Oct 12, 2017

ಅವತ್ತೊಂದು ದಿನ.....

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ವರುಷಗಳಿಂದ ನಾನು ತಳವೂರಿದ್ದ ಭೂಮಿಯ ಕಿತ್ತುಕೊಂಡು 
ಏಳಿಸಿದ ನಿನ್ನರಮನೆಯ ಎತ್ತರದ ಪಾಗಾರದ ಗೋಡೆಯ ಮೇಲೆ ಚುಚ್ಚಲ್ಪಟ್ಟ ಗಾಜಿನ ಚೂರುಗಳು ಸಾಲದೆಂಬಂತೆ
ಖಡ್ಘಗಳ ಹಿಡಿದ ಕಾವಲು ಭಟರನ್ನಿಟ್ಟು ಕೊಂಡೆ
ಕೂತಾಗನಿಂತಾಗ ನಡೆಯುವಾಗ ಕೊನೆಗೆ
ಮಲಗುವಾಗಲೂ ಇರಲೆಂದು ಹೇಡಿಯಂತೆ
ಅಂಗರಕ್ಷಕರನ್ನಿಟ್ಟುಕೊಂಡು ಭೋಪರಾಕು ಹಾಕಿಸಿಕೊಂಡೆ.
ಕಾಲಾಳುಗಳ ಬೆನ್ನ ಮೇಲೆ ಕಾಲಿಟ್ಟು ಮೆರೆದೆ
ಸಾಕೆನಿಸಿದಾಗ ಹಸಿವಿನಿಂದ ನರಳಿ ಬೊಕ್ಕಬೋರಲಾಗಿ ಬಿದ್ದ ನಮ್ಮ ಹೊಟ್ಟೆಗಳ ಮೇಲೆ ಪಾದಗಳನೂರಿ ನಿಂತೆ.
ಆದರದೊಂದುದಿನ ಇವತ್ತಿನಂತಿರುವುದಿಲ್ಲ. 
ಎಳೆಬಿಸಿಲು ರಣಬಿಸಿಲಾಗುವುದು
ತಂಗಾಳಿ ಬಿರುಗಾಳಿಯಾಗುವುದು
ಹೂವುಗಳೆಲ್ಲ ಹಾವುಗಳಾಗಿ
ಮೀನುಗಳೆಲ್ಲ ಮೊಸಳೆಗಳಾಗಿ
ಕಡಲ ಅಲೆಗಳೆಲ್ಲ ಸುನಾಮಿಯ ತೆರೆಗಳಾಗಿ
ಬದಲಾಗುವವು
ಅವತ್ತು ನಿನ್ನ 
ಅರಮನೆಯ ಅಸ್ತಿಬಾರ ಕುಸಿದು ನೆಲಸಮವಾಗುವುದು
ಬಯಲಿಗೆ ಬಿದ್ದ ನಿನ್ನ 
ನಮ್ಮವ್ವ ದುಗ್ಗಮ್ಮನ ಪಾದಗಳಡಿಯಲ್ಲಿ
ವಿಚಾರಿಸಲಾಗುವುದು!

No comments:

Post a Comment