ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಅದೇಗೆ ಬಂದುಬಿಟ್ಟೆ ನೀನು
ಅಮಂಗಳಕರವಾದ ಕನಸೊಂದು
ಮುಂಜಾನೆಯೊಳಗೆ ನನಸಾಗಿಬಿಡುವಂತೆ
ಬಂದು ಹೀಗೆ ಹಸಿರಿಗೇಕೆ ಉರಿ ಹಚ್ಚಿದೆ
ಅದೇನಂತಹ ಕಿಚ್ಚಿತ್ತು ನಿನ್ನೊಳಗೆ
ಹಸಿದವರ ಹೊಟ್ಟೆಯನುರಿಸುವ
ಯಾವ ಪಾಷಾಣ ಹೃದಯವಿತ್ತು ನಿನ್ನೊಳಗೆ
ಸೀಮಾತೀತ ಕರುಣೆಯ ಹಾಯಿದೋಣಿಯ ಕವುಚಿ ಹಾಕುವ
ಜರೂರತ್ತೇನಿತ್ತು?
ಯಾರು ಅನುಗ್ರಹದ ಅಮಲಿನಲಿ ಹೀಗೆ ತೇಲುತಿಹೆ
ಅಸಂಖ್ಯಾತ ರಾಜಸತ್ತೆಗಳನೆಲ್ಲ ಕಿತ್ತೆಸೆದು
ಸಮವಸ್ತ್ರಗಳ ಧರಿಸಿ ದಾಳಿಗೈದವರನೆಲ್ಲ ದೂರಕೆಸೆದು
ತಿಳಿನೀಲಿ ಮುಗಿಲೊಳಗೆ ಬಿಳಿ ಮೋಡವಾಗಿ ತೇಲುತಿರುವಾಗ
ಯಾರು ಕರೆತಂದರು ನಿನ್ನೀ ನೆಲಕೆ
ಅದ್ಯಾವ ವರುಷಗಳ ಸಿಟ್ಟಿತ್ತು ನಮ್ಮ ಮೇಲೆ
ಬಂದ ಮೇಲೆ ನೀನು
ಗೊತ್ತಾಗುತ್ತಿದೆ ಬಿಳಿ ಎಂದರೆ ಏನೆಂದು
ಅದಕಲೆಯಾಗದಂತೆ ಕಾಪಾಡಿಕೊಳ್ಳುವುದೆಷ್ಟು ಕಷ್ಟವೆಂದು.
No comments:
Post a Comment