ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ನಗರ ವಿಭಾಗವು ಸಮೃದ್ಧ ಮಲೆನಾಡಿನಿಂದ ಸುತ್ತುವರಿದಿತ್ತು ಮತ್ತಿದನ್ನು ಗೆರಿಲ್ಲಾಗಳು ತುಂಬಾ ಚೆಂದಾಗಿ ಉಪಯೋಗಿಸಿಕೊಂಡರು. ದಟ್ಟ ಅರಣ್ಯ ಪ್ರದೇಶವನ್ನು ತಮ್ಮನುಕೂಲಕ್ಕೆ ಬಳಸಿಕೊಂಡಿದ್ದು ಹೋರಾಟದ ಅಸ್ತಿತ್ವ ಉಳಿಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. ಭೂಪ್ರದೇಶವು ಎಷ್ಟು ಉತ್ತೇಜನಕಾರಿಯಾಗಿತ್ತೆಂದರೆ ಹಲವು ಪಾಳೇಗಾರರು ಕೂಡ ತಮ್ಮ ಕೋಟೆಯನ್ನು ತೊರೆದು ಅರಣ್ಯದೊಳಗೆ ರಕ್ಷಣೆ ಪಡೆದುಕೊಂಡರು.
ಸಶಸ್ತ್ರ ಹೋರಾಟದುದ್ದಕ್ಕೂ, ಗೆರಿಲ್ಲಾ ಯುದ್ಧದ ಪ್ರತಿಯೊಂದು ಪ್ರಮುಖ ತಂತ್ರ ರೂಪುಗೊಂಡಾಗಲೂ, ಅದನ್ನು ಅರಣ್ಯ ಕೊಟ್ಟ ಅನುಕೂಲತೆಗಳಾಧಾರದ ಮೇಲೆಯೇ ಮಾಡಲಾಗಿತ್ತು ಎನ್ನುವುದನ್ನು ಗಮನಿಸಬಹುದು.
ಉದಾಹರಣೆಗೆ, ಅರಣ್ಯವು ತೆರಿಗೆ ಕಟ್ಟುವ ರೈತರಿಂದ ಶೋಷಣೆಗೊಳಗಾಗಿದ್ದ ಜನಸಮೂಹಕ್ಕೆ ನೆಲೆ ಒದಗಿಸಿತು. ಶತ್ರುವಿನಾಗಮನದ ಸುಳಿವು ಸಿಗುತ್ತಿದ್ದಂತೆ ಕೋಟೆಯಿಂದ ಜಾರಿಕೊಂಡು ಹಿಮ್ಮೆಟ್ಟಲು ಅರಣ್ಯವು ಅವಕಾಶವನ್ನೊದಗಿಸಿತ್ತು. ಅರಣ್ಯದ ಅನುಕೂಲತೆಗಳಿರದಿದ್ದರೆ, ಚಳುವಳಿಯು ಕೋಟೆಗಳನ್ನು ಶೀಘ್ರವಾಗಿ ಮರುವಶಪಡಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ ಅಥವಾ ಪಟ್ಟಣಗಳ ಜನರ ಮೇಲೆ ಪ್ರಭಾವ ಬೀರುವುದೂ ಸಾಧ್ಯವಾಗುತ್ತಿರಲಿಲ್ಲ. ಕಾಪುಗೋಡೆಯ ಯುದ್ಧತಂತ್ರವೂ ಕೂಡ ಅರಣ್ಯವನ್ನು ಬಳಸಿಕೊಂಡು ಉತ್ತಮೀಕರಿಸಿದ ವಿಧಾನವಾಗಿತ್ತು. ಈ ಕಾಪುಗೋಡೆಗಳು ಮುನ್ನಡೆಯುತ್ತಿದ್ದ ಶತ್ರುಗಳಿಗೆ ಮಗ್ಗುಲ ಮುಳ್ಳಾಗಿತ್ತು ಮತ್ತು ತಮ್ಮ ಸ್ಥಾನ ಅಭದ್ರವಾಗಿದೆಯೆಂಬ ಭಾವನೆ ಮೂಡುತ್ತಿದ್ದಂತೆ ಗೆರಿಲ್ಲಾಗಳು ಕ್ಷಣಮಾತ್ರದಲ್ಲಿ ಅರಣ್ಯದೊಳಗೆ ಹೋಗಿಬಿಡುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದರು. ಅರಣ್ಯ ಪ್ರದೇಶವನ್ನು ತುಂಬಾ ಚೆನ್ನಾಗಿ ಉಪಯೋಗಿಸಿಕೊಂಡಿದ್ದರಿಂದಲೇ ಶತ್ರುಗಳ ಮುನ್ನಡೆಯನ್ನು ತಡೆಯಲು ಸಾಧ್ಯವಾಗಿದ್ದು ಮತ್ತು ಅವರಿಗೆ ಬರಬೇಕಿದ್ದ ದಿನಸಿ ಸಾಮಗ್ರಿಗಳನ್ನು ಹಾಗೂ ಅವರ ಸಂವಹನದ ಮಾರ್ಗಗಳನ್ನು ಒಡೆಯಲು ಸಾಧ್ಯವಾಗಿದ್ದು. ಗೆರಿಲ್ಲಾಗಳು ಮುಖ್ಯ ರಸ್ತೆಗಳನ್ನು ಶತ್ರುಗಳಿಗೆ ಬಿಟ್ಟುಕೊಟ್ಟಿದ್ದರು - ಅಗೆದಿದ್ದರು ಮತ್ತು ಸಾಕಷ್ಟು ಅಡೆತಡೆಗಳನ್ನಾಕಿದ್ದರು ಎನ್ನುವುದೂ ಸತ್ಯ – ಅರಣ್ಯದ ಕಾಲುದಾರಿಯನ್ನಾಯ್ದುಕೊಂಡಿದ್ದ ಗೆರಿಲ್ಲಾಗಳು ಶತ್ರುಗಳ ಮೇಲೆ ನಿರಂತರವಾಗಿ ಗುಂಡಿನ ಮಳೆಗೆರೆಯುತ್ತಿದ್ದರು ಮತ್ತು ತಮ್ಮದೇ ಸಂವಹನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಂಡಿದ್ದರು.
ಉದಾಹರಣೆಗೆ, ಅರಣ್ಯವು ತೆರಿಗೆ ಕಟ್ಟುವ ರೈತರಿಂದ ಶೋಷಣೆಗೊಳಗಾಗಿದ್ದ ಜನಸಮೂಹಕ್ಕೆ ನೆಲೆ ಒದಗಿಸಿತು. ಶತ್ರುವಿನಾಗಮನದ ಸುಳಿವು ಸಿಗುತ್ತಿದ್ದಂತೆ ಕೋಟೆಯಿಂದ ಜಾರಿಕೊಂಡು ಹಿಮ್ಮೆಟ್ಟಲು ಅರಣ್ಯವು ಅವಕಾಶವನ್ನೊದಗಿಸಿತ್ತು. ಅರಣ್ಯದ ಅನುಕೂಲತೆಗಳಿರದಿದ್ದರೆ, ಚಳುವಳಿಯು ಕೋಟೆಗಳನ್ನು ಶೀಘ್ರವಾಗಿ ಮರುವಶಪಡಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ ಅಥವಾ ಪಟ್ಟಣಗಳ ಜನರ ಮೇಲೆ ಪ್ರಭಾವ ಬೀರುವುದೂ ಸಾಧ್ಯವಾಗುತ್ತಿರಲಿಲ್ಲ. ಕಾಪುಗೋಡೆಯ ಯುದ್ಧತಂತ್ರವೂ ಕೂಡ ಅರಣ್ಯವನ್ನು ಬಳಸಿಕೊಂಡು ಉತ್ತಮೀಕರಿಸಿದ ವಿಧಾನವಾಗಿತ್ತು. ಈ ಕಾಪುಗೋಡೆಗಳು ಮುನ್ನಡೆಯುತ್ತಿದ್ದ ಶತ್ರುಗಳಿಗೆ ಮಗ್ಗುಲ ಮುಳ್ಳಾಗಿತ್ತು ಮತ್ತು ತಮ್ಮ ಸ್ಥಾನ ಅಭದ್ರವಾಗಿದೆಯೆಂಬ ಭಾವನೆ ಮೂಡುತ್ತಿದ್ದಂತೆ ಗೆರಿಲ್ಲಾಗಳು ಕ್ಷಣಮಾತ್ರದಲ್ಲಿ ಅರಣ್ಯದೊಳಗೆ ಹೋಗಿಬಿಡುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದರು. ಅರಣ್ಯ ಪ್ರದೇಶವನ್ನು ತುಂಬಾ ಚೆನ್ನಾಗಿ ಉಪಯೋಗಿಸಿಕೊಂಡಿದ್ದರಿಂದಲೇ ಶತ್ರುಗಳ ಮುನ್ನಡೆಯನ್ನು ತಡೆಯಲು ಸಾಧ್ಯವಾಗಿದ್ದು ಮತ್ತು ಅವರಿಗೆ ಬರಬೇಕಿದ್ದ ದಿನಸಿ ಸಾಮಗ್ರಿಗಳನ್ನು ಹಾಗೂ ಅವರ ಸಂವಹನದ ಮಾರ್ಗಗಳನ್ನು ಒಡೆಯಲು ಸಾಧ್ಯವಾಗಿದ್ದು. ಗೆರಿಲ್ಲಾಗಳು ಮುಖ್ಯ ರಸ್ತೆಗಳನ್ನು ಶತ್ರುಗಳಿಗೆ ಬಿಟ್ಟುಕೊಟ್ಟಿದ್ದರು - ಅಗೆದಿದ್ದರು ಮತ್ತು ಸಾಕಷ್ಟು ಅಡೆತಡೆಗಳನ್ನಾಕಿದ್ದರು ಎನ್ನುವುದೂ ಸತ್ಯ – ಅರಣ್ಯದ ಕಾಲುದಾರಿಯನ್ನಾಯ್ದುಕೊಂಡಿದ್ದ ಗೆರಿಲ್ಲಾಗಳು ಶತ್ರುಗಳ ಮೇಲೆ ನಿರಂತರವಾಗಿ ಗುಂಡಿನ ಮಳೆಗೆರೆಯುತ್ತಿದ್ದರು ಮತ್ತು ತಮ್ಮದೇ ಸಂವಹನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಂಡಿದ್ದರು.
ಅರಣ್ಯ ಪ್ರವೇಶಿಸಲು ಶತ್ರು ಹಿಂಜರಿಯುತ್ತಿದ್ದ ಮತ್ತಿದು ಗೆರಿಲ್ಲಾಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟಿತ್ತು. ಅರಣ್ಯದ ಅನುಕೂಲತೆಗಳನ್ನು ಉಪಯೋಗಿಸಿಕೊಂಡ ಕಾರಣದಿಂದಲೇ ಗೆರಿಲ್ಲಾ ಪಡೆಯಲ್ಲಿ ನಷ್ಟ ಕಡಿಮೆಯಿರುತ್ತಿತ್ತು, ಈ ರೈತ ಹೋರಾಟಗಾರರ ಆಶಾಭಾವನೆಯು ಜೀವಂತವಾಗುಳಿಯುತ್ತಿತ್ತು.
ಜೊತೆಗೆ, ಮಳೆಯು ಗೆರಿಲ್ಲಾ ಯುದ್ಧಕ್ಕೆ ಒಂದಲ್ಲ ಒಂದು ರೀತಿಯಿಂದ ಅನುಕೂಲಕರವಾಗಿತ್ತು. ಮಲೆನಾಡು, ಸಾಮಾನ್ಯವಾಗಿ ವರುಷಕ್ಕೆ ನೂರು ದಿನ ಮಳೆಯನ್ನನುಭವಿಸುತ್ತದೆ, ಜೂನಿನಿಂದ ಅಕ್ಟೋಬರ್ ವರೆಗೆ ಬೀಳುವ ಮಳೆಯು ಜುಲೈ ಹಾಗೂ ಆಗಷ್ಟಿನಲ್ಲಿ ತೀರ್ವವಾಗಿರುತ್ತದೆ. ಹಾಗಾಗಿ, ನಾವು ಗಮನಿಸಿದಂತೆ ಶತ್ರು ಮಳೆಗಾಲದ ಪ್ರಾರಂಭವಾಗುತ್ತಿದ್ದಂತೆಯೇ ಆಕ್ರಮಣವನ್ನು ನಿಲ್ಲಿಸುತ್ತಿದ್ದ, ಮತ್ತಿದು ಗೆರಿಲ್ಲಾಗಳಿಗೆ ಒಂದಷ್ಟು ಉಸಿರಾಡಲು ತಾವು ಮಾಡಿಕೊಡುತ್ತಿತ್ತು. ಪುನರ್ ಸಂಘಟಿತಗೊಳ್ಳಲು ಮತ್ತು ಹೊಸ ಆಕ್ರಮಣಕ್ಕೆ ತಯಾರಾಗಲು ಅವರಿಗೆ ಸಹಾಯ ಮಾಡುತ್ತಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ, ರೈತರು ಈ ಸಮಯದಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು, ಅವರ ಶ್ರಮ ಈ ಸಮಯದ ಕೃಷಿಗೆ ಅವಶ್ಯಕವಾಗಿತ್ತು, ಇದು ಯುದ್ಧಕ್ಕೆ ನಿಯಮಿತವಾಗಿ ಧಾನ್ಯಕಾಳುಗಳನ್ನು ಪೂರೈಸುತ್ತಿತ್ತು.
1831ರ ಏಪ್ರಿಲ್ 12ರಲ್ಲಿ ಮದ್ರಾಸಿನ ಗವರ್ನರ್ ಲಷಿಂಗ್ಟನ್ ಗಮನಿಸಿರುವುದು ಕಾಸಾಮೈಯೂರನ ಅಭಿಪ್ರಾಯಗಳನ್ನು ಪ್ರತಿಧ್ವನಿಸುವಂತಿತ್ತು: “ಮಳೆಗಾಲದ ಪ್ರಾರಂಭದೊಂದಿಗೆ, ಸಾಮಾನ್ಯ ಪಡೆಗಳು ಕಾರ್ಯಾಚರಣೆ ನಡೆಸುವುದು ಆ ಅನಾರೋಗ್ಯದ ದೇಶದಲ್ಲಿ ತುಂಬಾ ವಿಧ್ವಂಸಕಾರಿ, ಮತ್ತು ಇದರ ಬಗೆಗಿನ ಅರಿವು ಬಂಡಾಯಗಾರರು ದೇಶದ ಆಂತರಿಕ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕೆ ಮತ್ತು ದೀರ್ಘಕಾಲದಿಂದ ತಡೆಯೊಡ್ಡಲಾಗಿದ್ದ ಕಂದಾಯ ಸಂಗ್ರಹಕ್ಕೆ ಅನುಕೂಲ ಮಾಡಿಕೊಡುತ್ತದೆ….” (160)
ix) ಶತ್ರು ಪಡೆಗಳ ದಂಗೆ
ಈ ಸಂಪುಟದಲ್ಲಿ ನಾವೀಗಾಗಲೇ ನೋಡಿದಂತೆ 1830ರ ದಶಕದಲ್ಲಿ ಕರ್ನಾಟಕವನ್ನು ನಲುಗಿಸಿದ ಎಲ್ಲಾ ಬಿಕ್ಕಟ್ಟಿನ ಪರಿಸ್ಥಿತಿಯೂ ಮೈಸೂರು ಸೈನ್ಯದಲ್ಲಿ ಪ್ರತಿಫಲಿಸುತ್ತಿತ್ತು. ಕೈಗೊಂಬೆ ರಾಜನು ತನ್ನ ಕ್ಷುದ್ರ ಸೈನ್ಯಕ್ಕೆ ಸಂಬಳ ಕೊಡಲೂ ಕಷ್ಟ ಪಡುತ್ತಿದ್ದ, ಮತ್ತೊಂದೆಡೆ ತನ್ನ ಸೈನ್ಯವನ್ನು ಭಾರತವನ್ನು ನಿಗ್ರಹಿಸುತ್ತಿದ್ದ ಬ್ರಿಟೀಷರ ಸೇವೆಗೆ ಕಳುಹಿಸಲು ತುದಿಗಾಲಲ್ಲಿ ನಿಂತಿರುತ್ತಿದ್ದ. ಸೈನ್ಯವು ಕಿತ್ತೂರಿನಿಂದ ಬಂದು ಕೆಲವು ವರುಷಗಳಾಗುವುದರಲ್ಲಿಯೇ, ಅದನ್ನು ಮತ್ತೊಂದು ಯುದ್ಧಕ್ಕೆ ಕಳುಹಿಸಲಾಯಿತು; ಗೆರಿಲ್ಲಾ ಯುದ್ಧಕ್ಕೆ ಕಳುಹಿಸಲಾಯಿತು, ಯಾವುದೇ ತರಬೇತಿಯನ್ನೂ ಪಡೆಯದ ಮೈಸೂರು ಸೈನ್ಯವನ್ನು ಗೆರಿಲ್ಲಾ ಯುದ್ಧಕ್ಕೆ ಕಳುಹಿಸಲಾಯಿತು. ಸೈನಿಕರು ತಮ್ಮ ರಕ್ತ ಹಂಚಿಕೊಂಡಿದ್ದ, ಬಾಂಧವ್ಯ ಹೊಂದಿದ್ದ ಶತ್ರುಗಳೊಡನೆ ಯುದ್ಧ ಮಾಡಲು ತಯಾರಿರಲಿಲ್ಲ ಮತ್ತವರು ಶತ್ರುಗಳ ಉದ್ದೇಶದ ಬಗ್ಗೆ ಅನುಕಂಪ ಹೊಂದಿದವರಾಗಿದ್ದರು. ಪ್ರತಿಗಾಮಿ ಯುದ್ಧವು ಶುರುವಾದಾಗ ಸೈನ್ಯ ಅನುಭವಿಸಿದ ಹೊಡೆತಗಳು, ಅನೇಕ ಸೈನಿಕರನ್ನು ಕಳೆದುಕೊಂಡಿದ್ದು ಮತ್ತು ಮೈಸೂರು ಪ್ರಾಂತ್ಯದಿಂದ ಓಡಿಹೋಗುವಂತಾಗಿದ್ದೆಲ್ಲವೂ ಸೈನಿಕರ ಉತ್ಸಾಹವನ್ನು ಕಸಿದುಬಿಟ್ಟಿತ್ತು. ಇದು ತಮ್ಮನ್ನು ಸಾವಿನ ದವಡೆಗೆ ನೂಕಿದ ಅಧಿಕಾರಿಗಳ ವಿರುದ್ಧ ಸೈನಿಕರು ಕೋಪೋದ್ರಿಕ್ತಗೊಳ್ಳುವಂತೆ ಮಾಡಿತ್ತು. ಸೈನ್ಯವನ್ನು ಅದರ ಸಾಮರ್ಥ್ಯಕ್ಕಿಂತ ಹೆಚ್ಚು ಉಪಯೋಗಿಸಿದ್ದನ್ನು ನಾವು ಗಮನಿಸಬಹುದು ಮತ್ತು ಕೋಟೆಗಳನ್ನು ರಕ್ಷಿಸಲಿಟ್ಟ ಕ್ಷುಲ್ಲಕ ಸೈನಿಕ ಪಡೆಗಳು ಮುತ್ತಿಗೆ ಹಾಕಿದ ಗೆರಿಲ್ಲಾಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ; ಸೋಲಿನ ಸರಪಳಿ ಸುತ್ತಿಕೊಂಡಿತು. ಈ ಎಲ್ಲಾ ಅಂಶಗಳು ಒಟ್ಟುಗೂಡಿದ ಕಾರಣದಿಂದಾಗಿ ಒಂದಲ್ಲ ಹತ್ತಲವು ಸರಣಿ ಸೈನಿಕ ದಂಗೆಗಳು ನಡೆದವು ಮತ್ತು ಸೈನ್ಯವನ್ನು ತ್ಯಜಿಸಿ ಹೋಗುತ್ತಿದ್ದವರ ಸಂಖೈ ಹೆಚ್ಚಾಗುತ್ತಿದ್ದಂತೆಯೇ ಯುದ್ಧದಲ್ಲಿ ಶತ್ರುವಿನ ಬಲ ಕುಂದಲಾರಂಭಿಸಿತು; ಇದರ ಜೊತೆಗೆ, ದಂಗೆಯೆದ್ದ ಸೈನಿಕರು, 1857ರ ಸೈನಿಕರಂತೆಯೇ, ವಸಾಹತು ವಿರೋಧಿ ಯುದ್ಧಕ್ಕೆ ಕೈಜೋಡಿಸಿದರು, ರೈತರ ಉದ್ದೇಶವನ್ನು ಬಲಗೊಳಿಸಿ ಯುದ್ಧಕ್ಕೆ ಹೊಸ ಶಕ್ತಿ ತುಂಬಿದರು.
1831ರ ಏಪ್ರಿಲ್ 12ರಂದೇ, ಮದ್ರಾಸಿನ ಗವರ್ನರ್ ಲಷಿಂಗ್ಟನ್ ಗವರ್ನರ್ ಜೆನರಲ್ ಬೆಂಟಿಕ್ ಗೆ ಬರೆದ ಪತ್ರದಲ್ಲಿ “ಜೀವಾನಾಧಾರಕ್ಕಾಗಿ ಮೈಸೂರಿನ ಪಡೆಗಳು ದಂಗೆಯೇಳಲು ತಯಾರಾಗಿವೆ” ಎಂದು ಬರೆಯುತ್ತಾನೆ. (161)
ಐದು ದಿನಗಳ ನಂತರ ಕಾಸಾಮೈಯೂರ್ ಇದನ್ನು ದೃಡಪಡಿಸುತ್ತ, “ಗೌರವಾನ್ವಿತ ಮೈಸೂರು ರಾಜನ ಸ್ಥಳೀಯ ಸಿಬ್ಬಂದಿಗಳಲ್ಲಿ ಕೆಲವರು ಕೆಲಸ ತೊರೆದು” ಬಂಡಾಯವನ್ನು ಹೆಚ್ಚಿಸುತ್ತಿದ್ದಾರೆ ಎಂದು ತಿಳಿಸುತ್ತಾನೆ. (162)
ಯುದ್ಧವು ಶತ್ರುಗಳ ಹೋರಾಟದ ಸ್ಥೈರ್ಯವನ್ನು ಕಂಗೆಡಿಸಲಾರಂಭಿಸಿದಾಗ, 1831ರ ಮೇ 20ರಂದು ಕಾಸಾಮೈಯೂರ್ ರಿಚರ್ಡ್ ಕ್ಲೈವ್ ಗೆ ಬರೆದ ಪತ್ರದಲ್ಲಿ, ಪರಿಸ್ಥಿಯೂ ಗಂಭೀರವಾಗಿಬಿಡುತ್ತಿರುವುದರ ಬಗ್ಗೆ ಒಂದಷ್ಟು ಎಚ್ಚರಿಕೆಯಿಂದಲೇ ಬರೆಯುತ್ತಾನೆ: “ಪ್ರಸ್ತುತದಲ್ಲಿ, ಸೇವೆಯಲ್ಲಿರುವ ಮೈಸೂರು ಪಡೆಗೆ ಬೇಕಾದ ಹಣವನ್ನು ಅತಿ ಶೀಘ್ರವಾಗಿ ಕಳುಹಿಸುವುದು ಅತ್ಯವಶ್ಯ ಎಂದು ನಾನು ಭಾವಿಸುತ್ತೇನೆ ಮತ್ತಿದು ಸಿಪಾಯಿ ದಂಗೆಯನ್ನು ತಡೆಯಲು ಹಾಗೂ ರಾಜನ ಸೇವೆಯಲ್ಲಿರುವ, ಕಳೆದ ಮೂರು ತಿಂಗಳಿನಿಂದ ಸಂಬಳ ಪಡೆಯದೆ ಇರುವ 5000 ಸೈನಿಕರಲ್ಲಿನ ಅಸಮಾಧಾನವನ್ನು ತಣಿಸಲು ಅನಿವಾರ್ಯವಾಗಿದೆ….” (163)
ವಸಾಹತು ವಿರೋಧಿ ಹೋರಾಟವು ತೀರ್ವವಾಗಿದ್ದಕ್ಕೆ ದಂಗೆಯೆದ್ದ ಸೈನಿಕರು ಬಂಡಾಯಗಾರರೊಡನೆ ಸೇರಿದ್ದೂ ಕಾರಣ ಎಂದು ಕಾಸಾಮೈಯೂರ್ ನಮಗೆ ತಿಳಿಸುತ್ತಾರೆ.
ಲೆಫ್ಟಿನೆಂಟ್ ಕಲೋನಲ್ ರೋಚ್ ಫೋರ್ಟ್ ತನ್ನ ವರದಿಯಲ್ಲಿ ಮೈಸೂರು ಸೈನ್ಯ ಅನರ್ಹವೆಂದು ಆಪಾದಿಸುತ್ತಾನೆ. 1832ರ ಏಪ್ರಿಲ್ 21ರಂದು ಮೈಸೂರು ಸಮೀಪದ ಇಲವಾಲದಿಂದ ಬರೆದ ಪತ್ರದಲ್ಲಿ ಲಷಿಂಗ್ಟನ್ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ದಂಗೆಗಳು ಹೇಗೆ ಮುಂದುವರಿದವು ಎನ್ನುವುದರ ಬಗ್ಗೆ ತಿಳಿಸುತ್ತಾನೆ: “ಗುಪ್ತಚರ ಇಲಾಖೆಯು ಮೈಸೂರು ಪಡೆಯೊಂದರಲ್ಲಿ ಎದ್ದಿರುವ ದಂಗೆಯ ಬಗ್ಗೆ ಈಗಷ್ಟೇ ನನಗೆ ಮಾಹಿತಿ ನೀಡಿದೆ ಎನ್ನುವುದನ್ನು ನಿಮಗೆ ತಿಳಿಸುವುದು ನೋವುಭರಿತ ಕರ್ತವ್ಯವಾಗಿದೆ….. ಮೈಸೂರಿನ ಮಾಜಿ ಭಕ್ಷಿ ಮುಮ್ಮಾ ಮೇಹ್ ಹೊರಡಿಸಿದ ಘೋಷಣೆಯ ಪರಿಣಾಮವಿದು”. (164)
ರೈತ ಯುದ್ಧದಲ್ಲಿ ದಡ ಬದಲಿಸಿ ಬಂಡಾಯಗಾರರ ಜೊತೆಗೆ ಸೇರಿದವರಲ್ಲಿ ಸೈನ್ಯದಲ್ಲಿದ್ದ ಸಶಸ್ತ್ರ ಕಂದಚಾರ ಗುಮಾಸ್ತರು ಮೊದಲಿಗರು. ಅವರು ಸೈನ್ಯವನ್ನು ತೊರೆದಿದ್ದು ಸಾರ್ವತ್ರಿಕವಾಗಿತ್ತು, ಅವರು ಬಡ ಮತ್ತು ಮಧ್ಯಮ ವರ್ಗದ ರೈತ ಕುಟುಂಬಗಳಿಂದ ಬಂದಿದ್ದರು. ಈ ಕಂದಚಾರ ಸೈನಿಕರು ಸಶಸ್ತ್ರ ಹೋರಾಟಕ್ಕೆ ದೊಡ್ಡ ಸಂಪತ್ತಾಗಿದ್ದಿರಬೇಕು ಮತ್ತು ಸಶಸ್ತ್ರ ಹೋರಾಟದ ಬಹುಮುಖ್ಯ ಭಾಗವಾಗಿದ್ದಿರಬೇಕು. ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವುದಷ್ಟೇ ಅಲ್ಲದೆ ಅವರು ಹುಟ್ಟಿಕೊಂಡಿದ್ದ ಹತ್ತಲವು ಗೆರಿಲ್ಲಾ ಪಡೆಗಳನ್ನು ಮುನ್ನಡೆಸುತ್ತಿದ್ದಿರಬೇಕು.
ಬ್ರಿಟೀಷ್ ವಸಾಹತುಶಾಹಿಗಳಿಗೆ ಮೈಸೂರಿನ ಕಾಲಾಳು ಸೈನಿಕರನ್ನು ನಂಬಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯ ಸೈನ್ಯ ಹೊರಟ ನಂತರ ಕೋಟೆ ಕಾಯಲಿಟ್ಟ ಸಣ್ಣ ಸೈನಿಕ ಪಡೆಯು ಕೋಟೆಯನ್ನು ತೊರೆದದ್ದಷ್ಟೇ ಅಲ್ಲ, ಕೋಟೆಯ ಬಾಗಿಲುಗಳನ್ನು ಬಂಡಾಯಗಾರರಿಗೆ ತೆರೆದು ಅವರ ಉದ್ದೇಶಕ್ಕೆ ಜೊತೆಯಾಗಿದ್ದರು. ಹೀಗಾಗಿ 1831ರ ಮೇ 29ರಂದು ಬರೆದ ಪತ್ರದಲ್ಲಿ ಕಾಸಾಮೈಯೂರ್ ಲೆಫ್ಟಿನೆಂಟ್ ಕಲೋನಲ್ ಈವಾನ್ಸ್ ಗೆ ಮೈಸೂರು ಸೈನಿಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸುತ್ತಾನೆ ಮತ್ತವರನ್ನು ಹೆಚ್ಚಿನ ಸಂಖೈಯಲ್ಲಿ ನಿಯೋಜಿಸಬೇಕೆಂದು ತಿಳಿಸುತ್ತಾನೆ. ಅವಶ್ಯಕತೆ ಬಿದ್ದರೆ ಮೈಸೂರು ಸೈನ್ಯವನ್ನು ಹೇಗೆ ವಿಭಜಿಸಬೇಕು ಎಂದು ವಿವರಿಸುತ್ತಾನೆ, ಯಾರ ಆದೇಶದಿಂದ ಇದನ್ನು ಮಾಡಬೇಕು ಎಂದು ತಿಳಿಸುತ್ತಾನೆ, ಮತ್ತು ಯಾವ ಕೋಟೆಯಲ್ಲಿ ಈ ವಿಭಜಿತ ಸೈನ್ಯವನ್ನು ಇರಿಸಬೇಕೆಂದು ಸೂಚಿಸುತ್ತಾನೆ. (165)
ಇದು ಸೈನ್ಯ ತೊರೆಯುವಿಕೆಯ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಿತ್ತಾದರೂ, ಸೈನ್ಯ ಪಡೆಗಳ ಚಲನೆಗಿದು ತಡೆಯೊಡ್ಡಿತ್ತು ಮತ್ತು ಗೆರಿಲ್ಲಾಗಳನ್ನು ಹುಡುಕುವುದಕ್ಕೆ ಅಡ್ಡಿಯುಂಟುಮಾಡಿತ್ತು. ಬ್ರಿಟೀಷರು ನಡೆಸುತ್ತಿದ್ದ ಯುದ್ಧದಲ್ಲಿ ಗೆರಿಲ್ಲಾಗಳನ್ನು ಗಮನಿಸುವುದಷ್ಟೇ ಅಲ್ಲದೆ, ತಮ್ಮದೇ ನೇತೃತ್ವದಲ್ಲಿದ್ದ ಸೈನಿಕರನ್ನೂ ಗಮನಿಸಬೇಕಾಗುತ್ತಿತ್ತು. ಆಕ್ರಮಣಕಾರರಿಗಿದು ಖಂಡಿತವಾಗಿ ಗೋಜಲಿನ ವ್ಯವಹಾರವಾಗಿತ್ತು.
ಮುಂದಿನ ವಾರ: ಶತ್ರು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು
No comments:
Post a Comment