ಕು.ಸ.ಮಧುಸೂದನರಂಗೇನಹಳ್ಳಿ
(ಇಂಡಿಯಾದ ರಾಜಕಾರಣದಲ್ಲಿ ಮತೀಯವಾದವೇನು ಇದ್ದಕ್ಕಿದ್ದಂತೆ ಸೃಷ್ಠಿಯಾಗಿದ್ದಲ್ಲ. ಬದಲಿಗೆ ಎಪ್ಪತ್ತರ ದಶಕದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರುಗಳು ತೆಗೆದುಕೊಂಡ ತಪ್ಪು ನಿರ್ದಾರಗಳಿಂದಾಗಿ ಮತ್ತು ತದನಂತರದಲ್ಲೂ ಸಿದ್ದಾಂತಕ್ಕಿಂತ ಅಧಿಕಾರವೇ ಮುಖ್ಯ ಎನ್ನುವ ರೀತಿಯಲ್ಲಿ ನಡೆದುಕೊಂಡಿದ್ದರಿಂದ ಮತೀಯವಾದ ಎನ್ನುವುದು ನಿದಾನವಾಗಿ ಇಂಡಿಯಾದ ರಾಜಕಾರಣದಲ್ಲಿ ವಿಷದಂತೆ ತುಂಬಿಕೊಳ್ಳತೊಡಗಿತು. ಇಂದಿನ ಯುವಜನತೆಗೆ ಇದರ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದಷ್ಟೆ ಈ ಲೇಖನದ ಉದ್ದೇಶ)
ಅದು ಶಕ್ತಿ ರಾಜಕಾರಣದ ಪಡಸಾಲೆಯೇ ಇರಲಿ, ವಿಚಾರವಂತರು ಮತ್ತು ಪ್ರಗತಿಪರರ ವೈಚಾರಿಕಗೋಷ್ಠಿಗಳಿರಲಿ, ಇಲ್ಲ ಅತಿ ಸಾಮಾನ್ಯಜನರ ಸರಳ ಮಾತುಕತೆಗಳ ಪಟ್ಟಾಂಗದಲ್ಲಿರಲಿ ಒಂದುಮಾತು ಮಾತ್ರ ಪದೆಪದೇ ಪುನರುಚ್ಚರಿಸಲ್ಪಡುತ್ತಿದೆ ಮತ್ತು ತೀವ್ರ ರೀತಿಯ ಚರ್ಚೆಗೆ ಗ್ರಾಸವಾಗುತ್ತಲಿದೆ: ಅದೆಂದರೆ ಇಂಡಿಯಾದಲ್ಲಿ ಮತಾಂಧ ರಾಜಕಾರಣ ಮೇಲುಗೈ ಸಾದಿಸುತ್ತಿದೆಮತ್ತು ಅದರ ಕಬಂದ ಬಾಹುಗಳು ಈ ನೆಲದ ಬುಡಕಟ್ಟುಜನಾಂಗಗಳನ್ನೂ ಸಹ ಆವರಿಸಿಕೊಳ್ಳುತ್ತಿದೆ ಅನ್ನುವುದಾಗಿದೆ.ನಿಜ ಇವತ್ತು ಮತೀಯ ರಾಜಕಾರಣ ಮಾಡುತ್ತಲೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಾಜಪ ದಿನೇದಿನೇ ತನ್ನ ಶಕ್ತಿಯನ್ನು ಮತ್ತು ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ.ಎಂಭತ್ತರ ದಶಕದಲ್ಲಿ ಶುರುವಾದ ಬಾಜಪದ ಕೋಮುರಾಜಕಾರಣವೀಗ ತನ್ನ ಉತ್ತುಂಗ ಸ್ಥಿತಿಯನ್ನು ತಲುಪಿದ್ದು ಈ ನಾಡಿನ ಜಾತ್ಯಾತೀತ ನೇಯ್ಗೆಯನ್ನು ಚಿಂದಿ ಮಾಡಿದೆ ಮತ್ತು ಮಾಡುತ್ತಿದೆ. ಈಹಿನ್ನೆಲೆಯಲ್ಲಿಯೇ ನಾವು ಬಾಜಪ ಹೇಗೆ ಬೆಳೆಯುತ್ತಬಂದಿತು ಮತ್ತು ಹೇಗೆ ತನ್ನ ಮತೀಯ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ಭಾರತೀಯರು ಒಪ್ಪುವಂತೆಮಾಡುವಲ್ಲಿ ಯಶಸ್ವಿಯಾಯಿತು ಎನ್ನುವುದನ್ನು ವಿಶ್ಲೇಷಿಸಿ ನೋಡಬೇಕಿದೆ.