ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕಾಂಗ್ರೆಸ್ಸಿಗೆ ಬೇಕಾಗಿರುವುದು ಮ್ಯಾನೇಜರುಗಳು ಮಾತ್ರ, ನಾಯಕರುಗಳಲ್ಲ! ಮಾಜಿಮುಖ್ಯಮಂತ್ರಿಗಳಾದ ಶ್ರೀಎಸ್.ಎಂ.ಕೃಷ್ಣಾ ಎವರು ಹೇಳಿದ ಈ ಮಾತು ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆಯೊ ಬಿಡುತ್ತದೆಯೊ ಗೊತ್ತಿಲ್ಲ. ಆದರೆ ಜನರಲ್ ಆಗಿ ನೋಡಿದರೆ ಈ ಮಾತು ಬಹುತೇಕ ಎಲ್ಲ ಪಕ್ಷಗಳಿಗೂ ಅನ್ವಯವಾಗುತ್ತದೆ. ಯಾಕೆಂದರೆ ಇವತ್ತು ಒಂದು ರಾಜಕೀಯ ಪಕ್ಷವನ್ನು ನಡೆಸಲು ನಾಯಕನಾಗಲಿ, ಸಿದ್ದಾಂತವಾಗಲಿ ಬೇಕಾಗಿರುವಂತೆ ಕಾಣುತ್ತಿಲ್ಲ. ಯಾಕೆಂದರೆ ನಾಯಕನೊಬ್ಬನ ಮರ್ಜಿಯಿಂದ, ಸಿದ್ದಾಂತಗಳ ಹಂಗಿನಿಂದಲೇ ಒಂದು ರಾಜಕೀಯ ಪಕ್ಷವೊಂದನ್ನು ಮುನ್ನಡೆಸುವ ಕಾಲ ಬದಲಾಗಿದೆ. ಈಗೇನಿದ್ದರೂ ಪಕ್ಷದ ಕಛೇರಿ ಮತ್ತು ಅದರ ದೈನಂದಿನ ಖರ್ಚುವೆಚ್ಚಗಳನ್ನು ನೋಡಿಕೊಳ್ಳಬಲ್ಲ, ಜಾತಿಜಾತಿಗಳ ಸಮಾವೇಶವನ್ನು ಸಂಘಟಿಸಬಲ್ಲ, ಚುನಾವಣಾ ಸಮಯದಲ್ಲಿ ಬೃಹತ್ ರ್ಯಾಲಿಗಳನ್ನು ಆಯೋಜಿಸಬಲ್ಲ, ಸ್ಪರ್ದಿಸಿದ ಅಭ್ಯರ್ಥಿಗಳ ಖರ್ಚುವೆಚ್ಚಗಳನ್ನು ಅಗತ್ಯವಿರುವ ಹಣವನ್ನು ಅಥವಾ ಪಕ್ಷದ ನಿದಿಯನ್ನು ಕ್ರೋಡೀಕರಿಸುವ ಮತ್ತು ವಿತರಿಸುವ ಸಾಮಥ್ರ್ಯವುಳ್ಳ ವ್ಯಕ್ತಿಯೊಬ್ಬ ಸಹಜವಾಗಿಯೇ ಪಕ್ಷದ ನಾಯಕನಾಗಿ ಬಿಡುವುದು ಇವತ್ತಿನ ರಾಜಕಾರಣದ ಶೈಲಿಯಾಗಿದೆ. ಇಂಡಿಯಾದ ರಾಜಕೀಯದಲ್ಲಿ ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದಾಗಿದೆ. ತೀರಾ ಇತ್ತೀಚಿನದೆ ಒಂದು ನಿದರ್ಶನವೆಂದರೆ, ತಮಿಳುನಾಡಿನ ರಾಜಕೀಯದಲ್ಲಿ ಶ್ರೀಮತಿ ಶಶಿಕಲಾ ನಟರಾಜನ್ ವಹಿಸಿದ ಪಾತ್ರ!
ಜಯಲಲಿತಾ ನಿದನರಾದ ಕೆಲವೇ ದಿನ ಗಳಲ್ಲಿ ಶಶಿಕಲಾರವರು ಯಾವುದೇ ಗೊಂದಲ ಸೃಷ್ಠಿಯಾಗದಂತೆ ನೋಡಿಕೊಂಡು ಎ.ಐ.ಎ.ಡಿ.ಎಂ.ಕೆ.ಪಕ್ಷದ ಪ್ರದಾನಕಾರ್ಯದರ್ಶಿ ಹುದ್ದೆಗೆ ಏರಿದರು. ತದನಂತರ ಮುಖ್ಯಮಂತ್ರಿಯಾಗಿದ್ದ ಪನ್ನೀರ್ ಸೆಲ್ವಂ ಬಂಡಾಯವೆದ್ದು ತಾನೇ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡಾಗಲೂ ಶಶಿಕಲಾ ಬೆದರಿದಂತೆ ಕಾಣಲಿಲ್ಲ. ಬದಲಿಗೆ ಯಾರಿಗೂ ಯಾವುದೇ ಮುನ್ಸೂಚನೆ ನೀಡದೆ ಸುಮಾರು 130 ಶಾಸಕರನ್ನು ರಿಸಾರ್ಟಗೆ ಕರೆದುಕೊಂಡು ಹೋಗಿ ಇಟ್ಟುಕೊಂಡು ತಮಗಿರುವ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿ ಪ್ರಮಾಣವಚನಕ್ಕೆ ಬರಬಹುದಾದ ಕರೆಯನ್ನು ನಿರೀಕ್ಷಿಸುತ್ತ ಕೂತರು. ಇತ್ತ ಬಂಡಾಯವೆದ್ದ ಪನ್ನೀರ್ ಸೆಲ್ವಂ ಹತ್ತು ಜನ ಶಾಸಕರನ್ನೂ ತಮ್ಮತ್ತ ಸೆಳೆಯಲು ಸಾದ್ಯವಾಗದ ಅಸಹಾಯಕತೆಯಿಂದ ಕೂತಿದ್ದರು. ನಂತರದಲ್ಲಿ ನ್ಯಾಯಾಲಯ ಅವರಿಗೆ ಸೆರೆವಾಸ ವಿದಿಸಿದಾಗ ತಮ್ಮ ಬದಲಿಗೆ ತಮ್ಮ ನಿಷ್ಠಾವಂತನೊಬ್ಬನನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ವಿಷಯದಲ್ಲಿಯೂ ಶಶಿಕಲಾ ಅಪ್ಪಟ ರಾಜಕೀಯ ಮ್ಯಾನೇಜರಿನಂತೆಯೇ ವರ್ತಿಸಿದ್ದರು. ತೀರ್ಪುಬಂದ ಕೆಲವೇ ನಿಮಿಷಗಳಲ್ಲಿ ಪಳನಿಸ್ವಾಮಿಯವರನ್ನು ನೇಮಿಸಿ ಶಾಸಕರುಗಳೆಲ್ಲ ಅವರನ್ನು ಒಪ್ಪಿಕೊಳ್ಳುವಂತೆ ಮಾಡುವುದಿದೆಯಲ್ಲ ಇದನ್ನೆಲ್ಲ ಜನನಾಯಕರೆನಿಸಿಕೊಂಡಾಕ್ಷಣ ಮಾಡಲು ಸಾದ್ಯವಿಲ್ಲ. ಬದಲಿಗೆ ನಿರ್ವಹಣಾ ನಿಪುಣರು ಮಾತ್ರ ಇದನ್ನು ಮಾಡಬಲ್ಲರು. ಶಾಸಕರನ್ನು ಸೆಳೆಯಲು ಮತ್ತು ಅವರನ್ನು ತನ್ನ ಗುಂಪಿನಲ್ಲಿ ಹಿಡಿದಿಟ್ಟುಕೊಳ್ಳಲು ಶಶಿಕಲಾರಿಗೆ ಸಾದ್ಯವಾಗಿದ್ದು ಆಕೆ ಪಕ್ಷವೊಂದರ ಅಥವಾ ಜನ ನಾಯಕಿಯಾಗಿಯೋ ಅಲ್ಲ. ಬದಲಿಗೆ ಆಕೆಗಿದ್ದ ನಿರ್ವಹಣಾ ಗುಣದಿಂದಾಗಿ ಮಾತ್ರ!. ಇವತ್ತಿನ ಶಕ್ತಿ ರಾಜಕಾರಣದಲ್ಲಿ ಚುನಾವಣೆಗಳಲ್ಲಿ ಗೆಲ್ಲುವುದು, ಗೆದ್ದ ಮೇಲೆ ಶಾಸಕರುಗಳನ್ನು ತಮ್ಮ ಪರವಾಗಿಟ್ಟುಕೊಳ್ಳಲು ಬೇಕಾದ ಹಣ ಮತ್ತು ತೋಳ್ಬಲಗಳನ್ನು ಹೊಂದಿಸಿಕೊಂಡು ಕೆಲಸ ಮಾಡುವ ಕೌಶಲ್ಯ ಹೊಂದಿರುವವನು ಮಾತ್ರ ಪಕ್ಷವೊಂದರ ನಾಯಕನಾಗಿರಲು ಸಾದ್ಯ. ಇಂಡಿಯಾದ ಸದ್ಯದ ರಾಜಕಾರಣದಲ್ಲಿ ಇಂತಹ ವ್ಯಕ್ತಿಗಳು ಮಾತ್ರ ಯಶಸ್ವಿಯಾಗಲು ಸಾದ್ಯವೆನ್ನುವಂತಹ ವಾತಾವರಣವೊಂದು ನಿರ್ಮಾಣವಾಗಿದೆ.
ನಿಮಗೆ ನೆಪಿರಬಹುದು: 2006ರವರೆಗೂ ಕೇವಲ ಒಬ್ಬ ಶಾಸಕರಾಗಿದ್ದ ಶ್ರೀಹೆಚ್.ಡಿ.ಕುಮಾರಸ್ವಾಮಿಯವರು ಆ ದಿನಗಳಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ ಕಾರಣರಾಗಿ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡು ಬಾಜಪದ ಯಡಿಯೂರಪ್ಪನವರ ಜೊತೆ ಮೈತ್ರಿ ಸರಕಾರ ರಚಿಸಿದ್ದರ ಹಿಂದೆ ಇದ್ದದ್ದು ಇಂತಹುದೇ ಪೊಲಿಟಿಕಲ್ ಮ್ಯಾನೇಜ್ ಮೆಂಟ್ ಸ್ಕಿಲ್ ಎನ್ನಬಹುದು.ನಂತರದಲ್ಲಿ ಅವರು ಜನಪ್ರಿಯ ಮುಖ್ಯಮಂತ್ರಿಗಳಾಗಿ ಬೆಳೆದದ್ದು ಬೇರೆ ವಿಚಾರ.
ಅದಕ್ಕೂ ಹಿಂದೆ ಆಂದ್ರಪ್ರದೇಶದಲ್ಲಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎನ್.ಟಿ.ರಾಮರಾವ್ ಅವರನ್ನು ಪದಚ್ಯುತಗೊಳಿಸಿ ತಾನೇ ಮುಖ್ಯಮಂತ್ರಿಯಾದ ಶ್ರೀ ಚಂದ್ರಬಾಬು ನಾಯ್ಡುರವರದು ಸಹ ಇಂತಹುದೇ ರಾಜಕೀಯ ನಿರ್ವಹಣೆಯ ಕೌಶಲ್ಯವೇ!
ಇನ್ನು ಇಂತಹ ಕೌಶಲ್ಯವಿರುವ ಎಲ್ಲರೂ ಜನನಾಯಕರಾಗಿ ಅಧಿಕಾರ ಹಿಡಿಯದೇ ಹೋದರೂ ತಮ್ಮ ವೃತ್ತಿ ಮತ್ತು ಉದ್ಯಮಗಳನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯಲು ತಮ್ಮ ನಿರ್ವಹಣಾ ನಿಪುಣತೆಯನ್ನು ಬಳಸಿಕೊಳ್ಳುತ್ತಿರುವ ಹಲವರನ್ನು ನಾವಿಲ್ಲಿ ನೆನೆಯಬಹುದಾಗಿದೆ. ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವರ ಆಪ್ತರೆನ್ನಲಾದ ಶ್ರೀ ಅಮರ್ ಸಿಂಗ್ ಅಂತವರು ಈ ವರ್ಗಕ್ಕೆ ಸೇರುತ್ತಾರೆ. ಅವರಿಗೆ ಜನನಾಯಕನೆಂದು ಕರೆಸಿಕೊಳ್ಳುವ ಯಾವ ಇರಾದೆಯೂ ಇದ್ದಂತಿಲ್ಲ. ಬದಲಿಗೆ ತಾವು ನಡೆಸುತ್ತಿರುವ ಉದ್ಯಮಗಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದೇ ಅವರ ಮುಖ್ಯ ಧ್ಯೇಯ!
ಈ ವಿಚಾರದಲ್ಲಿ ಕಾಂಗ್ರೇಸ್ಸಾಗಲಿ ಬಾಜಪವಾಗಲಿ ಹಿಂದೆ ಬಿದ್ದಿದೆ ಎಂದೇನು ಅನ್ನಿಸುವುದಿಲ್ಲ..ಆದರೆ ನಾಯಕರುಗಳ ಮುಖವಾಡ ತೊಟ್ಟ ಅವರುಗಳನ್ನು ನಾವು ಗುರುತಿಸ ಬೇಕಷ್ಟೆ! ಬಹಳಷ್ಟು ಸಾರಿ ಇಂತಹ ಮ್ಯಾನೇಜರುಗಳೇ ಉತ್ತಮ ನಾಯಕರುಗಳಾಗಿ ಪರಿವರ್ತನೆಯಾಗುವುದನ್ನೂ ನಾವು ಕಂಡಿದ್ದೇವೆ. ಒಟ್ಟಿನಲ್ಲಿ ಇದು ರಾಜಕೀಯ ಮ್ಯಾನೇಜರುಗಳ ಕಾಲವಾಗಿರುವುದು ನಿಜ.
ಯಾರಾದರೂ ಹಣವುಳ್ಳವರು ಮುಂದೊಂದು ದಿನ ಪೊಲಿಟಿಕಲ್ ಮ್ಯಾನೇಜ್ ಮೆಂಟ್ ಬಗ್ಗೆ ಕಾಲೇಜು ತೆರೆಯುವುದಾದಲ್ಲಿ ಅದಕ್ಕೆ ವಿದ್ಯಾರ್ಥಿಗಳು ಸಿಗುತ್ತಾರೆಯೊ ಇಲ್ಲವೊ ಪಾಠ ಹೇಳಲು ಹಲವು ನಿವೃತ್ತ ರಾಜಕೀಯ ಮ್ಯಾನೇಜರುಗಳಂತೂ ಸಾಕಷ್ಟು ಜನ ಸಿಗುತ್ತಾರೆ.
No comments:
Post a Comment