ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಯಾವ ಅಪರಿಚಿತ ಹಾದಿಯಲಿ ಅಡ್ಡಾಡಿದೆ?
ನಡೆದಷ್ಟೂ ಸಾಗದ ಪಯಣ
ಕಲ್ಲು ಮುಳ್ಳುಗಳ ಸಹಯಾನ
ಹಿಂದೆ ಬಿದ್ದು ಕುಂಟುತ್ತಾ ಬರುತ್ತಿರುವವರೂ ಕಾಯುವುದಿಲ್ಲ ನಾವು ನಿಲ್ಲಲೆಂದು
ಜೊತೆಗಿದ್ದವರಿಗೊ ಸೋಲಿಸಿ ನಮ್ಮನ್ನು
ಗುರಿ ಸೇರಿಬಿಡುವ ದಾವಂತ...
ಸಿಕ್ಕವಳು ತೆಕ್ಕೆಗೆ ಬಂದಾಳೆಂಬ ಆಸೆಯೊಳಗೇ
ಶ್ರೀರಾಮಚಂದ್ರನ ಪೋಸು
ಕಂಡ ಗಂಡಸರೆಲ್ಲ ಹಾದರಕೆ ಕರೆದಾರೆಂಬ
ಕನವರಿಕೆಯಲಿ
ಗಂಡಸು ಹೆಂಗಸು
ಎಲ್ಲರೂ ಒಳಗೊಂದ ನೆನೆಯುತ್ತ
ಹೊರಗೊಂದ ಒರೆಯುತ್ತ
ನಡೆಯುತ್ತಿರುವಾಗಲೇ ಸೂರ್ಯ ಸತ್ತು
ಕತ್ತಲಾಯಿತು
ಬೆತ್ತಲಾದ ಜಗದೊಳಗೆಲ್ಲರೂ ಕಪ್ಪು ಚುಕ್ಕಿಗಳಾಗಿ
ಅಲ್ಲಲ್ಲೇ ಗುಡಾರಗಳ ಹೂಡಿ
ರಾತ್ರಿಯಡುಗೆಗೆ ಒಲೆ ಹೂಡಲು
ಮೂರು ಕಲ್ಲುಗಳ ಹುಡುಕ ತೊಡಗಿದರು
No comments:
Post a Comment