ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪಲಿತಾಂಶಗಳು ರಾಜಕೀಯ ವಲಯದಲ್ಲಿ ನಿರೀಕ್ಷಿಸಿದವೇ ಆಗಿದ್ದರೂ, ಕಾಂಗ್ರೆಸ್ ಈ ಮಟ್ಟದಲ್ಲಿ ಸೋಲುತ್ತದೆಯೆಂದು ಸ್ವತ: ಅದರ ವಿರೋಧಿಗಳೂ ಊಹಿಸಿರಲಿಲ್ಲವೆಂಬುದು ಮಾತ್ರ ಸತ್ಯ! ಮಹಾರಾಷ್ಟ್ರದ ಬಹುತೇಕ ನಗರ ಪಾಲಿಕೆಗಳನ್ನು ಮತ್ತು ಜಿಲ್ಲಾ ಪರಿಷದ್ ಗಳನ್ನು ಬಿಜೆಪಿ ಮತ್ತು ಶಿವಸೇನೆ ವಶ ಪಡಿಸಿಕೊಂಡಿದ್ದು ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲ, ಗ್ರಾಮೀಣ ಭಾಗದಲ್ಲಿಯೂ ತಾನು ಬಲಿಷ್ಠವಾಗುತ್ತಿದ್ದೇನೆಂಬ ಸೂಚನೆಯನ್ನೂ ಬಿಜೆಪಿ ನೀಡಿದೆ. ಅದರಲ್ಲೂ ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದ್ದ ಮುಂಬೈ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸೋಲನ್ನಪ್ಪಿದ್ದು, ಕಳೆದ ಬಾರಿಗಿಂತ ಹೀನಾಯಪ್ರದರ್ಶನ ನೀಡಿದೆ. ರಾಷ್ಟ್ರದ ವಾಣಿಜ್ಯ ರಾಜದಾನಿಯೆಂದೇ ಪ್ರಸಿದ್ದವಾಗಿರುವ ಮುಂಬೈ ಅನ್ನು ಗೆಲ್ಲುವುದು ಎಲ್ಲಪಕ್ಷಕ್ಕೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಚುನಾವಣೆಗು ಮೊದಲು ನಾನು ಮುಂಬೈ ಚುನಾವಣೆಯನ್ನು ವಿಶ್ಲೇಷಣೆ ಮಾಡುವಾಗಲೇ ಬಿಜೆಪಿ ಶಿವಸೇನೆಯ ಪ್ರಾಬಲ್ಯದ ಬಗ್ಗೆ ಬರೆದಿದ್ದೆ. ಈಗ ಸ್ವಲ್ಪ ಪಲಿತಾಂಶಗಳ ಬಗ್ಗೆ ಅದರ ಹಿಂದಿರುವ ಕಾರಣಗಳ ಬಗ್ಗೆ ನೋಡೋಣ:
ಮುಂಬೈ ನಗರ ಪಾಲಿಕೆಯಲ್ಲಿ ಒಟ್ಟು 227 ಸ್ಥಾನಗಳಿದ್ದು, ಕಳೆದ ಬಾರಿ ಬಿಜೆಪಿ ಮತ್ತು ಶಿವಸೇನೆಯ ಮೈತ್ರಿಕೂಟ ಅಧಿಕಾರ ಹಿಡಿದಿತ್ತು. ಆದರೆ 2014ರ ನಂತರದಲ್ಲಿ ಅವೆರಡೂ ಪಕ್ಷಗಳ ನಡುವೆ ಉಂಟಾದ ಬಿರುಕಿನ ಕಾರಣದಿಂದ ಈ ಬಾರಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ದಿಸಿದ್ದವು. ಹೀಗೆ ಪ್ರತ್ಯೇಕವಾಗಿ ಸ್ಪರ್ದೆ ಮಾಡುತ್ತಿರುವುದು ಕಾಂಗ್ರೇಸ್ಸಿಗೆ ಲಾಭ ತರುತ್ತದೆಯೆಂದು ಎಲ್ಲರೂ ಊಹೆ ಮಾಡಿದ್ದರು. ಆದರೆ ಪ್ರತಿ ಬಾರಿಯೂ ಶಿವಸೇನೆಗೆ ಹೆಚ್ಚು ಸ್ಥಾನಗಳನ್ನು ಬಿಟ್ಟು ಕೊಟ್ಟು ತಾನು ಕಡಿಮೆ ಸ್ಥಾನಗಳಿಗೆ ಸ್ಪರ್ದಿಸುತ್ತಿದ್ದ ಬಿಜೆಪಿಗೆ ಮೈತ್ರಿ ಇಲ್ಲದೇ ಹೋಗಿದ್ದು ತನ್ನ ನಿಜವಾದ ಬಲವನ್ನು ತೋರಿಸಲು ಒಂದು ಅವಕಾಶ ದೊರೆತಂತಾಯಿತು. ಇನ್ನು ಪಲಿತಾಂಶದ ಅಂಕಿಅಂಶಗಳನ್ನು ನೋಡುವುದಾದರೆ ಕಳೆದಬಾರಿ 75 ಸ್ಥಾನಗಳನ್ನು ಗೆದ್ದಿದ್ದ ಶಿವಸೇನೆ ಈ ಬಾರಿ 84 ಸ್ಥಾನಗಳನ್ನು, ಕಳೆಬಾರಿ 31 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈಬಾರಿ 82 ಸ್ಥಾನಗಳನ್ನು, ಕಳೆದ ಬಾರಿ 52 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈಬಾರಿ ಕೇವಲ 31 ಸ್ಥಾನಗಳನ್ನು ಗೆದ್ದಿವೆ. ಶಿವಸೇನೆ 9 ಸ್ಥಾನಗಳ ಬೋನಸ್ ಪಡೆದರೆ ಬಿಜೆಪಿ ಬರೋಬರಿ 51 ಸ್ಥಾನಗಳ ಬಂಪರ್ ಬೆಳೆ ತೆಗೆದಿದೆ. ಇನ್ನುಳಿದಂತೆ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಕಳೆದ ಬಾರಿಯ ಸಂಖ್ಯೆಯ ಸಮೀಪಕ್ಕೂ ಹೋಗಲಾರದೆ ಸೋತಿವೆ. ಹಾಗಿದ್ದರೆ ಶಿವಸೇನೆ ಮತ್ತು ಬಿಜೆಪಿಯ ಇಂತಹ ಗೆಲುವಿಗೆ ಕಾರಣಗಳನ್ನು ನೋಡುತ್ತಾ ಹೋದರೆ ಅಚ್ಚರಿಯ ಕಾರಣಗಳು ದೊರೆಯುತ್ತವೆ. ಹಿಂದು ಮತಗಳ ದೃವೀಕರಣ ಬಿಜೆಪಿಗೆ ಹೆಚ್ಚು ಮತಗಳನ್ನು ತಂದು ಕೊಟ್ಟಿದ್ದರೆ, ಮರಾಠ ಸ್ವಾಬಿಮಾನದ ವಿಷಯ ಶಿವಸೇನೆಗೆ ಹೆಚ್ಚು ಮತಗಳನ್ನು ತಂದು ಕೊಟ್ಟಿವೆ. ಜೊತೆಗೆ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಅವರು ತಾವೇ ಸ್ವತ: ಈ ಚುನಾವಣೆಗಳನ್ನು ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಂಡು, ಚುನಾವಣೆಗಳನ್ನು ಸೋತರೆ ತಾನದರ ಹೊಣೆ ಹೊರುವ ಮಾತನ್ನಾಡಿದ್ದರು. ಕಳೆದ ಎರಡೂವರೆ ವರ್ಷಗಳಲ್ಲಿ ಮುಂಬೈನಲ್ಲಿ ಯಾವುದೇ ಕೋಮುಗಲಭೆಗಳಾಗಲಿ, ಇನ್ನಿತರೆ ಹಿಂಸಾಚಾರಗಳಾಗಲಿ ನಡೆಯದಂತೆ ನೋಡಿಕೊಂಡಿದ್ದು ಅವರಿಗೆ ಅನುಕೂಲವಾಯಿತು.. ಗೆಲುವಿನ ಅಂಕವನ್ನು ಮುಖ್ಯಮಂತ್ರಿಗಳಿಗೆ ಕೊಡಬಾರದೆಂಬ ಅಸೂಯೆಯಿಂದ ಕೆಲ ಬಿಜೆಪಿ ನಾಯಕರುಗಳು ಈ ಗೆಲುವನ್ನು ಮೋದಿಯ ನೋಟುಬ್ಯಾನಿಗೆ ಸಮೀಕರಿಸಿ ಮಾತಾಡುತ್ತಿರುವುದು ಗಡ್ಕರಿಯಂತಹ ನಾಯಕರಿಗೆ ಪಡ್ನವೀಸ್ ಬಗ್ಗೆ ಇರುವ ಅಸಮಾದಾನ ಅಸೂಯೆಯನ್ನು ತೋರಿಸುತ್ತಿದೆ. ಇದೆಲ್ಲ ಏನೇ ಆದರೂ ಕಾಂಗ್ರೆಸ್ಸಿನ ಹೀನಾಯಕಾರಿಯಾದ ಸೋಲಿಗೆ ಕಾರಣಗಳನ್ನು ಹುಡುಕಿಕೊಂಡು ಅಲೆಯಬೇಕಿಲ್ಲ. ಯಾಕೆಂದರೆ ಈ ಹೀನಾಯ ಸೋಲಿಗೆ ಸ್ವತ: ಕಾಂಗ್ರೆಸ್ ಉಪಾದ್ಯಕ್ಷರಾದ ಶ್ರೀ ರಾಹುಲ್ ಗಾಂದಿಯವರ ಒಂದು ಅಪ್ರಬುದ್ದ ನಿದರ್ಾರವೇ ಕಾರಣವೆಂದು ಮಹಾದ ನಾಯಕರುಗಳು ಹೇಳುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಪಕ್ಷದೊಳಗೆ ಚಚರ್ೆಯೊಂದು ಶುರುವಾಗಿದ್ದು, ಮುಂಬಯಿ ಕಾಂಗ್ರೆಸ್ ಅದ್ಯಕ್ಷ ಶ್ರೀ ಸಂಜಯ್ ನಿರುಪಮಾ ರಾಜಿನಾಮೆ ನೀಡಿದ್ದಾರೆ. ಇಡೀ ದೇಶದ ಗಮನ ಸೆಳೆದಿದ್ದ ಮುಂಬೈ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದಕ್ಕೆ ಕಾರಣಗಳನ್ನು ನೋಡೋಣ:
1. ಮುಂಬೈ ಕಾಂಗ್ರೇಸ್ಸಿನೊಳಗಿನ ಗುಂಪುಗಾರಿಕೆ ಪಕ್ಷದ ಕಾರ್ಯಕರ್ತರುಗಳ ಆತ್ಮವಿಶ್ವಾವನ್ನು ಉಡುಗಿಸಿತ್ತು. ಕಾರ್ಯಕರ್ತರುಗಳ ಅಸಹಾಯಕತೆ ಮತ್ತು ಹತಾಶೆ ಎಷ್ಟರ ಮಟ್ಟಿಗೆ ಇತ್ತೆಂದರೆ ಇತರೆ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಪೋಸ್ಟರ್ ಬ್ಯಾನರುಗಳನ್ನು ಹಾಕಿದನಂತರವಷ್ಟೆ ಕಾಂಗ್ರೆಸ್ಸಿನ ಪ್ರಚಾರ ಸಾಮಗ್ರಿಗಳು ಕಾರ್ಯಕರ್ತರನ್ನು ತಲುಪಿದ್ದವು. ಈ ಹೊತ್ತಿಗಾಗಲೇ ಬೇರೆ ಪಕ್ಷಗಳು ಒಂದು ಸುತ್ತಿನ ಚುನಾವಣಾ ಪ್ರಚಾರವನ್ನು ಮುಗಿಸಿದ್ದವು.
2. 2014ರ ವಿದಾನಸಭಾ ಚುನಾವಣೆಯ ಸೋಲಿನ ನಂತರ ಪಕ್ಷದೊಳಗಿನ ಭಿನ್ನಮತವನ್ನು ಶಮನಗೊಳಿಸಲೆಂದೇ ಸಂಜಯ ನಿರುಪಮಾರವರನ್ನು ಪಕ್ಷದ ಅದ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ ಅವರ ನೇಮಕವೇ ಈಗಾಗಲೇ ಇದ್ದ ಭಿನ್ನಮತವನ್ನು ಇನ್ನಷ್ಟು ತೀವ್ರಗೊಳಿಸಿತ್ತು. ಅಂದ ಹಾಗೆ ಈ ನೇಮಕ ಮಾಡಿದ್ದು ರಾಹುಲ್ ಗಾಂದಿಯವರೆ!
3. ಸಂಜಯ್ ನಿರುಪಮಾರವರು ಶಿವಸೇನೆಯಿಂದ ಬಂದವರಾಗಿದ್ದು ಮೂಲ ಕಾಂಗ್ರೇಸ್ಸಿಗರಿಗೆ ಇವರು ಬೇಡವಾಗಿದ್ದರು. ಈ ಮೂಲ ಮತ್ತು ವಲಸಿಗ ಎನ್ನುವ ಅಂತರ ಇನ್ನಷ್ಟು ಹೆಚ್ಚಾಗಲು ಸ್ವತ: ಸಂಜಯರವರೇ ಕಾರಣರಾಗಿಬಿಟ್ಟರು. ಪಕ್ಷದ ಪದಾಧಿಕಾರಿಗಳನ್ನು ನೇಮಿಸುವಾಗ ತಮ್ಮ ಬೆಂಬಲಿಗರಿಗೆ ಮಣೆ ಹಾಕಿ ನಿಷ್ಠಾವಂತರನ್ನು ಹಾಗು ಹಿರಿಯರನ್ನು ಕಡೆಗಣಿಸಿಬಿಟ್ಟಿದ್ದರು.
4. ಹೋಗಲಿ ಚುನಾವಣೆಯ ಟಿಕೇಟು ಹಂಚುವಲ್ಲಿಯಾದರೂ ಸಂಜಯ್ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬಹುದಿತ್ತು. ಆದರೆ ಇತರೇ ನಾಯಕರುಗಳ ಸಲಹೆಗಳನ್ನು ಧಿಕ್ಕರಿಸಿ ಕೇವಲ ತಮ್ಮ ಅನುಯಾಯಿಗಳಿಗೆ ಟಿಕೇಟು ನೀಡಿದ್ದು ಪಕ್ಷದಲ್ಲಿ ಇನ್ನಷ್ಟು ಬಿರುಕುಂಟಾಗಲು ಕಾರಣವಾಯಿತು.
5. ಹಿರಿಯ ಕಾಂಗ್ರೆಸ್ ನಾಯಕರಾದ ಶ್ರೀ ಗುರುದಾಸ್ ಕಾಮತ್ ಅಂತವರು ಸಾರ್ವಜನಿಕವಾಗಿಯೇ ಈ ಬಗ್ಗೆ ಟೀಕೆ ಮಾಡಿ ತಾವು ಪ್ರಚಾರ ಕಾರ್ಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿತ್ತು.
6. ಇವರು ಮಾತ್ರವಲ್ಲದೆ ಕಾಂಗ್ರೆಸ್ಸಿನ ಉಳಿದ ನಾಯಕರುಗಳಾದ ಶ್ರೀ ನಾರಾಯಣ ರಾಣೆ, ಮಿಲಿಂದ್ ದೇವೋರಾ, ಪ್ರಿಯಾದತ್ ಮುಂತಾದವರು ಸಹ ಈ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ದೂರ ಉಳಿದಿದ್ದರು.
7. ಇಂತಹ ತೀವ್ರ ಸಂಕಷ್ಟವಿದ್ದರೂ ಕಾಂಗ್ರೆಸ್ಸಿನ ಹೈಕಮ್ಯಾಂಡ್ ಇತ್ತ ಗಮನ ಹರಿಸದೆ ಹೋಗಿದ್ದು ನಿಷ್ಠಾವಂತರನ್ನು ಕೆರಳಿಸಿದ್ದು, ಅವರುಗಳು ಬಾಜಪ, ಶಿವಸೇನೆಗೆ ಪರೋಕ್ಷವಾಗಿ ಬೆಂಬಲಿಸುವಂತೆ ಮಾಡಿತು.
8. ಇವೆಲ್ಲಕ್ಕಿಂತ ಹೆಚ್ಚಾಗಿ ಸಂಜಯ್ ನಿರುಪಮಾ ಈ ಮೊದಲು ಶಿವಸೇನೆಯ ಸಾಮ್ನಾ ಪತ್ರಿಕೆಯ ಸಂಪಾದಕರಾಗಿದ್ದು ದಶಕಗಳ ಕಾಲ ಕಾಂಗ್ರೆಸ್ಸನ್ನು ಅತಿ ಹೀನಾಯವಾಗಿ ಖಂಡಿಸುತ್ತಿದ್ದವರು, ಅದೂ ಅಲ್ಲದೆ ಅವರು ಮೂಲತ: ಬಿಹಾರದವರಾಗಿದ್ದು ಸ್ಥಳೀಯರಲ್ಲವೆಂಬ ಬಾವನೆ ಮುಂಬೈವಾಸಿಗಳಲ್ಲಿ ಮೂಡಿದ್ದು ಸಹ ಮುಖ್ಯ ಕಾರಣವೆನ್ನಬಹುದು
9. ಜೊತೆಗೆ ಈ ಬಾರಿ ಶರದ್ ಪವಾರರ ಎನ್.ಸಿ.ಪಿ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ದಿಸಿ ಬಿಜೆಪಿ-ಸೇನಾ ವಿರೋಧಿ ಮತಗಳನ್ನು ಒಡೆಯುವಲ್ಲಿ ಯಶಸ್ವಿಯಾಯಿತು.
ಈ ಸೋಲಿನ ಹೊಣೆಯನ್ನು ಹೊತ್ತು ಇದೀಗ ಸಂಜಯ್ ನಿರುಪಮಾ ರಾಜಿನಾಮೆ ಇತ್ತಿದ್ದಾರೆ. ಆದರೆ ನಿಜವಾಗಿಯೂ ಈ ಸೋಲಿನ ಹೊಣೆ ಹೊರಬೇಕಾಗಿದ್ದು ಸಂಜಯ್ ನಿರುಪಮಾರಂತಹ ಶಿವಸೇನಾ ಮೂಲದವರನ್ನು ಪಕ್ಷಾದ್ಯಕ್ಷರನ್ನಾಗಿ ಮಾಡಿದ ರಾಹುಲ್ ಗಾಂದಿಯವರು.
ಇನ್ನು ಈ ಬಾರಿ ಮುಖ್ಯಮಂತ್ರಿಗಳಾದ ಶ್ರೀಪಡ್ನವೀಸ್ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಬಿಜೆಪಿಯನ್ನು ಮುನ್ನಡೆಸಿದ್ದರು. ಈ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿಯ ಹೈಕಮ್ಯಾಂಡ್ ಫಡ್ನವೀಸ್ ಅವರಿಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದು, ಅವರ ಪ್ರಚಾರ ವೈಖರಿಯಲ್ಲಿ ಕೇಂದ್ರ ಮದ್ಯಪ್ರವೇಶಿಸದೆ ಹೋಗಿದ್ದು ಬಿಜೆಪಿಗೆ ವರದಾನವಾಯಿತು. ಜೊತೆಗೆ ನೋಟುಬ್ಯಾನಿನಂತಹ ವಿಚಾರಗಳಿಂದ ಸಾಮಾನ್ಯಜನರಿಗೆ ಆದ ತೊಂದರೆಗಳನ್ನು ಮರೆಸುವಂತೆ ಹಿಂದುತ್ವದ ಮತಗಳನ್ನು ದೃವೀಕರಿಸುವಲ್ಲಿ ಸಫಲವಾಯಿತು.
ಎಲ್ಲಕ್ಕಿಂತ ಹೆಚ್ಚಾಗಿ ಮುಂಬೈ ಅನ್ನು ಸ್ಥಳೀಯರೆ ಆಳಬೇಕೆಂಬ ಮುಂಬೈ ಅಸ್ಮಿತೆಯ ಮಾತನಾಡಿದ ಬಿಜೆಪಿ-ಸೇನೆ ಕಾಂಗ್ರೆಸ್ಸಿನ ಹೈಕಮ್ಯಾಂಡನ್ನು, ಹಾಗು ಅದು ನಾಯಕರನ್ನು ಹೇರುವ ವಿಚಾರವನ್ನು ಪ್ರಸ್ತಾಪಿಸುತ್ತ ಇದಕ್ಕೆ ಉದಾಹರಣೆಯಾಗಿ ಸಂಜಯ್ ನಿರುಪಮಾರವನ್ನು ತೋರಿಸುತ್ತ ಹೋಯಿತು.
ಹೀಗೆ ತಾವು ಪ್ರತ್ಯೇಕವಾಗಿ ಸ್ಪರ್ದಿಸಿಯೂ ಕಾಂಗ್ರೆಸ್ಸನ್ನು ಸೋಲಿಸಿದ ಬಿಜೆಪಿ ಶಿವಸೇನೆಗಳಿಗೀಗ ಮತ್ತೆ ಮೈತ್ರಿ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಇವೆರಡು ಪಕ್ಷಗಳ ನಡುವೆ ಕೇವಲ ಎರಡೇ ಸ್ಥಾನಗಳ ಅಂತರವಿದ್ದು, ಶಿವಸೇನೆಗೆ ಇಬ್ಬರು ಪಕ್ಷೇತರರು ಈಗಾಲೇ ಬೆಂಬಲ ಘೋಷಿಸಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ನಡೆಗಳು ಹೇಗಿವೆಯೆಂದರೆ, ಬಿಜೆಪಿಯ ಕನಸಾದ ಕಾಂಗ್ರೆಸ್ ಮುಕ್ತ್ ಭಾರತ್ ಅನ್ನು ನಿಜಮಾಡಲು ಹೊರಟಂತಿವೆ.
No comments:
Post a Comment