Mar 1, 2017

ಬೇಡಿಕೆ ಈಡೇರುವವರೆಗೆ ಧರಣಿ: ಚಲೋ ಗುಡಿಬಂಡೆ.

ಚಿಕ್ಕಬಳ್ಳಾಪುರದ ಗುಡಿಬಂಡೆ ಸರ್ಕಾರಿ ಪ್ರೌಡಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ ದಲಿತ ಯುವಕ ಮುರಳಿ ಜನವರಿ 20 ರಂದು ಗುಡಿಬಂಡೆ ಕೆರೆಯ ಬಳಿ ಹೆಬ್ಬೆಟ್ಟಿನ ಗಾತ್ರದ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಕ್ಕದ ಕೊಂಬೆ ಮುರಿದಿದೆ.

ಈ ಘಟನೆಯ ಹಿನ್ನೆಲೆ ಎಂತಹವರನ್ನೂ ನಡುಗಿಸುತ್ತದೆ. ನಮ್ಮ ದೇಶದ ಜಾತಿ ಪದ್ದತಿ, ಶೈಕ್ಷಣಿಕ ಪದ್ಧತಿಯ ಕರಾಳ ಮುಖವನ್ನು ಮತ್ತೆ ನಮ್ಮ ಮುಂದಿಟ್ಟಿದೆ. ಮುರಳಿ ಅದೇ ಶಾಲಾವರಣದಲ್ಲಿರುವ 8 ನೇ ತರಗತಿಯ ಮೇಲ್ಜಾತಿ ಹೆಣ್ಣು ಮಗಳೊಂದಿಗೆ ಸ್ನೇಹದಿಂದಿದ್ದಾನೆ. ಇದನ್ನು ಅದೇ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ಆ ಹುಡುಗಿಯ ಅಣ್ಣ ಸಾಯಿ ಗಗನ್ ಗೆ ಸಹಿಸಲಾಗಿಲ್ಲ. ತನ್ನ ತಂಗಿಯನ್ನು ಚುಡಾಯಿಸಿದ ಎಂಬ ನೆಪ ಒಡ್ಡಿ ದಿನಾಂಕ 18 ರಂದು ಶಾಲಾವರಣದಲ್ಲಿಯೇ ತನ್ನ ಸ್ನೇಹಿತರೊಂದಿಗೆ ಕೂಡಿ ಮುರಳಿಯನ್ನು ಥಳಿಸಿದ್ದಾನೆ. ಶಿಕ್ಷಕರು ಜಗಳ ಬಿಡಿಸಿ ಬುದ್ಧಿ ಹೇಳಿ ಕಳಿಸಿದ್ದಾರೆ. ಮುರಳಿ ಸಹಜವಾಗಿ ಮನೆಗೆ ಮರಳಿದ್ದಾನೆ. ಮಾರನೇ ದಿನ ಶಾಲೆಗೆ ಹೋದಾಗ ಮತ್ತೆ ಮುರಳಿಯನ್ನು ಸಾಯಿ ಗಗನ್ ಮತ್ತು ಸ್ನೇಹಿತರ ತಂಡ ಹಿಗ್ಗಾ ಮುಗ್ಗ ಥಳಿಸಿದೆ. ಅಂದೂ ಸಹ ಮುರಳಿ ಶಾಲೆ ಮುಗಿಸಿ ಮನೆಗೆ ಮರಳಿದ್ದಾನೆ. ದಿನಾಂಕ 20 ರಂದೂ ಸಹ ಎಂದಿನಂತೆ ಶಾಲೆಗೆ ಹೋಗಿರುವ ಮುರಳಿಯನ್ನು ಮತ್ತೆ ಸಾಯಿಗಗನ್ ತಂಡ ಶಾಲಾ ಆವರಣದೊಳಗೆ ಹಾಗೂ ಹೊರಗೆ ಥಳಿಸಿದ್ದಾರೆ. ಅಷ್ಟೆ ಅಲ್ಲ ಒಂದಷ್ಟು ಬೈಕುಗಳಲ್ಲಿ ಮುರಳಿಯನ್ನು ಹೊತ್ತೊಯ್ದಿದ್ದಾರೆ. ಇದನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ದಸಂಸದ ಸಿ.ಜಿ.ಗಂಗಪ್ಪ ಹೇಳುತ್ತಾರೆ‌. ಹೀಗೆ ಮುರಳಿಯನ್ನು ಬೈಕಿನಲ್ಲಿ ಹೊತ್ತೊಯ್ದ ನಂತರ ಸಂಜೆ 3:00 ಗಂಟೆಗೆ ಸಮೀಪ ಮುರಳಿ ಶವವಾಗಿ ಪತ್ತೆಯಾಗಿದ್ದಾನೆ.

ಮುರುಳಿ ನೇಣುಹಾಕಿಕೊಂಡ ಎನ್ನಲಾದ ಮರ
ನಂತರ ಅದನ್ನು ಮುಚ್ಚಿ ಹಾಕುವ ಎಲ್ಲಾ ಪ್ರಯತ್ನಗಳನ್ನು ಪೊಲೀಸರು ಮಾಡಿದ್ದಾರೆ. ಅಂದೇ ಹುಡುಗಿಯ ಪೋಷಕರು ಶಾಲೆಗೆ ಭೇಟಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಮುರಳಿ‌ನೇತಾಡುತ್ತಿದ್ದ ರೆಂಬೆ ಹೆಬ್ಬೆಟ್ಟಿನ ಗಾತ್ರದ್ದು, ಪಕ್ಕದ ರೆಂಬೆ ಮುರಿದಿದೆ. ಆಸ್ಪತ್ರೆಗೆ ಮುರಳಿಯನ್ನು ಕರೆದುಕೊಂಡು ಹೋಗುವುದಾಗಿ ಹೇಳಿದ ಶಿಕ್ಷಕರು ಏಕೆ ಕರೆದುಕೊಂಡು ಹೋಗಲಿಲ್ಲ? ಪೊಲೀಸರು ಕೇವಲ 306 ಆತ್ಮಹತ್ಯೆ ಕೇಸ್ ಯಾಕೆ ಹಾಕಿದರು? ಪೋಸ್ಟ್ ಮಾರ್ಟಂ ಗುಡಿಬಂಡೆಯಲ್ಲಿ ಏಕಾಗಲಿಲ್ಲ? ಸ್ಥಳಿಯ ಡಾಕ್ಟರ್ ಪೋಸ್ಟ್ ಮಾರ್ಟಂ ಮಾಡದೆ ಮೇಲಧಿಕಾರಿ ಸರ್ಜನ್ ಮಾಡಿದ್ದೇಕೆ? ಶಾಕ್ ನಲ್ಲಿದ್ದ ಪೋಷಕರಿಂದ ಪೊಲೀಸರು ಆತ್ಮಹತ್ಯೆ ಎಂದು ಬೇರೆಯವರಿಂದ ಬರೆಸಿದ ದೂರಿಗೆ ಸಹಿ ಹಾಕಿಸಿದ್ದೇಕೆ? ಘಟನಾ ಸ್ಥಳಕ್ಕೆ ತನಿಖಾ ಶ್ವಾನಗಳನ್ನ ಏಕೆ ಕರೆಸಲಿಲ್ಲ? ಪೋಷಕರು ಕೊಲೆ ಎಂದು ಅನುಮಾನ ವ್ಯಕ್ತ ಪಡಿಸಿದ್ದರೂ ಆತ್ಮಹತ್ಯೆ ಎಂದು ಏಕಾಗಿ ಬರೆದುಕೊಳ್ಳಲಾಯಿತು?
ಮುರುಳಿ

ಹೀಗೆ ಹಲವಾರು ಪ್ರಶ್ನೆಗಳು ಅನುಮಾನಗಳು ಮುರಳಿಯ ವಿಷಯದಲ್ಲಿ ಕಾಡುತ್ತಿವೆ. ಆತ್ಮಹತ್ಯೆಯೆಂದು ರಿಪೋರ್ಟ್ ಬಂದಿದೆ. ಬಾಲಾಪರಾಧಿಗಳಿಗೆ ಜಾಮೀನು ಸಿಕ್ಕಿದೆ.

ಮುರಳಿಗೆ ಅನ್ಯಾಯವಾಗಿರುವುದು ಖಂಡಿತ. ಶಾಲಾ ಸಮಯದಲ್ಲಿಯೇ ಸಾವಾಗಿರುವುದು ಖಚಿತ. ಅದಕ್ಕಾಗಿ ಮುರಳಿಗೆ ನ್ಯಾಯಕ್ಕಾಗಿ ದಿನಾಂಕ ಮಾರ್ಚ್ 6, 2017 ರ ಸೋಮವಾರ ನಮ್ಮ ಬೇಡಿಕೆ ಈಡೇರುವವರೆಗೂ ಗುಡಿಬಂಡೆ CPI ಕಛೇರಿ ಎದುರು ಧರಣಿ ಮಾಡೋಣ ಬನ್ನಿ. ಮುರಳಿ ಕೇಸ್ COD ಗೆ ನೀಡಲು, ಮರು ಶವಪರೀಕ್ಷೆಗೆ ಜಿಲ್ಲಾಢಳಿತ ಒಪ್ಪುವವರೆಗೆ ಧರಣಿ ಮಾಡೋಣ ಬನ್ನಿ.

ದದಸ್ವಾಹೋಸ, ಕರ್ನಾಟಕ

ದಸಂಸ ಚಿಕ್ಕಬಳ್ಳಾಪುರ

No comments:

Post a Comment