ಸವಿತ ಎಸ್ ಪಿ
ಹೇಳು ಮನವೇ....?ಯಾಕೀ ಪರಿ ಪರಿತಾಪ....! ಭಾವತಂತುವಿನೊಂದು ಕೊಂಡಿ ಕಳಚಿದಂತೆ.....ಏನೀ ಕಸಿವಿಸಿ...? ಬೊಗಸೆಯಷ್ಟು ಪ್ರೀತಿ ಬಯಸುವೆಯಾದರೂ ಯಾಕೆ....? ಅಣುವಿನಷ್ಟು ದೊರಕಲಿಲ್ಲವೆಂಬ ಕೊರಗೇಕೇ..? ನೋವ ಅಲೆ ಅಲೆ ನಿನ್ನೊಡಲಿಗೆ ಅಪ್ಪಳಿಸಿತೆಂದು ಭೋರಿಡುವೆಯೇಕೆ.....?
ಯಾಕೀ ನಿರೀಕ್ಷೆ.....? ಇದು ಸಾಧುವೇ....ಯಂತ್ರ ತಾಂತ್ರಿಕತೆಯ ಹುಚ್ಚು ಹಚ್ಚಿಸಿಕೊಂಡಿರುವ ಜಗದ ಜನರ ನಾಗಾಲೋಟದ ವೇಗಕೆ ನೀನೇಕೆ ಓಡದೆಯೇ ಸೋತೆ....? ಗೆಲ್ಲುವ ಹಂಬಲದ ಕುದುರೆಯನೇಕೇ ಹತ್ತದೇ ಹೋದೇ....?
ನಿನಗಾಗಿ ಸಮಯವೇ ಕೊಡದವರ ನೀ ಕಾಯುವುದಾದರೂ ಯಾಕೆ...? ನೀನವರ ಆಯ್ಕೆಯೂ ಅಲ್ಲ...! ನಿನಗಲ್ಲಿ ಯಾವ ಪ್ರಾಶಸ್ತ್ಯವೂ ಇಲ್ಲ......! ಕೊಂಚ ಸಮಯ ಕೊಡದವರು ನಿನ್ನ ಪ್ರೀತಿ ಹಸಿವ ನೀಗಿಸಿಯಾರೇ....? ನಿನ್ನದೆಂಥಾ ಹುಚ್ಚು....! ಭ್ರಮೆ.....!
ತುಸು ಪ್ರೀತಿ ತೋರಲೂ ಅವರಿಗೆ ಬಿಡುವಿಲ್ಲ....! ಸಮಯವೆಂಬುದು ಇದೆ. ನಿನಗೆ ಕೊಡಲಾರರು.....!!ನೂರಾರು ಕೆಲಸ, ಒತ್ತಡ...., ನೆಪ....! ಪಾಪ. ನಿನ್ನ ಮೌನ ಅರಿಯದವರು ನಿನ್ನ ಕಣ್ಣ ನೋವ ಅರಿತಾರು ಎಂದು ಭ್ರಮಿಸಿದೆಯಾದರೂ ಯಾಕೆ...? ಇದು ನಿನ್ನ ಖೋಡಿತನವಲ್ಲದೇ...ಮತ್ತೇನು...?
ಪ್ರೀತಿವಾತ್ಸಲ್ಯ ಬಯಸಿ ಅಪ್ಪಿದ ನಿನ್ನ ತೋಳ ಬಳಸದ, ಬೆನ್ನು ಸವರದ ಅವರ ಅನಿವಾರ್ಯತೆಯೇನೋ....? ನೀನದಕೆ ಅರ್ಹಳೇ....? ಅಲ್ಲವೇನೋ....? ಆ ಮನದ ಅನಿವಾರ್ಯತೆಯೇನೋ...? ನಿನ್ನಪ್ಪಿ ಸಾಂತ್ವನಿಸದ ಅದರ ಪರಿಸ್ಥಿತಿಯೇನೋ......? ಬಿಡು.
ಅರಿತು ಬೆರೆವ, ಅವರು ಕೊಡುವ ಸಮಯಕಾಗಿ ಕಾಯುವ, ಅವರಿಗೆ ಬೇಕಾದಷ್ಟು ಸಮಯ ಕೊಡುವ, ನಿನ್ನ ಮೌನವ, ತಡೆಯುವ ಬಿಕ್ಕಳಿಕೆಯ, ಅನಿವಾರ್ಯವ ಕೇಳುವವರಾರು......? ಯಾರಿಗೆ ಬೇಕಾಗಿದೆ.....? ಹೇಳು.
ಈ ಪರಿ ಭಾವುಕತೆಯೇಕೋ....?ಬಿಡು, ಬಿಟ್ಟಾಕು. ಈ ಯಾಂತ್ರೀಕೃತ ಜಗದಲಿ ಸನ್ನೆಗಳೇ ಸಂಭಾಷಣೆಗಳಾಗಿರಲು, ನಿನ್ನ ಪ್ರೀತಿ ಭಾಷೆ ಅರಿಯುವವರಾರು...?ನಿನ್ನ ಭಾವಗಳಿಗೆ ಬಣ್ಣ ಹಚ್ಚುವವರಾರು....? ಏನೇನೂ ಪ್ರಯೋಜನಕ್ಕೆ ಬರದು. ಹೊರಗೆ ಬಂದು ಬಿಡು. ಗಟ್ಟಿಯಾಗು. ಭಾವನಾಲೋಕದಲಿ ವಿಹರಿಸಿದ್ದು ಸಾಕು,ವಾಸ್ತವದ ಮುಗಿಲಿನತ್ತ ಚಿಮ್ಮಿ ಬಿಡು. ನಿನ್ನಾಸೆ ಕನಸ ಹಕ್ಕಿಗೆ ನೀನೇ ರೆಕ್ಕೆಯಾಗಿಬಿಡು. ಮುಗಿಲಗಲ, ಮುಗಿಲುದ್ಧ ಅಳೆದೇಳು. ಏಳು.
ಪೆದ್ದು ಮನವೇ, ಯಾರಿಗೋಸ್ಕರವೋ ಸಮಯ ಎತ್ತಿಡುವ ಬದಲು ನಿನಗಾಗೇ ಅದನ್ನು ವ್ಯಯಿಸು. ನಿನ್ನನ್ನೇ ನೀ ಅರಿತುಬಿಡು....!ನಿನ್ನನ್ನೇ ನೀ ಪ್ರೀತಿಸಿ ಬಿಡು.....! ಸ್ವಲ್ಪ ನಿನಗಾಗೇ....ನಿನ್ನ ತೃಪ್ತಿಗಾಗೇ ಏನಾದರು ಮಾಡಿಬಿಡು....!!
image source: deviantart
No comments:
Post a Comment