ಡಾ. ಅಶೋಕ್. ಕೆ. ಆರ್
ಫಿಡೆಲ್ ಕ್ಯಾಸ್ಟ್ರೋ! ರೋಮಾಂಚನ, ಭೀತಿ, ಕೋಪವೆಲ್ಲವನ್ನೂ ಹುಟ್ಟಿಸಿದ ವ್ಯಕ್ತಿ ಈಗ ಹೆಸರು ಮಾತ್ರ. ಒಂದಷ್ಟು ವರುಷಗಳಿಂದ ಅನಾರೋಗ್ಯಕ್ಕೀಡಾಗಿದ್ದ ಫಿಡೆಲ್ ಕ್ಯಾಸ್ಟ್ರೋ ಇನ್ನಿಲ್ಲ ಎನ್ನುವ ಸುದ್ದಿ ಕ್ಯೂಬಾದ ಕ್ರಾಂತಿ ಹೋರಾಟವನ್ನು ಒಂದು ಕ್ಷಣ ನೆನಪಿಸಿತು, ಕ್ಯಾಸ್ಟ್ರೋ ಜೊತೆಜೊತೆಗೇ ಚೆ ಗುವಾರ ಮತ್ತೊಮ್ಮೆ ನೆನಪಾದರು. ಪ್ರಪಂಚದ ಯಶಸ್ವಿ ಗೆರಿಲ್ಲಾ ಹೋರಾಟದ ರೂವಾರಿ ಫಿಡೆಲ್. ಎಡಪಂಥೀಯ ಸಿದ್ಧಾಂತದ ಆಧಾರದಲ್ಲಿ, ಗೆರಿಲ್ಲಾ ಯುದ್ಧ ತಂತ್ರದಲ್ಲಿ ಯಶ ಕಂಡು ದಶಕಗಳ ಕಾಲ ಕ್ಯೂಬಾದ ಚುಕ್ಕಾಣಿ ಹಿಡಿದಿದ್ದ ಫಿಡೆಲ್ ಕ್ಯಾಸ್ಟ್ರೋನನ್ನು ಅರ್ಥೈಸಿಕೊಳ್ಳುವ ಬಗೆ ಹೇಗೆ? ಅರವತ್ತು ವರುಷಗಳ ಹಿಂದೆ ಬ್ಯಾಟಿಸ್ಟಾನ ಮಿಲಿಟರಿ ಸರ್ವಾಧಿಕಾರದ ವಿರುದ್ಧ ನಡೆದ ಹೋರಾಟದ ನೆವದಲ್ಲೇ ರೊಮ್ಯಾಂಟಿಸಿಸಮ್ ಮೂಲಕ ಕಾಣಬೇಕಾ? ಅರವತ್ತು ವರುಷಗಳಿಂದ ಅಮೆರಿಕಾದ ವಸಾಹತುಶಾಹಿ ಹೊಡೆತಗಳಿಗೆ ಧೈರ್ಯದಿಂದ ಎದೆಯೊಡ್ಡಿ ನಿಂತು ಸಮಾಜವಾದದ ಆಧಾರದಲ್ಲಿ ದೇಶ ಕಟ್ಟಿದ ಅವರ ಶ್ರಮದ ಮೂಲಕ ಕಾಣಬೇಕಾ? ನಮಗೆ ಬೇಕೋ ಬೇಡವೋ ಪ್ರಪಂಚದ ಹೆಚ್ಚಿನ ಭಾಗ ಬಂವಾಳಶಾಹಿತನದೆಡೆಗೇ ಜಾರಿ ಹೋಗುತ್ತಿರುವ ಕಾಲಘಟ್ಟದಲ್ಲಿ ಫೀಡೆಲ್ ಕ್ಯಾಸ್ಟ್ರೋನನ್ನು ಬಂಡವಾಳಶಾಹಿ ಕನ್ನಡಕದ ಮೂಲಕವಷ್ಟೇ ಕಾಣಬೇಕಾ? ಅಥವಾ ಪ್ರಜಾಪ್ರಭುತ್ವವಾದಿ ದೃಷ್ಟಿಯಿಂದ ನೋಡಬೇಕಾ?
ಮಿಲಿಟರಿ ಸರ್ವಾಧಿಕಾರಿಯಾಗಿದ್ದ, ಅಮೆರಿಕಾದ ಬಂಡವಾಳಶಾಹಿಗಳಿಗೆ ಪೂರಕವಾಗಿದ್ದ ಭ್ರಷ್ಟ ಬ್ಯಾಟಿಸ್ಟಾನ ವಿರುದ್ಧ ಹೋರಾಡಲು ಫಿಡೆಲ್ ಮೊದಮೊದಲೇ ಬಂದೂಕೆತ್ತಿಕೊಳ್ಳುವುದಿಲ್ಲ. ವಕೀಲನಾಗಿದ್ದ ಫಿಡೆಲ್ ಕಾನೂನು ಮಾರ್ಗದ ಮೂಲಕವೇ ಹೋರಾಡಲು ಪ್ರಾರಂಭಿಸುತ್ತಾರೆ. ಆಳುವ ವರ್ಗಗಳ ಹಿತಾಸಕ್ತಿಗಳ ನಡುವೆ ಕಾನೂನಾತ್ಮಕ ಹೋರಾಟ ಯಶ ಕಾಣುವುದಿಲ್ಲ. ಫಿಡೆಲ್ ಅನೇಕ ಬಾರಿ ಜೈಲಿನ ಪಾಲಾಗುತ್ತಾರೆ. ಈ ಹೋರಾಟಗಳ ಅನರ್ಥಕತೆ, ಪ್ರಭುತ್ವ ಈ ಹೋರಾಟಗಳನ್ನು ತುಳಿಯಲು ಹವಣಿಸುತ್ತಲೇ ಇರುವುದನ್ನು ಕಂಡ ಫಿಡೆಲ್ ಕೊನೆಗೆ ಸಶಸ್ತ್ರ ಕ್ರಾಂತಿಯ ಮೊರೆ ಹೋಗುತ್ತಾರೆ. ಮಾರ್ಕ್ಸ್ ವಾದಿ ನೆಲೆಗಟ್ಟಿನ ಫಿಡೆಲ್ ಮತ್ತು ಸಂಗಡಿಗರು ಆಯ್ದುಕೊಂಡದ್ದು ನೇರ ಯುದ್ಧವನ್ನಲ್ಲ. ಅಮೆರಿಕಾದ ಬೆಂಬಲವಿರುವ ಬ್ಯಾಟಿಸ್ಟಾನ ಸೈನ್ಯದ ಬಳಿ ಪ್ರಬಲ ಅಸ್ತ್ರಗಳಿವೆ, ಆ ಸೈನ್ಯವನ್ನು ನೇರ ಯುದ್ಧದ ಮೂಲಕ ಸೋಲಿಸುವುದು ಅಸಾಧ್ಯವೆಂದರಿತಿದ್ದ ಫಿಡೆಲ್ ಗೆರಿಲ್ಲಾ ಮಾದರಿಯ ಯುದ್ಧವನ್ನು ತಮ್ಮ ತಂತ್ರವನ್ನಾಗಿ ಮಾಡಿಕೊಳ್ಳುತ್ತಾರೆ. ಈ ಗೆರಿಲ್ಲಾ ಯುದ್ಧಕ್ಕೆ ಫಿಡೆಲ್ ನ ಸೈನ್ಯ ಬಳಸಿಕೊಂಡಿದ್ದು ಕ್ಯೂಬಾದ ಆಗ್ನೇಯ ಭಾಗದಲ್ಲಿದ್ದ ಸಿಯೆರ್ರಾ ಮೇಸ್ಟ್ರಾ ಕಣಿವೆಯನ್ನು. ಕ್ಯೂಬಾದ ಕ್ರಾಂತಿ ಹೋರಾಟ ಗೆರಿಲ್ಲಾ ಯುದ್ಧದ ತಂತ್ರಗಳ ಪಾಠಶಾಲೆ ಎಂದರೆ ತಪ್ಪಲ್ಲ. ಹತ್ತಿಪ್ಪತ್ತು ಸಾವಿರ ಲೆಕ್ಕದಲ್ಲಿರುವ ಪ್ರಭುತ್ವದ ಸೇನೆಯನ್ನು ನೂರಿನ್ನೂರು ಅಬ್ಬಬ್ಬಾ ಎಂದರೆ ಐನೂರು ಜನರಿರುವ ಸೈನ್ಯವು ಸೋಲಿಸುವುದು ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರವಾಗಿದೆ ಕ್ಯೂಬಾದ ಕ್ರಾಂತಿ. ಶತ್ರು ಸೈನ್ಯಕ್ಕೆ ಅಚ್ಚರಿ ಕೊಡುವುದೇ ಗೆರಿಲ್ಲಾ ಯುದ್ಧತಂತ್ರ. ಶತ್ರು ಸೈನ್ಯ ದಾಳಿಯಾಯಿತು ಎಂದು ಅರಿಯುವಷ್ಟರಲ್ಲಿ ದಾಳಿ ಮುಗಿಸಿ ವಾಪಸ್ಸಾಗಿಬಿಡುತ್ತದೆ ಗೆರಿಲ್ಲಾ ಸೈನ್ಯ. ಈ ಗೆರಿಲ್ಲಾ ತಂತ್ರಗಳನ್ನು ಉಪಯೋಗಿಸಿಕೊಂಡು ಫಿಡೆಲ್ ನೇತೃತ್ವದ ಸೈನ್ಯ ಯಶಸ್ವಿಯಾಗಿ ಮುನ್ನಡೆಯುತ್ತದೆ. ಹಲವೆಡೆ ಹಿನ್ನಡೆ ಅನುಭವಿಸಿದರೂ ಅದನ್ನು ತಾತ್ಕಾಲಿಕವಾಗಿಸಿ ಮತ್ತೆ ಮುಂದುವರೆಯುತ್ತಾರೆ. ಕೊನೆಗೆ ಸಾಂತಾ ಕ್ಲಾರಾದ ಯುದ್ಧದೊಂದಿಗೆ ಫಿಡೆಲ್ ಕ್ಯಾಸ್ಟ್ರೋ ಮತ್ತವನ ಸೈನ್ಯವು ಕ್ಯೂಬಾದಲ್ಲಿನ ಬ್ಯಾಟಿಸ್ಟಾನ ಅಧಿಕಾರವನ್ನು ಕಿತ್ತೊಗೆದು ಕ್ಯೂಬಾದ ರಾಜಧಾನಿ ಹವಾನಾದತ್ತ ಪಯಣಿಸುತ್ತಾರೆ. ಸಿಯೆರ್ರಾ ಮೇಸ್ಟ್ರಾದ ಜನರು ಕ್ರಾಂತಿಕಾರಿ ಸೈನ್ಯಕ್ಕೆ ನೀಡಿದ ಬೆಂಬಲ ಮತ್ತು ಬ್ಯಾಟಿಸ್ಟಾನ ದುರಾಡಳಿತದಿಂದ ನೊಂದ ಕ್ಯೂಬಾದ ಜನತೆ ನೀಡಿದ ಸಹಕಾರವಿರದೇ ಹೋಗಿದ್ದರೆ ಫಿಡೆಲ್ ಮತ್ತು ಸಂಗಡಿಗರ ಕ್ರಾಂತಿ ಮುನ್ನಡೆಯುತ್ತಿರಲಿಲ್ಲ.
ಪ್ರಭುತ್ವವನ್ನು ಕಿತ್ತೊಗೆದು ಅಧಿಕಾರಕ್ಕೆ ಬರುವುದು ಅಧಿಕಾರಕ್ಕೆ ಬಂದ ನಂತರ ಕೈಗೊಳ್ಳಬೇಕಾದ ಕೆಲಸಗಳಿಗಿಂತ ಸುಲಭವಾದುದು. ಅಧಿಕಾರವಿಡಿದ ಫಿಡೆಲ್ ಕ್ಯಾಸ್ಟ್ರೋ ಮೇಲೆ ಜನರಿಗಿದ್ದ ನಿರೀಕ್ಷೆಗಳು ಹೆಚ್ಚು. ಭ್ರಷ್ಟರಹಿತ ಆಡಳಿತವನ್ನು ಜನಪರವಾಗಿಯೂ ಮಾಡುವುದುದು ಸುಲಭದ ಕೆಲಸವೇನಾಗಿರಲಿಲ್ಲ. ದೇಶೀಯ ಬ್ಯಾಟಿಸ್ಟಾನ ವಿರುದ್ಧ ನಡೆಸಿದ ಹೋರಾಟದ ಮುಂದುವರೆದ ಭಾಗವಾಗಿ ಪ್ರಬಲ ಅಮೆರಿಕಾದ ವಿರುದ್ಧ ಹೋರಾಡಬೇಕಿತ್ತೀಗ. ಇಲ್ಲಿ ನೇರ ಯುದ್ಧವಿರಲಿಲ್ಲ, ಗೆರಿಲ್ಲಾ ಯುದ್ಧವೂ ಇರಲಿಲ್ಲ. ಅಮೆರಿಕಾದ ಬಂಡವಾಳಶಾಹಿತನ, ಎಲ್ಲವನ್ನೂ ಕಬಳಿಸಬಯಸುವ ಅಮೆರಿಕಾದ ದುರಾಸೆಗಳ ವಿರುದ್ಧ ಹೋರಾಡುವುದು ಸುಲಭದ ಮಾತೂ ಆಗಿರಲಿಲ್ಲ. ಅಮೆರಿಕಾದ ಕಂಪನಿಗಳಾಗಲೇ ಕ್ಯೂಬಾದ ನೆಲವನ್ನು ತಮ್ಮ ವಸಾಹತುಗಳನ್ನಾಗಿ ಮಾಡಿಕೊಂಡಿದ್ದವು. ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಫಿಡೆಲ್ ಆಡಳಿತವು ಈ ಕಂಪನಿಗಳನ್ನೆಲ್ಲ ರಾಷ್ಟ್ರೀಕರಣಗೊಳಿಸಿಬಿಟ್ಟವು. ತನ್ನ ದೇಶದ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಿದ ಕ್ಯೂಬಾದೊಂದಿಗೆ ಸ್ನೇಹದಿಂದರಲು ಅಮೆರಿಕಾಕ್ಕೆ ಸಾಧ್ಯವೇ?! ಅಮೆರಿಕಾದ ವೈರಿಗಳ ದೊಡ್ಡ ಪಟ್ಟಿಯಲ್ಲಿ ಕ್ಯೂಬಾಕ್ಕೆ ಅಗ್ರಸ್ಥಾನ ದಕ್ಕಿತು. ಇದಷ್ಟೇ ಕಾರಣವಲ್ಲ. ಕ್ಯೂಬಾದ ಕ್ರಾಂತಿ ಇಡೀ ಲ್ಯಾಟಿನ್ ಅಮೆರಿಕಾಕ್ಕೆ ಹರಡಿಬಿಟ್ಟರೆ ಗತಿಯೇನು ಎನ್ನುವುದು ಅಮೆರಿಕಾದ ಭಯ. ಅಮೆರಿಕಾದಂತಹ ದೈತ್ಯ ದೇಶವನ್ನು ಎದುರು ಹಾಕಿಕೊಂಡ ಕ್ಯೂಬಾದಂತಹ ಪುಟ್ಟ ದೇಶಕ್ಕೆ ಮತ್ತೊಂದು ಪ್ರಬಲ ದೇಶದ ಬೆಂಬಲದ ಅಗತ್ಯವಿತ್ತು. ‘ನಾನು ಕಮ್ಯುನಿಷ್ಟ್ ಅಲ್ಲ’ ಎಂದು ಹೇಳಿಕೊಂಡಿದ್ದ ಫಿಡೆಲ್ ಕಮ್ಯುನಿಷ್ಟ್ ರಷ್ಯಾದ ಬೆಂಬಲ ಪಡೆದುಕೊಂಡರು. ರಷ್ಯಾದ ಪತನದೊಂದಿಗೆ ಕ್ಯೂಬಾ ಕೂಡ ಸಂಕಷ್ಟಕ್ಕೀಡಾಯಿತು. ತನ್ನನ್ನು ಬೆಂಬಲಿಸುವ ದೊಡ್ಡ ದೇಶವಿಲ್ಲ, ತನ್ನ ಸೈನ್ಯಕ್ಕೆ ಸಾಮಗ್ರಿಗಳನ್ನು ಪೂರೈಸಲು, ದೇಶದ ನಾಗರೀಕರಿಗೆ ಆಹಾರವನ್ನಾಮದು ಮಾಡಿಕೊಳ್ಳುವುದು ಕಷ್ಟಸಾಧ್ಯವಾದಾಗ ಕ್ಯೂಬಾ ಸಂಕಷ್ಟದ ದಿನಗಳನ್ನೆದುರಿಸಿತು. ಇದರ ಮಧ್ಯೆ ಅಮೆರಿಕಾದಿಂದ ಬೆಂಬಲ ಪಡೆದುಕೊಂಡ ಫಿಡೆಲ್ ವಿರೋಧಿ ಪಡೆಗಳ ಪ್ರತಿಕ್ರಾಂತಿ ಪದೇ ಪದೇ ನಡೆಯುತ್ತಿತ್ತು. ಫಿಡೆಲ್ ಕ್ಯಾಸ್ಟ್ರೋನನ್ನು ಮುಗಿಸಲು ಅಮೆರಿಕಾದ ಸಿಐಎ ನಡೆಸಿದ ಪ್ರಯತ್ನಗಳಿಗೂ ಲೆಕ್ಕವಿಲ್ಲ. ಒಂದು ಅಂದಾಜಿನ ಪ್ರಕಾರ ಅಮೆರಿಕಾದ ಸಿಐಎ ಫಿಡೆಲ್ ಕ್ಯಾಸ್ಟ್ರೋನನ್ನು ಹತ್ಯೆಗೈಯಲು ಬರೋಬ್ಬರಿ 638 ಬಾರಿ ಪ್ರಯತ್ನಿಸಿತು! ಇಂತಹ ಕಷ್ಟದ ಸನ್ನಿವೇಶದಲ್ಲಿ ಫಿಡೆಲ್ ನೇತೃತ್ವದ ಕ್ಯೂಬಾ ಆಯ್ದುಕೊಂಡ ದಾರಿ ಯಾವುದು?
ಚೆ ಮತ್ತು ಕ್ಯಾಸ್ಟ್ರೋ |
ಸಂಕಷ್ಟದ ದಿನಗಳಲ್ಲಿ ಅಮೆರಿಕಾದ ಶಕ್ತಿಗಳಿಗೆ ಶರಣಾಗಲಿಲ್ಲ ಕ್ಯೂಬಾ. ಆಹಾರದ ಕೊರತೆಗೆ ತನ್ನಲ್ಲೇ ಪರಿಹಾರ ಕಂಡುಕೊಂಡಿತು. ನಗರಗಳಲ್ಲಿ ಖಾಲಿಯಿರುವ ಜಾಗಗಳಲ್ಲೆಲ್ಲ ಕೃಷಿ ಪ್ರಾರಂಭಿಸಿತು. ಕೃಷಿಯೆಂದರೆ ಗ್ರಾಮೀಣ ಭಾಗದ ಕೆಲಸ ಎಂಬ ನಂಬುಗೆಯನ್ನು ತೊಡೆದುಹಾಕಿ ನಗರ ಕೃಷಿಯ ಪರಂಪರೆಯನ್ನು ಹುಟ್ಟಿಹಾಕಿದ್ದು ಕ್ಯೂಬಾ. ಆಹಾರದ ಸ್ವಾವಲಂಬನೆಯನ್ನು ಪಡೆಯುವುದು ಒಂದು ದೇಶಕ್ಕೆ ಎಷ್ಟು ಮುಖ್ಯವಾದುದು ಎನ್ನುವುದಕ್ಕೂ ಕ್ಯೂಬಾ ಉದಾಹರಣೆಯಾಗಿದೆ. ನಮ್ಮ ನಗರ ಪ್ರದೇಶಗಳ ಖಾಲಿ ಸೈಟುಗಳನ್ನು ಕಸದ ತೊಟ್ಟಿಯಾಗಿ, ಪಾರ್ಕುಗಳನ್ನು ಅಪಾರ ನೀರು ವ್ಯರ್ಥವಾಗಿಸುವ ಹುಲ್ಲುಹಾಸನ್ನಾಗಿ ಪರಿವರ್ತಿಸಿಬಿಟ್ಟಿರುವುದನ್ನು ಕಂಡಾಗಲೆಲ್ಲ ಕ್ಯೂಬಾದ ನಗರ ಕೃಷಿ ನೆನಪಾಗದೆ ಇರದು. ಆರ್ಥಿಕ ದಿಗ್ಭಂಧನ ಮೂಡಿಸಿದ ಸಂಕಷ್ಟದ ಪರಿಸ್ಥಿತಿಯಲ್ಲೂ ಕ್ಯೂಬಾದ ಸರಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ನೀಡಿದ ಮಹತ್ವ ಅತ್ಯಂತ ಪ್ರಮುಖವಾದುದು. ಬಹುಶಃ ಕ್ಯೂಬಾದಿಂದ ಇತರೆ ದೇಶಗಳು ಕಲಿಯಬೇಕಾದದ್ದು ಇದನ್ನೇ. ಉಚಿತ ಶಿಕ್ಷಣದ ಪರಿಣಾಮವಾಗಿ ಕ್ಯೂಬಾ ಕೆಲವೇ ವರುಷಗಳಲ್ಲಿ 99 ಪರ್ಸೆಂಟ್ ಸಾಕ್ಷರತೆ ಪ್ರಮಾಣವನ್ನು ಮುಟ್ಟಿಬಿಟ್ಟಿತು. ಕ್ಯೂಬಾದಂತಹ ಪುಟ್ಟ ದೇಶ ಪ್ರಪಂಚದ ಅನೇಕ ದೇಶಗಳಿಗೆ ಪ್ರಾಕೃತಿಕ ವಿಕೋಪದ ಪರಿಸ್ಥಿತಿಯಲ್ಲಿ ತನ್ನ ವೈದ್ಯರನ್ನು ಹೆಚ್ಚಿನ ಸಂಖೈಯಲ್ಲಿ ಕಳುಹಿಸಿಕೊಟ್ಟಿತು. ಕ್ಯೂಬಾದ ವೈದ್ಯರ ಸಂಖೈ ಎಷ್ಟು ಹೆಚ್ಚಿದೆಯೆಂದರೆ ಅಮೆರಿಕಾದಂತಹ ಅಮೆರಿಕಾಕ್ಕೂ ಕ್ಯೂಬಾದ ವೈದ್ಯರು ಹೋಗಿ ಸೇವೆ ಸಲ್ಲಿಸಿದರು. ವೆನೆಜುವೆಲಾದಿಂದ ಬರುವ ಪೆಟ್ರೋಲಿಯಮ್ ಉತ್ಪನ್ನಗಳಿಗೆ ಬದಲಾಗಿ ವೈದ್ಯರನ್ನು ಕಳುಹಿಸಿಕೊಡುತ್ತಿತ್ತು ಕ್ಯೂಬಾ! ಇಷ್ಟೊಂದು ಸಂಖೈಯ ವೈದ್ಯರಿದ್ದಾಗ ಕ್ಯೂಬಾದ ಆರೋಗ್ಯ ಕ್ಷೇತ್ರವೂ ಚೆಂದವಾಗಿರಲೇಬೇಕಲ್ಲ. ಕ್ಯೂಬಾದ ಆರೋಗ್ಯ ಕ್ಷೇತ್ರವು ಜಗತ್ತಿಗೇ ಮಾದರಿ ಎಂದು ಹೇಳಲಾಗುತ್ತದೆ. ದುಡ್ಡು ಹುಟ್ಟಿಸದ ಮಾದರಿಯಲ್ಲವೇ, ಹಾಗಾಗಿ ಇತರೆ ದೇಶದ ಸರಕಾರಗಳು ಅದರ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಾಣುವುದಿಲ್ಲ.
ಬಂಡವಾಳಶಾಹಿ ಕನ್ನಡಕದ ಮೂಲಕ ಕ್ಯೂಬಾವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದರೆ ಅದು ಒಂದು ಪುಂಡ ರಾಷ್ಟ್ರವಾಗಿ, ಜನರಿಗೆ ಸ್ವಾತಂತ್ರ್ಯ ಕೊಡದ, ಆರ್ಥಿಕ ಪ್ರಗತಿಗೆ ಪೂರಕವಾದ ನಿರ್ಧಾರಗಳನ್ನು ಕೈಗೊಳ್ಳದ ದೇಶವಾಗಿ ಕಾಣುತ್ತದೆ. ಈ ದೃಷ್ಟಿಕೋನವು ಪ್ರಚುರಗೊಳ್ಳುವುದರಲ್ಲಿ ಅಮೆರಿಕಾದ ಕೊಡುಗೆ ಸಾಕಷ್ಟಿದೆ ಎನ್ನುವುದೇನೂ ಸುಳ್ಳಲ್ಲ. ಪ್ರಕೃತಿಯನ್ನು ನಾಶ ಮಾಡಿ ಮನುಷ್ಯನನ್ನು ಭೌತಿಕ ವಸ್ತುಗಳ ದಾಸ್ಯನನ್ನಾಗಿಸುವುದನ್ನು ಪೋಷಿಸುವುದೇ ಬಂಡವಾಳಶಾಹಿತನವಾಗಿಬಿಟ್ಟಿದೆ. ಭಾರತವೂ ಈ ಬಂಡವಾಳಶಾಹಿತವನ್ನೇ ಅಪ್ಪಿಕೊಂಡಿದೆ. ಭೌತಿಕವಾಗಿ ನಮ್ಮನುಕೂಲಕ್ಕೆ (ಅನುಕೂಲವೆಂದರೆ ಮತ್ತೇನಲ್ಲ, ಸೋಮಾರಿತನ ಹೆಚ್ಚಿಸಿಕೊಳ್ಳುವುದು) ಬೇಕಾದ ವಸ್ತುಗಳು ಎಷ್ಟು ಸಲೀಸಾಗಿ ಸಿಗುತ್ತಿವೆ, ದುಡ್ಡು ಎಷ್ಟು ಓಡಾಡುತ್ತಿದೆ (ಕಡೇ ಪಕ್ಷ ಮಧ್ಯಮ ವರ್ಗದ ಮೇಲ್ಪಟ್ಟ ವರ್ಗಗಳಲ್ಲಿ) ಎನ್ನುವುದರ ಮೇಲೆ ನಮ್ಮ ಅಭಿವೃದ್ಧಿಯನ್ನು ಅಳೆಯಲಾಗುತ್ತದೆ. ಈ ಅಳತೆಗೋಲಿನ ಆಧಾರದಲ್ಲಿ ಕ್ಯೂಬಾ ಒಂದು ವಿಫಲ ದೇಶವೆಂದು ದಾರಾಳವಾಗಿ ಕರೆದುಬಿಡಬಹುದು. ಯಾಕೆಂದರೆ ಅಲ್ಲಿ ಮೊಬೈಲ್ ಫೋನು, ಅಂತರ್ಜಾಲದಂತಹ ‘ಅಭಿವೃದ್ಧಿಯ’ ಮಾಪಕಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಿದೆಯೆಂದು ಹೇಳಲಾಗುತ್ತದೆ. ನಮ್ಮ ಅಳತೆಯೇ ತಪ್ಪೋ, ಅವರ ಮಾಪಕವೇ ತಪ್ಪೋ ಹೇಳುವವರಾರು? ಸಮಾಜವಾದವನ್ನಾಧರಿಸಿದ ಸಿದ್ಧಾಂತವನ್ನಪ್ಪಿಕೊಂಡ ದೇಶಗಳ ಸಂಖೈ ವಿರಳವೆನ್ನುವಷ್ಟು ಕಡಿಮೆಯಾಗಿಬಿಟ್ಟಿವೆ. ಕಮ್ಯುನಿಸಂನ ಹೆಸರಿನ ದೇಶಗಳೂ ಬಂಡವಾಳಶಾಹಿತನವನ್ನು ಅಪ್ಪಿಕೊಂಡಿವೆ; ಹಾಗಾದರೆ ಬಂಡವಾಳಶಾಹಿತನವೇ ಉತ್ತಮವಾ? ಪ್ರಕೃತಿಯ ದೃಷ್ಟಿಯಿಂದಂತೂ ಕೊಳ್ಳುಬಾಕ ಸಂಸ್ಕೃತಿ ಉತ್ತಮವಲ್ಲ; ಮುಂದಿನ ಪರಿಣಾಮಗಳು ಹೇಗಿರುತ್ತವೆಯೋ ಕಾದು ನೋಡಬೇಕಷ್ಟೇ.
ಕ್ಯೂಬಾದ ನಗರ ಕೃಷಿ |
ಫಿಡೆಲ್ ಕ್ಯಾಸ್ಟ್ರೋರವರನ್ನು ಮೆಚ್ಚುವುದಕ್ಕೆ ಇರುವ ಕಾರಣಗಳೇನೋ ಹಲವಾರಿವೆ. ಕಣ್ಣು ಮುಚ್ಚಿ ಒಪ್ಪಿಕೊಳ್ಳುವುದಕ್ಕೆ ಕೆಲವೊಂದು ಅಡ್ಡಿಗಳಿವೆ. ಒಬ್ಬ ಸರ್ವಾಧಿಕಾರಿಯನ್ನು ಕೆಳಗಿಳಿಸಿ ಅಧಿಕಾರವಿಡಿದ ಫಿಡೆಲ್ ಕ್ಯಾಸ್ಟ್ರೋ ಮತ್ತೊಬ್ಬ ಸರ್ವಾಧಿಕಾರಿಯಾಗಿಯೇ ಆಡಳಿತ ನಡೆಸಿದರು. ಅನಾರೋಗ್ಯದಿಂದ ಕೆಳಗಿಳಿಯಬೇಕಾದರೆ ಕ್ಯೂಬಾದ ಕ್ರಾಂತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಫಿಡೆಲ್ ರವರ ತಮ್ಮ ಅಧಿಕಾರದ ಚುಕ್ಕಾಣಿ ಹಿಡಿದರು. ಅಲ್ಲಿಗೆ ಸರ್ವಾಧಿಕಾರ ವಂಶಪಾರಂಪರ್ಯವೂ ಆಯಿತು. ಯಾವುದೇ ಸಿದ್ಧಾಂತದ ಆಧಾರದಿಂದ ಅಧಿಕಾರವಿಡಿದಿದ್ದರೂ ಸರ್ವಾಧಿಕಾರಿ ಸರ್ವಾಧಿಕಾರಿಯೇ ಅಲ್ಲವೇ? ಸರ್ವಾಧಿಕಾರದ ಆಡಳಿತದಲ್ಲಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಸಂಪೂರ್ಣವಾಗಿರುವುದಂತೂ ಅಸಾಧ್ಯ. ಪ್ರಜಾಪ್ರಭುತ್ವದಲ್ಲೂ ಈ ಸ್ವಾತಂತ್ರ್ಯ ಸಂಪೂರ್ಣವಾಗಿರುವುದಿಲ್ಲ ಎನ್ನುವುದು ಹೌದಾದರೂ ಸರ್ವಾಧಿಕಾರದಾಡಳಿತಕ್ಕಿಂತ ಉತ್ತಮವಾಗಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಫಿಡೆಲ್ ಕ್ಯಾಸ್ಟ್ರೋ ನೇತೃತ್ವದ ಕ್ಯೂಬಾ ಕೂಡ ಇದಕ್ಕೆ ಹೊರತಲ್ಲ. ತನ್ನ ಸಿದ್ಧಾಂತಗಳನ್ನು ಒಪ್ಪದವರನ್ನು, ವಿರೋಧಿ ಪಾಳೆಯದವರನ್ನು ಅದರಲ್ಲೂ ಅಮೆರಿಕಾ ಪರವಾಗಿರುವ ಕ್ಯೂಬನ್ನರ ವಿಷಯದಲ್ಲಿ ಎಲ್ಲಾ ಮಾನವ ಹಕ್ಕುಗಳನ್ನು ಗಾಳಿಗೆ ತೂರಿದ ಗಂಭೀರ ಆರೋಪಗಳು ಫಿಡೆಲ್ ಮೇಲಿದ್ದವು. ಸರ್ವಾಧಿಕಾರಿ ಉತ್ತಮವಾಗಿದ್ದರೆ ಆಡಳಿತವೂ ಉತ್ತಮವಾಗಿರುತ್ತದೆ, ಸರ್ವಾಧಿಕಾರಿ ದುರುಳನಾಗಿದ್ದರೆ ಆಡಳಿತ ಶೋಷಕವಾಗಿರುತ್ತದೆ. ಸರ್ವಾಧಿಕಾರಿ ಆಡಳಿತವೆಂಬುದು ಎರಡು ಅಲಗಿನ ಕತ್ತಿಯಂತೆ. ಕಾಪಾಡಲೂಬಹುದು, ನಮ್ಮನ್ನೇ ಇರಿಯಲೂಬಹುದು. ಸರ್ವಾಧಿಕಾರಿ ಯಾವುದೇ ಧಾರ್ಮಿಕ, ತತ್ವ ಸಿದ್ಧಾಂತಗಳ ಮೂಸೆಯಿಂದಲೇ ಅರಳಿದ್ದರೂ, ಕ್ರಾಂತಿಯಿಂದ ಅಥವಾ ಮಿಲಿಟರಿ ಶಕ್ತಿಯಿಂದ ಅಥವಾ ಪ್ರಜಾಪ್ರಭುತ್ವ ಮಾದರಿಯಿಂದಲೇ ಅಧಿಕಾರವಿಡಿದು ಸರ್ವಾಧಿಕಾರಿಯಾಗಿಬಿಟ್ಟರೂ ಅದು ಸರ್ವಾಧಿಕಾರವೇ ಎನ್ನುವ ಎಚ್ಚರ ಪ್ರಜಾಪ್ರಭುತ್ವ ತತ್ವಗಳನ್ನು ಒಪ್ಪಿಕೊಂಡಿರುವ ನಮಗೆ ಇರಲೇಬೇಕು.
ಫಿಡೆಲ್ ಕ್ಯಾಸ್ಟ್ರೋನ ಧೈರ್ಯ ಸಾಹಸಗಳನ್ನು ಮೆಚ್ಚುತ್ತಲೇ, ಸರ್ವಾಧಿಕಾರದ ಮನಸ್ಥಿತಿಯನ್ನು ಒಪ್ಪದಿರುವ ಪ್ರಜ್ಞೆಯೂ ನಮ್ಮಲ್ಲಿ ಮೂಡಬೇಕು. ಫಿಡೆಲ್ ಮತ್ತು ಕ್ಯುಬಾ ನಮಗೆ ಮಾದರಿಯಾಗಬೇಕಿರುವುದು ಹೋರಾಟದ ಮನೋಭಾವಕ್ಕೆ, ಶಿಕ್ಷಣ, ಆರೋಗ್ಯ ಮತ್ತು ನಗರ ಕೃಷಿಗೆ. ನಗರಕ್ಕೂ ಕೃಷಿಗೂ ಸಂಬಂಧವೇ ಇಲ್ಲದಂತೆ ಬದುಕು ಸವೆಸುತ್ತಿದ್ದೇವೆ, ಶಿಕ್ಷಣ – ಆರೋಗ್ಯ ಕ್ಷೇತ್ರಗಳು ಸರಕಾರದಿಂದ ದೂರಾಗಿ ದಶಕಗಳೇ ಕಳೆದುಹೋಗಿದೆ, ಪುನಃ ಅವು ಖಾಸಗಿ ತೆಕ್ಕೆಯಿಂದ ಹಣದ ತೆಕ್ಕೆಯಿಂದ ವಾಪಸ್ಸಾಗಿ ಉಚಿತವಾಗಿ ಜನರಿಗೆ ಲಭ್ಯವಾಗುತ್ತವೆ ಎಂದೆಲ್ಲ ಭಾವಿಸುವುದು ಕನಸೇ ಸರಿ. ಬಂಡವಾಳಶಾಹಿತನದ ದಿನಗಳಲ್ಲಿ ಇಂತಹ ಕನಸು ಕಾಣುವುದು ಕೂಡ ದುಬಾರಿಯಾದುದೇ.
ಫಿಡೆಲ್ ಕ್ಯಾಸ್ಟ್ರೋ ನಿಧನದೊಂದಿಗೆ ಒಂದು ಯುಗ ಅಂತ್ಯಗೊಂಡಿತು, ಆ ಯುಗ ಮತ್ತೆ ಹುಟ್ಟುವ ಭರವಸೆಗಳಿಲ್ಲದೇ.....
No comments:
Post a Comment