ಕೆ.ವಿ. ಥಾಮಸ್ ನೇತೃತ್ವದ ಪಬ್ಲಿಕ್ ಅಕೌಂಟ್ಸ್ ಸಮಿತಿಯು ಆರ್.ಬಿ.ಐ ಗವರ್ನರ್ ಊರ್ಜಿತ್ ಪಟೇಲ್ ರವರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದೆ. ಜನವರಿ 28ರಂದು ಸಮಿತಿಯ ಮುಂದೆ ಬಂದು ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ತಿಳಿಸಿದ್ದಾರೆ.
ಪ್ರಶ್ನೆ 1: ಕೇಂದ್ರ ಸಚಿವರಾದ ಪಿಯುಶ್ ಗೋಯಲ್ ರವರು ಸಂಸತ್ತಿನಲ್ಲಿ ನೋಟು ಅಮಾನ್ಯದ ನಿರ್ಧಾರವನ್ನು ತೆಗೆದುಕೊಂಡಿದ್ದು ಆರ್.ಬಿ.ಐ. ಸರಕಾರ ಅದರ ಸಲಹೆಯಂತೆ ಕೆಲಸ ಮಾಡಿತಷ್ಟೇ ಎಂದು ತಿಳಿಸಿದ್ದಾರೆ. ನೀವಿದನ್ನು ಒಪ್ಪುವಿರಾ?
ಪ್ರಶ್ನೆ 2: ನಿರ್ಧಾರ ಆರ್.ಬಿ.ಐದ್ದೇ ಎನ್ನುವುದು ಹೌದಾದರೆ ಭಾರತದ ಅನುಕೂಲಕ್ಕಾಗಿ ನೋಟು ಅಮಾನ್ಯಗೊಳಿಸುವ ನಿರ್ಧಾರವನ್ನು ಆರ್.ಬಿ.ಐ ತೆಗೆದುಕೊಂಡಿದ್ಯಾವಾಗ?
ಪ್ರಶ್ನೆ 3: ರಾತ್ರೋರಾತ್ರಿ 500 ಮತ್ತು 1000 ರುಪಾಯಿ ನೋಟುಗಳನ್ನು ಅಮಾನ್ಯಗೊಳಿಸುವುದರ ಹಿಂದಿದ್ದ ತಾರ್ಕಿಕತೆಯೇನು?
ಪ್ರಶ್ನೆ 4: ಆರ್.ಬಿ.ಐನ ಅಂದಾಜುಗಳ ಪ್ರಕಾರ ದೇಶದಲ್ಲಿರುವ ನಕಲಿ ನೋಟುಗಳ ಒಟ್ಟು ಮೊತ್ತ 500 ಕೋಟಿ ರುಪಾಯಿ. ಭಾರತದ ಕ್ಯಾಷ್ - ಜಿಡಿಪಿ 12 ಪರ್ಸೆಂಟ್ ಇದೆ. ಇದು ಜಪಾನಿಗಿಂತ (18%) ಕಡಿಮೆ, ಸ್ವಿಝರ್ಲ್ಯಾಂಡಿಗಿಂತ (13%) ಕಡಿಮೆ. ಭಾರತದಲ್ಲಿ ದೊಡ್ಡ ಮೊತ್ತದ ನೋಟುಗಳು ಒಟ್ಟು ಚಲಾವಣೆಯಲ್ಲಿದ್ದ ನೋಟುಗಳಲ್ಲಿ 86 ಪರ್ಸೆಂಟಿನಷ್ಟಿದೆ, ಆದರೆ ಚೀನಾದಲ್ಲಿದು 90 ಪರ್ಸೆಂಟ್ ಇದೆ, ಅಮೆರಿಕಾದಲ್ಲಿ 81 ಪರ್ಸೆಂಟಿನಷ್ಟಿದೆ. ಇದ್ದಕ್ಕಿದ್ದಂತೆ ನೋಟು ಅಮಾನ್ಯಗೊಳಿಸಲು ಆರ್.ಬಿ.ಐ ಉತ್ಸುಕವಾಗಿದ್ದೇಕೆ?
ಪ್ರಶ್ನೆ 5: ನವೆಂಬರ್ ಎಂಟರಂದು ತುರ್ತು ಸಭೆ ಸೇರಲು ಸದಸ್ಯರಿಗೆ ನೋಟೀಸ್ ಕೊಟ್ಟಿದ್ಯಾವಾಗ? ಅವರಲ್ಲಿ ಯಾರ್ಯಾರು ಈ ಸಭೆಯಲ್ಲಿ ಭಾಗವಹಿಸಿದರು? ಸಭೆ ಎಷ್ಟೊತ್ತು ನಡೆಯಿತು? ಸಭೆಯ ನಿರ್ಣಯಗಳೇನು?
ಪ್ರಶ್ನೆ 6: ಸಭೆಯ ನಂತರ ಸಚಿವ ಸಂಪುಟಕ್ಕೆ ನೋಟು ಅಮಾನ್ಯತೆಯ ಬಗ್ಗೆ ಕಳುಹಿಸಿದ ಸಲಹೆಗಳಲ್ಲಿ, ಈ ನೋಟು ಅಮಾನ್ಯತೆಯಿಂದ ದೇಶದಲ್ಲಿ ಚಲಾವಣೆಯಲ್ಲಿರುವ 86 ಪರ್ಸೆಂಟಿನಷ್ಟು ಹಣ ಅಮಾನ್ಯವಾಗಿಬಿಡುತ್ತದೆ ಎನ್ನುವುದನ್ನು ಆರ್.ಬಿ.ಐ ಸ್ಪಷ್ಟವಾಗಿ ನಮೂದಿಸಿತ್ತಾ? ಹೊಸ ನೋಟುಗಳನ್ನು ಚಲಾವಣೆಗೆ ಬಿಡಲು ಎಷ್ಟು ಸಮಯ ಬೇಕಾಗುತ್ತದೆಂದು ಆರ್.ಬಿ.ಐ ತಿಳಿಸಿತ್ತು?
ಪ್ರಶ್ನೆ 7: 2016ರ ನವೆಂಬರ್ ಎಂಟರಂದು ಸೆಕ್ಷನ್ 3 ಸಿ(ವಿ) ಅಡಿಯಲ್ಲಿ ಆರ್.ಬಿ.ಐ ಒಂದು ಸತ್ತೋಲೆ ಕಳುಹಿಸಿತು. ಈ ಸುತ್ತೋಲೆಯಲ್ಲಿ ಪ್ರತಿ ದಿನ ಬ್ಯಾಂಕಿನಿಂದ ತೆಗೆಯಬಹುದಾದ ಹಣವನ್ನು ಹತ್ತು ಸಾವಿರಕ್ಕೆ ಮತ್ತು ಪ್ರತಿ ವಾರ ತೆಗೆಯುವ ಹಣವನ್ನು ಇಪ್ಪತ್ತು ಸಾವಿರಕ್ಕೆ ಸೀಮಿತಗೊಳಿಸಲಾಗಿತ್ತು. ಇದೇ ರೀತಿ ಪ್ರತಿ ದಿನ ಎಟಿಎಂನಿಂದ ತೆಗೆಯುವ ಹಣವನ್ನು ಎರಡು ಸಾವಿರಕ್ಕೆ ಸೀಮಿತಗೊಳಿಸಲಾಗಿತ್ತು. ಜನರು ತಮ್ಮದೇ ಸ್ವಂತ ಹಣವನ್ನು ತೆಗೆದುಕೊಳ್ಳುವುದಕ್ಕೆ ಈ ರೀತಿಯ ಮಿತಿಯನ್ನು ಆರ್.ಬಿ.ಐ ಯಾವ ಕಾನೂನು ಮತ್ತು ಅಧಿಕಾರವನ್ನು ಬಳಸಿಕೊಂಡು ಮಾಡಿತು? ಹಣವನ್ನು ರೇಷನ್ ಮಾಡುವುದಕ್ಕೆ ಆರ್.ಬಿ.ಐ ಅಧಿಕಾರ ಸಿಕ್ಕಿದ್ದೇಗೆ? ಆ ರೀತಿಯ ಕಾನೂನು ಲಭ್ಯವಿಲ್ಲದೇ ಹೋದ ಪಕ್ಷದಲ್ಲಿ ನಿಮ್ಮನ್ನು ಅಧಿಕಾರ ದುರುಪಯೋಗದ ಕಾರಣಕ್ಕಾಗಿ ಶಿಕ್ಷೆಗೆ ಒಳಪಡಿಸಿ ಅಧಿಕಾರದಿಂದ ತೆಗೆದುಹಾಕಬಹುದಲ್ಲವೇ?
ಪ್ರಶ್ನೆ 8: ಕಳೆದ ಎರಡು ತಿಂಗಳಿನಿಂದ ಆರ್.ಬಿ.ಐನ ನೀತಿ ನಿಯಮಗಳಲ್ಲಿ ಅಷ್ಟೊಂದು ಬದಲಾವಣೆಗಳು ಯಾಕಾಗಿ ಆದವು? ಬ್ಯಾಂಕುಗಳಲ್ಲಿ ಹಣ ಹಿಂದೆಗೆದಾಗ ಬೆರಳಿಗೆ ಶಾಯಿ ಹಾಕುವ ಆಲೋಚನೆಯನ್ನು ಕೊಟ್ಟ ಆರ್.ಬಿ.ಐ ಅಧಿಕಾರಿಯ ಹೆಸರು ತಿಳಿಸಿ. ಮದುವೆಯಿದ್ದರೆ ಇಷ್ಟು ದುಡ್ಡು ತೆಗೆಯಬಹುದು ಎಂಬ ಸುತ್ತೋಲೆಯನ್ನು ಬರೆದ ವ್ಯಕ್ತಿಯಾರು? ಈ ಸುತ್ತೋಲೆಗಳನ್ನು ಬರೆದಿದ್ದು ಸರಕಾರ ಆರ್.ಬಿ.ಐ ಅಲ್ಲ ಎನ್ನುವುದಾದರೆ ಆರ್.ಬಿ.ಐ ಈಗ ಹಣಕಾಸು ಸಚಿವಾಲಯದ ಭಾಗವಾಗಿಬಿಟ್ಟಿದೆಯೇ?
ಪ್ರಶ್ನೆ 9: ಒಟ್ಟಾರೆಯಾಗಿ ಎಷ್ಟು ಹಣವನ್ನು ಅಮಾನ್ಯಗೊಳಿಸಲಾಯಿತು ಮತ್ತು ಬ್ಯಾಂಕಿಗೆ ಮರಳಿ ಬಂದ ಹಳೆಯ ನೋಟುಗಳು ಪ್ರಮಾಣವೆಷ್ಟು? ನವೆಂಬರ್ ಎಂಟರಂದು ಆರ್.ಬಿ.ಐ ಸರಕಾರಕ್ಕೆ ನೋಟುಗಳನ್ನು ಅಮಾನ್ಯಗೊಳಿಸಬೇಕೆಂದು ಸಲಹೆ ಕೊಟ್ಟಾಗ ಎಷ್ಟು ಪ್ರಮಾಣದ ಹಣ ಮರೆಯಾಗಿಬಿಡುತ್ತದೆಂದು ಆರ್.ಬಿ.ಐ ನಿರೀಕ್ಷೆ ಮಾಡಿತ್ತು?
ಪ್ರಶ್ನೆ 10: ಖಾಸಗಿ ಹಾನಿಯೆಂಬ ಅಸಂಬದ್ಧ ಕಾರಣಗಳನ್ನು ನೀಡಿ ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗಳಿಗೆ ಆರ್.ಬಿ.ಐ ಉತ್ತರ ಕೊಡಲು ನಿರಾಕರಿಸಿದ್ದೇಕೆ? ಮಾಹಿತಿ ಹಕ್ಕಿನಡಿ ಕೇಳಲಾಗುತ್ತಿರುವ ಪ್ರಶ್ನೆಗಳಿಗೆ ಆರ್.ಬಿ.ಐ ಉತ್ತರವನ್ನೇಕೆ ನೀಡುತ್ತಿಲ್ಲ?
No comments:
Post a Comment