಥಾಪಿತಗೊಂಡ ಜನಸಂಘ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಬೆಳೆಯಲು ತನ್ನ ಸಂಘ ಪರಿವಾರವನ್ನು ಬಳಸಿಕೊಂಡಿತು. ಆದರೆ ಅಷ್ಟರ ಮಟ್ಟಿಗೆ ಅದು ಸಫಲವಾಗಲಿಲ್ಲ. ಆರ್.ಎಸ್.ಎಸ್.ನಂತೆಯೇ ಈ ಪಕ್ಷವು ಸಹ ಹಿಂದುತ್ವವನ್ನೇ ತನ್ನ ಮೂಲಮಂತ್ರವನ್ನಾಗಿಸಿಕೊಂಡಿತ್ತು. 1952ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಬಾಗವಹಿಸಿ ಮೂರು ಸಂಸತ್ ಸ್ಥಾನಗಳನ್ನು ಮಾತ್ರಗೆಲ್ಲಲು ಶಕ್ತವಾಗಿತ್ತು. ಉತ್ತರದ ಕೆಲವು ರಾಜ್ಯಗಳಲ್ಲಿತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಸಫಲವಾದ ಜನಸಂಘ ರಾಷ್ಟ್ರೀಯಮಟ್ಟದಲ್ಲಿ ಸಫಲವಾಗಲು ಸಾದ್ಯವಾಗದೆ ಹೋದದ್ದರ ಹಿಂದೆ ಹಲವು ಕಾರಣಗಳಿದ್ದವು. ಅವುಗಳೆಂದರೆ:

1. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಜನತೆಗಿದ್ದ ಬಾವನಾತ್ಮಕ ಸಂಬಂದ

ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಬಾಗವಹಿಸಿ ಅದರ ನೇತೃತ್ವವನ್ನೂ ವಹಿಸಿದ್ದ ಕಾಂಗ್ರೆಸ್ ಪಕ್ಷವೇ ಭಾರತಕ್ಕೆ ಸ್ವಾತಂತ್ರ ದೊರೆಯಲು ಕಾರಣ ಎಂಬ ನಂಬಿಕೆ ಜನರ ಮನಸಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿತ್ತು. ಹೀಗಾಗಿ ತಮಗೆ ಸ್ವಾತಂತ್ರ ತಂದು ಕೊಟ್ಟ ರಾಷ್ಟ್ರೀಯ ಪಕ್ಷವನ್ನು ವಿರೋಧಿಸಿ ಮತ ಚಲಾಯಿಸಲು ಜನತೆಗೆ ಕಾರಣಗಳೇ ಇರಲಿಲ್ಲ.

2. ಬಲಿಷ್ಠ ನಾಯಕರುಗಳ ಉಪಸ್ಥಿತಿ:

ಅಂದಿನ ಕಾಂಗ್ರೆಸ್ನಲ್ಲಿ ಘಟಾನುಘಟಿ ನಾಯಕರುಗಳಿದ್ದು ಅವರೆಲ್ಲರೂ ಸ್ವಾತಂತ್ರ ಹೋರಾಟದ ಮುಂಚೂಣಿಯಲ್ಲಿದ್ದು ಜನರಿಗೆ ಚಿರಪರಿಚಿತರಾಗಿದ್ದವರು. ಇಂತಹ ನಾಯಕತ್ವದ ಕೊರತೆ ಜನಸಂಘಕ್ಕೆ ಇತ್ತು

3. ಸಡಿಲಗೊಂಡಿರದ ಜಾತ್ಯಾತೀತ ಸಮಾಜ:

ಅಂದಿನ ಮಟ್ಟಿಗೆ ಸ್ವಾತಂತ್ರ ಹೋರಾಟದ ಆದರ್ಶಗಳು ಜೀವಂತವಾಗಿದ್ದು, ದೇಶವಿಭಜನೆಯ ಸಮಯದ ಕೋಮು ಸಂಘರ್ಷಗಳ ನಂತರವೂ ಧಾರ್ಮಿಕ ಸಾಮರಸ್ಯಕ್ಕೇನು ಧಕ್ಕೆಯಾಗಿರಲಿಲ್ಲ. ಹೀಗಾಗಿ ಜನಸಂಘದ ಹಿಂದುತ್ವಕ್ಕೆ ಜನ ಮನ್ನಣೆ ದೊರಕಿರಲಿಲ್ಲ.

4. ಗಾಂದಿ ಹತ್ಯೆಯ ಆರೋಪದ ಕಳಂಕ:

1948ರ ಗಾಂದಿ ಹತ್ಯೆಯ ನೆನಪು ಜನರಿಂದ ಮರೆಯಾಗಿರಲಿಲ್ಲ ಅದರ ಆರೋಪದ ಉರುಳು ಸಂಘ ಪರಿವಾರಕ್ಕೆ ತಗುಲಿ ಹಾಕಿಕೊಂಡಿದ್ದು ಜನರಿಗೆ ಜನಸಂಘದ ಬಗ್ಗೆ ಒಲವು ಬರುವುದು ಆ ಕ್ಷಣಕ್ಕೆ ಸಾದ್ಯವಾಗಲಿಲ್ಲ.

ಈ ಎಲ್ಲ ಕಾರಣಗಳಿಂದಾಗಿ ಜನಸಂಘ ರಾಜಕೀಯವಾಗಿ ರಾಷ್ಟ್ರಮಟ್ಟದಲ್ಲಿ ತನ್ನ ಬೇರುಗಳನ್ನು ಬಿಡಲು ಸಾದ್ಯವಾಗಲಿಲ್ಲ.

ಇವೆಲ್ಲ ಕಾರಣಗಳಿಂದಾಗಿ ಎಪ್ಪತ್ತರ ದಶಕದವರೆಗು ಅದು ರಾಜಕೀಯವಾಗಿ ಅಸ್ಪೃಷ್ಯವಾಗಿಯೆ ಇರಬೇಕಾಗಿದ್ದ ಸನ್ನಿವೇಶ ನಿರ್ಮಾಣವಾಗಿತ್ತು. 

ಎಪ್ಪತ್ತರ ದಶಕದಲ್ಲಿ ಅಂದಿನ ಪ್ರದಾನಮಂತ್ರಿಯಾಗಿದ್ದ ದಿವಂಗತ ಶ್ರೀಮತಿ ಇಂದಿರಾಗಾಂದಿಯವರು ಪ್ರಬಲವಾಗಿದ್ದರು. ಅಲಹಾಬಾದ್ ಉಚ್ಚನ್ಯಾಯಾಲಯದ ತೀರ್ಪಿನ ನಂತರ ಅವರು ದೇಶದ ಮೇಲೆ ಆಂತರಿಕ ತುತರ್ುಪರಿಸ್ಥಿತಿಯನ್ನು ಹೇರಿದಾಗ ವಿರೋಧ ಪಕ್ಷಗಳು ಅದರ ವಿರುದ್ದ ಹೋರಾಟ ಶುರು ಮಾಡಿದವು. ಕಾಂಗ್ರೆಸ್ಸಿನ  ವಂಶಪಾರಂಪರ್ಯ ಆಡಳಿತದ ಬಗ್ಗೆ ಕೆಂಡ ಕಾರುತ್ತಿದ್ದ ಅವತ್ತಿನ ಸಮಾಜವಾದಿಗಳು ಭಾರತೀಯ ಲೋಕದಳ ಜನಸಂಘ, ಸ್ವತಂತ್ರಪಕ್ಷ, ಸೋಷಿಯಲಿಸ್ಟ್ ಪಕ್ಷಗಳು ಜೊತೆ ನೀಡಿದ್ದವು. ತುರ್ತುಪರಿಸ್ಥಿತಿಯ ಈ ಹೋರಾಟದಲ್ಲಿ ಜನಸಂಘದ ಅಂಗಸಂಸ್ಥೆಯಾದ ಆರ್.ಎಸ್.ಎಸ್. ತನ್ನ ಕಾರ್ಯಕರ್ತರುಗಳ ಮೂಲಕ ರಾಷ್ಟ್ರದಾದ್ಯಂತ ಜನರಲ್ಲಿ ಎಚ್ಚರ ಮೂಡಿಸುವಲ್ಲಿ ಸಕ್ರಿಯ ಪಾತ್ರ ವಹಿಸಿತ್ತು. ಕಾಂಗ್ರೆಸ್ಸಿನ ಸರ್ವಾಧಿಕಾರಿ ನಡೆಯ ವಿರುದ್ದದ ಹೋರಾಟದ ನೇತೃತ್ವವನ್ನು ಶ್ರೀ ಜಯಪ್ರಕಾಶ್ ನಾರಾಯಣ್ ಅವರು ವಹಿಸಿದ್ದರು. ಶ್ರೀ ಜೀವಿತ್ ರಾಂ ಕೃಪಲಾನಿ, ರಾಜ್ ನಾರಾಯಣ್,ಸತ್ಯೇಂದ್ರ ನಾರಾಯಣ್ ಸಿನ್ನಾ, ಬಿಜು ಪಟ್ನಾಯಕ್, ಮೋರಾರ್ಜಿ ದೇಸಾಯಿ ಮುಂತಾದವರು ಜಯಪ್ರಕಾಶ್ ನಾರಾಯಣರ ಜೊತೆ ನೀಡಿದ್ದರು. ಆಗ ರಾಷ್ಟ್ರದಾದ್ಯಂತ ವಿರೋದಪಕ್ಷಗಳ ನಾಯಕರುಗಳು ಜೈಲಿಗೆ ಹೋಗಬೇಕಾಗಿ ಬಂತು.

ಇಪ್ಪತ್ತು ತಿಂಗಳ ನಂತರ ತನ್ನ ತಪ್ಪಿನ ಅರಿವು ಮಾಡಿಕೊಂಡ ಪ್ರದಾನಿ ಶ್ರೀಮತಿ ಇಂದಿರಾಗಾಂದಿಯವರು 1977ರ ಜನವರಿ 18ರಂದು ಆಂತರಿಕ ತುರ್ತುಪರಿಸ್ಥಿತಿಯನ್ನು ಹಿಂಪಡೆದರು. ಆಗ ವಿರೋಧಪಕ್ಷಗಳ ನಾಯಕರುಗಳು ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಎದುರಿಸುವ ಕುರಿತಾಗಿ ಶ್ರೀ ಜಯಪ್ರಕಾಶ್ ನಾರಾಯಣ್ ಅವರನ್ನು ಬೇಟಿಯಾಗಿ ಮಾತುಕತೆ ನಡೆಸಿದ್ದರು. ಆಗ ಅವರು ವಿರೋಧ ಪಕ್ಷಗಳೆಲ್ಲ ಒಂದೇ ವೇದಿಕೆಯ ಅಡಿಯಲ್ಲಿ ಬಂದು ಕಾಂಗ್ರೆಸ್ ಪಕ್ಷವನ್ನು ಎದುರಿಸಬೇಕೆಂದು ನೀಡಿದ ಸೂಚನೆಯನ್ನು ಬಹುತೇಕ ವಿರೋದಪಕ್ಷಗಳು ಒಪ್ಪಿಕೊಂಡವು. ನಂತರ ಐದೇ ದಿನಗಳೊಳಗಾಗಿ 1977ರ ಜನವರಿ 23 ರಂದು ಜನತಾ ಪಕ್ಷ ಅಸ್ಥಿತ್ವಕ್ಕೆ ಬಂತು. ಜನತಾಮೋರ್ಚಾ, ಭಾರತೀಯ ಕ್ರಾಂತಿ ದಳ, ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ, ಉತ್ಕಲ ಕಾಂಗ್ರೆಸ್, ಕಾಂಗ್ರೆಸ್ ಒ), ಕಾಂಗ್ರೆಸ್ ಫಾರ್ ಡೆಮಾಕ್ರೆಸಿ, ಭಾರತೀಯ ಜನಸಂಘ(ಇವತ್ತಿನ ಬಾಜಪ) ಮುಂತಾದ ಹಲವು ಪಕ್ಷಗಳು ಈ ಜನತಾಪಕ್ಷದ ಒಳಗೆ ವಿಲೀನಗೊಂಡವು. ನಂತರದಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿನಿಂದ ಬಂಡಾಯವೆದ್ದು ಹೊರಬಂದ ಚಂದ್ರೇಶೇಖರ್, ಕೃಷ್ಣಪಂತ್, ರಾಮ್ದನ್, ಮೋಹನ್ ದಾರಿಯಾ, ಚಂದ್ರಜಿತ್ ಯಾದವ್ ಮುಂತಾದ ನಾಯಕರುಗಳು ಸಹ ಜನತಾಪಕ್ಷವನ್ನು ಸೇರಿಕೊಂಡರು. ನೇಗಿಲ ಹೊತ್ತ ರೈತನ ಚಿಹ್ನೆ ಪಡೆದ ಜನತಾಪಕ್ಷವೇನೊ ಅಸ್ಥಿತ್ವಕ್ಕೆ ಬಂತು. ಆದರೆ ಆರಂಭದಲ್ಲಿಯೇ ಕೆಲವು ಅಪಸ್ವರಗಳು ಕೇಳಿಬಂದವು. ಅದರಲ್ಲಿ ಬಹುಮುಖ್ಯವಾದದ್ದು ಭಾರತೀಯ ಜನ ಸಂಘದ ಸೇರ್ಪಡೆಯ ಕುರಿತಾದ ಅಸಮಾದಾನವೇ ಪ್ರಮುಖವಾಗಿತ್ತು..ಯಾಕೆಂದರೆ ಬಹುತೇಕ ಕಾಂಗ್ರೆಸ್ ವಿರೋಧಿ ನಾಯಕರುಗಳು ಸಮಾಜವಾದಿ ಚಿಂತನೆಯ ಮೂಸೆಯಲ್ಲೆ ಬೆಳೆದು ಬಂದವರಾಗಿದ್ದು ಧರ್ಮಾದಾರಿತ ರಾಜಕಾರಣವನ್ನೂ ಅಷ್ಟೇ ನಿಷ್ಠೂರವಾಗಿ ವಿರೋಧಿಸುತ್ತಿದ್ದವರು. ಸಂಘಪರಿವಾರದ ಒಡಲಿನಿಂದ ಹುಟ್ಟಿದ್ದ ಜನ ಸಂಘದ ಮತೀಯ ರಾಜಕಾರಣದ ಬಗ್ಗೆ ಒಂದು ಅನುಮಾನವನ್ನಿಟ್ಟು ಕೊಂಡೆ ಜನತಾ ಪಕ್ಷದ ಇತರೇ ನಾಯಕರುಗಳು ಜನಸಂಘದ ಸೇರ್ಪಡೆಯನ್ನು ವಿರೋದಿಸಿದ್ದರು. ಆದರೆ ಕಾಂಗ್ರೆಸ್ ಎಂಬ ಬಲಿಷ್ಠ ಶಕ್ತಿಯನ್ನು ಸೋಲಿಸಲು ಎಲ್ಲ ಸಿದ್ದಾಂತಗಳ ಪಕ್ಷಗಳೂ ಒಂದಾಗಿ ಚುನಾವಣೆ ಎದುರಿಸಬೇಕಾಗಿರುವುದು ಚಾರಿತ್ರಿಕ ಅನಿವಾರ್ಯವೆಂಬ ಅರ್ಥದಲ್ಲಿ ಮಾತನಾಡಿದ ಜಯಪ್ರಕಾಶ್ ನಾರಾಯಣರ ಸೂಚನೆಯ ಮೇರೆಗೆ ಉಳಿದ ನಾಯಕರು ಮೌನವಾಗಿ ಉಳಿಯ ಬೇಕಾಯಿತು. ಸ್ವಾತಂತ್ರಾ ನಂತರದ ಭಾರತದ ಇತಿಹಾಸದಲ್ಲಿ ಸಮಾಜವಾದಿ ನಾಯಕರುಗಳು ಮಾಡಿದ ಐತಿಹಾಸಿಕ ಪ್ರಮಾದ ಇದೆಂದರೂ ತಪ್ಪೇನಿಲ್ಲ!

ನಂತರ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಗೆಲುವು ಸಾಧಿಸಿ ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರವೊಂದು ಅಸ್ಥಿತ್ವಕ್ಕೆ ಬಂತು. ಮೊರಾರ್ಜಿದೇಸಾಯಿಯವರು ಪ್ರದಾನಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು.(ಆ ಬಗೆಗಿನ ಹೆಚ್ಚಿನ ವಿವರಗಳಿಗೆ ನಾನಿಲ್ಲಿ ಹೋಗುವುದಿಲ್ಲ)

ಆದರೆ ದಿನೆದಿನೆ ಸರಕಾರ ಮತ್ತು ಪಕ್ಷದೊಳಗಿನ ಅಂತರೀಕ ಭಿನ್ನಮತಹೆಚ್ಚುತ್ತಾ ಹೋಯಿತು. ಕಾಂಗ್ರೆಸ್ ಪಕ್ಷವನ್ನು ವಿರೋದಿಸುವ ನೆಪದಲ್ಲಿ ರಚನೆಯಾದ ಜನತಾಪಕ್ಷದ ಹುಟ್ಟಿನಲ್ಲೇ ಸಾಕಷ್ಟು ವೈರುದ್ಯಗಳಿದ್ದವು. ಹುಟ್ಟು ಸಮಾಜವಾದಿಗಳು, ಟ್ರೇಡ್ ಯೂನಿಯನ್ ನಾಯಕರುಗಳು, ಉದ್ಯಮಿಗಳ ಪ್ರತಿನಿದಿಗಳು, ಮತೀಯವಾದಿಗಳು ಒಂದೇ ಪಕ್ಷದೊಳಗಿದ್ದು ಸರಕಾರ ನಡೆಸುವುದು ಕಷ್ಟಕರವಾದ ವಿಷಯವಾಗಿತ್ತು. ಮತೀಯವಾದದ ವಿರೋದಿಗಳಾಗಿದ್ದ ಸಮಾಜವಾದಿಗಳಿಗೆ ಜನಸಂಘದ ಬಲಪಂಥೀಯ ನಾಯಕರುಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ಮತ್ತು ಕೆಲಸ ಮಾಡುವುದು ಕಿರಿಕಿರಿ ಉಂಟು ಮಾಡ ತೊಡಗಿತು. ಸರಕಾರದಲ್ಲಿ ಮಹತ್ವದ ಖಾತೆಗಳನ್ನು ಹೊಂದಿದ್ದ ಜನಸಂಘದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀ ಲಾಲ್ ಕೃಷ್ಣ ಅದ್ವಾನಿಯವರು ಮೂಲತ:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿ ಬೆಳೆದು ಬಂದವರಾಗಿದ್ದು ಜನತಾಪಕ್ಷದಲ್ಲಿ ವಿಲೀನವಾದ ನಂತರವೂ ತಮ್ಮ ಸಂಘದ ಸದಸ್ಯತ್ವವನ್ನು ಉಳಿಸಿಕೊಂಡೆ ಬಂದಿದ್ದರು. ಈ ದ್ವಿಸದಸ್ಯತ್ವದ ವಿಚಾರ ಪಕ್ಷದೊಳಗೆ ಬಿರುಗಾಳಿ ಎಬ್ಬಿಸಿತು. ಮಧುಲಿಮಯೆ ಅಂತಹ ಹಿರಿಯ ನಾಯಕರುಗಳು ಜನಸಂಘದ ನಾಯಕರುಗಳ ದ್ವಿಸದಸ್ಯತ್ವವನ್ನು ವಿರೋಧಿಸಿದರು. ಆಗ ಪಕ್ಷದೊಳಗಿನ ಕೆಲವರು ವಾಜಪೇಯಿ ಮತ್ತು ಅದ್ವಾನಿಯವರು ಪಕ್ಷದೊಳಗೆ ಮುಂದುವರೆಯ ಬೇಕೆಂದಿದ್ದರೆ 'ರಾಷ್ಟ್ರೀಯ ಸ್ವಯಂ ಸೇವಕ ಸಂಘ'ದ ಸದಸ್ಯತ್ವವನ್ನು ತೊರೆಯಬೇಕೆಂದು ಒತ್ತಾಯಿಸಿದರು. ಆದರೆ ಸಂಘ ನಿಷ್ಠೆಗೆ ಹೆಸರಾಗಿದ್ದ ವಾಜಪೇಯಿ ಮತ್ತು ಅದ್ವಾನಿಯವರು ಸಂಘದ ಸದಸ್ಯತ್ವ ತೊರೆಯಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಅವರು ಸರಕಾರದ ಮತ್ತು ಪಕ್ಷದ ಹುದ್ದೆಗಳಿಗೆ ರಾಜಿನಾಮೆ ನೀಡಿ ಹೊರ ಬಂದರು. ತದನಂತರ ತನ್ನ ಆಂತರಿಕ ಕಚ್ಚಾಟಗಳಿಂದ ಜನತಾ ಪಕ್ಷ ನುಚ್ಚುನೂರಾಗಿ 1980 ರ ಚುನಾವಣೆಯಲ್ಲಿ ಸೋಲಬೇಕಾಗಿ ಬಂತು. ಮತ್ತೆ ಕಾಂಗ್ರೆಸ್ಸಿನ ಶ್ರೀಮತಿ ಇಂದಿರಾ ಗಾಂದಿಯವರು ಪ್ರದಾನಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು. (ಇರಲಿ, ಅದರ ವಿವರಗಳಿಲ್ಲಿ ಅಪ್ರಸ್ತುತ!)

ಮೇಲಿನ ಎಲ್ಲಾ ಬೆಳವಣಿಗೆಗಳನ್ನು ನಾನು ಹೇಳಿದ್ದು ಜನಸಂಘ ಎನ್ನುವ ಬಲಪಂಥೀಯ ಪಕ್ಷ ರಾಷ್ಟ್ರಮಟ್ಟದಲ್ಲಿ ಹೇಗೆ ತನ್ನ ಇರುವಿಕೆಯನ್ನು ಪ್ರದರ್ಶಿಸಲು ಶಕ್ತವಾಯಿತು ಎನ್ನುವುದರ ಬಗ್ಗೆ. 1977ರವರೆಗು ರಾಜಕೀಯ ಅಸ್ಪೃಶ್ಯತೆಯಿಂದ ಬಳಲುತ್ತಿದ್ದ ಜನಸಂಘಕ್ಕೆ 1977ರ ತುರ್ತುಪರಿಸ್ಥಿತಿ ಸಂಜೀವಿನಿಯಾಗಿ ಒದಗಿ ಬಂತು. ಅದರಲ್ಲೂ ಜನತಾಪಕ್ಷದೊಳಗೆ ವಿಲೀನವಾಗಿ ಸರಕಾರದಲ್ಲಿ ಪ್ರಬಾವಶಾಲಿ ಹುದ್ದೆಗಳನ್ನು ಪಡೆಯುವುದರ ಮೂಲಕ ರಾಷ್ಟ್ರದ ಎಲ್ಲ ವರ್ಗಗಳ ಜನರ ಗಮನ ಸೆಳೆಯಿತು. ಅದಕ್ಕೊಂದು ಅಧಿಕೃತ ಮನ್ನಣೆ ದೊರೆತಂತಾಗಿ ಬಿಟ್ಟಿತು. ಸ್ವಾತಂತ್ರಹೋರಾಟದಲ್ಲಿ ಬಾಗವಹಿಸಿಲ್ಲವೆಂಬ ಕಳಂಕದಿಂದ ಹೊರಬರಲು ಈ ಅವಕಾಶವನ್ನು ಅದು ಬಳಸಿಕೊಂಡಿತು. ಇಷ್ಟಲ್ಲದೆ ಜನಸಂಘದ ನಾಯಕರುಗಳು ಸರಕಾರದಲ್ಲಿದ್ದಾಗ ಸಂಘಪರಿವಾರ ತನ್ನ ಕಬಂದ ಬಾಹುಗಳನ್ನು ದೇಶದಾದ್ಯಂತ ವಿಸ್ತರಿಸಲು ಸಾದ್ಯವಾಯಿತು. ಇದರ ಒಟ್ಟು ಅರ್ಥವೇನೆಂದರೆ ಕಾಂಗ್ರೆಸ್ಸಿನ ವಂಶಪಾರಂಪರ್ಯ ಆಡಳಿತವನ್ನು ಎದುರಿಸುವ ಭರದಲ್ಲಿ ನಮ್ಮ ವಿರೋದಪಕ್ಷಗಳ ನಾಯಕರುಗಳು ಭಾರತೀಯ ಜನಸಂಘವನ್ನು ಮುಖ್ಯ ವಾಹಿನಿಗೆ ತರಲು ಅವಕಾಶ ಮಾಡಿಕೊಟ್ಟರು. ಈ ಅವಧಿಯಲ್ಲಿ 'ರಾಷ್ಟ್ರೀಯ ಸ್ವಯಂ ಸೇವಕ ಸಂಘ'ವು ಸಹ ಇದನ್ನು ತನ್ನ ವಿಸ್ತರಣೆಗೆ ಬಳಸಿಕೊಂಡಿತು. ಮತೀಯ ರಾಜಕಾರಣದ ಬೀಜ ಬಿತ್ತನೆಗೆ ಸಮಾಜವಾದಿಗಳು ಜನಸಂಘಕ್ಕೆ ಭಾರತವೆಂಬ ಭೂಮಿಯನ್ನು ಹಸನು ಮಾಡಿಕೊಟ್ಟಿದ್ದರು. ಲೋಕಸಭೆಯಲ್ಲಿ ನಗಣ್ಯವಾಗಿದ್ದ ಬಲಪಂಥೀಯ ಪಕ್ಷವೊಂದು 1977ರ ಹೊತ್ತಿಗೆ 93 ಸದಸ್ಯರನ್ನು ಆರಿಸಿ ತರುವ ಮಟ್ಟಕ್ಕೆ ಬೆಳೆಯಲು ಜನತಾಪಕ್ಷದ ಆಸರೆಯೇ ಕಾರಣವಾಗಿತ್ತು. ಅಂದಿನ ಜನಸಂಘ ಈ ಅವಕಾಶವನ್ನು ತನಗೆ ಅನುಕೂಲವಾಗುವಂತೆ ಬಳಸಿಕೊಳ್ಳಲು ಜನತಾಪಕ್ಷದಿಂದ ಹೊರಬಂದು ತನ್ನ ಸ್ವತಂತ್ರ ಅಸ್ಥಿತ್ವ ಹೊಂದಲು ಪ್ರಯತ್ನಿಸ ತೊಡಗಿತು.

ಎರಡನೇ ಭಾಗ(1980ರಿಮದ2014ರವರೆಗೆ)

ನಂತರ 1980ರಲ್ಲಿ ಬದಲಾದ ಸನ್ನಿವೇಶದಲ್ಲಿ ಬಾಹ್ಯವಾಗಿ ತನ್ನ ಚಹರೆಯನ್ನು ಬದಲಾಯಿಸಿಕೊಳ್ಳುವ ತಂತ್ರಕ್ಕೆ ಮೊರೆಹೋದ ಜನಸಂಘ 'ಭಾರತೀಯ ಜನತಾ ಪಕ್ಷ'(ಬಾಜಪ) ಎನ್ನುವ ಹೆಸರಲ್ಲಿ ಹೊಸದಾಗಿ ಜನ್ಮತಳೆಯಿತು. ಶ್ರೀಅಟಲ್ ಬಿಹಾರಿವಾಜಪೇಯಿ ಮತ್ತು ಶ್ರೀಲಾಲ್ ಕೃಷ್ಣ ಅದ್ವಾನಿಯವರ ನೇತೃತ್ವದಲ್ಲಿ ನೂತನವಾಗಿ ರಚನೆಯಾದ ಬಾಜಪ ಮೊದಲ ಬಾರಿಗೆ ಗಾಂದಿವಾದದ ಬಗ್ಗೆ ಮಾತನಾಡುತ್ತ ಎಲ್ಲ ವರ್ಗಗಳ ಗಮನಸೆಳೆಯಲು ಪ್ರಯತ್ನಿಸ ತೊಡಗಿತ್ತು. 1984 ರ ಚುನಾವನೆಗಳಲ್ಲಿ ಅದು ಎರಡು ಸಂಸತ್ ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾದರು ಸಹ ಇಂಡಿಯಾದ ಮತದಾರರ ಗಮನ ಸೆಳೆಯಲು ಸಫಲವಾಯಿತು. 1984 ರಿಂದ 1989ರ ಅವಧಿಯಲ್ಲಿ ಅದು ತನ್ನ ಸಂಘಪರಿವಾದ ಸಹಾಯದಿಂದ ಕೆಳಮಟ್ಟದಲ್ಲಿ ತನ್ನ ಬೇರುಗಳನ್ನು ಬಿಡಲು ಪ್ರಾರಂಬಿಸಿತು. ಅಂದಿನ ಕಾಂಗ್ರೆಸ್ಸಿನ ಅನನುಭವಿ ಪ್ರದಾನಮಂತ್ರಿಯಾಗಿದ್ದ ಶ್ರೀ ರಾಜೀವ್ ಗಾಂದಿಯವರ ಎರಡು ತಪ್ಪು ನಡೆಗಳನ್ನು ಬಳಸಿಕೊಂಡ ಬಾಜಪ 1989ರ ಹೊತ್ತಿಗೆ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಪರಿವರ್ತನೆಯಾಗಿತ್ತು. ಶಾಬಾನು ಕೇಸಿನಲ್ಲಿ ಅಲ್ಪಸಂಖ್ಯಾತರನ್ನು ಓಲೈಸಲು ರಾಜೀವ್ ಗಾಂದಿ ತೆಗೆದುಕೊಂಡ ತೀರ್ಮಾನ ಹಿಂದುಗಳ ದೃಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಪುಷ್ಟೀಕರಿಸುವ ಪಕ್ಷವೆಂದೂ, ಬಾಜಪ ಮಾತ್ರ ಹಿಂದೂಗಳ ಹಿತ ಕಾಯುವ ಪಕ್ಷವೆಂಬ ಬಾವನೆ ಸೃಷ್ಠಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ನಂತರವೂ ರಾಜೀವರು ದಶಕಗಳ ಕಾಲ ನ್ಯಾಯಾಲದಲ್ಲಿದ್ದ ವ್ಯಾಜ್ಯದ ಕಾರಣದಿಂದಾಗಿ ಬೀಗ ಮುದ್ರೆ ಬಿದ್ದಿದ್ದ ಬಾಬರಿ ಮಸೀದಿಯ ಬೀಗ ತೆರೆದು ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಲು ತೆಗೆದುಕೊಂಡ ನಿರ್ದಾರದಿಂದ ಅದುವರೆಗು ಬೂದಿ ಮುಚ್ಚಿದ ಕೆಂಡದಂತಿದ್ದ ಬಾಬರಿ ಮಸೀದಿ ವಿವಾದ ಭುಗಿಲೆದ್ದಿತು. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಬಾಜಪ ಸಂಘ ಪರಿವಾರದೊಂದಿಗೆ ಯೋಜನೆಗಳನ್ನು ರೂಪಿಸತೊಡಗಿತು. 

1989ರ ಸಾರ್ವತ್ರಿಕ ಚುನಾವಣೆಯಲ್ಲಿ ಬಾಜಪ ಉತ್ತಮ ಸಾದನೆ ಮಾಡಿ 85 ಸಂಸತ್ ಸದಸ್ಯರನ್ನು ಗೆಲ್ಲಿಸಿಕೊಂಡು ಬೀಗಿತು. ಆಗ ವಿ.ಪಿ.ಸಿಂಗ್ ನೇತೃತ್ವದ ಜನತಾದಳ ತೃತೀಯ ರಂಗ ರಚಿಸಿ ಸರಕಾರ ರಚನೆಗೆ ಮುಂದಾದಾಗ ಅನಿವಾರ್ಯವಾಗಿ ಬಾಜಪದ ಬೆಂಬಲ ಕೇಳಬೇಕಾಗಿ ಬಂತು. ಅದೇ ಸಮಯದಲ್ಲಿ ಎಡಪಕ್ಷಗಳು ಸಹ ತೃತೀಯರಂಗಕ್ಕೆ ಬೆಂಬಲ ನೀಡಿದ್ದವು. ವಿ.ಪಿ.ಸಿಂಗ್ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಲು ಬಾಜಪ ನಿರ್ದರಿಸಿತು. ಹಾಗಾಗಿ ಮತೀಯ ಶಕ್ತಿಗಳನ್ನು ವಿರೋಧಿಸುವ ಮಾತಾಡುತ್ತಿದ್ದ ಎಡಪಕ್ಷಗಳು ಸಹ ವಿಪಿ ಸಿಂಗ್ ಸರಕಾರ ರಚನೆಗೆ ಬಾಜಪದ ಜೊತೆ ಕೈಜೋಡಿಸಿದಂತಾಗಿ ಬಾಜಪಕ್ಕೆ ರಾಜಕೀಯವಾಗಿ ಇನ್ನಷ್ಟು ಮನ್ನಣೆ ದೊರಕಿದಂತಾಯಿತು. ಆದರೆ ತನ್ನ ಒಳಗಿನ ತಿಕ್ಕಾಟಗಳಿಂದ ಆ ಸರಕಾರ ಬಹಳ ಕಾಲಬದುಕುಳಿಯಲಿಲ್ಲ. ಆದರೆ ಈ ಅವಧಿಯಲ್ಲಿ ಬಾಜಪ ಬಾಬ್ರಿ ಮಸೀದಿ ವಿವಾದವನ್ನು ಬಳಸಿಕೊಂಡು ಅಯೋದ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಬೇಡಿಕೆ ಇಟ್ಟು ಹೋರಾಟ ಪ್ರಾರಂಬಿಸಿತು. ಶ್ರೀ ಎಲ್.ಕೆ.ಅದ್ವಾನಿಯವರು ದೇಶದಾದ್ಯಂತ ರಥಯಾತ್ರೆ ಕೈಗೊಂಡರು. ಅದುವರೆಗು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದ ಸಂಘ ಪರಿವಾರದ ಅಷ್ಟೂ ಸಂಘಟನೆಗಳು ಬಹಿರಂಗವಾಗಿ ರಾಮಮಂದಿರ ನಿರ್ಮಾಣದ ಚಳುವಳಿಯಲ್ಲಿ ತೊಡಗಿಕೊಂಡವು. ಇಂಡಿಯಾದ ಉದದ್ದಗಲಕ್ಕೂ ಬಾಜಪದ ಹಿಂದುತ್ವವಾದದ ಸಿದ್ದಾಂತ ಹರಡತೊಡಗಿತು. ಇಡೀ ರಾಷ್ಟ್ರದಲ್ಲಿ ಮತೀಯ ನೆಲೆಯಲ್ಲಿ ರಾಜಕಾರಣ ಪ್ರಾರಂಭವಾಗಿ ಧರ್ಮದ ಆಧಾರದಲ್ಲಿ ಧಾರ್ಮಿಕ ಸಮುದಾಯಗಳು ದೃವೀಕರಣಗೊಳ್ಳತೊಡಗಿದವು. 

1991ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ರಾಜೀವ್ ಗಾಂದಿಯವರ ಹತ್ಯೆಯ ಅನುಕಂಪದಿಂದಾಗಿ 244 ಸ್ಥಾನಗಳನ್ನು ಗೆದ್ದು ಅಧಿಕಾರವನ್ನೇನೊ ಹಿಡಿಯಿತು. ಆದರೆ ಅಲ್ಲಿವರೆಗು ಎರಡನೆ ಸ್ಥಾನದಲ್ಲಿದ್ದ ಜನತಾದಳ ಮೂರನೇ ಸ್ಥಾನಕ್ಕೆ ಕುಸಿದು ಬಾಜಪ 120 ಸ್ಥಾನಗಳನ್ನು ಪಡೆದು ಅಧಿಕೃತ ವಿರೋಧ ಪಕ್ಷದಮನ್ನಣೆ ಪಡೆಯಿತು. ಮತೀಯವಾದದ ರಾಜಕಾರಣದ ಬಗ್ಗೆ ಬಾಜಪಕ್ಕೆ ಅದುವರೆಗು ಇದ್ದ ಮುಜುಗರ ಇನ್ನಿಲ್ಲವಾಗಿ ಬಹಿರಂಗವಾಗಿಯೇ ಮತೀಯ ರಾಜಕಾರಣ ಮಾಡತೊಡಗಿತು. ಇದರ ಪರಿಣಾಮವಾಗಿ 1992ರ ಡಿಸೆಂಬರಿನಲ್ಲಿ ಬಾಬರಿ ಮಸೀದಿ ದ್ವಂಸ ಪ್ರಕರಣ ಸಂಭವಿಸಿತು. ಇದರಿಂದಾಗಿ ದೇಶದ ಸಾಮಾನ್ಯರ ಕಣ್ಣುಗಳಲ್ಲಿ ಬಾಜಪ ಹಿಮದೂಧರ್ಮ ರಕ್ಷಣೆಯ ಪಕ್ಷವಾಗಿ ಕಾಣತೊಡಗಿತು. 

ಈ ಅವಧಿಯಲ್ಲಿದ್ದ ಕಾಂಗ್ರೆಸ್ ಸರಕಾರದಲ್ಲಿ ಆರ್ಥಿಕಸಚಿವರಾಗಿದ್ದ ಶ್ರೀಮನಮೋಹನ ಸಿಂಗ್ ಜಾರಿಗೆ ತಂದ ಮುಕ್ತ ಆರ್ಥಿಕ ನೀತಿ ದೇಶದಲ್ಲಿ ಹೊಸ ಬದಲಾವಣೆಯನ್ನುತಂದಿತು. ಖಾಗೀಕರಣದ ಪ್ರಕ್ರಿಯೆ ವೇಗವಾಗಿ ನಡೆಯತೊಡಗಿತು ಪರಂಪರಾನುಗತವಾಗಿ ಬಾಜಪವನ್ನು ಬೆಂಬಲಿಸುತ್ತಿದ್ದ ಫಲಾನುಭವಿಗಳಾಗಿ ಬಾಜಪದ ಮತೀಯವಾದದ ಪ್ರಬಲ ವಕ್ತಾರರಾಗಿ ಬದಲಾಗುತ್ತ ಹೋದರು. ಇಂತಹ ನವಸಾಕ್ಷರಸ್ಥರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದು ಬಾಜಪಕ್ಕೆ ವರದಾನವಾಗುತ್ತ ಹೋಯಿತು. ಎಂಭತ್ತರ ದಶಕದ ನಂತರ ಹುಟ್ಟಿದಹೊಸ ಪೀಳಿಗೆ ಸ್ವಾತಂತ್ರ ಹೋರಾಟದ ಕಲ್ಪನೆಯಾಗಲಿ, ಸಮಾಜವಾದಿ ಚಿಂತನೆಯ ಗಂಧಗಾಳಿ ಲವಲೇಶವೂ ಇರದೆ ಖಾಸಗೀಕರಣದ ಅಮಲಿನಲ್ಲಿ ಅವರುಗಳಿಗೆ ಕಾಂಗ್ರೆಸ್ ಪೇಲವವಾಗಿ ಕಾಣಿಸತೊಡಗಿದ್ದರಲ್ಲಿ ಅಚ್ಚರಿಯೇನಿಲ್ಲ. ಇನ್ನು ತೃತೀಯರಂಗವೆನ್ನುವುದು ಅಹಂಕಾರಭರಿತ ನಾಯಕರುಗಳ ಒಳಜಗಳಗಳ ಅಖಾಡದಂತೆ ಕಾಣದಂತೆ ಕಂಡು ಬಂದು ಬಾಜಪ ನಿದಾನವಾಗಿ ಬೆಳೆಯತೊಡಗಿತು. ಇದು 1999ರ ಸಾರ್ವತ್ರಿಕ ಚುನಾವಣೆಯ ಹೊತ್ತಿಗೆ ಸಾಬೀತಾಗಿ ಹೋಯಿತು. ತನ್ನ ನೇತೃತ್ವದಲ್ಲಿ ಎನ್.ಡಿ.ಎ. ಮೈತ್ರಿಕೂಟ ಸ್ಥಾಪಿಸಿಕೊಂಡ ಬಾಜಪ ಆ ಚುನಾವನೆಗಳನ್ನು ಅಧಿಕಾರ ಹಿಡಿಯಿತು.ಶ್ರೀ ಅಟಲ್ ಬಿಹಾರಿ ವಾಜಪೇಯಿಯವರುಪ್ರದಾನಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು. ಸತತ ಹನ್ನೆರಡು ವರ್ಷಗಳ ನಂತರ ಐದು ವರ್ಷಗಳನ್ನು ಪೂರೈಸಿದ ಸರಕಾರ ಎಂಬ ಕೀರ್ತಿಗೆ ಅದು ಬಾಜನವಾದರೂ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ ಎನ್ನುವ ಆರೋಪಗಳು ಕೇಳಿಬಂದವು 

1999ರ ಹೊತ್ತಿಗೆ ಬಾಜಪಕ್ಕೆ ಒಂದು ವಿಷಯವಂತು ಮನವರಿಕೆಯಾಗಿತ್ತು. ಇಂಡಿಯಾದ ಸದ್ಯದ ರಾಜಕಾರಣದಲ್ಲಿ ತಾನು ಒಂಟಿಯಾಗಿ ಹೋರಾಡಿ ಅಧಿಕಾರ ಹಿಡಿಯುವುದು ಕಷ್ಟವೆಂಬುದು! ಅದಕ್ಕಾಗಿ ತನ್ನ ನೇತೃತ್ವದಲ್ಲಿ ಎನ್.ಡಿ.ಎ. ಎನ್ನುವ ಮೈತ್ರಿಕೂಟವೊಂದನ್ನು ರಚಿಸಿಕೊಂಡಿತು. ಅದಾಗಲೆ ತನ್ನ ಮಿತ್ರ ಪಕ್ಷಗಳಾಗಿದ್ದ ಪಂಜಾಬಿನ ಶಿರೋಮಣಿ ಅಕಾಲಿದಳ ಹಾಗು ಮಹಾರಾಷ್ಟ್ರದ ಶಿವಸೇನೆಯ ಜೊತೆಗೆ ಇನ್ನಿತರೆ ಸಮಾನಮನಸ್ಕ ಪಕ್ಷಗಳನ್ನು ಮೈತ್ರಿಕೂಟಕ್ಕೆ ಸೆಳೆಯುವಲ್ಲಿ ಅದು ಸಫಲವಾಯಿತು. ಆಂದ್ರಪ್ರದೇಶದ ಚಂದ್ರಬಾಬು ನಾಯ್ಡು ನಾಯಕತ್ವದ ತೆಲುಗುದೇಶಂ, ಜಾರ್ಜಫರ್ನಾಂಡೀಸರ ಸಮತಾಪಕ್ಷ, ಸಂಯುಕ್ತ ಜನತಾ ದಳ, ಬಿಜು ಜನತಾದಳ ಸೇರಿದಂತೆ ಸುಮಾರು ವಿವಿಧ ಸಿದ್ದಾಂತಗಳ 21 ಪ್ರಾದೇಶಿಕ ಪಕ್ಷಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು 1999ರ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಿತು. 270ಸ್ಥಾನಗಳನ್ನು ಗೆದ್ದ ಎನ್.ಡಿ.ಎ.ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದು ಬಾಜಪದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರದಾನಮಂತ್ರಿಗಳಾದರು. 1951ರಿಂದ ಶುರುವಾದ ಬಲಪಂಥೀಯ ಪಕ್ಷವೊಂದರ ಕನಸು ಸರಿಸುಮಾರು ಐವತ್ತು ವರ್ಷಗಳಲ್ಲಿ ನನಸಾಯಿತು. ತದ ನಂತರದ 2004 ಮತ್ತು 2009ರ ಎರಡೂ ಚುನಾವಣೆಗಳಲ್ಲಿ ಬಾಜಪ ಸೋಲನ್ನಪ್ಪಿಕೊಳ್ಳಬೇಕಾಯಿತು.

2004ರಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರಕಾರ ಅಸ್ಥಿತ್ವಕ್ಕೆ ಬಂದು ಶ್ರೀ ಮನಮೋಹನ್ ಸಿಂಗ್ ಪ್ರದಾನ ಮಂತ್ರಿಯಾದರು. 2009ರವರೆಗು ಈ ಸರಕಾರ ಹಗರಣಮುಕ್ತವಾಗಿ ನಡೆದಿದ್ದರಿಂದ ಬಾಜಪಕ್ಕೆ ರಾಜಕೀಯ ಅನುಕೂಲಗಳೇನು ಸಿಗಲಿಲ್ಲ. 2009ರಲ್ಲಿಯೂ ಮತ್ತೆಎ ರಡನೇ ಬಾರಿಗೆ ಯು.ಪಿ.ಎ. ಅಧಿಕಾರಕ್ಕೆ ಬಂದು ಮತ್ತೆ ಮನಮೋಹನ್ ಸಿಂಗ್ ಪ್ರದಾನಮಂತ್ರಿಯಾದರು. ಆದರೆ 2009ರಿಂದ 2014ರವರೆಗಿನ ಅವಧಿಯಲ್ಲಿ ಸರಕಾರ ತೀರಾ ಬಾರಿ ಹಗರಣಗಳ, ಬ್ರಷ್ಟಾಚಾರಗಳ ಸುಳಿಗೆ ಸಿಲುಕಿ ಹಾಕಿಕೊಂಡಿತು. ಅದರಲ್ಲು ಡಿ.ಎಂ.ಕೆ. ಪಕ್ಷದಂತಹ ಮಿತ್ರ ಪಕ್ಷಗಳ ಸಚಿವರುಗಳು ನಡೆಸಿದ ಲಕ್ಷಾಂತರ ಕೋಟಿಯ ಹಗರಣಗಳು ಸರಕಾರಕ್ಕೆ ಕೆಟ್ಟ ಹೆಸರನ್ನು ತಂದವು. ಇದನ್ನು ರಾಜಕೀಯವಾಗಿ ಬಳಸಿಕೊಂಡ ಬಾಜಪ ಆಕ್ರಮಣಕಾರಿಯಾಗಿ ರಾಜಕಾರಣ ಮಾಡತೊಡಗಿತು.

ಆದರೆ ಕೇವಲ ಭ್ರಷ್ಟಾಚಾರಗಳ ಹಗರಣಗಳನ್ನು ಇಟ್ಟುಕೊಂಡು ಕಾಂಗ್ರೆಸ್ಸಿನ ದುರಾಡಳಿತದ ವಿರುದ್ದ ಪ್ರಚಾರ ಮಾಡಿಕೊಂಡು 2014ರ ಚುನಾವಣೆಗಳನ್ನು ಗೆಲ್ಲುವುದು ಕಷ್ಟ ಎಂಬುದನ್ನು ಅರ್ಥಮಾಡಿಕೊಂಡ ಬಾಜಪದ ಸಂಘಪರಿವಾರ ತನ್ನ ತಂತ್ರಗಾರಿಕೆಯನ್ನು ಬಳಸಿಕೊಂಡಿತು. ಉಗ್ರ ಹಿಂದುತ್ವವಾದ ಮತ್ತು ಅಭಿವೃದ್ದಿಯ ಘೋಷಣೆಗಳನ್ನು ಬಳಸಿಕೊಳ್ಳಲು ತೀರ್ಮಾನಿಸಿದ ಅದು ಅದ್ವಾನಿ ಮತ್ತು ಮುರುಳಿಮನೋಹರ ಜೋಷಿಯಂತಹ ಹಿರಿಯ ನಾಯಕರುಗಳನ್ನು ಬದಿಗೆ ಸರಿಸಿ, ಪರ್ಯಾಯ ನಾಯಕತ್ವದ ಕಡೆ ಗಮನ ಹರಿಸಿತು. 2002ರಿಂದ ಸತತವಾಗಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಗುಜರಾತಿನಲ್ಲಿ ಮಾಡಿದ್ದ ಅಲ್ಪಸ್ವಲ್ಪ ಕಣ್ಣೊರೆಸುವ ಅಭಿವೃದ್ದಿಗಳನ್ನೇ ಮಹಾ ಎಂದು ಬಣ್ಣಿಸುತ್ತ, ಪ್ರಚಾರ ಮಾಡಲು ಬಳಸಿಕೊಂಡಿತು. 2014ರ ಚುನಾವನೆಗಳನ್ನು ಗೆಲ್ಲಲೇ ಬೇಕೆಂದು ಹಟಕ್ಕೆ ಬಿದ್ದ ಸಂಘಪರಿವಾರ ಬಾಜಪದ ಹಿರಿಯ ನಾಯಕರುಗಳನ್ನು ಬದಿಗೆ ಸರಿಸುತ್ತ ಆಕ್ರಮಣಕಾರಿ ರಾಜಕರಣ ಮಾಡುವ ಶ್ರೀ ನರೇಂದ್ರಮೋದಿ ಮತ್ತು ಅಮಿತ್ ಷಾ ಅಂತವರನ್ನು ಬಾಜಪದ ಪ್ರಮುಖ ನಾಯಕರುಗಳನ್ನಾಗಿಸಿತು. 2002ರಿಂದ 2014ರವರೆಗು ಗುಜರಾತಿನ ಮುಖ್ಯಮಂತ್ರಿಯಾಗಿದ್ದುಕೊಂಡು ಗೋದ್ರಾ ಹತ್ಯಾಕಾಂಡ ಮತ್ತಿತರ ಗೋದ್ರೋತ್ತರ ಗಲಭೆಗಳಲ್ಲಿ ಹಿಂದುತ್ವದ ಸಂರಕ್ಷಣೆ ಮಾಡಿದರೆಂದು ಸಂಘಪರಿವಾರದಿಂದ ಪ್ರಶಂಸೆಗೊಳಗಾಗಿದ್ದ ನರೇಂದ್ರ ಮೋದಿಯವರನ್ನು ಪ್ರದಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಅದು ಗುಜರಾತ್ ಮಾದರಿಯ ಅಭಿವೃದ್ದಿ ಎನ್ನುವ ಹುಸಿ ಸ್ಲೋಗನ್ನುಗಳನ್ನು ಹರಿಯಬಿಟ್ಟು ಮತದಾರರ ಮನ ಗೆಲ್ಲಲು ಯತ್ನಿಸಿತು. ಸೋನಿಯಾ ಗಾಂದಿಯವರ ಅನಾರೋಗ್ಯ ಮತ್ತು ಕಾಂಗ್ರೆಸ್ಸಿನಲ್ಲಿ ಬಲಿಷ್ಠ ನಾಯಕರುಗಳೇ ಇರದ ಕಾರಣ ಬಾಜಪಕ್ಕೆ ಸಮರ್ಥ ಎದುರಾಳಿಗಳೇ ಇಲ್ಲದಂತಾಗಿ 2014ರಸಾರ್ವತ್ರಿಕ ಚುನಾವಣೆಯಲ್ಲಿ 282 ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.

No comments:

Post a Comment