ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹಗಲಿಡೀ ಧೇನಿಸಿ ಬರೆದ ಕವಿತೆಗಳು
ನೋವಿನಿಂದ ನರಳಿದ ಸದ್ದು ಕೇಳಿ ಎಚ್ಚರವಾಯಿತು
ನಡುರಾತ್ರಿ ಬರೆಯುವ ಮೇಜಿಗೆ ಬಂದು ಬರೆದಷ್ಟೂ ಹಾಳೆಗಳ
ಇನ್ನೂ ಉಸಿರಾಡುತ್ತಿದ್ದ ಕವಿತೆಗಳ
ನರಳುವಿಕೆಯೀಗ ಮತ್ತೂ ಹೆಚ್ಚಾಗಿ ಗಾಬರಿಯಿಂದ ದೀಪಹಾಕಿ ನೋಡಿದೆ
ಕವಿತೆಯ ಪ್ರತಿ ಶಬುದಗಳಿಗೂ ಗುಂಡುಗಳು ತಾಗಿ
ಬಿಸಿಯಾದ ರಕ್ತ ಜಿನುಗುತ್ತಿದೆ
ಎತ್ತಿಕೊಂಡು ಸಂತೈಸಲು ನೋಡಿದೆ
ಹಾಗೆ ರಕ್ತ ಸೋರುವ ಜಾಗಗಳ ಒತ್ತಿ ಹಿಡಿದು ಸ್ರಾವ
ನಿಲ್ಲಿಸಲು ಪ್ರಯತ್ನಿಸಿ ಸೋತೆ
ಮತ್ತೊಂದು ಬೆಳಗಾಗುವಷ್ಟರಲ್ಲಿ ಅಷ್ಟೂ ಕವಿತೆಗಳ ಹೆಣಗಳು
ರೂಮಿನ ಉದ್ದಗಲಕ್ಕೂ ಬಿದ್ದಿದ್ದವು.
ಅಹಿಂಸೆಯ ಹರಡಲು
ಮಾನವೀಯತೆಯ ಮೆರೆಸಲು
ಹೆಣಗಿದ ಕವಿತೆಗಳು
ತಾವೇ ಕಟುಕರಿಗೆ ಬಲಿಯಾಗಿ ಹೋದವು
ಇನ್ನುಹೊಸ ಕವಿತೆಯೊಂದ ಬರೆಯಲು ಮನಸ್ಸಾಗುವುದಿಲ್ಲ
ಕವಿತೆಗಳನ್ನೂ ಕೊಲ್ಲುವ ಹಂತಕರಿಗೆ
ಮನುಷ್ಯರ ಮೇಲಾದರು ಬಂದೀತು ಕರುಣೆ ಎಲ್ಲಿಂದ?
No comments:
Post a Comment