ಮೂಲಭೂತವಾದ ಹಾಗೂ ಬಂಡವಾಳವಾದ ಈ ಎರಡೂ ಸಾಹಿತ್ಯ-ಸಂಸ್ಕೃತಿಗಳ ಮುಖವಾಡ ತೊಟ್ಟು ಜನಪರವೆಂದು ತಮ್ಮನ್ನು ಬಿಂಬಿಸಿಕೊಳ್ಳುತ್ತ, ತಮ್ಮ ಕಾರ್ಯಯೋಜನೆಗಳಿಗೆ ಮನ್ನಣೆ ಪಡೆಯಲು ಪೈಪೋಟಿ ನಡೆಸುತ್ತಿವೆ. ಜನಸಾಮಾನ್ಯರ ದೈನಂದಿನ ಬದುಕಿನೊಳಗೂ ಮಾರುಕಟ್ಟೆ ಮತ್ತು ಧಾರ್ಮಿಕ ಹಿತಾಸಕ್ತಿ ಅನಾರೋಗ್ಯಕರ ಸ್ಪರ್ಧೆ ಹಾಗೂ ಅಸಹನೆ ಹುಟ್ಟುಹಾಕುತ್ತಿವೆ. ಇವುಗಳ ಮುಖವಾಡವನ್ನು ಗುರುತಿಸದವರು ಸನ್ನಿವೇಶದ ಸನ್ನಿಗೆ ಒಳಗಾದಂತೆ ಮಾರುಹೋಗುತ್ತಿದ್ದಾರೆ, ಈ ವರ್ತುಲದ ಸಹಭಾಗಿಗಳಾಗುತ್ತಿದ್ದಾರೆ. ಇದು ಯುವ ಪೀಳಿಗೆಯನ್ನು ಗೊಂದಲಗೊಳಿಸಿ ದಿಕ್ಕು ತಪ್ಪಿಸುವ ಅಪಾಯ ದಟ್ಟವಾಗಿದೆ.
ಇಂಥ ಸಂದರ್ಭದಲ್ಲಿ ಜನತೆಯ, ಶೋಷಿತರ ದ್ವನಿಯಾಗಬೇಕಿರುವ, ಅವರ ನೋವು ನಲಿವುಗಳನ್ನು ಪ್ರತಿಬಿಂಬಿಸಬೇಕಿರುವ, ಜನತೆಯ ವಿಮೋಚನಾ ಚಳವಳಿಯ ಜೊತೆಗಿರಬೇಕಿರುವ ಸೃಜನಶೀಲ - ಪ್ರಜ್ಞಾವಂತರು ಸಾಹಿತ್ಯವನ್ನು ತಮ್ಮ ಪ್ರತಿಷ್ಠೆಗೆ, ಮಾರುಕಟ್ಟೆಯ ವಿಸ್ತರಣೆಗೆ, ಧಾರ್ಮಿಕ ಸರ್ವಾಧಿಕಾರ ಕಾಯ್ದುಕೊಳ್ಳಲಿಕ್ಕೆ ಬಳಸುತ್ತಿರುವವರ ಕೈಜೋಡಿಸುತ್ತಿರುವ ಸಂದರ್ಭದಲ್ಲಿ “ಸಾಹಿತ್ಯ ಮತ್ತು ಚಳವಳಿ ಒಟ್ಟೊಟ್ಟಿಗೇ ಸಾಗಬೇಕಾಗಿದೆ” ಎಂಬುದನ್ನು ಗಟ್ಟಿದನಿಯಲ್ಲಿ ಮನದಟ್ಟು ಮಾಡಿಕೊಡುವ ತುರ್ತು ಇದೆ.
ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕರು ಒಂದೆಡೆ ಸೇರಿ, ಜನರಿಂದಲೇ ಹಣ ಸಂಗ್ರಹಿಸಿ, ಜನಪರವಾದ ಚಿಂತನೆಗಳನ್ನು ನಡೆಸಿ, ಆ ಮೂಲಕ ಪರ್ಯಾಯ ಮಾದರಿಯೊಂದನ್ನು ರೂಪಿಸುವ ಅಗತ್ಯವನ್ನು ಮನಗಂಡು, ಅದನ್ನು ಕಾರ್ಯರೂಪಕ್ಕಿಳಿಸುವ ನಿಟ್ಟಿನಲ್ಲಿ ಅಭಿಮತ ಮಂಗಳೂರು ಬಳಗ ಮುಂದಾಯಿತು. ಚಳವಳಿಗೆ ಪೂರಕವಾಗಿರುವ ಶೋಷಿತರು, ಜನಪರ ಸಾಹಿತಿಗಳು, ಚಳವಳಿಗಾರರು, ಪತ್ರಕರ್ತರು ಹಾಗೂ ಸಂಘಟನೆಗಳು ಇದಕ್ಕೆ ಜೊತೆಯಾದರು. ಅದರಂತೆ 2013ರ ಡಿಸೆಂಬರ್’ನಲ್ಲಿ ‘ನುಡಿಯು ಸಿರಿಯಲ್ಲ, ಬದುಕು’ ಎಂಬ ಘೋಷವಾಕ್ಯದಲ್ಲಿ ಮೊದಲ ‘ಜನನುಡಿ’ ಆಯೋಜನೆಗೊಂಡಿತು.
ಹೀಗೆ ಆರಂಭಗೊಂಡ ಜನನುಡಿ ಇದೀಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಇದೇ ಡಿಸೆಂಬರ್ 24, 25ರಂದು ಮಂಗಳೂರಿನ ‘ಶಾಂತಿಕಿರಣ’ದಲ್ಲಿ ಜನನುಡಿ ಆಯೋಜನೆಗೊಂಡಿದೆ. ಈ ಬಾರಿ ಡಾ.ಬಿ.ಆರ್.ಅಂಬೇಡ್ಕರ್’ರ 125ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ‘ಸಮತೆ ಎಂಬುದು ಅರಿವು’ ಆಶಯದೊಡನೆ ಜನನುಡಿ ಗೋಷ್ಠಿಗಳು ನಡೆಯಲಿವೆ.
ನೀವು ಕೂಡ ಅಭಿಮತದ ಬಳಗವೇ ಆಗಿದ್ದೀರಿ. ಈ ಜನಪರ ನಡಿಗೆಯಲ್ಲಿ ತಮ್ಮ ಹೆಜ್ಜೆಗಳೂ ಜೊತೆಗಿರಲಿ. ಜನನುಡಿಯಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಬನ್ನಿ, ಸಂಗಾತಿಗಳನ್ನೂ ಕರೆತನ್ನಿ.
ಇದು ನಮ್ಮ ಪ್ರೀತಿಯ ಆಹ್ವಾನ,
ಅಭಿಮತ ಮಂಗಳೂರು
No comments:
Post a Comment