ಡಾ. ಸುಶಿ ಕಾಡನಕುಪ್ಪೆ
ತಂತ್ರಜ್ನಾನ ವ್ಯಕ್ತಿಯ ಮೇಲೆ ಮಾಂತ್ರಿಕ ಹಿಡಿತ ಹೊಂದಿದೆ ಎಂಬುದಕ್ಕೆ ಸಾಮಾನ್ಯವಾದ ಉದಾಹರಣೆ ನಮ್ಮ ಸುತ್ತ ನಡೆಯುವ ಸಾರ್ವಜನಿಕ ಘಟನೆಯನ್ನು ತಮ್ಮ ಸ್ಮಾರ್ಟ್ ಫೋನ್‌ನ್‌ನಲ್ಲಿ ಸೆರೆ ಹಿಡಿಯುವುದು, ವಿಡಿಯೋ ತೆಗೆಯುವುದು ಮತ್ತು ತಕ್ಷಣವೇ ಅಂತರ್ಜಾಲಕ್ಕೆ ಹರಿಬಿಡುವುದು.
ಅಮೇರಿಕಾದಲ್ಲಿ ಒಬ್ಬ ವ್ಯಕ್ತಿ ಒಂದು ಬಹುಮಹಡಿ ಕಟ್ಟಡದಿಂದ ಆತ್ಮಹತ್ಯೆಗೆಂದು ಕೆಳಗೆ ಬೀಳಲು ಪ್ರಯತ್ನಿಸುತ್ತಿದ್ದ ಘಟನೆ ವರದಿಯಾಗಿದೆ. ವರದಿಯಲ್ಲಿ ವಿವರಿಸಿದ್ದಂತೆ, ಅಲ್ಲಿ ನೆರೆದ ಹಲವರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಆತ ಬೀಳುವುದನ್ನು ವಿಡಿಯೊ ತೆಗೆಯುವುದರಲ್ಲಿ ಮಗ್ನರಾಗಿದ್ದರು. ಕೆಲವರು ತಮ್ಮ ವಿಡಿಯೋಗೆ ಬೇಕಾದ ಘಟನೆ ಸೃಷ್ಟಿಸಲೋ ಎಂಬಂತೆ ಆತನನ್ನು ಕೆಳಗೆ ಬೀಳಲು ಹುರಿದುಂಬಿಸುತ್ತಿದ್ದರು. ಇಲ್ಲಿ ಯಾರೂ ಆತನ ಆತ್ಮಹತ್ಯೆಯ ಪ್ರಯತ್ನವನ್ನು ತಡೆಯುವ ಗೋಜಿಗೆ ಹೋಗಲಿಲ್ಲ ಎಂದು ವರದಿಯಾಗಿದೆ. ಇದನ್ನು ಗಮನಿಸಿದಾಗ ಮಾನವನ ಒಂದು ಹೊಸ ರೀತಿಯ ಅಪಾಯಕಾರಿ ನಡತೆ ರೂಪುಗೊಂಡಿರುವುದು ತಿಳಿಯುತ್ತದೆ. ಈ ರೀತಿಯ ಮಾನವನ ನಡತೆಯ ಬಗ್ಗೆ ಆತಂಕ ವ್ಯಕ್ತ ಪಡೆಸಿರುವ ಅಲ್ಲಿನ ಮನೋವಿಜ್ನಾನಿಗಳು ಸಮೂಹ ಮಾಧ್ಯಮಗಳು ಸಮಾಜವನ್ನು ರೂಪಿಸುತ್ತಿರುವ ಬಗೆಯನ್ನು ಚರ್ಚಿಸಿದ್ದಾರೆ.
ಈ ರೀತಿಯ ನಡತೆಯನ್ನು ನಮ್ಮ ಸಮಾಜದಲ್ಲೂ ಕಾಣುತ್ತೇವೆ. ಬೆಂಗಳೂರಿನಲ್ಲೆ ಒಬ್ಬ ವ್ಯಕ್ತಿಯು ನಡುಬೀದಿಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ ತನ್ನ ಪತ್ನಿಯನ್ನು ಸಾಗಿಸಲು ಎರಡು ಗಂಟೆಗೂ ಹೆಚ್ಚು ಕಾಲ ಜನರನ್ನು ಬೇಡುತ್ತಿದ್ದ ಸುದ್ದಿ ಟಿವಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿತ್ತು. ಸಾರ್ವಜನಿಕರು ಈ ಘಟನೆಯನ್ನು ತಮ್ಮ ಸ್ಮಾರ್ಟ್ಫೋನ್‌ಗಳಲ್ಲಿ ಸೆರೆಹಿಡಿಯಲು ವಹಿಸಿದ ಮುತುವರ್ಜಿಯನ್ನು ಆತನಿಗೆ ಸಹಾಯ ಹಸ್ತ ನೀಡುವುದರಲ್ಲಿ ತೋರಲಿಲ್ಲ.
ಮತ್ತೊಂದು ಘಟನೆಯ ಸುದ್ದಿಯಲ್ಲಿ, ಓರ್ವ ವ್ಯಕ್ತಿ ಮೊಬೈಲ್‌ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದದ್ದು ವರದಿಯಾಗಿದೆ. ವ್ಯಕ್ತಿಯ ಅತಿಯಾದ ಮೊಬೈಲ್ ಮೋಹವೇ ಇದಕ್ಕೆ ಕಾರಣವೆಂಬುದನ್ನು ನಾವು ಗಮನಿಸಬಹುದು. ಮೊದಲು, ಆತ ಗುಂಡಿಗೆ ಬೀಳುವ ದೃಶ್ಯ ಮತ್ತು ಗುಂಡಿಗೆ ಬಿದ್ದ ಮೇಲೆ ಪಡುವ ವ್ಯಥೆಯನ್ನು ಸಾರ್ವಜನಿಕರು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ನಂತರವೇ ಕೆಲವರು ಆತನನ್ನು ಮೇಲಕ್ಕೆತ್ತುವ ಕಸರತ್ತು ನಡೆಸಿರುವುದು ವರದಿಯಾಗಿದೆ. ಈ ಮೇಲಕ್ಕೆತ್ತುವ ಕಸರತ್ತನ್ನು ಬಹುಪಾಲು ಜನರು ಮುಗಿಬಿದ್ದು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಸೆರೆಹಿಡಿದಿದ್ದಾರೆ. ಸೆರೆಹಿಡಿದ ಮೇಲೆ ಅತಿ ಸಂತೋಷದಿಂದ ಈ ವಿಡಿಯೋವನ್ನು ತನ್ನ ಎಲ್ಲಾ ಪರಿಚಿತರಲ್ಲೂ ಹಂಚಿಕೊಳ್ಳುವುದು ಸಾಮಾನ್ಯ ಕ್ರಿಯೆಯಾಗಿದೆ.
ಈ ರೀತಿಯ ಸಮೂಹ ಮಾಧ್ಯಮದ ಬಳಕೆಯಿಂದ ನಾವು ಒಂದು ಹೊಸ ಬಗೆಯ ಮಾಯೆಗೆ ಒಳಗಾಗಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಹೊಸ ರೀತಿಯಲ್ಲಿ ಬಳಸಿಕೊಳ್ಳುತ್ತಿರುವ ನಾವು ಒಂದು ಬಗೆಯ ಅಮಾನವೀಯ ನಡವಳಿಕೆಯನ್ನು ಬೆಳೆಸಿಕೊಳ್ಳುತ್ತಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ ಅರಿಯಬೇಕಾಗಿದೆ. ಸಮೂಹ ಮಾಧ್ಯಮಗಳು ಅತಿಯಾಗಿ ಬಿತ್ತರಿಸುವ ಸುದ್ದಿಗಳೂ ಇದಕ್ಕೆ ಕಾರಣವಾಗಿದೆ. ಉದಾಹರಣೆಗೆ, ಅತ್ಯಾಚಾರಕ್ಕೊಳಗಾದ ಮಕ್ಕಳು ಮತ್ತು ಮಹಿಳೆಯರ ಸುದ್ದಿ ದಿನವೂ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತದೆ. ನಮ್ಮ ಮೆದುಳು, ನಿರಂತರವಾಗಿ ಪ್ರಕಟಗೊಳ್ಳುವ ಯಾವುದೇ ಸುದ್ದಿಯನ್ನು ಕೆಲ ಸಮಯದ ನಂತರ ಸಾಮಾನ್ಯ ಸುದ್ದಿಯೆಂಬಂತೆ ಗ್ರಹಿಸಲು ಪ್ರಾರಂಭಿಸುತ್ತದೆ. ಸಾಮಾಜಿಕ ಮನೋವಿಜ್ನಾನವು ಈ ಪ್ರಕ್ರಿಯೆಯನ್ನು ಕಾಗ್ನೆಟಿವ್ ಡಿಸೊನೆನ್ಸ್ ಎನ್ನುತ್ತದೆ. ಅಂದರೆ, ಯಾವ ವಿಷಯವನ್ನು ನಾವು ಕೆಟ್ಟದ್ದು ಅಥವಾ ಅಮಾನವೀಯವೆಂದು ಅರಿತಿರುತ್ತೇವೆಯೋ, ಅದರ ನಿರಂತರ ಪುನರಾವರ್ತನೆಯಿಂದ, ಆ ವಿಷಯವು ತನ್ನ ತೀವ್ರತೆಯನ್ನು ಕಳೆದುಕೊಂಡು ಸಾಮಾನ್ಯವೆನಿಸತೊಡಗುತ್ತದೆ. ಇತ್ತೀಚಿಗೆ ನಿರಂತರವಾಗಿ ಬಿತ್ತರಗೊಳ್ಳುತ್ತಿರುವ ರೈತರ ಆತ್ಮಹತ್ಯೆಗಳೂ ಈಗ ಸಾಮಾನ್ಯ ಸುದ್ದಿಯೆಂಬಂತೆ ಭಾಸವಾಗುತ್ತಿವೆ. ಈ ರೀತಿಯ ವಿರೋಧಾಭಾಸದ ಗ್ರಹಿಕೆ ನಮ್ಮನ್ನು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಜ್ನಾಶೂನ್ಯರನ್ನಾಗಿ ಮಾಡುತ್ತದೆ. ಸಾಮಾಜಿಕ ಕಾಳಜಿಯನ್ನು ನಮ್ಮಲ್ಲಿ ಬೆಳೆಸುವ ಜವಾಬ್ದಾರಿಯಿರುವ ಸಮೂಹ ಮಾಧ್ಯಮಗಳು, ಅತಿಯಾದ ಸುದ್ದಿ ಪ್ರಚಾರದ ಪ್ರಕ್ರಿಯೆಯಿಂದ ಸಮಾಜದ ಮನಸ್ಸನ್ನು ವಿರೋಧಾಭಾಸಕ್ಕೆ ಈಡುಮಾಡುತ್ತಿವೆ.
ಅಭಿವ್ಯಕ್ತಿ ಸ್ವಾತಂತ್ರ್ಯವು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾಹಿತ್ಯ ಕಲೆಗಳ ಮೂಲಕ ಹೆಚ್ಚಿಸಿರುವುದು ಸಮಾಜಕ್ಕೆ ಅಮೂಲ್ಯವಾದ ಕೊಡುಗೆಯೇ ಆಗಿದೆ. ಸಾಹಿತ್ಯದ ವಿವಿಧ ಪ್ರಾಕಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ತಮ್ಮ ಪರಿಧಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿದೆ. ಸಾಹಿತ್ಯ ಮತ್ತು ಕಲೆಗಳು ಕೇವಲ ಪ್ರತಿಭೆಯ ಅಭಿವ್ಯಕ್ತಿ ಅಷ್ಟೇ ಅಲ್ಲದೆ ಜನಪರ ಸಾಮಾಜಿಕ ಬದ್ಧತೆಯಿಂದ ಮತ್ತಷ್ಟು ಗಟ್ಟಿಗೊಳ್ಳುತ್ತವೆ. ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯವು ನಮ್ಮ ಸಮಾಜಕ್ಕೆ ಬೇಕಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಸಂವಿಧಾನ ಕೊಟ್ಟಿರುವ ಹಕ್ಕು. ಈ ಹಕ್ಕನ್ನು ಸದಾ ಜಾಗೃತ ಪ್ರಜ್ನೆಯೊಂದಿಗೆ ಬಳಸಬೇಕಾಗಿದೆ. ಈ ಹಕ್ಕನ್ನು ಬಳಸುವುದರಲ್ಲೂ ಒಂದು ಸಾಮಾಜಿಕ ಜವಾಬ್ದಾರಿ ಇರುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಹೊರಹೊಮ್ಮುವ ಭಿನ್ನ ಅಭಿಪ್ರಾಯಗಳು ಹೊಸ ಒಳನೋಟಗಳನ್ನು ನೀಡುವಲ್ಲಿ ಅತಿ ಮುಖ್ಯವಾಗುತ್ತವೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಬಳಸುವ ಪ್ರಜ್ನೆಯು ಬೇಕಾಗಿದೆ. ಇದು ಸಮಾಜದ ಆರೋಗ್ಯಕರ ವಿಕಾಸಕ್ಕೆ ಪೂರಕವಾಗಿ ಕೆಲಸಮಾಡುತ್ತದೆ. ವಿಜ್ನಾನ ಮತ್ತು ತಂತ್ರಜ್ನಾನ ಹೇಗೆ ಕಾಲಕಾಲಕ್ಕೆ ವಿಕಾಸಗೊಳ್ಳುತ್ತದೆಯೋ ಹಾಗೆಯೇ ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ನಮ್ಮ ಪ್ರಜ್ನೆಯನ್ನು ವಿಕಾಸಗೊಳಿಸಿಕೊಳ್ಳಬೇಕಾಗಿದೆ. ಸದಾ ವಿಕಾಸಗೊಳ್ಳುವ ಸಾಮರ್ಥ್ಯವನ್ನು ಪಡೆದಿರುವ ಮಾನವನ ಪ್ರಜ್ನೆಯು ಸಾಮಾಜಿಕ ಜಾಗೃತಿಯನ್ನು ಮತ್ತು ಮಾನವೀಯತೆಯನ್ನು ಉಳಿಸಿಕೊಳ್ಳುವ ಗುರಿಯನ್ನು ಪಡೆಯಬೇಕಾಗಿದೆ.
No comments:
Post a Comment