ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದ ವಿದಾನಸಭಾ ಚುನಾವಣೆಗಳನ್ನು ಗೆಲ್ಲಲು ಬಾಜಪ ಇನ್ನಿರದ ಪ್ರಯತ್ನ ಮಾಡುತ್ತಿದೆ.ಇದೀಗ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಈಗಾಗಲೇ ಎರಡು ರಾಜ್ಯಗಳಲ್ಲಿ ಬಾಜಪ ಆಳ್ವಿಕೆ ನಡೆಸುತ್ತಿದ್ದು, ಸಹಜವಾಗಿಯೇ ಆಡಳಿತ ವಿರೋಧಿ ಅಲೆಯನ್ನು ಅದು ಎದುರಿಸುತ್ತಿದೆ.ಹಿಮಾಚಲಪ್ರದೇಶ ಮತ್ತು ಮಣಿಪುರದಂತಹ ಪುಟ್ಟ ರಾಜ್ಯಗಳ ಪಲಿತಾಂಶಗಳು ರಾಷ್ಟ್ರ ರಾಜಕಾರಣದಲ್ಲಿ ಅಂತಹ ಕಂಪನಗಳನ್ನು ಉಂಟು ಮಾಡಲಾರವು. ಇಂತಹ ಸನ್ನಿವೇಶದಲ್ಲಿ, ಅದೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಸರಿಸುಮಾರು ಮೂರುವರ್ಷಗಳಾಗುತ್ತಿರುವ ಈ ಸಮಯದಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ಬಾಜಪದ ಪಾಲಿಗೆ ಮಹತ್ವದ್ದಾಗಿವೆ.ಉತ್ತರಪ್ರದೇಶವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಬಾಜಪಕ್ಕೆ ಇರಲು ಎರಡು ಮುಖ್ಯ ಕಾರಣಗಳಿವೆ. ಅವೆಂದರೆ:
ಮೊದಲನೆಯದಾಗಿ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ತನ್ನ ಜನಪ್ರಿಯತೆಯಿನ್ನೂ ಕಡಿಮೆಯಾಗಿಲ್ಲ ಮತ್ತು ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರ ಪರವಾದ ಸಕಾರಾತ್ಮಕ ಅಲೆಯಿನ್ನೂ ಗುಪ್ತಗಾಮಿನಿಯಾಗಿ ಹರಿಯುತ್ತಿದೆ ಎಂಬುದನ್ನದು ತೋರಿಸಲೇಬೇಕಾಗಿದೆ. ಕಳೆದ ಮೂರು ವರ್ಷಗಳ ಅದರ ಆಡಳಿತ ವೈಖರಿಯ ಬಗ್ಗೆ ಜನರಿಗೆ ತೃಪ್ತಿ ಇದೆಯೆಂಬುದನ್ನೂ ತನ್ನ ವಿರೋಧಿಗಳಿಗೆ ತೋರಿಸಬೇಕಾದ ಜರೂರತ್ತು ಬಾಜಪಕ್ಕಿದೆ. ಜೊತೆಗೆ ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರಕಾರದ ಸಾಧನೆ ಶೂನ್ಯವೆಂಬ ವಿರೋಧಪಕ್ಷಗಳ ಟೀಕೆಯನ್ನು ಸುಳ್ಳೆಂದು ಅದು ಸಾಬೀತು ಪಡಿಸಬೇಕಾಗಿದೆ
ಎರಡನೆಯದಾಗಿ, 2019ರಲ್ಲಿ ಎದುರಾಗಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ಉತ್ತರಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬುದು ಸಹ ಬಾಜಪದ ಆಕಾಂಕ್ಷೆಯಾಗಿದೆ. ಕಳೆದ ಬಾರಿ ಅಂದರೆ 2014ರಲ್ಲಿಯೇನೋ ನರೇಂದ್ರಮೋದಿಯವರ ಪರವಾದ ಅಲೆ ಉತ್ತರಪ್ರದೇಶದಲ್ಲಿ ಎಪ್ಪತ್ತಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲು ಸಹಕಾರಿ ಆಗಿತ್ತು. ಮೋದಿ ಅಲೆ 2019ರಲ್ಲಿಯೂ ಇರುತ್ತದೆ ಎಂಬ ನಂಬಿಕೆ ಅದಕ್ಕೆ ಇಲ್ಲದೆ ಇರುವುದರಿಂದ ಈಗ ಶತಾಯಗತಾಯ ಉತ್ತರಪ್ರದೇಶವನ್ನು ಗೆದ್ದು ಬರಬೇಕಾದ ಅನಿವಾರ್ಯತೆ ಇದೆ. ಈ ಕಾರಣಕ್ಕಾಗಿಯೇ ಅದು ಉತ್ತರಪ್ರದೇಶವನ್ನು ಗೆಲ್ಲಲು ಅಗತ್ಯವಿರುವ ಎಲ್ಲ ತಂತ್ರಗಾರಿಕೆಯನ್ನೂ ಮಾಡುತ್ತಿದೆ.ಸದರಿ ಚುನಾವಣೆಯಲ್ಲಿ ಈ ಕೆಳಕಂಡ ಆಂಶಗಳನ್ನು ಅದು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ:
1.ಸರ್ಜಿಕಲ್ ಸ್ಟ್ರೈಕ್:
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ಸೇನೆ ಗಡಿಯಾಚೆಗೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ನೇರವಾಗಿ ತನ್ನ ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳದೆ ಹೋದರೂ ಪರೋಕ್ಷವಾಗಿ ಸಂಘ ಪರಿವಾರದ ಇತರೆ ಸಂಸ್ಥೆಗಳ ಮೂಲಕ ತನ್ನ ಈ ಸಾಧನೆಯನ್ನು ಪ್ರಚುರ ಪಡಿಸುತ್ತಿದೆ.
2. ನೋಟು ಬ್ಯಾನ್:
ಬಹುಶ: ಬಾಜಪ ನೋಟುಬ್ಯಾನೇ ತನ್ನ ಇದುವರೆಗಿನ ದೊಡ್ಡ ಸಾಧನೆಯೆಂದು ಬಾವಿಸಿದಂತಿದೆ. ಹೀಗಾಗಿಯೇ ಅದು ಈ ಚುನಾವಣೆಯಲ್ಲಿ ತನ್ನ ಈ ಕ್ರಮವನ್ನು ಎಳೆಎಳೆಯಾಗಿ, ತನಗೆ ಅನುಕೂಲಕರ ರೀತಿಯಲ್ಲಿ ವಿಶ್ಲೇಷಿಸುತ್ತ ಜನರನ್ನು ಸೆಳೆಯಲು ಯತ್ನಿಸುತ್ತಿದೆ. ನೋಟು ಬ್ಯಾನಿನಿಂದ ಭ್ರಷ್ಟಾಚಾರ ಸಂಪೂರ್ಣವಾಗಿ ಇಲ್ಲವಾಗಿ ಬಿಡುತ್ತದೆ ಎಂಬ ಬಾವನೆಯನ್ನು ಜನರಲ್ಲಿ ಮೂಡಿಸಲು ಮತ್ತು ಇದರಿಂದ ಬಡವರ ಎಲ್ಲ ಸಮಸ್ಯೆಗಳೂ ಬಗೆಹರಿದು ಬಿಡುತ್ತವೆ ಎನ್ನುವ ಭ್ರಮೆಯೊಂದನ್ನು ಅದು ಸೃಷ್ಠಿಸಲು ಹೊರಟಿದೆ. ನೋಟು ಬ್ಯಾನ್ ಕ್ರಮವನ್ನು ವಿರೋಧಿಸಿದ ವಿರೋಧ ಪಕ್ಷಗಳನ್ನು ಭ್ರಷ್ಟಾಚಾರದ ಪೋಷಕರು ಮತ್ತು ದೇಶದ್ರೋಹಿಗಳೆಂದು ಚಿತ್ರಿಸುತ್ತ ದೇಶಭಕ್ತಿ ಮತ್ತು ದೇಶದ್ರೋಹದ ಸುಳ್ಳು ಕತೆಗಳನ್ನು ಪೋಣಿಸುತ್ತ ಜನರನ್ನು ಬಾವನಾತ್ಮಕವಾಗಿ ಒಡೆಯಲು ಮುಂದಾಗಿದೆ.
ಇನ್ನು ಚುನಾವಣೆ ನಡೆಯುವ ಕೆಲವೇ ತಿಂಗಳ ಹಿಂದೆ ಇಂತಹದೊಂದು ಬ್ಯಾನು ಮಾಡಿ ವಿರೋಧಪಕ್ಷಗಳ ದೈನಂದಿನ ಚಟುವಟಿಕೆಗಳನ್ನೂ ಅದು ನಿಯಂತ್ರಿಸಿಬಿಟ್ಟಿದೆ. ಈ ಬ್ಯಾನಿನ ಕಾರಣದಿಂದ ತಮ್ಮತಮ್ಮ ಪಕ್ಷಗಳ ಚಟುವಟಿಕೆಗಳಿಗೆ ಬೇಕಾದ ಬಾರಿ ಪ್ರಮಾಣದ ಚುನಾವಣಾ ನಿದಿಯನ್ನು ಕ್ರೋಡೀಕರಿಸುವ ಒತ್ತಡದಲ್ಲಿ ವಿರೋದ ಪಕ್ಷಗಳು ಸದರಿ ಚುನಾವಣೆಯನ್ನು ಎದುರಿಸಬೇಕಾದ ಪರಿಸ್ಥಿತಿಯನ್ನು ತಂದಿಟ್ಟಿದೆ.
ಇನ್ನು ಈ ನೋಟುಬ್ಯಾನನ್ನು ತನ್ನ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಸಹ ಬಾಜಪ ಹಿಂದೆ ಬಿದ್ದಿಲ್ಲ. ಆದಾಯ ತೆರಿಗೆ ದಾಳಿಯ ಹೆಸರಲ್ಲಿ ಬಹುಜನ ಪಕ್ಷದ ಮಾಯಾವತಿಯವರ ಕುಟುಂಬ ಸದಸ್ಯರ ಮನೆಗಳ ಮೇಲೆ ದಾಳಿ ನಡೆಸಿ ಮೊಕದ್ದಮೆಗಳನ್ನು ಹೋಡಿ ರಾಜಕೀಯವಾಗಿ ಅವರ ಸ್ಥೈರ್ಯ ಕೆಡಿಸುವ ಕೆಲಸವನ್ನೂ ಮಾಡಿದೆ. ನೋಟು ಬ್ಯಾನಿನ ನಂತರ ಜನರಿಗೆ ಬ್ಯಾಂಕಿನಿಂದ ನಗದು ಸಿಗುವಲ್ಲಿ ಆದ ತೊಂದರೆಗಳಿಗಾಗಿ ಸಮಾಜವಾದಿ ಪಕ್ಷ, ಬಹುಜನ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತಿಭಟನೆ ನಡೆಸಿದರೆ ಅವುಗಳನ್ನು ಭಷ್ಟಾಚಾರದ ಪರವಾದ ಪಕ್ಷಗಳೆಂದು ಬಿಂಬಿಸಲು ಪ್ರಯತ್ನಿಸಿದ ಬಾಜಪ ತನ್ನ ಶೂನ್ಯಸಾಧನೆಯನ್ನು ಮುಚ್ಚಿಕೊಳ್ಳಲು ನೋಟುಬ್ಯಾನಿನಂತಹ ವಿಚಾರವನ್ನು ಬಳಸಿಕೊಳ್ಳುತ್ತಿದೆ.
3. ತ್ರಿವಳಿ ತಲಾಖ್:
ತ್ರ್ರಿವಳಿತಲಾಖ್ ಅನ್ನು ಕುರಿತಂತೆ ಒಂದು ವಿವಾದಾತ್ಮಕ ಚರ್ಚೆಯನ್ನು ಹುಟ್ಟು ಹಾಕಿರುವ ಬಾಜಪ ಅದನ್ನು ತನ್ನ ಹಿಂದು ಮತಗಳ ದೃವೀಕರಣಕ್ಕಾಗಿ ಬಳಸಿಕೊಳ್ಳುತ್ತಿದೆ. ಜೊತೆಗೆ ಇದರಿಂದ ಮುಸ್ಲಿಂ ಮಹಿಳೆಯರ ಮತಗಳನ್ನು ಸೆಳೆಯಲು ಪ್ರಯತ್ನವನ್ನೂ ಮಾಡುತ್ತಿದೆ
4. ರಾಮಮಂದಿರ ನಿರ್ಮಾಣ:
ಇತ್ತೀಚೆಗೆ ಲಕ್ನೋವಿನಲ್ಲಿ ಮಾತಾಡಿದ ಬಾಜಪದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರು ಆದಷ್ಟು ಶೀಘ್ರದಲ್ಲಿ ಸಂವಿದಾನದ ಆಶಯದ ಮೂಲಕವೇ ಈ ಸಮಸ್ಯೆಗೆ ಪರಿಹಾರ ಒಂದನ್ನು ಕಂಡುಕೊಂಡು ವಿವಾದಿತ ಸ್ಥಳದಲ್ಲಿಯೇ ರಾಮಮಂದಿರ ನಿರ್ಮಾಣ ಮಾಡಲಾಗುವುದೆಂಬುದನ್ನು ಒತ್ತಿ ಹೇಳಿದ್ದಾರೆ. ಅಭಿವೃದ್ದಿ ಮತ್ತು ಮಂದಿರ ನಿರ್ಮಾಣದ ವಿಷಯಗಳು ಜೊತೆಜೊತೆಯಾಗಿಯೇ ನಡೆಯಲಿದ್ದು ಬಾಜಪ ಅದಕ್ಕೆ ಬದ್ದವಾಗಿದೆ ಎಂದು ಘೋಷಿಸಿದ್ದಾರೆ. ಈ ವಿಚಾರದಲ್ಲಿ ಬಾಜಪಕ್ಕಿಂತ ಹೆಚ್ಚಾಗಿ ಅದರ ಅಂಗಸಂಸ್ಥೆಗಳು ಮಂದಿರ ನಿರ್ಮಾಣದ ವಿಚಾರಕ್ಕೆ ಹೆಚ್ಚು ಒತ್ತು ಕೊಟ್ಟು ತೀವ್ರತರವಾದ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಉಚ್ಚನ್ಯಾಯಾಲಯವು ಜಾತಿ ಮತ್ತು ಧಾರ್ಮಿಕ ವಿಚಾರಗಳನ್ನು ಚುನಾವಣೆಯಲ್ಲಿ ಬಳಸದಂತೆ ನಿರ್ಬಂದ ಹೇರಿದ್ದರೂ ಬಾಜಪ ಬೇರೆಬೇರೆ ವೇದಿಕೆಗಳನ್ನು ಬಳಸಿಕೊಂಡು ತನ್ನ ಮಂದಿರ ನಿಮಾಣದ ವಿಚಾರವನ್ನು ಪರೋಕ್ಷವಾಗಿ ಜನರಿಗೆ ತಲುಪಿಸಲು ಹರಸಾಹಸ ಮಾಡುತ್ತಿವೆ..
5.ಹಿಂದೂ ಮತಗಳ ದೃವೀಕರಣ:
ಬಾಜಪದ ಚುನಾವಣಾ ತಂತ್ರಗಾರಿಕೆಯಲ್ಲಿ ಇರುವ ಬಹುಮುಖ್ಯವಾದ ಅಂಶವೆಂದರೆ ಇದೆ. ತ್ರಿವಳಿ ತಲಾಖ್, ರಾಮಮಂದಿರ ನಿರ್ಮಾಣ, ಗಡಿಯಾಚೆಗಿನ ಮತ್ತು ಆಂತರೀಕ ಭಯೋತ್ಪಾದನೆಗಳನ್ನು ಹೆಚ್ಚು ಹೆಚ್ಚು ಪ್ರಸ್ತಾಪಿಸುತ್ತ ಮೇಲ್ಜಾತಿಯ ಸಮುದಾಯಗಳನ್ನು ಒಗ್ಗೂಡಿಸುತ್ತ, ಅವುಗಳ ಮೂಲಕ ಅವರ ಹಿಡಿತದಲ್ಲಿರುವ ಹಿಂದುಳಿದ ಮತ್ತು ದಲಿತ ವರ್ಗಗಳ ಮತಗಳನ್ನು ಕ್ರೋಡೀಕರಿಸಿಕೊಂಡು ಒಂದು ಹೀಂದೂ ಮತಬ್ಯಾಂಕ್ ಅನ್ನು ಸೃಷ್ಠಿಸಿಕೊಳ್ಳುವುದೇ ಆಗಿದೆ. 2014ರಲ್ಲಿ ನರೇಂದ್ರ ಮೋದಿಯವರನ್ನು ಪ್ರದಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿದಾಗಲು ಜನರಿಗೆ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡ ಹಿಂದೂಪರ ತೀರ್ಮಾನಗಳನ್ನು ಪ್ರಚಾರ ಪಡಿಸುತ್ತ;ಲೇ ಒಂದು ಹಿಂದು ಮತಬ್ಯಾಂಕನ್ನು ಸೃಷ್ಠಿಮಾಡಿಕೊಂಡು ಚುನಾವಣೆಯನ್ನು ಗೆದ್ದಿತ್ತು. ಈ ಬಾರಿಯೂ ಅಂತಹುದೆ ತಂತ್ರವನ್ನು ಅನುಸರಿಸುತ್ತಿದೆ. ಕಾಂಗ್ರೆಸ್-ಸಮಾಜವಾದಿಮೈತ್ರಿಕೂಟಮತ್ತು ಬಹುಜನ ಪಕ್ಷಗಳಿಗೆ ಮುಸ್ಲಿಂ ಸಮುದಾಯವುಒಟ್ಟಾಗಿ ಮತಚಲಾಯಿಸುತ್ತಿವೆ ಎಂಬ ಬಾವನೆಯನ್ನು ಜನರಲ್ಲಿ ಹುಟ್ಟು ಹಾಕಿ ಅದರ ವಿರುದ್ದ ಹಿಂದೂ ಮತಗಳನ್ನೂ ದೃವೀಕರಣಗೊಳಿಸಿಕೊಳ್ಳುವುದು ಸಹ ಬಾಜಪದ ತಂತ್ರವಾಗಿದೆ.
ಒಟ್ಟಿನಲ್ಲಿ ಕಳೆದ ಮೂರು ವರ್ಷಗಳ ತನ್ನ ಶೂನ್ಯಸಾಧನೆಯನ್ನು ಮರೆಮಾಚಿ, ಮಂದಿರ ನಿರ್ಮಾಣ ಮತ್ತು ಹಿಂದೂ ಮತಗಳ ದೃವೀಕರಣದಂತಹ ಬಾವನಾತ್ಮಕ ಅಂಶಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ತನ್ನ ಹೆಳೆಯ ಚಾಳಿಯನ್ನು ಬಾಜಪ ಇನ್ನೂ ಬಿಟ್ಟಂತೆ ಕಾಣುತ್ತಿಲ್ಲ.
No comments:
Post a Comment