ರವಿ ಬೆಳಗೆರೆ ಅರೆಸ್ಟ್ ಎಂಬ ಸುದ್ದಿ ನಿನ್ನೆ ಮಧ್ಯಾಹ್ನದಿಂದ ಟಿವಿ, ಸುದ್ದಿ ಯ್ಯಾಪ್‍ಗಳು, ಎಫ್.ಬಿಯಲ್ಲಿ ರಾರಾಜಿಸಲಾರಂಭಿಸಿದೆ. ರವಿ ಬೆಳಗೆರೆ ಎಂಬ ವ್ಯಕ್ತಿ ಹೊತ್ತು ತಂದ ನೆನಪುಗಳ ಬುತ್ತಿ ಚಿಕ್ಕದಲ್ಲ.
ಎರಡನೆ ವರ್ಷದ ಪಿ.ಯು.ಸಿಯ ದಿನಗಳವು. ಅವತ್ಯಾವ ಕಾರಣಕ್ಕೋ ನೆನಪಿಲ್ಲ, ಕಾಲೇಜು ಬೇಗ ಮುಗಿದಿತ್ತು. ಮನೆಗೆ ಹೋಗುವ ದಾರಿಯಲ್ಲಿ ಸಿಗುತ್ತಿದ್ದ ಸ್ಟೇಡಿಯಂ ಬಳಿ ಚೆಂದದ ಚುರ್ಮುರಿ ಮಾಡುತ್ತಿದ್ದ ಗಾಡಿಯ ಬಳಿ ನಿಂತು ಚುರ್ಮುರಿ ತಿನ್ನುವಾಗ ಎದುರುಗಡೆ ನಗರ ಕೇಂದ್ರ ಗ್ರಂಥಾಲಯ ಅನ್ನೋ ಬೋರ್ಡು ಕಾಣಿಸಿತು. ಹುಣಸೂರಿನಲ್ಲಿದ್ದಾಗ ಅಪರೂಪಕ್ಕೆ ಲೈಬ್ರರಿಗೆ ಹೋಗುತ್ತಿದ್ದೆ, ಮಂಡ್ಯದ ಲೈಬ್ರರಿಗಿನ್ನೂ ಕಾಲಿಟ್ಟಿರಲಿಲ್ಲ. ನಡೀ ಲೈಬ್ರರಿಗಾದ್ರೂ ಹೋಗೋಣ ಅಂದ್ಕೊಂಡು ಒಳಗೆ ಕಾಲಿಟ್ಟೆ. ಒಂದಷ್ಟು ದಿನಪತ್ರಿಕೆ ತಿರುವು ಹಾಕಿ, ರೂಪತಾರ ತರಂಗ ಮಂಗಳ ತಿರುವು ಹಾಕಿದ ನಂತರ ಕಣ್ಣಿಗೆ ಬಿದ್ದಿದ್ದು ಕಪ್ಪು ಸುಂದರಿ! ಕೈಗೆತ್ತಿಕೊಂಡ ಮೊದಲ ಟ್ಯಾಬ್ಲಾಯ್ಡ್ ಪತ್ರಿಕೆ ಹಾಯ್ ಬೆಂಗಳೂರ್! ಆ ವಯಸ್ಸಲ್ಲಿ ಪತ್ರಿಕೆಯಲ್ಲಿದ್ದ ಕ್ರೈಂ – ರಾಜಕೀಯ ವರದಿಗಳ ರಂಜನೀಯ ಟೈಟಲ್ಲುಗಳು ಇಷ್ಟವಾಯ್ತೋ, ಖಾಸ್ ಬಾತ್ ಬಾಟಮ್ ಐಟಮ್ ಹಲೋ ಕೇಳಿ ಅನ್ನೋ ಹೆಸರುಗಳು ಇಷ್ಟವಾಯ್ತೋ ಈಗ ನಿರ್ಧರಿಸುವುದು ಕಷ್ಟದ ಕೆಲಸ. ಹೀಗೆ ಶುರುವಾಗಿತ್ತು ಹಾಯ್ ಬೆಂಗಳೂರ್ ಜೊತೆಗಿನ ಒಡನಾಟ.