ಚಿತ್ರಮೂಲ: youthkiawaaz |
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹುಲಿಹಳ್ಳಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಹನುಮಕ್ಕ ಕಾಲಿಟ್ಟಾಗ ನಿಂಗಣ್ಣ ಅನ್ನೊ ಆರಡಿಯ ಅಟೆಂಡರ್ ಕಷ್ಟಪಟ್ಟು ಸೊಂಟ ಬಗ್ಗಿಸಿ ಕಸ ಹೊಡೆಯುತ್ತಿದ್ದ.
ಅಪ್ಪಾ ಸಾಮಿ, ಡಾಕುಟರು ಎಷ್ಟೊತ್ತಿಗೆ ಬರ್ತಾರೆ? ಅನ್ನೊ ದ್ವನಿ ಕೇಳಿಸಿದಾಕ್ಷಣ ಕೈಲಿದ್ದ ಪೊರಕೆಯನ್ನು ಮೂಲೆಗೆ ಬಿಸಾಕಿ ಯಾಕವ್ವಾ? ಅವರು ಬರೋದು ಹನ್ನೊಂದು ಗಂಟೆ ಮೇಲೇನೆ ಅನ್ನುತ್ತ ಖಾಲಿ ಹೊಡೆಯುತ್ತ ಬಿದ್ದಿದ್ದ ಆಸ್ಪತ್ರೆಯೊಳಗೆ ಯಾರೊ ಒಬ್ಬರು ಮಾತಿಗೆ ಸಿಕ್ಕಿದ ಖುಶಿಯಲ್ಲಿ ಮುಖವರಳಿಸಿ ಅಲ್ಲೆ ಇದ್ದ ಬೆಂಚಿನಲ್ಲಿ ಅವಳ ಜೊತೆ ಅವನೂ ಆಸೀನನಾದ. ಏನಿಲ್ಲ ಸಾಮಿ, ವಯಸಾದೋರಿಗೆ ಸರಕಾರದೋರು ಐನೂರು ರೂಪಾಯಿ ಕೊಡ್ತಾರಲ್ಲ ಅದಕ್ಕೆ ಡಾಕುಟರ ಸಯಿನ್ ಬೇಕಾಗಿತ್ತು ಅಂತ ಹನುಮಕ್ಕ ಹೇಳಲು ಎಲ್ಲ ಹೊಳೆದವನಂತೆ ಅಯ್ಯೋ ಅವ್ವ ಅದು ವೃದ್ದಾಪ್ಯವೇತನ ಅದನ್ನ ಮಾಡಿಕೊಡೋನು ವಿಲೇಜ್ ಅಕೌಂಟೆಂಟ್ ಅಂದ್ರೆ ಸೆಕ್ರೇಟರಿ. ಅವರು ಪಂಚಾಯಿತಿ ಆಪೀಸಲ್ಲಿ ಇರ್ತಾರೆ. ಅಲ್ಲಿಗೋಗೋದು ಬಿಟ್ಟು ಇಲ್ಲಿಗ್ಯಾಕೆ ಬಂದೆ ಅಂದ. ಅವನ ಮಾತಿಗೆ ತಬ್ಬಿಬ್ಬಾದ ಹನುಮಕ್ಕ ನಿಜಾನ? ಮತ್ತೆ ನಮ್ಮ ಪಕ್ಕದ ಮನೆ ಹುಡುಗ ಡಾಕುಟರ ಹತ್ರ ವಯಸಿನ ಬಗ್ಗೆ ಬರೆಸಿಕೊಂಡು ಬಾ ಅಂದನಲ್ಲ. ಹೂನವ್ವಾ, ನಿಂಗೆ ಅರವತ್ತು ವರ್ಷ ಆಗಿದೆ ಅಂತಷ್ಟೆ ಡಾಕ್ರ್ಟು ಬರಕೊಡೋದು ಮಿಕ್ಕಿದ್ದೆಲ್ಲ ಸೆಕ್ರೇಟರೀನೆ ಮಾಡಿಕೊಡೋದು. ಹೋಗಲಿ, ವಯಸ್ಸಿನ ಫಾರಂ ತಂದಿದಿಯಾ ಅಂತ ಕೇಳಿದ. ಪಾರಮ್ಮು ಕೋಳಿ ಎಲ್ಲ ನಂಗೆ ಗೊತ್ತಿಲ್ಲ ಅಂದ ಹನುಮಕ್ಕನ ನೋಡಿ ನಿಂಗಣ್ಣಂಗೆ ಅಯ್ಯೋ ಅನಿಸಿ, ಅವ್ವಾ ಇಲ್ಲಿಂದ ಬಸ್ಸ್ಟಾಂಡ್ ಹೋಗೋ ದಾರೀಲಿ ಒಂದು ಪೆಟ್ಟಿಗೆ ಅಂಗಡಿ ಐತಲ್ಲ ಅದೇ ಐಯ್ನೋರ್ದು ಅವರ ಹತ್ರ ವಯಸಿನ ಫಾರಂ ತಗೊಂಬಾ. ಬರೇ ಎಂಟಾಣೆಯಷ್ಟೆ! ಅಂದ.
ಆಯ್ತು ಸಾಮಿ ಹೋಗಿ ತರ್ತೀನಿ, ವಸಿ ನಂಗೆ ಡಾಕುಟ್ರು ಕೈಲಿ ಬರೆಸಿಕೊಡು ನನ್ನಪ್ಪ ಅನ್ನುತ್ತಾ ಹನುಮಕ್ಕ ಐನೋರ ಅಂಗಡಿ ಕಡೆ ಹೊರಟಳು. ಆಕೆ ಹೋಗೋದು ನೋಡಿದ ನಿಂಗಣ್ಣಂಗೆ ಒಂಥರಾ ಕಸಿವಿಸಿಯಾಯ್ತು, ನಾನು ಬರೆಸಿಕೊಡೋದಾ? ಐವತ್ತು ರೂಪಾಯಿ ಇಲ್ದೇನೆ ಈ ಡಾಕ್ಟ್ರು ತನ್ನಪ್ಪನೆ ಬಂದು ಕೇಳಿದ್ರು ಸೈನು ಹಾಕಲ್ವಲ್ಲ ಅಂದುಕೊಂಡು ನನಗ್ಯಾಕೆ ಊರ ಉಸಾಬರಿ ಅಜ್ಜಿ ಉಂಟು, ಡಾಕ್ಟ್ರು ಉಂಟು ಅಂದುಕೊಂಡು ಅರ್ದಕ್ಕೆ ನಿಲ್ಲಿಸಿದ್ದ ಕಸ ಹೊಡೆಯೋಕೆ ಶುರು ಮಾಡಿದ. ಐನೋರ ಅಂಗಡಿಗೆ ಹೋದ ಅಜ್ಜಿ ವಯಸ್ಸಿನ ಫಾರಂ ತಗೊಂಡು ಬರೋ ಹೊತ್ತಿಗೆ ಆಸ್ಪತ್ರೆ ತುಂಬಾ ಜನ ಸೇರಿದ್ದರು. ಡಾಕ್ಟ್ರು ರೂಮಿನ ಮುಂದೆ ನಿಂತು ಮಾತಾಡುತ್ತಿದ್ದ ಜನರ ಮಾತುಗಳನ್ನು ಕೇಳ್ತಾ ಅಲ್ಲಿಯೇ ಇದ್ದ ಬೆಂಚಿನ ತುದಿಯಲ್ಲಿ ಕೂತಳು. ಹೊರಗೆ ಮೋಟಾರ್ ಬೈಕಿನ ಗುಡುಗುಡು ಶಬ್ದ ಕೇಳಿಸ್ತಿದ್ದಾಗೆ ಜನ ಡಾಕ್ಟ್ರ್ರು ಬಂದ್ರು ಅಂತ ಅವರಿಗಿಂತ ಮುಂಚೇನೇ ರೂಮಿನೊಳಗೆ ಹೋದರು. ಹನುಮಕ್ಕ ಬಿಟ್ಟ ಕಣ್ಣು ಬಿಟ್ಟುಕೊಂಡು ಡಾಕ್ಟ್ರು ಬರೋದನ್ನ ಕಾಯ್ತಾ ಕುಂತಳು. ಹೊರಗಿನ ಬಾಗಿಲಿಂದ ಅದೇ ಅಟೆಂಡರ್ ನಿಂಗಣ್ಣ ದೊಡ್ಡದೊಂದು ಕರೀ ಬ್ಯಾಗು ಹಿಡಿದುಕೊಂಡು ಬಂದ. ಅವರ ಹಿಂದೆ ಕುಳ್ಳಗೆ ಕೆಂಪಗೆ ಅರ್ದ ತಲೆ ಕೂದಲು ಉದುರಿ ಹೋಗಿದ್ದ ಡಾಕ್ಟ್ರು ಬಂದು ರೂಮಿನ ಒಳಗೆ ಹೋದ. ತಾನು ಒಳಗೆ ಹೋಗೋದೊ ಬ್ಯಾಡವೊಅಂತ ಯೋಚನೆ ಮಾಡ್ತಾನೆ ಹನುಮಕ್ಕ ನಿದಾನಕ್ಕೆ ಎದ್ದು ರೂಮಿನ ಬಾಗಿಲಲ್ಲಿ ನಿಂತವರನ್ನು ಸರಿಸಿಕೊಂಡು ಒಳಗೆ ಹೋದಳು. ದೊಡ್ಡದೊಂದು ಟೇಬಲ್ಲಿನ ಮುಂದೆ ಮಾತ್ರೆ,ಔಷದಿಗಳ ಸೀಸಗಳನ್ನು ಹರಡಿಕೊಂಡು ಕೂತಿದ್ದವನ ಸುತ್ತ ಜನವೊ ಜನ ಯಾರು ಏನು ಹೇಳ್ತಾ ಇದಾರೆ ಅಂತ ಗೊತ್ತಾಗದಷ್ಟು ಗದ್ದಲ. ಯಾರೊ ಕಾಯಿಲೆ ಹೇಳ್ತಿದ್ರು ಡಾಕ್ಟ್ರು ಅದನ್ನು ಕೇಳಿಸಿಕೊಂಡು ಆಯ್ತು ಇಂಜಕ್ಷನ್ ತಗೊಳ್ರಿ ಸರಿ ಹೋಗುತ್ತೆ ಅಂತ ಎದ್ದು ಇನ್ನೊಂದು ಮೂಲೇಲಿದ್ದ ಟೇಬಲ್ಲಿನಲ್ಲಿ ಮಲಗಿಸಿ ಇಂಜಕ್ಷನ್ ಕೊಡೋದು ಮತ್ತೆ ಬಂದು ಇನ್ನೊಬ್ಬನ ಕಾಯಿಲೆ ಕೇಳೋದು ಮಾಡ್ತಾ ಇದ್ದ. ಇಂಜೆಕ್ಷನ್ ಮಾಡಿಸಿಕೊಂಡೋನು ಕೊಟ್ಟ ದುಡ್ಡನ್ನ ಪ್ಯಾಂಟಿನ ಜೇಬಲ್ಲಿ ತುರುಕ್ತ ಇದ್ದ ಈ ಡಾಕ್ಟ್ರು ಅದೆಂಗೆ ಈ ಗಲಾಟೇಲೂ ಯಾರಿಗೆ ಏನು ಕಾಯಿಲೆ ಅಂತ ಅರ್ಥ ಮಾಡಿಕ್ಕಂಡು ಔಷದಿ ಕೊಡ್ತಾನೆ ಅಂತ ಗೊತ್ತಾಗದೆ ಹನುಮಕ್ಕ ನೋಡ್ತಾ ನಿಂತೇ ಇದ್ದಳು. ತೋರಿಸಿಕೊಂಡ ಜನ ಹೊರಗೆ ಹೋಗೋದು, ಹೊಸಬರು ಒಳಗೆ ಬರೋದು ನಡೆದೇ ಇತ್ತು. ಡಾಕ್ಟ್ರು ಕಾಯಿಲೆ ಮನುಷ್ಯರನ್ನು ನೋಡ್ತಾ ಇರೋವಾಗ ನಾನೆಂಗೆ ಪಾರಂನ ಕೊಡೋದು ಅಂತ ಹನುಮಕ್ಕ ಅರ್ದ ಭಯ ಸಂಕೋಚದಿಂದ ನಿಂತೇ ಇದ್ದಾಗ ಪಕ್ಕದಲ್ಲಿದ್ದ ಹೆಂಗಸೊಬ್ಬಳು ಹೋಗಜ್ಜಿ ಡಾಕ್ಟ್ರ ಹತ್ರ ಅಂದಳು. ಡಾಕ್ಟ್ರು ಮುಂದೆ ಪಾರಂ ಚಾಚಿ ಸಾಮಿ, ನಂಗೋಂದು ಸಯಿನು ಹಾಕಿ ಕೊಡಿ ಅಂತ ಕೇಳಿದಳು. ಅದುವರೆಗು ಸೌಮ್ಯವಾಗಿದ್ದ ಡಾಕ್ಟ್ರು ಮುಖ ಕೆಂಪಾಗಿ ಅಜ್ಜಿ ನಾನೀಗ ಕಾಯಿಲೆಯವರನ್ನ ನೋಡಲೋ ನಿನ್ನಂತೋರ ಅರ್ಜಿಗಳಿಗೆ ಸೈನು ಮಾಡ್ತಾ ಕೂರಲೋ ಸಾಯಂಕಾಲ ನಾಲ್ಕು ಗಂಟೆ ಮೇಲೆ ಬರೋಕಾಗಲ್ವ ಅಂತ ರೇಗಿದ. ಡಾಕ್ಟ್ರ ಜೋರುದ್ವನಿಗೆ ಬೆದರಿದ ಹನುಮಕ್ಕ ಆಯ್ತು ಸಾಮಿ ಸಾಯಂಕಾಲಾನೆ ಬರ್ತೀನಿ ಅಂತ ಪಾರಂ ವಾಪಾಸು ತಗೊಂಡು ಹೊರಗೆ ಬಂದಳು. ಹೊರಗೆ ನಿಂತಿದ್ದ ನಿಂಗಣ್ಣ ಅಜ್ಜಿ ಸಾಯಂಕಾಲ ಅಂದ್ರೆ ನಾಲ್ಕು ಗಂಟೆಗೆ ಬಾ. ಬರ್ತಾ ಜೊತೆಗೆ ದುಡ್ಡೂ ತಗೊಂಬಾ ಎಂದ. ದುಡ್ಡು ಅನ್ನೋ ಮಾತು ಹನುಮಕ್ಕನಿಗೆ ಅರ್ಥವಾಗಲಿಲ್ಲ. ಸುಮ್ಮನೆ ತಲೆಯಾಡಿಸಿ ಆಸ್ಪತ್ರೆಯಿಂದ ಹೊರಗೆ ಬಂದಳು ಹೊತ್ತಿಕೊಂಡು ಉರಿಯುತ್ತಿದ್ದ ಬಿಸಿಲಲ್ಲಿ ಮನೆಯತ್ತ ಹೊರಟವಳಿಗೆ ಸಾಯಂಕಾಲದ ತನಕ ಕಾದು ಒಂದೇ ಸಾರಿ ಸಯಿನು ಮಾಡಿಸಿಕೊಂಡೇ ಹೋಗಿ ಬಿಡೋಣ ಅನಿಸಿ. ಆಸ್ಪತ್ರೆ ಪಕ್ಕದಲ್ಲಿದ್ದ ಮರದ ಕೆಳಗೆ ಕುಂತು ಕಣ್ಮುಚ್ಚಿದಳು. ಹನುಮಕ್ಕನಿಗೆ ಎಚ್ಚರವಾದಾಗ ಆಗಲೇ ಮೂರು ಗಂಟೆಯಾಗಿತ್ತು. ಟೈಮು ಗೊತ್ತಾಗದೆ ದಡಬಡಿಸಿ ಎದ್ದವಳು ಮತ್ತೆ ಆಸ್ಪತ್ರೆ ಒಳಗೆ ಹೋದಳು. ಡಾಕ್ಟ್ರು ರೂಮಿನ ಬಾಗಿಲು ತೆಗೆದೇ ಇತ್ತು ಡಾಕ್ಟ್ರು ಕಾಣಲಿಲ್ಲ. ಅಲ್ಲೇ ಮೂಲೆಯಲ್ಲಿ ತೂಕಡಿಸ್ತಾ ಇದ್ದ ನಿಂಗಣ್ಣನ ಮೈ ಮುಟ್ಟಿ ಎಬ್ಬಿಸಿ ಸಾಮಿ ಡಾಕ್ಟ್ರು ಎಲ್ಲಿಗೆ ಹೋದರು ಅಂತ ಕೇಳಿದಳು. ಅಜ್ಜಿ ಅವರು ಊಟಕ್ಕೆ ಹೋಗಿದಾರೆ ಈಗ ಬರ್ತಾರೆ ಕೂತುಕೊ, ಅಲ್ಲಾ ವೃದ್ದಾಪ್ಯ ವೇತನ ಮಾಡಿಸೋಕೆ ಬಂದಿದಿಯಲ್ಲ. ನಿಂಗೆ ಮಕ್ಕಳಿಲ್ವಾ ಅಂತ ಅಂದ ನಿಂಗಣ್ಣ ಹನುಮಕ್ಕನ ಮಾತುಗಳಿಗೆ ಕಾಯ್ತಾ ಕೂತ. ಮಕ್ಕಳು ಯಾಕಿಲ್ಲ ಸಾಮಿ ಇರೊ ಒಬ್ಬ ಗಂಡು ಮಗ ಬೆಂಗಳೂರಲ್ಲ್ಲಿ ಕೆಲಸ ಮಾಡ್ತಿದಾನೆ. ಅಲ್ಲಿಯವಳನ್ನೇ ಮದ್ವೆ ಆಗಿ ಬದುಕ್ತಿದಾನೆ. ನಂಗೂ ಅಲ್ಲಿ ಹೋಗಿ ಅವನ ಜೊತೆ ಇರೋ ಆಸೆ. ಅವನಿಗೆ ಕೇಳಿದರೆ ಅವ್ವಾ ನೀನೂ ಅಲ್ಲಿಗೆ ಬಂದು ಬಿಟ್ರೆ ಇಲ್ಲಿರೂ ನಮ್ಮ ಗುಡಿಸಿಲಿರೊ ಜಾಗಾನ ಅಕ್ಕಪಕ್ಕದೋರುಬೇಲಿ ಹಾಕ್ಕೊಂಡು ನುಂಗಿ ಹಾಕಿಬಿಡ್ತಾರೆ. ಒಂದಷ್ಟು ವರ್ಷ ಇಲ್ಲಿರು. ಇಲ್ಲಿಗೆ ದೊಡ್ಡ ರಸ್ತೆ ಬರುತ್ತೆ. ಆಗ ಜಾಗದ ರೇಟೂ ಜಾಸ್ತಿಯಾಗುತ್ತೆ. ಆಗ ಇದನ್ನು ಮಾರಿ ಕರ್ಕೊಂಡು ಹೋಗ್ತೀನಿ ಅಂತಾ ಇದಾನೆ. ಹಂಗಾಗಿ ಇಲ್ಲಿ ನಾನೊಬ್ಳೇ ಇದೀನಿ. ಇನ್ನು ಇರೋ ಒಬ್ಳು ಮಗಳು ಯಾರನ್ನೊ ಕಟ್ಕೊಂಡು ಓಡಿ ಹೋದೋಳು ಎಲ್ಲಿದಾಳೆ ಅಂತಾನೆ ಗೊತ್ತಿಲ್ಲ ಅಂದು ಉಮ್ಮಳಿಸಿಬಂದ ದು:ಖವನ್ನು ತಡೆ ಹಿಡಿದಳು. ಹಂಗಾರೆ ನಿನ್ನ ಮಗ ನಿಂಗೆ ದುಡ್ಡು ಕಳಿಸ್ತಾನಾ? ನಿಂಗಣ್ಣನ ಮಾತು ಕೇಳಿದ ಹನುಮಕ್ಕ ಅದುಮಿಟ್ಟುಕೊಂಡಿದ್ದ ದು:ಖವನ್ನು ತಡೆಹಿಡಿಯಲಾಗದೆ ಅಳತೊಡಗಿದಳು. ಎಲ್ಲಿಯ ದುಡ್ಡು ಸಾಮಿ? ಸೊಸೈಟಿ ರಾಮಣ್ಣ ದಿನಾ ಬೆಳಿಗ್ಗೆ ಎದ್ದು ಸೊಸೈಟಿ ಒಳಗೆ ಹೊರಗೆ ಕಸ ಹೊಡಿಯೋ ಕೆಲಸ ವಹಿಸಿದಾನೆ. ಕಸ ಹೊಡೆದಾದ ಮೇಲೆ ಹಗಲೆಲ್ಲ ಅಲ್ಲೇ ಕಾಯ್ತಾ ಇರ್ತೀನಿ. ರೇಷನ್ ಕಾರ್ಡಿನೋರು ಅಕ್ಕಿ ತಗೊಂಡು ಹೋಗೋಕೆ ಬಂದಾಗ ತೂಕ ಮಾಡೋವಾಗ ಚೆಲ್ಲಿದ ಅಕ್ಕೀನ ಸಾಯಂಕಾಲ ಕಸ ಹೊಡೀವಾಗ ಬಾಚಿ ಗುಡ್ಡೆ ಮಾಡಿ ಗಂಟು ಕಟ್ಟಿಕೊಂಡು ಹೋಗ್ತೀನಿ. ಇನ್ನು ಉಪ್ಪು ಹುಣಸೆಹಣ್ಣು ಮೆಣಸಿನ ಕಾಯಿಗೆ ರಾಮಣ್ಣ ಆಗಾಗ ಏನಾದರು ಕೊಡ್ತಿರ್ತಾನೆ. ಹೆಂಗೋ ದಿನಕ್ಕೊಂದು ಸಾರಿ ಉಣ್ಣೋಕೆ ಶಿವ ಕೊಟ್ಟವ್ನೆ ಅಂತ ಕಣ್ಣೊರೆಸಿಕೊಂಡಳು. ಅವಳ ಕತೆ ಕೇಳಿ ಸಪ್ಪಗಾದ ನಿಂಗಣ್ಣ ಅಜ್ಜಿ ಈಗ ಡಾಕ್ಟ್ರು ಬಂದುಬಿಡ್ತಾರೆ. ಅವರ ರೂಮಲ್ಲೇ ಕೂತಿರು ಅಂದ. ಇನ್ನೇನು ಹನುಮಕ್ಕ ಮೇಲೇಳಬೇಕು ಅನ್ನೋವಷ್ಟರಲ್ಲಿ ಡಾಕ್ಟ್ರು ಬಂದು ರೂಮಿನೊಳಗೆ ಹೋದರು. ಅದೆಲ್ಲಿದ್ದರೊ ಜನ ಮತ್ತೆ ಡಾಕ್ಟ್ರು ರೂಮಲ್ಲಿ ಜಾತ್ರೆ ಸೇರಿಬಿಡ್ತು. ಕಷ್ಟಪಟ್ಟು ಒಳಗೆ ಹೋದ ಹನುಮಕ್ಕ ಮತ್ತೆ ಪಾರಮ್ಮನ್ನು ಡಾಕ್ಟ್ರು ಮುಂದೆ ಹಿಡಿದಾಗ ಏನಜ್ಜಿ ಜನ ಖಾಲಿಯಾಗೋದು ಬೇಡ್ವಾ, ಸ್ವಲ್ಪ ಹೊತ್ತು ಕಾಯಿ ಅಂದ್ರು. ಸರಿ ಅಂತ ಹನುಮಕ್ಕ ಗೋಡೆಗೊರಗಿ ನಿಂತಳು. ಯಥಾ ಪ್ರಕಾರ ಡಾಕ್ಟ್ರು ಕಾಯಿಲೆಯೋರ್ನ ನೋಡೋಕೆ ಶುರು ಮಾಡಿದ. ಎಲ್ಲ ಮುಗಿದಾಗ ಸಾಯಂಕಾಲ ಆರು ಗಂಟೆಯಾಗಿತ್ತು. ಒಬ್ಬಳೇ ಹೆಂಗಸು ಮಾತ್ರ ಉಳಿದದ್ದನ್ನು ನೋಡಿದ ಹನುಮಕ್ಕ ಮತ್ತೆ ಡಾಕ್ಟ್ರ ಮುಂದೆ ಪಾರಂ ನೀಡಿದಳು. ಪಾರಂ ಎತ್ತಿಕೊಂಡ ಡಾಕ್ಟ್ರು ಹನುಮಕ್ಕನ ಮುಖ ನೋಡಿ ನಿಂದು ಇದೇ ಊರಾ? ನಿಂಗೆ ವಯಸೆಷ್ಟು? ಅಂತ ಕೇಳಿದ. ಹೆದರಿದಂತಾದ ಹನುಮಕ್ಕ ಗೊತ್ತಿಲ್ಲ ಸಾಮಿ ಅಂದಾಗ ಅಲ್ಲೆ ನಿಂತಿದ್ದ ಹೆಂಗಸಿನ ಮುಖ ನೋಡಿ ನಗುತ್ತ ಹಂಗಾದರೆ ಹದಿನಾರು ಅಂತ ಬರೆಯಲಾ ಅಂದಾಗ ಗಲಿಬಿಲಿಯಾದ ಹನುಮಕ್ಕ ನಂಗದೆಲ್ಲ ಗೊತ್ತಾಗಲ್ಲ ಸಾಮಿ ಅಂತ ವೋಟಿನ ಕಾರ್ಡಕೊಟ್ಟಳು. ಕಾರ್ಡು ತಗೊಂಡ ಡಾಕುಟ್ರು ಪೀಸು ಎಲ್ಲಿ ಅಂದ. ನನ್ನ ಹತ್ತಿರ ದುಡ್ಡಿಲ್ಲ ಸಾಮಿ ಅಂದಾಗ ನಗುತ್ತಿದ್ದವನ ಮುಖ ಕೆಂಪಾಗಿ ಮತ್ತೆ ಪುಗಸಟ್ಟೆ ಸೈನು ಮಾಡೋಕೆ ನಾನು ಇಲ್ಲಿ ಕೂತಿದಿನಾ? ಐವತ್ತು ರೂಪಾಯಿ ಪೀಸು ಕೊಡು ಸೈನ್ ಮಾಡ್ತೀನಿ ಅಂದ. ಸಾಮಿ ನನ್ನ ಹತ್ತಿರ ದುಡ್ಡಿಲ್ಲ ಸ್ವಾಮಿ. ಕೈಮುಗೀತಿನಿ, ನಿಮ್ಮ ಹೆಸರು ಹೇಳಿಕೊಂಡು ತುತ್ತು ಅನ್ನ ತಿಂತೀನಿ ಸೈನು ಮಾಡಿಕೊಡಿ ಅಂತ ಗೋಗರೆದಳು. ಫಾರಂ ಮತ್ತು ಕಾರ್ಡನ್ನು ಹನುಮಕ್ಕನ ಕೈಗಿಟ್ಟ ಡಾಕ್ಟ್ರು ನಾಳೆ ಫೀಸೂ ತಗೊಂಡು ಬಾ ಸೈನು ಮಾಡ್ತೀನಿ ಅಂತೇಳಿ ಏಯ್ ನಿಂಗಣ್ಣ ಬಾ ಇಲ್ಲಿ ಅಂತ ಹೊರಗಿದ್ದವನನ್ನು ಕರೆದು ಇವರಿಗೆಲ್ಲ ಮುಂಚೇನೆ ಫೀಸ್ ಬಗ್ಗೆ ಹೇಳೋಕಾಗಲ್ವಾ ನಿನಗೆ, ಸ್ಟುಪಿಡ್ ಫೆಲೊ ಅಂತ ಬಯ್ದ. ವಿಧಿಯಿರದೆ ನಿಂಗಣ್ಣನ ಹಿಂಬಾಲಿಸಿ ಹನುಮಕ್ಕ ರೂಮಿಂದ ಹೊರಗೆ ಬಂದಳು. ಒಂದು ಮೂಲೇಲಿ ಹನುಮಕ್ಕನನ್ನು ಕೂರಿಸಿದ ನಿಂಗಣ್ಣ ಸ್ವಲ್ಪ ತಡಿಯಜ್ಜಿ ಡಾಕ್ಟ್ರು ಹೋಗಲಿ, ನಿನ್ನ ಹತ್ರ ಮಾತಾಡಬೇಕು ಅಂತೇಳಿದ. ಸ್ವಲ್ಪ ಹೊತ್ತಾದ ಮೇಲೆ ಡಾಕ್ಟ್ರು ಹೊರಟುಹೋದ. ಏನೂ ಮಾಡಲು ಗೊತ್ತಾಗದೆ ಕೂತಿದ್ದ ಹನುಮಕ್ಕನ ಬಳಿ ಬಂದ ನಿಂಗಣ್ಣ ಅಜ್ಜಿ ದುಡ್ಡಿಲ್ಲದೆ ಇಲ್ಲಿ ಯಾವ ಕೆಲಸಾನು ಆಗಲ್ಲ. ದುಡ್ಡಿಲ್ಲದೆ ಹೆಣಾನು ಕೊಯ್ಯಲ್ಲ ಈ ಬೇವಾರ್ಸಿ ನನ್ನ ಮಕ್ಕಳು, ಗೊತ್ತಾ? ಸುಮ್ನೆ ಓಡಾಡಿ ಸುಸ್ತು ಮಾಡಿಕೊಳ್ಳಬೇಡ. ನಾನು ಹೇಳಿದ ಹಾಗೆ ಕೇಳು ಮನೇಲೇ ಕೂತಿದ್ರೂ ನಿನ್ನ ಕೆಲಸ ಆಗುತ್ತೆ ಅಂದ. ಹೂ ಅಂದ ಹನುಮಕ್ಕ ಕತೆ ಕೇಳುವವಳಂತೆ ಕೂತಳು. ನೋಡು ಆ ಮೆಂಬರ್ ರಂಗಪ್ಪ ಇದ್ದಾನಲ್ಲ ಅವನಿಗೆ ಇಷ್ಟು ಅಂತ ಮಾತಾಡಿ ದುಡ್ಡು ಕೊಟ್ಟುಬಿಡು. ನಿಂಗೆ ದುಡ್ಡು ಬರೋತರಾ ಅವನೇ ಮಾಡ್ತಾನೆ. ಡಾಕ್ಟ್ರು ಸೈನ್, ಸೆಕ್ರೆಟರಿ ಸೈನ್ ಮತ್ತೆ ತಾಲೂಕು ಆಪೀಸಲ್ಲಿ ಸ್ಯಾಂಕ್ಷನ್ ಆಗೋ ಎಲ್ಲ ಕೆಲಸಾನು ಅವ್ನೇ ಮಾಡ್ತಾನೆ. ನಾಳೆ ಬೆಳಿಗ್ಗೇನೆ ಅವನ ಮನೆಗೆ ಹೋಗಿ ನಿನ್ನ ಕಷ್ಟ ಹೇಳಿಕೊ. ಅವನು ಕೇಳಿದ ದುಡ್ಡು ಕೊಡು ಮಾಡಿಸಿಕೊಡ್ತಾನೆ ಅಂದ. ಹಂಗಾರೆ ಸ್ವಾಮಿ ದುಡ್ಡು ಕೊಡದಲೆ ಏನೂ ಆಗಲ್ವಾ ಅಂದಳು ಅಮಾಯಕಿಯಂತೆ. ಇಲ್ಲಜ್ಜಿ ನಮಗೂ ಇದನ್ನೆಲ್ಲ ನೋಡಿ ಅಭ್ಯಾಸ ಆಗಿಬಿಟ್ಟಿದೆ. ಸೂಳೇ ಮಕ್ಕಳು ನೋಟಿಲ್ದೆ ಏನೂ ಮಾಡಲ್ಲ. ನೀನಿನ್ನು ಹೊರಡು, ನಾನೂ ಬಾಗಿಲಾಕ್ತೀನಿ ಎಂದು ನಿಂಗಣ್ಣ ಎದ್ದಗ ವಿದಿಯಿರದೆ ಹನುಮಕ್ಕನೂ ಹೊರಗೆ ಹೊರಟಳು.
ಮನೆ ಕಡೆ ಹೋಗೋವಾಗ ಮೆಂಬರ್ ರಂಗಪ್ಪನ ಮನೆ ದಾರೀಲಿ ಸಿಗೋದೇ ನೆನಪಾಗಿ ಸೀದಾ ಅವನ ಮನೆಗೆ ಹೋದಳು. ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ಪೇಪರ್ ಓದ್ತಾ ಇದ್ದ ರಂಗಪ್ಪ ಏನು ಹನುಮಕ್ಕ ಅಂದಾಗ ತನ್ನ ಪಾರಮ್ಮಿನ ಕತೆ ಹೇಳಿದಳು. ಲೊಚ್ ಲೊಚ್ ಅನ್ನುತ್ತಲೇ ಹನುಮಕ್ಕನ ಮಾತು ಕೇಳಿದ ರಂಗಪ್ಪ ನೀನೇನು ತಲೆ ಕೆಡಿಸಿಕೊಳ್ಳಬೇಡ.ನಾನು ಮೂರೇ ತಿಂಗಳಿಗೆ ದುಡ್ಡು ಬರೋ ಹಂಗೆ ಮಾಡ್ತೀನಿ. ನಾಳೆ ಮದ್ಯಾಹ್ನ ನೀನು ಬಾ ಬರೋವಾಗ ಎಂಟು ನೂರು ರೂಪಾಯಿ ತಗೊಂಡು ಬಾ ಸಾಕು. ಎಲ್ಲ ಕಡೆ ನಾನೇ ಓಡಾಡಿ ಮಾಡಿಸ್ತೀನಿ ಎಂದ. ಹು ಅಂದು ಮನೆಗೆ ಬಂದ ಹನುಮಕ್ಕನಿಗೆ ಬೆಳಿಗ್ಗೆ ಹೊತ್ತಿಗೆ ಎಂಟುನೂರು ರೂಪಾಯಿ ತರೋ ಚಿಂತೆ ಶುರುವಾಯಿತು. ತನ್ನ ಮದ್ವೇಲಿ ಅವ್ವ ತಕ್ಕೊಂಟ್ಟಿದ್ದ ಇರೋ ಒಂದು ಹಳೆ ಬೆಂಡೋಲೆನ ಮಾರೋದು ಅಂತ ನಿರ್ಧಾರ ಮಾಡಿಕೊಂಡು ಬೆಳಿಗ್ಗೆ ಕುದಿಸಿಟ್ಟಿದ್ದ ಗಂಜಿ ಕುಡಿದು ಮಲಗಿದಳು. ಬೆಳಿಗ್ಗೆ ಎದ್ದು ಪಕ್ಕದ ಮನೆ ಸೀತಕ್ಕನ ಮಗ ನಾಗರಾಜುನ ಕರೆದು ಕೂರಿಸಿಕೊಂಡು ಓಲೆ ಬಿಚ್ಚಿಕೊಟ್ಟು ಮಗಾ ಇದನ್ನು ಮಾರಿ ದುಡ್ಡು ತಂದು ಕೊಡು ಅಂತ ಗೋಗರೆದಳು. ಹೂ ಅಂತ ತಗೊಂಡು ಹೋದ ನಾಗರಾಜು ಸೀದಾ ಸೇಟು ಅಂಗಡಿಗೆ ಹೋಗಿ ಎರಡು ಸಾವಿರಕ್ಕೆ ಅವನ್ನು ಮಾರಿದವನು, ಹನುಮಕ್ಕನ ಕೈಗೆ ಒಂದು ಸಾವಿರ ಕೊಟ್ಟು ಇಷ್ಟೇ ಕಣಜ್ಜಿ ಸಿಕಿದ್ದು, ಇದು ಒರಿಜಿನಲ್ ಬಂಗಾರ ಅಲ್ವಂತೆ ಅಂತೇಳಿ ಹೊರಟು ಹೋದ. ಆಯ್ತು ಕಣಪ್ಪ ಅಂತ ಅದನ್ನು ತಗೊಂಡು ರಂಗಪ್ಪನ ಮನೆಗೆ ಹೋದಳು. ಹನುಮಕ್ಕನ ಕೈಲಿ ದುಡ್ಡು ಇಸಗೊಂಡವನು ಒಂದು ರಾಶಿ ಪಾರಮ್ಮುಗಳಿಗೆ ಅವಳ ಹೆಬ್ಬೆಟ್ಟು ಹೊತ್ತಿಸಿಕೊಂಡು ಹನುಮಕ್ಕ ನೀನು ಹೋಗು ಉಳಿದ್ದನ್ನು ನಾನು ನೋಡಿಕೊಳ್ತೀನಿ ಅಂದ. ಅವನ ಹೆಂಡತಿ ಕೊಟ್ಟ ಕಾಪಿ ಕುಡಿದು ಹೊರಟ ಹನುಮಕ್ಕನ ಮುಖದಲ್ಲಿ ಇನ್ನೇನು ದುಡ್ಡು ಸಿಕ್ಕೇ ಬಿಟ್ಟಿತು ಅನ್ನೋ ಖುಶಿ ಎದ್ದುಕಾಣತೊಡಗಿತು.
ಇದಾಗಿ ಮೂರು ತಿಂಗಳು ಕಳೆಯುತ್ತಾ ಬಂದರೂ ಹನುಮಕ್ಕನ ಕೈಗ ಯಾವ ದುಡ್ಡೂ ಬರಲಿಲ್ಲ. ದಿನಾ ರಂಗಪ್ಪನ ಮನೆಗೆ ಹೋಗಿ ಕೇಳೋದು ಅವನು ಹೇಳೋ ಸಬೂಬು ಕೇಳಿಕೊಂಡು ಬರೋದೆ ಆಗ್ತಿತ್ತು. ಇದರ ಮದ್ಯೆ ಸೊಸೈಟಿ ಹತ್ತಿರ ಕಸ ಗುಡಿಸುವಾಗ ಜಾರಿಬಿದ್ದ ಹನುಮಕ್ಕನ ಸೊಂಟಕ್ಕೆ ತುಂಬಾ ಪೆಟ್ಟಾಗಿ ಹೊರಗೆಓಡಾಡದಂತಾದಳು. ಅಕ್ಕಪಕ್ಕದ ಮನೆಯವರು ಮಗನಿಗೆ ವಿಷಯ ತಿಳಿಸಿದರೂ ಅವನು ಬರಲೇ ಇಲ್ಲ. ಒಂದಷ್ಟು ದಿನ ಅಕ್ಕಪಕ್ಕದೋರೇ ಅನ್ನಗಂಜಿ ಕೊಟ್ಟು ನೋಡಿಕೊಂಡರು. ಒಂದು ದಿನ ಸಾಯಂಕಾಲ ತಳವಾರರ ಶಿವಣ್ಣ ಬಂದವನು ಅದ್ಯಾಕಿಂಗೆ ಮಾಡಿದೆ ಹನುಮಕ್ಕ? ಈ ಜಾಗಾನ ಖಾಲಿ ಎರಡುಸಾವಿರಕ್ಕೆ ರಂಗಪ್ಪನಿಗೆ ಮಾರಿದ್ಯಲ್ಲ. ನಮಗೆ ಹೇಳಿದ್ರೆ ಇನ್ನೂ ಜಾಸ್ತಿ ದುಡ್ಡಿಗೆ ಮಾರಿಸ್ತಿರಲಿಲ್ವಾ ಅಂದ. ತಳವಾರನ ಮಾತು ಕೇಳಿದ ಹನುಮಕ್ಕ ಗಾಬರಿಯಿಂದ ಎದೆ ಹಿಡಿದುಕೊಂಡು ಮಲಗಿಬಿಟ್ಟಳು. ತನ್ನ ಹತ್ತಿರ ಅಷ್ಟೊಂದು ಹಾಳೆಗಳಿಗೆ ಹೆಬ್ಬೆಟ್ಟು ಒತ್ತಿಸಿಕೊಂಡ ರಂಗಪ್ಪನ ಒಳಮರ್ಮ ಅರ್ಥವಾದ ಹನುಮಕ್ಕ ಅಯ್ಯೋ ದ್ಯಾವ್ರೆ ಈಗ ನನ್ನ ಮಗನಿಗೆ ಏನು ಹೇಳಲಿ? ಅಂತ ಮಾತಾಡಲಾರದೆ ಒಳಗೊಳಗೇ ಅಳತೊಡಗಿದಳು. ಹನುಮಕ್ಕನ ಸಂಕಟ ನೋಡಲಾಗದ ತಳವಾರ ಶಿವಣ್ಣನೂ ಮಾತಾಡದೆ ಎದ್ದುಹೋದ. ಮದ್ಯರಾತ್ರಿಯ ಹೊತ್ತಿಗೆ ನೋವು ಸಂಕಟ ತಡೆಯಲಾರದ ಹನುಮಕ್ಕ ಸೀಮೆಎಣ್ಣೆ ಬುಡ್ಡಿಯಿಂದ ಗುಡಿಸಿಲ ಒಳಗೆ ಬೆಂಕಿ ಹಚ್ಚಿಕೊಂಡು ಸತ್ತು ಹೋದಳು. ಅವಳನ್ನು ಸುಟ್ಟ ಬೆಂಕಿ ಇಡೀ ಗುಡಿಸಲನ್ನು ಭಸ್ಮ ಮಾಡಿತ್ತು.
ವಿಷಯ ತಿಳಿದ ಪೋಲಿಸರು ಹನುಮಕ್ಕನ ಅರ್ದಬೆಂದ ದೇಹವನ್ನು ಪೋಸ್ಟ್ಮಾರ್ಟಂಗೆಂದು ಹತ್ತಿರದ ಸ್ಮಶಾನಕ್ಕೆ ತಂದು ಡಾಕ್ಟ್ರಿಗೆ ಹೇಳಿಕಳಿಸಿದರು. ಮದ್ಯಾಹ್ನದ ಹೊತ್ತಿಗೆ ನಿಂಗಣ್ಣನ ಜೊತೆಗೆ ಅಲ್ಲಾಡಿಕೊಂಡು ಬಂದ ಡಾಕ್ಟ್ರು ಹೆಣದ ಮುಖ ನೋಡಿದವನೆ ನಿಂಗಣ್ಣ ಈ ಮುಖಾನ ನಾನು ಎಲ್ಲೊ ನೋಡಿದ ಹಾಗಿದೆ. ಈಕೆ ನಮ್ಮ ಆಸ್ಪತ್ರೆಗೆ ಪೇಶಂಟ್ ಆಗಿ ಬರ್ತಿದ್ರಾ ಅಂತ ಕೇಳಿದ. ಕರಕಲಾಗಿದ್ದ ಹನುಮಕ್ಕನ ಮುಖವನ್ನೇ ನೋಡುತ್ತ ತನ್ನ ಹತಾರಗಳನ್ನು ಮರದ ಪೆಟ್ಟಿಗೆಯಿಂದ ತೆಗೆಯುತ್ತಿದ್ದ ನಿಂಗಣ್ಣನಿಗೆ ಆ ಪ್ರಶ್ನೆಗೆ ಉತ್ತರ ಕೊಡಬೇಕೆನ್ನಿಸದೆ ಮೌನವಾಗುಳಿದ.
ಅದಾಗಿ ಮೂರು ದಿನಕ್ಕೆ ಅಪ್ಪಾ ಸ್ವಾಮಿ ಡಾಕುಟರು ಎಷ್ಟು ಹೊತ್ತಿಗೆ ಬರ್ತಾರೆ. ವಯಸ್ಸಿನ ಫಾರಂ ಬರೆಸಬೇಕಾಗಿತ್ತು ಅಂತ ಮುದುಕಿಯೊಬ್ಬಳು ಬಂದಾಗ ಕಸ ಹೊಡೆಯುತ್ತಿದ್ದ ನಿಂಗಣ್ಣನಿಗೆ ಆಕೆಯನ್ನು ಮಾತಾಡಿಸಬೇಕು ಅನ್ನಿಸಲಿಲ್ಲ.
No comments:
Post a Comment