ದೇಶದ ಗಡಿಗಳಂಚಿನಲ್ಲಿದ್ದು
ದೇಶದೊಳಗಿನ ಶತ್ರುಗಳ ಗುರುತಿಸುವ ಗೂಡಚಾರ ಪಡೆ
ಅಂತಹವರನ್ನು ಒಬ್ಬೊಬ್ಬರನ್ನಾಗಿ ಹೆಕ್ಕಿ ತೆಗೆದು
ನಡುರಾತ್ರಿಯ ನೀರವ ಮೌನಗಳಲ್ಲಿ
ಸದ್ದೇ ಇರದಂತೆ ಬಂದಿಸಿ
ಯಾತನಾ ಶಿಬಿರಕ್ಕೆ ಬಿಟ್ಟು ಬರುತ್ತಿದ್ದರು
ಅಲ್ಲಿಗವರ ಕೆಲಸ ಮುಗಿಯುತ್ತಿತ್ತು.
ಯಾತನಾಶಿಬಿರದ ಸುತ್ತ ಬಂದೂಕು ಹಿಡಿದ ಕಾವಲುಗಾರರಿದ್ದರೆ
ಒಳಗೆ ಹೆಚ್ಚೆಚ್ಚು ಯಾತನೆ ನೀಡಲು ನುರಿತವರದೇ
ಒಂದು ತಂಡ
ಬೆತ್ತಲೆ ಕಟ್ಟಿಹಾಕಿದವರ ಮೈಗೆ ವಿದ್ಯುತ್ ಹರಿಸುವುದು
ಅಪಾರ ಜನರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ
ವಿಷಾನೀಲ ಬಿಟ್ಟು ಸಾಯಿಸುವುದು
ಹೀಗೆ ನಮ್ಮ ಊಹೆಗೂ ನಿಲುಕದ ಹಲವಾರು ವಿಧದ
ಯಾತನೆಗಳ ನೀಡುವ ತಂತ್ರಗಳನ್ನು ಬಳಸಿ
ದ್ರೋಹಿಗಳೆನಿಸಿಕೊಂಡವರ ಮುಗಿಸಲಾಗುತ್ತಿತ್ತು.
ಅಕಸ್ಮಾತ್ ಯಾವನಾದರು ಯಾತನೆ ತಡೆಯದೆ
ತಪ್ಪೊಪ್ಪಿಗೆ ನೀಡಿ ಬಚಾವಾಗಬೇಕೆಂದರೂ ಶಿಬಿರದ ಕಾವಲುಗಾರರು ಬಿಡುತ್ತಿರಲಿಲ್ಲ
ಅಲ್ಲಿ ಬದುಕುವ ಎರಡನೆಯ ಅವಕಾಶವೇ ಇರುತ್ತಿರಲಿಲ್ಲ.
ಈಗೀಗ ಯುದ್ದಭೂಮಿಯ ಯಾತನಾಶಿಬಿರಗಳು ಮಾಯವಾಗಿವೆ
ದೇಶದೇಶಗಳೇ ತೆರೆದ ಯಾತನಾ ಶಿಬಿರಗಳಾಗಿಬಿಟ್ಟಿವೆ
ಈ ಶಿಬಿರಗಳಿಗಾಗಿ ಹೆಚ್ಚೇನು ಹಣ ಖರ್ಚು ಮಾಡಬೇಕಿಲ್ಲ
ವಿದ್ಯುತ್,ವಿಷಾನಿಲ, ಸ್ಪೋಟಕ,ರಾಸಾಯನಿಕಗಳ ಅಗತ್ಯವೇ ಇಲ್ಲ!!
ಎಲ್ಲರಿಗೂ ಎಲ್ಲವನೂ ತೆರೆದಿಟ್ಟ ದೇಶಗಳು------
ವೀಳ್ಯ ಕೊಟ್ಟು ಕರೆತಂದ
ಕಂಪನಿಗಳು ನದಿಗಳಿಗೆ ಬೆರೆಸಿದ ವಿಷ ಕುಡಿಯುವ ಲಕ್ಷಾಂತರ ಜನರು
ನರಳುತ್ತಿದ್ದಾರೆ.
ಕುಟಿಲ ಜನರ ಕಾರಸ್ಥಾನದ ಕಾರ್ಖಾನೆಗಳು ಉಗುಳುವ
ವಿಷದ ಹೊಗೆಯ ಕುಡಿವ ಜನ
ಉಸಿರುಗಟ್ಟಿ ವಿಲವಿಲ ಒದ್ದಾಡುತ್ತಿದ್ದಾರೆ
ಇನ್ನು ಆಳುವವರು ದಿನೇದಿನೇ ಜಾರಿಗೊಳಿಸುತಿರುವ
ಹೊಸ ಹೊಸ ಶಾಸನಗಳ ಯಮಬಾರದಡಿಯಲ್ಲಿ
ಸಿಲುಕಿದ ಜನಸಾಗರ ಅಪ್ಪಚ್ಚಿಯಾಗಿ
ಲಾರಿ ಚಕ್ರದಡಿ ಸಿಕ್ಕ ನಾಯಿಮರಿಗಳಂತೆ
ಕುಂಯಿಗುಡುತ್ತಿದ್ದಾರೆ
ಅಲ್ಲಾದರು ಎರಡನೇ ಅವಕಾಶವಿರಲಿಲ್ಲ!
ಇಲ್ಲೋ ಮೊದಲನೆಯ ಅವಕಾಶವೇ ಇಲ್ಲವಾಗಿದೆ!!!
No comments:
Post a Comment