ಕು.ಸ.ಮಧುಸೂದನ್
ಇದೇ ತಿಂಗಳ 16ನೇ ಮತ್ತು 21ನೇ ತಾರೀಖಿನಂದು ಮಹಾರಾಷ್ಟ್ರದ 10ಮುನ್ಸಿಪಲ್ ಕೌನ್ಸಿಲ್ಲುಗಳಿಗೆ, 283 ಪಂಚಾಯತ್ ಸಮಿತಿಗಳಿಗೆ, 26 ಜಿಲ್ಲಾ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಇದರಲ್ಲಿ ಬಹು ಪ್ರಮುಖವಾದದ್ದು ಮುಂಬೈ ನಗರದ ಆಡಳಿತದ ಹೊಣೆ ಇರುವ ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಗಳಾಗಿವೆ. ಇದಕ್ಕೆ ಕಾರಣಗಳೂ ಇವೆ:
ಮುಂಬೈ ಇಂಡಿಯಾದ ವಾಣಿಜ್ಯ ನಗರಿಯಾಗಿದ್ದು ಈ ನಗರದ ಆಡಳಿತ ಹಿಡಿಯುವುದು ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿರುತ್ತದೆ. ದೇಶದ ಹಲವಾರು ಪುಟ್ಟ ರಾಜ್ಯಗಳ ಬಜೆಟ್ಟಿಗಿಂತ ಈ ನಗರ ಪಾಲಿಕೆಯ ಬಜೆಟ್ ದೊಡ್ಡದಿದ್ದು ವಾರ್ಷಿಕವಾಗಿ ಲಕ್ಷಾಂತರ ಕೋಟಿಗಳ ಆಯವ್ಯಯ ಮಂಡನೆಯಾಗುತ್ತಿದೆ. ಇವೆಲ್ಲವನ್ನೂ ಮೀರಿ ಮುಂಬೈ ನಗರದಲ್ಲಿ ದೇಶದ ಎಲ್ಲಾ ಭಾಗಗಳ ಜನರು ವಾಸವಾಗಿದ್ದು, ಒಂದು ಮಿನಿ ಇಂಡಿಯಾ ಎನ್ನಬಹುದಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನೇ ನಿಯಂತ್ರಿಸಬಲ್ಲಂತಹ ನೂರಾರು ಉದ್ಯಮಗಳು ಇಲ್ಲವೆ. ಹೀಗಾಗಿ ಮಹಾರಾಷ್ಟ್ರದ ಪೌರ ಚುನಾವಣೆಗಳಲ್ಲಿ ಮುಂಬೈ ನಗರ ಪಾಲಿಕೆಯ ಚುನಾವಣೆಗಳಿಗೆ ವಿಶೇಷ ಮಹತ್ವ ಇದೆ.
2012 ರಿಂದ ಬೃಹತ್ ಮುಂಬೈ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಬಾಜಪ- ಶಿವಸೇನೆ ಮೈತ್ರಿಕೂಟ ಹಿಡಿದಿದ್ದು, ಇದೀಗ ಈ ಎರಡೂ ಪಕ್ಷಗಳು ತಮ್ಮ ಮೈತ್ರಿ ಮುರಿದುಕೊಂಡಿದ್ದು ಪ್ರತ್ಯೇಕವಾಗಿ ಚುನಾವಣೆಗಳನ್ನು ಎದುರಿಸುತ್ತಿವೆ. ಕೇವಲ ಮುಂಬೈ ಮಾತ್ರವಲ್ಲದೆ ಇಡೀ ರಾಜ್ಯದಾದ್ಯಂತವೂ ಇವು ಪ್ರತ್ಯೇಕವಾಗಿಯೇ ಸ್ಪರ್ದಿಸಲಿದ್ದು, ದಶಕಗಳ ಮೈತ್ರಿ ಮುರಿದು ಬಿದ್ದಿದೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಇದೇನು ಅಚ್ಚರಿಯ ಬೆಳವಣಿಗ ಏನಲ್ಲ. 2014ರ ಸಾರ್ವತ್ರಿಕ ಚುನಾವಣೆಯಲ್ಲಿಯೇ ಈ ಮೈತ್ರಿ ಮುರಿದು ಬಿದ್ದಿದ್ದು, ಅದಕ್ಕೆ ತಾತ್ಕಾಲಿಕವಾದ ಅಧಿಕಾರದ ತೇಪೆ ಹಾಕಿ ಕಾಪಾಡಿಕೊಂಡು ಬರಲಾಗಿತ್ತಷ್ಟೆ! ಈ ಮುರಿದ ಮೈತ್ರಿಯ ಬಗ್ಗೆ ಮತನಾಡುತ್ತ ಶಿವಸೇನೆಯ ನಾಯಕ ಶ್ರೀ ಉದವ್ ಠಾಕ್ರೆಯವರು ಬಾಜಪ ಮತ್ತು ಶಿವಸೇನೆಯ ಸಂಬಂದ ಕೊಳೆತುಹೋಗಿ ಎಷ್ಟೊ ವರ್ಷಗಳಾಗಿವೆ. ನರೇಂದ್ರ ಮೋದಿಯರ ರಾಷ್ಟ್ರರಾಜಕಾರಣದ ಪ್ರವೇಶ ಇದನ್ನು ಅಧಿಕೃತಗೊಳಿಸಿದೆಯಷ್ಟೇ ಎಂದಿದ್ದಾರೆ.
ಇದೆಲ್ಲ ಶುರುವಾಗಿದ್ದು 2014ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಎರಡೂ ಪಕ್ಷಗಳ ನಡುವೆ ನಡೆದ ಸ್ಥಾನ ಹಂಚಿಕೆಯ ಮಾತುಕತೆ ಸಂದರ್ಬದಲ್ಲಿ. ನರೇಂದ್ರ ಮೋದಿಯವರ ಅಲೆಯ ಕಾರಣದಿಂದ ಗೆಲುವು ಖಾತ್ರಿ ಮಾಡಿಕೊಂಡಿದ್ದ ಬಾಜಪ ಶಿವಸೇನೆಗೆ ಈ ಹಿಂದೆ ಬಿಟ್ಟುಕೊಡುತ್ತಿದ್ದ ಸ್ಥಾನಗಳಿಗಿಂತ ಬಹಳ ಕಡಿಮೆ ಸ್ಥಾನಗಳನ್ನು ನೀಡುವುದಾಗಿ ಹೇಳಿದಾಗ ಇದಕ್ಕೆ ಶಿವಸೇನೆ ಒಪ್ಪದೇ ಹೋಯಿತು. ಇದು ಶಿವಸೇನೆಗೆ ಮಾಡಿದ ಅಪಮಾನವೆಂದು ಬಾವಿಸಿದ ಶಿವಸೇನೆ ಹೆಚ್ಚು ಸ್ಥಾನಗಳಿಗಾಗಿ ಪಟ್ಟು ಹಿಡಿದು ಕೂತಿತು. ಆದರೆ ಗೆಲುವಿನ ವಾಸನೆ ಹಿಡಿದಿದ್ದ ಬಾಜಪದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರು, ಶಿವಸೇನೆಯೊಂದಿಗೆ ಮೈತ್ರಿಯ ಮಾತುಕತೆ ನಿಲ್ಲಿಸುವಂತೆ ರಾಜ್ಯನಾಯಕರುಗಳಿಗೆ ಸೂಚನೆ ನೀಡಿಬಿಟ್ಟರು. ಇದು ಮರಾಠ ಸ್ವಾಭಿಮಾನಕ್ಕೆ ಮಾಡಿದ ಅವಮಾನವೆಂದು ಘೋಷಿಸಿದ ಶಿವಸೇನೆ ಸ್ವತಂತ್ರವಾಗಿ ಸ್ಪರ್ದಿಸಿತು. ಕೇಂದ್ರದಲ್ಲಿ ಮೋದಿಯವರ ಸರಕಾರದ ಪಾಲುದಾರರಾಗಿಯೂ ಬಾಜಪ ಮಾಡಿದ ಈ ಅವಮಾನ ಶಿವಸೇನೆಯನ್ನು ಕೆರಳಿಸಿದ್ದರಲ್ಲಿ ಅಚ್ಚರಿಯೇನಲ್ಲ. ಆ ಚುನಾವಣೆಯಲ್ಲಿ 122 ಸ್ಥಾನಗಳನ್ನು ಗೆದ್ದ ಬಾಜಪ ಅಧಿಕಾರ ಹಿಡಿದರೆ 63 ಸ್ಥಾನಗಳನ್ನು ಪಡೆದ ಶಿವಸೇನೆ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಆದರೆ ಮತ್ತೆ ಬಾಜಪದ ಜೊತೆಯಾದ ಶಿವಸೇನೆ ಸರಕಾರದಲ್ಲಿ ಸೇರಿತು. ಆದರೆ ಆಡಳಿತದ ಮೊದಲ ದಿನದಿಂದಲೇ ಶಿವಸೇನೆ ವಿರೋಧಪಕ್ಷದಂತೆಯೇ ವರ್ತಿಸತೊಡಗಿತ್ತು. ಸರಕಾರದ ಹಲವು ತೀರ್ಮಾನಗಳನ್ನು ಸಾರ್ವಜನಿಕವಾಗಿ ಟೀಕಿಸುತ್ತ ಬಾಜಪದ ಮುಜುಗರಕ್ಕೆ ಕಾರಣವಾಗುತ್ತ ಹೋಯಿತು.
ಇದೀಗ ಎರಡೂ ಪಕ್ಷಗಳೂ ಸೇರಿ ರಾಜ್ಯ ಸರಕಾರವನ್ನು ನಡೆಸುತ್ತಿದ್ದರೂ, ಪೌರ ಚುನಾವಣೆಗೆ ಮಾತ್ರ ಪ್ರತ್ಯೇಕವಾಗಿ ಸ್ಪರ್ದಿಸಲಿವೆ. ಈ ಬಗ್ಗೆ ಮಾತನಾಡಿದ ಶಿವಸೇನೆಯ ನಾಯಕರಾದ ಶ್ರೀಉದವ್ ಠಾಕ್ರೆಯವರು ನಾವು ಸ್ಥಾನ ಹೊಂದಾಣಿಕೆಗಾಗಿ ಬಾಜಪದ ಮುಂದೆ ಬಿಕ್ಷಾ ಪಾತ್ರೆ ಹಿಡಿದು ನಿಲ್ಲುವುದಿಲ್ಲ, ನಮ್ಮ ಶಕ್ತಿಗೆ ತಕ್ಕಂತೆ ಇಡೀ ರಾಜ್ಯದಾದ್ಯಂತ ಸ್ಪರ್ದಿಸುತ್ತೇವೆಂದು ಹೇಳಿದ್ದಾರೆ. ಉದವ್ ಠಾಕ್ರೆಯವರ ಈ ಮಾತುಗಳಲ್ಲಿ ಅತಿಶಯೋಕ್ತಿಯೇನಿಲ್ಲ. ಯಾಕೆಂದರೆ ಪ್ರಾದೇಶಿಕ ಪಕ್ಷಗಳನ್ನು ಬಳಸಿಕೊಂಡು ಬೆಳೆಯುವ ರಾಷ್ಟ್ರೀಯ ಪಕ್ಷಗಳು ನಂತರದಲ್ಲಿ ತಮ್ಮನ್ನು ಬೆಳೆಸಿದ ಪಕ್ಷಗಳನ್ನೇ ಇಲ್ಲವಾಗಿಸುವ ಪ್ರವೃತ್ತಿಯೇನು ಹೊಸದಲ್ಲ. ಕಾಲದಿಂದಲೂ ಕಾಂಗ್ರೆಸ್ ಮತ್ತು ಬಾಜಪಗಳು ಇದನ್ನೇ ಮಾಡುತ್ತಾ ಬಂದಿವೆ. ಯಾವ ರಾಜ್ಯಗಳಲ್ಲಿ ತಮಗೆ ಅಸ್ತಿತ್ವ ಇರುವುದಿಲ್ಲವೊ ಅಂತಹ ರಾಜ್ಯಗಳಲ್ಲಿ ಬಲಾಢ್ಯವಾಗಿರುವ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ನೆಲೆ ಕಂಡುಕೊಳ್ಳುವ ರಾಷ್ಟ್ರೀಯ ಪಕ್ಷಗಳು, ನಂತರದಲ್ಲಿ ತಮ್ಮ ಬೆಳವಣಿಗೆಗೆ ಕಾರಣವಾದ ಪಕ್ಷಗಳನ್ನೇ ನಾಶ ಪಡಿಸಲು ಪ್ರಯತ್ನಿಸುತ್ತ ಹೋಗಿರುವುದನ್ನು ನಾವು ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಾಣಬಹುದಾಗಿದೆ. 2014ರಲ್ಲಿ ನಿಶ್ಚಿತವಾಗಿ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದ ಮತ್ತು ನರೇಂದ್ರಮೋದಿಯವರ ಜನಪ್ರಿಯತೆಯ ಅಲೆಯ ಮುಂದೆ ಬೇರ್ಯಾವ ಪಕ್ಷಗಳ ಸಹಾಯವೂ ತನಗೆ ಅಗತ್ಯವಿಲ್ಲವೆಂಬ ಅಹಮ್ಮಿಗೆ ಬಿದ್ದಿದ್ದ ಬಾಜಪ ಶಿವಸೇನೆಯ ಮೈತ್ರಿಯನ್ನು ಮುರಿದುಕೊಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ನಂತರ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ದಿಸಿ 63 ಸ್ಥಾನಗಳನ್ನು ಗೆದ್ದ ಶಿವಸೇನೆ ಅಧಿಕಾರದ ಆಸೆಗಾಗಿ ಬಾಜಪ ನೇತೃತ್ವದ ಸರಕಾರವನ್ನು ಸೇರಿಕೊಂಡಿತು. ಇಲ್ಲಿ ಸ್ವಾಬಿಮಾನಕ್ಕಿಂತ ಹೆಚ್ಚು ಕೆಲಸ ಮಾಡಿದ್ದು, ತನ್ನ ಶಾಸಕರಿಗೆ ಅಧಿಕಾರ ಸಿಗದೇ ಹೋದರೆ ಅವರುಗಳು ಬಾಜಪದ ಪಾಲಾಗುತ್ತಾರೆಂಬ ಭಯವಷ್ಟೆ!
ಇದೀಗ ಈ ಪೌರ ಚುನಾವಣೆ ಬಾಜಪ ಮತ್ತು ಶಿವಸೇನೆಗೆ ಮುಖ್ಯವಾಗಿರುವುದು ಸರಕಾರದಲ್ಲಿ ಜೊತೆಯಾಗಿದ್ದರೂ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ದಿಸುತ್ತಿರುವುದನ್ನು ಜನರು ಹೇಗೆ ಸ್ವಾಗತಿಸುತ್ತಾರೆ ಎನ್ನುವುದನ್ನು ಅರಿತುಕೊಳ್ಳಲು.
ಇನ್ನು ಬಾಜಪ ಮತ್ತು ಶಿವಸೇನಾ ಮೈತ್ರಿಯಲ್ಲಿ ಒಡಕು ಬರಲು ಮುಖ್ಯ ಕಾರಣವವಾಗಿರುವುದೇ ಬೃಹತ್ ಮುಂಭೈ ನಗರಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯುವ ಪ್ರತಿಷ್ಠೆಯಿಂದ. ಯಾಕೆಂದರೆ ಮಹಾರಾಷ್ಟ್ರದ ಮಟ್ಟಿಗೆ ಮುಂಬೈ ನಗರಪಾಲಿಕೆ ಯಾವಾಗಲು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಜೊತೆಗೆ ರಾಜ್ಯದ ರಾಜಧಾನಿಯಲ್ಲಿ ಅಧಿಕಾರ ನಡೆಸುವುದು ಸಹ ಪಕ್ಷಗಳ ಘನತೆಯ ವಿಚಾರವಾಗಿದೆ. ಇವತ್ತು ಶಿವಸೇನೆ-ಬಾಜಪದ ನಡುವೆ ಭಿನ್ನಾಭಿಪ್ರಾಯ ಬಂದಿರುವುದೇ ಮುಂಬೈನಗರಪಾಲಿಕೆಯ ಅಧಿಕಾರ ಮತ್ತು ಅದರಿಂದ ದೊರೆಯುವ ಪಾಲಿನ ಬಗ್ಗೆ. ಕಳೆದ ಎರಡೂ ಅವಧಿಗಳಿಂದ ಆಡಳಿತ ನಡೆಸುತ್ತಿರುವ ಈ ಮೈತ್ರಿಕೂಟ ಮುಂಬೈನಲ್ಲಿ ಸಾಕಷ್ಟು ಬಲಿಷ್ಠವಾಗಿದ್ದು, ಈ ಬಾರಿಯ ಪ್ರತ್ಯೇಕ ಸ್ಪರ್ದೆ ಕಾಂಗ್ರೆಸ್ ಮತ್ತು ಎನ್. ಸಿ.ಪಿ.ಗೆ. ಎಷ್ಟರಮಟ್ಟಿಗೆ ಲಾಭ ತಂದು ಕೊಡಬಹುದೆಂಬುದನ್ನು ಕಾದು ನೋಡಬೇಕಾಗಿದೆ.
2012ರ ಚುನಾವಣೆಯಲ್ಲಿ ಮುಂಬೈ ನಗರಪಾಲಿಕೆಯ ಒಟ್ಟು 327 ಸ್ಥಾನಗಳ ಪೈಕಿ ಶಿವಸೇನೆಯು 75 ಸ್ಥಾನಗಳನ್ನು, ಬಾಜಪ31 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಏರಿದ್ದವು. ಇನ್ನುಳಿದಂತೆ ಕಾಂಗ್ರೆಸ್ 52, ಎನ್.ಸಿ.ಪಿ.7, ಎಂ.ಎನ್.ಎಸ್.27, ಸಮಾಜವಾದಿಪಕ್ಷ 9, ಇತರೆ32 ಸ್ಥಾನಗಳನ್ನು ಪಡೆದಿದ್ದವು. ಮೋದಿಯವರ ಜನಪ್ರಿಯತೆಯ ಅಲೆ ಇನ್ನೂ ಉಳಿದಿದೆಯೇಮತ್ತು ನೋಟುಬ್ಯಾನಿನಂತಹ ವಿಚಾರ ಮುಂಬೈನಂತಹ ವಾಣಿಜ್ಯನಗರಿಗರ ಮೇಲೆ ಎಂತಹ ಪರಿಣಾಮ ಬೀರಿರಬಹುದೆಂಬುದನ್ನು ಅಳೆಯಲು ಈ ಚುನಾವಣೆಗಳು ಸಹಾಯ ಮಾಡಲಿವೆ.ಜೊತೆಗೆ 2014ರಿಂದ ತನ್ನ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಈ ಚುನಾವಣೆಯಲ್ಲಾದರು ಚೇತರಿಸಿಕೊಳ್ಳುತ್ತವೆಯೊ ಎಂಬುದು ಸಹ ತಿಳಿಯುತ್ತದೆ.
ಇನ್ನು ಮುಂಬೈನಂತಹ ನಗರಪಾಲಿಕೆಗಳನ್ನು ಹೊರತು ಪಡಿಸಿದರೆ ಗ್ರಾಮೀಣಭಾಗದ ಹಲವು ನಗರ ಪಾಲಿಕೆಗಳು ಕಾಂಗ್ರೆಸ್-ಎನ್.ಸಿ.ಪಿ. ಪಕ್ಷಗಳ ಹಿಡಿತದಲ್ಲಿದ್ದು ಈ ಬಾರಿ ಅವುಗಳನ್ನು ಬಾಜಪ ವಶಪಡಿಸಿಕೊಳ್ಳುತ್ತದೆಯೇ ನೋಡಬೇಕಿದೆ. ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಬಾಜಪ ಇದೀಗ ಗ್ರಾಮೀಣ ಭಾಗಕ್ಕೂ ತನ್ನ ನೆಲೆ ವಿಸ್ತರಿಸುತ್ತದೆ ಎಂಬ ಬಾಜಪದವರ ಮಾತು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಈ ಚುನಾವಣೆಗಳು ಸಾಬೀತು ಪಡಿಸಲಿವೆ.
ಇನ್ನು ಈ ಚುನಾವಣೆಗಳ ಪಲಿತಾಂಶ ಏನೇ ಇರಲಿ, ಸ್ಪಷ್ಟಬಹುಮತ ಸಿಗದಂತಹ ಪಾಲಿಕೆ ಮತ್ತು ಜಿಲ್ಲಾಪರಿಷದ್ ಗಳಲ್ಲಿ ಬಾಜಪ ಮತ್ತೆ ಶಿವಸೇನೆಯ ಜೊತೆ ಸೇರಿ ಅಧಿಕಾರ ಪಡೆಯುವುದು ಖಚಿತ. ಇದರ ಜೊತೆಗೆ ಬಾಜಪದ ಬಗ್ಗೆ ಮೃದುಧೋರಣೆ ಅನುಸರಿಸುತ್ತಿರುವ ಶರದ್ ಪವಾರರ ಎನ್.ಸಿ.ಪಿ. ಕಡೆಗಳಿಗೆಯಲ್ಲಿ ಯಾವ ಪಕ್ಷದ ಜೊತೆಗಾದರು ವಾಲಬಹುದಾಗಿದೆ.
ಒಟ್ಟಿನಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಈ ಚುನಾವಣೆಗಳ ಪಲಿತಾಂಶಗಳು ಯಾವುದೇ ಪ್ರಭಾವ ಬೀರದೇ ಇದ್ದರೂ, ಕಾಂಗ್ರೆಸ್ಸಿಗೆ ಮಾತ್ರ ಮಾಡು ಇಲ್ಲವೇ ಮಡಿ ಎನ್ನುವ ಮಟ್ಟಿಗೆ ಮುಖ್ಯ ಚುನಾವಣೆಗಳಾಗಿವೆ. ಕುಸಿದು ಹೋಗುತ್ತಿರುವ ತನ್ನ ನೆಲೆಯನ್ನು ಭದ್ರಪಡಿಸಿಕೊಂಡು 2019ರ ವೇಳೆಗೆ ಚೇತರಿಸಿಕೊಂಡು ಎದ್ದು ನಿಲ್ಲಲು ಈ ಚುನಾವಣೆಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕಿದೆ. ದುರಂತವೆಂದರೆ ಪಂಚ ರಾಜ್ಯಗಳ ವಿದಾನಸಭಾ ಚುನಾವಣೆಗಳಲ್ಲಿ ಮುಳುಗಿಹೋಗಿರುವ ಕಾಂಗ್ರೆಸ್ ಹೈಕಮ್ಯಾಂಡ್ ಈ ಸ್ಥಳೀಯ ಚುನಾವಣೆಗಳ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ!
ತನ್ನ ಅಸ್ಥಿತ್ವ ಇರದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೊಡನೆ ಮೈತ್ರಿ ಮಾಡಿಕೊಂಡು ಸಾದ್ಯವಾದಷ್ಟು ಚುನಾವಣೆಗಳನ್ನು ಗೆಲ್ಲಲು ಪ್ರಯತ್ನಿಸುವುದು, ಹಾಗೆ ಗೆಲ್ಲುತ್ತಲೇ ತನ್ನ ನೆಲೆ ಗಟ್ಟಿಯಾದೊಡನೆ ತಾನು ಮೈತ್ರಿ ಮಾಡಿಕೊಂಡ ಸ್ಥಳೀಯ ಪಕ್ಷಗಳ ಸಖ್ಯ ತೊರೆದು ಅವುಗಳ ಅಸ್ಥಿತ್ವವನ್ನೇ ಇಲ್ಲವಾಗಿಸಲು ಪ್ರಯತ್ನಿಸುವುದು ರಾಷ್ಟ್ರೀಯ ಪಕ್ಷಗಳ ಪುರಾತನ ರಾಜಕೀಯ ತಂತ್ರವಾಗಿದೆ. ಬಾಜಪ ಇಂತಹ ತಂತ್ರಗಾರಿಕೆ ಮಾಡುವಲ್ಲಿ ವಿಶೇಷ ಪರಿಣಿತಿಯನ್ನು ಹೊಂದಿರುವುದು ಮಾತ್ರವಲ್ಲದೆ ಈಗಾಗಲೇ ಹಲವು ರಾಜ್ಯಗಳಲ್ಲಿ ಇದನ್ನು ಕಾರ್ಯಗತಗೊಳಸಿದೆ.
No comments:
Post a Comment