ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಶತ್ರುವಿನ ಲೆಕ್ಕದಲ್ಲಿ ಸೈನಿಕ ಕಾರ್ಯಾಚರಣೆಯು ತುಂಬ ಅಸಹ್ಯಕರ ರೀತಿಯಲ್ಲಿ ಶುರುವಾಗಿತ್ತು, ಮೈಸೂರು ಪಡೆಗಳನ್ನು ಸುತ್ತುವರೆಯಲಾಗಿತ್ತು, ಹೊಡೆದು ಬಡಿದು ಕಿರುಕುಳ ಕೊಡಲಾಗಿತ್ತು ಮತ್ತು ಪ್ರಥಮ ಆಕ್ರಮಣದಲ್ಲಿಯೇ ದೂರಕ್ಕಟ್ಟಲಾಗಿತ್ತು. ಕೆಲವು ನೂರರಷ್ಟಿದ್ದ ಪಡೆಗಳು ಅಣ್ಣಪ್ಪನ ನೇತೃತ್ವದಲ್ಲಿ ತರೀಕೆರೆಯನ್ನು ವಶಪಡಿಸಿಕೊಂಡು ಕ್ಯಾಂಪು ಹಾಕಿದ್ದರು. ಗೆರಿಲ್ಲಾ ಪಡೆಗಳು, ಕೋಟೆಯನ್ನು ಸುತ್ತುವರಿದವು ಮತ್ತು ದಾಳಿಗಳನ್ನು ಪದೇ ಪದೇ ನಡೆಸಿದರು, ಹಲವಾರು ಸೈನಿಕರನ್ನು ಸಾಯಿಸಿದರು. “ಕೋಟೆಗಿದ್ದ ಎಲ್ಲಾ ರಸ್ತೆಗಳನ್ನೂ ಆಕ್ರಮಿಸಿಕೊಂಡಿದ್ದರಿಂದ ಕೋಟೆಯಲ್ಲಿದ್ದ ಮೈಸೂರು ಪಡೆಗಳಿಗೆ ಸಾಮಗ್ರಿಗಳು ಸಿಗುವುದು ಕಡಿಮೆಯಾಗಿಬಿಟ್ಟಿತು. ಟಪಾಲುಗಳಿಗೆ ತಡೆಯೊಡ್ಡಲಾಯಿತು ಮತ್ತು ಧಾನ್ಯ ಹಾಗೂ ಹಣದ ಪೂರೈಕೆಯನ್ನು ಕತ್ತರಿಸಿ ಹಾಕಲಾಯಿತು”. (129)
ಸೈನಿಕ ಪಡೆಗಳು ಕೋಟೆಯಿಂದ ಹೊರಗೋಡುವಂತೆ ಮಾಡಲಾಯಿತು ಮತ್ತವರು ಕೋಟೆಯಿಂದ ಹೊರಬಂದು ಸುತ್ತುವರಿದಿದ್ದವರ ಬಂಧವನ್ನು ಮುರಿಯಲು ಪ್ರಯತ್ನಿಸುವಾಗ ಅವರ ಮೇಲೆ ಭೀಕರವಾಗಿ ದಾಳಿ ನಡೆಸಲಾಯಿತು. 1831ರ ಫೆಬ್ರವರಿ 21ರಂದು ಕೋಟೆಯನ್ನು ತೊರೆದ ಸೈನಿಕ ಪಡೆಗಳು ಶಿಕಾರಿಪುರ ತಲುಪುವವರೆಗೂ “ಓಡುತ್ತಲೇ ಯುದ್ಧ” ಮಾಡುತ್ತಿದ್ದರು. (130) ಪಲಾಯನಗೈಯ್ಯುತ್ತಿದ್ದ ಪಡೆಗಳನ್ನು ಶಿಕಾರಿಪುರದವರೆಗೂ ಹಿಂಬಾಲಿಸಲಾಯಿತು. ಮತ್ತೆ ಅಲ್ಲಿ, ದೊಡ್ಡ ಮಟ್ಟದ ದಾಳಿಯನ್ನು ನಡೆಸಲಾಯಿತು ಹಾಗೂ ಅಣ್ಣಪ್ಪ ಕಂಪನಿಯ ಪ್ರಾಂತ್ಯದಲ್ಲಿದ್ದ ಮಸೂರಿಗೆ ಓಡಿ ಹೋದ, ಅವನ ಸೈನ್ಯವು ಆಹಾರವಿಲ್ಲದೇ ಹಸಿವನ್ನನುಭವಿಸಿತು, ಯುದ್ಧದಲ್ಲಿ ಗಾಯಗೊಂಡಿತ್ತು, ಸ್ಥೈರ್ಯಗೆಟ್ಟಿತ್ತು. ಅಲ್ಲಿಂದ ಆತ ಹರಿಹರಕ್ಕೆ ಹೋಗಿ ಸ್ವಲ್ಪ ವಿಶ್ರಾಂತಿ ಪಡೆದು ತನ್ನ ಗಾಯಗಳನ್ನು ಮಾಗಿಸಿಕೊಂಡ. ಕೆಲವು ಸಂಖೈಯ ಪಡೆಗಳು ಸಾವನ್ನಪ್ಪಿದ್ದವು.
ನಂತರ, ಹೊನ್ನಾಳಿಯಲ್ಲಿ, ಅಣ್ಣಪ್ಪನ ಪಡೆಗಳು ಮತ್ತು ಲೆಫ್ಟಿನೆಂಟ್ ಕೊಲೊನಲ್ ರೋಚ್ ಫರ್ಟ್ ನೇತೃತ್ವದ ಪಡೆಗಳು ತೀಕ್ಷ್ಣ ಯುದ್ಧ ನಡೆಸಿ ಆ ಜಾಗವನ್ನು ಮರಳಿ ಪಡೆದರು, ಈ ಚೌಕಾಸಿಯಲ್ಲಿ ನಲವತ್ತು ಸೈನಿಕರು ಹತರಾದರು. ಗಾಯಗೊಂಡಿದ್ದ, ಹತಾಶರಾಗಿದ್ದ ಅವರು, ನಗರದಲ್ಲಿ ಒಟ್ಟು 99 ಜನರನ್ನು ಬಂಧಿಸಿದ್ದರು. 1831ರ ಮಾರ್ಚಿ 16ರಂದು “ಅವರಲ್ಲಿ 51 ಜನರನ್ನು ದೇವಸ್ಥಾನದ ಸುತ್ತ ನೇಣಿಗೇರಿಸಲಾಯಿತು ಮತ್ತು ಉಳಿದವರನ್ನು ಮರುದಿನ ಹೊನ್ನಾಳಿಯಿಂದ ಶಿಕಾರಿಪುರಕ್ಕೆ ಹೋಗುವ ರಸ್ತೆಯಲ್ಲಿ ನೇಣಿಗೇರಿಸಲಾಯಿತು. ಈ ಮರಣದಂಡನೆಯನ್ನು ಎಷ್ಟು ಕಲ್ಲೆದೆಯಿಂದ ಮಾಡಲಾಗಿತ್ತು ಎಂಬುದನ್ನು ತಿಳಿಯಲು ಮೊದಲ ದಿನ ನಡೆದ ಘಟನೆಯಿಂದ ಅರಿಯಬಹುದು. ಅಧಿಕಾರಿಗಳಲ್ಲೊಬ್ಬ, ಬಂಧಿತರನ್ನು ಯಾವ ರೀತಿ ನೇಣಿಗೇರಿಸುತ್ತಿದ್ದಾರೆ, ಅವರು ಹೇಗೆ ಸಾಯುತ್ತಿದ್ದಾರೆ ಎನ್ನುವುದನ್ನು ವೀಕ್ಷಿಸುವ ಇಚ್ಛೆ ವ್ಯಕ್ತಪಡಿಸಿದ. ಅವತ್ತಿನ ಭಯಂಕರ ಕಾರ್ಯ ಮುಗಿದು ಹೋಗಿದ್ದರೂ ಕೂಡ ಅಧಿಕಾರಿ ನೋಡುವ ಸಲುವಾಗಿ ತತ್ ಕ್ಷಣವೇ ಇನ್ನಿಬ್ಬರನ್ನು ಕರೆತಂದು ಅಧಿಕಾರಿಯ ಸಮ್ಮುಖದಲ್ಲಿ ನೇಣಿಗೇರಿಸಲಾಯಿತು….” (131)
ಬ್ರಿಟೀಷ್ ವಸಾಹತುಶಾಹಿ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದ ಶವಗಳ ಜಾಡನ್ನೇ ನಿರ್ಮಿಸಿಬಿಟ್ಟಿತು. ರಕ್ತ ಕುದಿಸುವ ಈ ದೃಶ್ಯವು ಸಾಮಾನ್ಯವಾಗಿಬಿಟ್ಟಿತ್ತು. ಯುದ್ಧದ ಭೀಕರತೆ ಹೆಚ್ಚಿದಂತೆ ಇದು ಜನಸಮೂಹದ ಮೇಲೆಸಗುವ ಶಿಕ್ಷೆಯ ವಿಧಾನಗಳಲ್ಲೊಂದಾಗಿತ್ತು. ಇದು ಬಂಡಾಯವೆದ್ದಿದ್ದ ಜನಸಮೂಹವು ಮತ್ತಷ್ಟು ಸಿಡಿಮದ್ದನ್ನು ಬಂದೂಕಿನೊಳಗೆ ತುಂಬಿಸುವಂತೆ ಮಾಡುತ್ತಿತ್ತು.
ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ವಿರುದ್ಧ ಹೋರಾಡಲು ಕೊಡವರು ಕದಂಗ ಎಂಬ ಯುದ್ಧ ವಿಧಾನವನ್ನು ಕಂಡುಹಿಡಿದ ರೀತಿಯಲ್ಲಿಯೇ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ರೈತ ಸಮೂಹ ಕಾಪುಗೋಡೆಗಳು ಮತ್ತು ಮುತ್ತಿಗೆ ಯುದ್ಧವನ್ನು ಅಭಿವೃದ್ಧಿಗೊಳಿಸಿದರು. ಶಿಕಾರಿಪುರದ ಸುತ್ತಲಿನ ಉಡ್ಗಣಿಯಂತಹ ಹಳ್ಳಿಗಳಲ್ಲಿ ಅದರ ಅಸ್ತಿತ್ವವಿದ್ದುದರ ಬಗ್ಗೆ ಶಾಮ ರಾವ್ ನಮಗೆ ತಿಳಿಸುತ್ತಾರೆ. ಈ ಕಾಪುಗೋಡೆಗಳನ್ನು ಒಡೆದು ಹಾಕುವುದು ಸೈನ್ಯಕ್ಕೆ ತುಂಬಾ ಕಷ್ಟದ ಕೆಲಸವಾಗಿತ್ತು, “ಕಾಪುಗೋಡೆಗಳನ್ನು ಹಟದಿಂದ ರಕ್ಷಿಸಿಕೊಳ್ಳಲಾಗುತ್ತಿತ್ತು”. (132)
ಗೆರಿಲ್ಲಾಗಳು ಹೊಂಚುದಾಳಿಯನ್ನು ಯಶಸ್ವಿಯಾಗಿ ನಡೆಸಿದರು, ಉದಾಹರಣೆಗೆ ನೋಡುವುದಾದರೆ ಅವಿನಹಳ್ಳಿಯಲ್ಲಿ ನಡೆದ ಘಟನೆ, ಅಲ್ಲವರು ದಾಳಿ ನಡೆಸಿ ಇಬ್ಬರು ಮೈಸೂರು ಸೈನಿಕರನ್ನು ಕಣಿವೆಯಲ್ಲೇ ಸಾಯಿಸಿದರು. (133)
1833ರ ಜನವರಿ 23ರಂದು ಬನವಾಸಿಯಿಂದ ಕ್ಯಾಮೆರಾನ್ ಗೆ ಕಳುಹಿಸಿದ ವರದಿಯೊಂದರಲ್ಲಿ ಗೆರಿಲ್ಲಾಗಳ ಯಶಸ್ವಿ ದಾಳಿಗಳ ಬಗ್ಗೆ ಉಲ್ಲೇಖವಿದೆ: “…..ಅನ್ವತ್ತಿ ತಾಲ್ಲೂಕಿನ ಜಿದ್ದಾದಲ್ಲಿದ್ದ ಮೈಸೂರು ಸೈನ್ಯವು ಓಡಿ ಹೋಗಿದೆ. ದಾಳಿಯ ಕಾರಣದಿಂದಾಗಿ ಪಟೇಲರು, ವರ್ತಕರು ಮತ್ತು ರೈತರೂ ಅನ್ವತ್ತಿಗೆ ಓಡಿ ಹೋಗಿದ್ದಾರೆ….” (134)
v) ಗೆರಿಲ್ಲಾ ಸೈನ್ಯ
ಗೆರಿಲ್ಲಾ ಸೈನ್ಯದಲ್ಲಿ ಎರಡು ಹಂತದ ರಚನೆಯಿತ್ತು. ಒಂದೆಡೆ ಸಾಮಾನ್ಯ ಪಡೆಗಳಿದ್ದವು, ಆ ಪಡೆಗೆ ನೇಮಕವಾಗುವ ಜನರ ಪ್ರಾಂತ್ಯವೂ ವಿಶಾಲವಾಗಿತ್ತು ಮತ್ತೀ ಪಡೆಗಳು ಹೆಚ್ಚು ಚಲನಶೀಲವಾಗಿದ್ದವು. ಇದರಲ್ಲಿ ನಗರ ಪ್ರದೇಶದ ಹೋರಾಟಗಾರರಿದ್ದರು ಮತ್ತು ಉತ್ತರ ಕನ್ನಡ, ಬಳ್ಳಾರಿ (ಉದಾಹರಣೆಗೆ, ಭಟ್ಟರಹಳ್ಳಿಯಂತಹ ಊರುಗಳು), ಚಿತ್ರದುರ್ಗ ಮತ್ತು ಧಾರವಾಡದ ಪಡೆಗಳೂ ಉತ್ತಮ ಸಂಖೈಯಲ್ಲಿದ್ದವು. (135)
ಪ್ರಜಾಸೈನ್ಯದ ಬಗ್ಗೆ ಬಿ.ಎಸ್.ರಾಮಭಟ್ಟ ನಮಗೆ ತಿಳಿಸುತ್ತಾರೆ. ಅವರು ಹೇಳುತ್ತಾರೆ: “ಹಳ್ಳಿಗಳ ರಕ್ಷಣೆಗೋಸ್ಕರ ‘ಗ್ರಾಮ ಪಡೆಗಳನ್ನು’ ರಚಿಸಲಾಗಿತ್ತು”. (136)
ಮೇಕಿಂಗ್ ಹಿಸ್ಟರಿಯ ಒಂದನೇ ಸಂಪುಟದಲ್ಲಿ ನಾವು ವಿವರಿಸಿರುವ ಕಂದಚಾರ ಪ್ರಜಾಸೈನ್ಯವು ಈ “ಗ್ರಾಮ ಪಡೆಗಳ” ರಚನೆಗೆ ಮೂಲಾಧಾರ ಎಂಬುದರ ಬಗ್ಗೆ ಹೆಚ್ಚು ಅನುಮಾನಗಳಿಲ್ಲ. (137)
ಗೆರಿಲ್ಲಾ ಸೈನ್ಯಕ್ಕೆ ಬ್ರಹ್ಮಗಿರಿ, ಉಳವಿ, ಚೆನ್ನಗಿರಿ, ಚಂದ್ರಗುತ್ತಿ, ಸೊನಾಲೆ ಮತ್ತು ಸಸ್ವೇಹಳ್ಳಿಯಲ್ಲಿ ರಹಸ್ಯ ತರಬೇತಿ ನೀಡಲಾಗಿತ್ತು. ಬಂದೂಕು, ಕತ್ತಿ, ಈಟಿ, ಭರ್ಜಿ, ಬಿಲ್ಲು ಬಾಣದಂತಹ ಶಸ್ತ್ರಾಸ್ತ್ರಗಳನ್ನು ಹಳ್ಳಿಗಳಲ್ಲಿ ತಯಾರಿಸಿ ಬಂಡಾಯ ಸೈನ್ಯಕ್ಕೆ ರವಾನಿಸಲಾಗುತ್ತಿತ್ತು. ಈ ಚಟುವಟಿಕೆಗಳಿಗೆ ಬೇಕಾದ ಹಣವನ್ನು ಶ್ರೀಮಂತರಿಂದ ಸಂಗ್ರಹಿಸಲಾಗುತ್ತಿತ್ತು. (138)
ವಿವಿಧ ಮೂಲಗಳಿಂದ ನಮಗೆ ತಿಳಿಯುವುದೇನೆಂದರೆ ಗೆರಿಲ್ಲಾ ಪಡೆಗಳಲ್ಲಿ ಸಾಮಾನ್ಯವಾಗಿ 20 ರಿಂದ 200ರಷ್ಟು ಜನರಿರುತ್ತಿದ್ದರು. ಅನುಬಂಧ ಮೂರರ ಕಡೆಗೊಮ್ಮೆ ಕಣ್ಣಾಡಿಸಿದರೆ ಇದು ಸ್ಪಷ್ಟವಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ನಲವತ್ತು ಗೆರಿಲ್ಲಾಗಳಿರುತ್ತಿದ್ದರು. ಪಾಳೇಗಾರರ ನಾಯಕತ್ವವಿದ್ದ ಪಡೆಗಳು, ಪಾಳೇಗಾರರಿಗೆ ನಿಯತ್ತಾಗಿದ್ದ ಜನರಿದ್ದ ಪಡೆಗಳು ಮತ್ತು ಅವರ ಹಣ, ಬಂದೂಕುಗಳಿಂದ ಸಹಾಯ ಪಡೆದಿದ್ದ ಪಡೆಗಳು ಹಾಗೂ ಧಾರವಾಟ, ರಾಯಚೂರು ಮತ್ತು ಬಳ್ಳಾರಿಯಿಂದ ನೇಮಕಗೊಂಡಿದ್ದ ಪಡೆಗಳಲ್ಲಿ ಹೆಚ್ಚಿನ ಸಂಖೈಯ ಗೆರಿಲ್ಲಾಗಳಿರುತ್ತಿದ್ದರು. ಉತ್ತರ ಕನ್ನಡದ ಬುಡಿ ಬಸಪ್ಪನ ಕೆಲವು ಪಡೆಗಳಲ್ಲಿ ನಾಲ್ಕುನೂರು ಜನರಿದ್ದರು ಎಂಬ ವರದಿಗಳಿವೆ. ಇವು ಸಾಮಾನ್ಯ ಪಡೆಗಳಾಗಿದ್ದವು.
ಚಿಕ್ಕ ಪಡೆಗಳಲ್ಲಿ ಪಾಳೇಗಾರರ ಮುಂದಾಳತ್ವವಿರುತ್ತಿರಲಿಲ್ಲ ಹಾಗೂ ಅವುಗಳು ಸಾಮಾನ್ಯವಾಗಿ ರೈತ ಸಮೂಹದ ಗೆರಿಲ್ಲಾ ರಚನೆಯನ್ನು ಪ್ರತಿಫಲಿಸುತ್ತಿದ್ದವು. ಈ ಗೆರಿಲ್ಲಾ ಸೈನ್ಯದ ರಚನೆ ಮತ್ತು ಕಾರ್ಯವಿಧಾನದ ಬಗ್ಗೆ ಹೆಚ್ಚಿನ ವಿವರಗಳು ಬೇಕಿವೆಯಾದರೂ, ಹಳ್ಳಿಗಳ ಕಡೆ ಹೋರಾಟಕ್ಕೆ ಇಂತಹ ಅಸಂಖ್ಯ ಪಡೆಗಳಿದ್ದವು ಎನ್ನುವುದು ಸ್ಪಷ್ಟ. ಬಹುಶಃ ಈ ಪಡೆಗಳ ಮತ್ತದರಲ್ಲಿದ್ದ ಗೆರಿಲ್ಲಾಗಳ ಸಂಖೈಯಲ್ಲಿ ಏರುಪೇರು ಹೆಚ್ಚಿರುತ್ತಿತ್ತು ಮತ್ತು ಯುದ್ಧದ ಅಸ್ಥಿರತೆಗೆ ಪ್ರತಿಕ್ರಿಯೆಯಾಗಿ ಸ್ವಾಭಾವಿಕವಾಗಿ ಸಂಖೈ ಹೆಚ್ಚುತ್ತಿತ್ತು.
ಮೂರು ವರುಷಗಳ ಸಶಸ್ತ್ರ ಹೋರಾಟದ ಯಾವುದೇ ಸಂದರ್ಭದಲ್ಲಿ, ಗೆರಿಲ್ಲಾ ಪಡೆಯಲ್ಲಿ ಕಡಿಮೆಯೆಂದರೂ ಕೆಲವು ಸಾವಿರ ಹೋರಾಟಗಾರರಿದ್ದರು, ಶತ್ರು ಪಡೆಯ ಸಾಮರ್ಥ್ಯಕ್ಕೆ ಹೋಲಿಸಬಲ್ಲಂತಹ ಸಂಖೈ ಇದ್ದೇ ಇತ್ತು. ಬಂಡಾಯಗಾರರ ಸಂಖೈ ಹಲವು ಸಾವಿರವಿತ್ತು ಎಂಬ ಬಗೆಗಿನ ಅನೇಕ ಉಲ್ಲೇಖಗಳು ನಮಗೆ ಸಿಗುತ್ತವೆ. ತರೀಕೆರೆಯನ್ನು ವಶಪಡಿಸಿಕೊಳ್ಳಲು ದಾಳಿ ನಡೆಸಿದ ಲೆಫ್ಟಿನೆಂಟ್ ಕೊಲೊನಲ್ ರೊಚ್ ಫರ್ಟ್ ಪ್ರಕಾರ ಕೋಟೆಯಲ್ಲಿ 11,000ದಷ್ಟು ಬಂಡಾಯಗಾರರಿದ್ದರು ಮತ್ತು 750 ಜನರ ಬಳಿ ಬಂದೂಕುಗಳಿದ್ದವು. (139)
ಶಿಕಾರಿಪುರದಲ್ಲಿ, 2,000 ಬಂಡಾಯಗಾರರು ಮೈಸೂರು ಸೈನ್ಯದ ಮೇಲೆ ದಾಳಿ ನಡೆಸಿದರು. (140)
1831ರ ಮೇ 29ರಂದು ಲೆಫ್ಟಿನೆಂಟ್ ಕೊಲೊನಲ್ ಈವಾನ್ಸ್ ಗೆ ಕಳುಹಿಸಿದ ಸೂಚನೆಗಳಲ್ಲಿ ಕಾಸಾಮೈಯೂರ್: “ನಮ್ಮ ಬ್ರಿಗೇಡುಗಳು ಚಲಿಸುವ ತಾಲ್ಲೂಕುಗಳ ಯಾವುದೇ ಒಂದು ನಿರ್ದಿಷ್ಟ ಜಾಗದಲ್ಲಿ ಸೇರಿರಬಹುದಾದ ವಿರೋಧಿ ಪಡೆಗಳ ಗಾತ್ರವೆಷ್ಟು ಎಂದು ತಿಳಿದುಕೊಳ್ಳಲು ಬಹಳಷ್ಟು ಶ್ರಮಬಿದ್ದಿದ್ದೇನೆ. ನನ್ನಭಿಪ್ರಾಯದ ಪ್ರಕಾರ, ನಿಮ್ಮ ವಿರೋಧಿಗಳ ಸಂಖೈ ಯಾವುದೇ ಸಂದರ್ಭದಲ್ಲಿ 2000 ಸಶಸ್ತ್ರ ಜನರಿಗಿಂತ ಹೆಚ್ಚಿರಲಾರದು ಎಂದು ವಿಶ್ವಾಸದಿಂದ ಹೇಳಬಲ್ಲೆ….” (141)
1831ರಲ್ಲಿ ಮಾನಪ್ಪನ ನೇತೃತ್ವದಲ್ಲಿ ಹೊನ್ನಾಳಿಯ ಮೇಲೆ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡಾಗ 1,200 ಹೋರಾಟಗಾರರಿದ್ದರು ಎನ್ನಲಾಗುತ್ತದೆ. (142)
ಸ್ಥಳೀಯ ಮಟ್ಟದಲ್ಲಿ ಊಳಿಗಮಾನ್ಯತೆಯ ವಿರುದ್ಧದ ಹೋರಾಟದಲ್ಲಿ ಈ ರೈತ ಸಮೂಹದ ಸೈನಿಕ ಪಡೆಗಳು ಸಂಪೂರ್ಣ ಮೇಲುಗೈ ಸಾಧಿಸಿದವು ಎನ್ನುವುದನ್ನು ಗಮನಿಸುವುದು ಆಸಕ್ತಿದಾಯಕ ಮತ್ತು ಪ್ರಮುಖವಾದುದು. ಬ್ರಿಗ್ಸ್ ಎರಡೂವರೆ ತಿಂಗಳ ಕಾಲಾವಧಿಯಲ್ಲಿ ವರದಿ ಮಾಡಿದ 86 ಪ್ರಕರಣಗಳಲ್ಲಿ, ಗೆರಿಲ್ಲಾಗಳನ್ನು ಸೆರೆಹಿಡಿದ ಒಂದೇ ಒಂದು ಪ್ರಕರಣವಿಲ್ಲ. ಹಳ್ಳಿಗಳಲ್ಲಿ ಗೆರಿಲ್ಲಾಗಳು ಹೊಂದಿದ್ದ ಪ್ರಭಾವವು ಒಂದೆಡೆ ಈ ಕಾರ್ಯಾಚರಣೆಗಳಿಗೆ ರೈತ ಸಮೂಹ ಕೊಟ್ಟ ಬೆಂಬಲವನ್ನು ತೋರಿಸಿದರೆ ಮತ್ತೊಂದೆಡೆ ನಗರದ ಬಂಡಾಯದ ಸಂದರ್ಭದಲ್ಲಿ ಸಾಧಿಸಲಾದ ರೈತ ಸಮೂಹದ ರಾಜಕೀಯ ಬಲವನ್ನು ತೋರಿಸುತ್ತದೆ.
ಈ ಎಲ್ಲಾ ಅಂಶಗಳು ಗೆರಿಲ್ಲಾಗಳ ಸಂಖೈಯ ಬಗ್ಗೆಯಷ್ಟೇ ಮಾತನಾಡುವುದಿಲ್ಲ, ಕಾರ್ಯಾಚರಣೆಯನ್ನು ಕೇಂದ್ರೀಕೃತಗೊಳಿಸುವ ಮತ್ತು ಅವರ ಹೊಂದಾಣಿಕೆಯ ಸಾಮರ್ಥ್ಯದ ಬಗೆಗಿನ ಮುಂದಿನ ಪ್ರಶ್ನೆಗೆ ನಮ್ಮನ್ನು ಕರೆದೊಯ್ಯುತ್ತದೆ. 1833ರ ಜನವರಿ 22ರಂದು ಸಿರ್ಸಿಯಿಂದ ಕ್ಯಾಮೆರಾನ್ ಬರೆದ ಪತ್ರವು ಸಾಧಿಸಲಾದ ಕೇಂದ್ರೀಕರಣ ಮತ್ತು ವಿಕೇಂದ್ರೀಕರಣದ ಬಗ್ಗೆ ನಮಗೆ ತಿಳಿಸುತ್ತದೆ. “ನಗರದ ರಾಜ ಈ ಅರಣ್ಯದಲ್ಲಿದ್ದಾನೆಂದು ಹೇಳಲಾಗುತ್ತದೆ ಮತ್ತು ಚಿಕ್ಕ ಪುಟ್ಟ ಪಡೆಗಳನ್ನು ವಿವಿಧ ದಿಕ್ಕುಗಳಲ್ಲಿ ಚದುರಿಸಲಾಗಿದೆ….” (143)
ಒಂದು ತಾಲ್ಲೂಕಿನ ಪಡೆಯು ಒಂದು ಘಟ್ಟದಲ್ಲಿ ಒಂದೆಡೆ ಸೇರುತ್ತಿತ್ತೆಂಬ ಪುರಾವೆಗಳು ಕೇಂದ್ರೀಕರಣದ ಬಗ್ಗೆ ತಿಳಿಸುತ್ತವೆ, ಆದರೂ ಕಾರ್ಯಾಚರಣೆಯು ಸಾಮಾನ್ಯವಾಗಿ ನಲವತ್ತು ಜನರ ಪುಟ್ಟ ಪಡೆಗಳ ಮೂಲಕ ನಡೆಯುತ್ತಿತ್ತು. ಕೋಟೆಯಲ್ಲವಿತುಕೊಂಡ ಶತ್ರುಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಕೇಂದ್ರೀಕೃತ ಕಾರ್ಯಾಚರಣೆ ನಡೆಯುತ್ತಿತ್ತು. ಒಂದು ಸೂಕ್ತ ಮಟ್ಟದ ಕೇಂದ್ರೀಕೃತ ವ್ಯವಸ್ಥೆ ಇದ್ದರೂ ಅದರಲ್ಲಿ ಸಂದರ್ಭಕ್ಕನುಗುಣವಾಗಿ ಸೂಕ್ತ ಬದಲಾವಣೆಗಳಾಗುತ್ತಿದ್ದವು, ಶತ್ರುವಿದ್ದ ಪ್ರದೇಶ, ಶತ್ರುವಿನ ಸಾಮರ್ಥ್ಯ ಹಾಗೂ ಮಾಡಬೇಕಿದ್ದ ಕೆಲಸದ ಆಧಾರದ ಮೇಲೆ ಹೋರಾಟದಲ್ಲಿ ತೊಡಗಿದ ಜನರ ಸಂಖೈಯಲ್ಲಿ ಬದಲಾವಣೆಯಾಗುತ್ತಿತ್ತು. ಹಾಗಿದ್ಯೂ, ಸಾಂಪ್ರದಾಯಿಕ ರೀತಿಯ ಸೈನಿಕ ತರಬೇತಿ ಪಡೆಯದ ಕಾರಣ, ರೈತ ಸಮೂಹದ ಹೋರಾಟದ ದಕ್ಷತೆ, ಅದರಲ್ಲೂ ಜೊತೆಗೂಡಿದಾಗ, ಶತ್ರು ಸೈನ್ಯಕ್ಕಿಂತ ಎಷ್ಟೋ ಪಟ್ಟು ಕಡಿಮೆಯಿರುತ್ತಿತ್ತು. ಈ ಗೆರಿಲ್ಲಾ ಘಟಕಗಳ ಸಂರಚನೆಯಲ್ಲಿ ಹೆಚ್ಚಿನ ವೈವಿಧ್ಯತೆಯಿರುತ್ತಿತ್ತು. ಶಾಮ ರಾವರಿಂದ ನಮಗೆ ತಿಳಿಯುವಂತೆ, ಈ ಘಟಕಗಳಲ್ಲಿ ಗೌಡರು ಮತ್ತು ಕುರುಬರ ಜೊತೆಗೆ, ಈಡಿಗರು, ಬೇಡರು ಮತ್ತು ಕೊರುಮರಿದ್ದರು. ಹಿಂದುಳಿದ ಮತ್ತು ಶೋಷಿತ ಜಾತಿಗಳೂ ಕೂಡ ಉತ್ತಮ ಪ್ರಾತಿನಿಧ್ಯ ಪಡೆದಿದ್ದವು, ದಮನಿತ ಜನರ ಹೋರಾಟದ ಪಡೆಗಳು ಸ್ಥಾಪನೆಯಾಗಿದ್ದವು. ಕ್ಯಾಮೆರಾನಿನ ವರದಿಯಿಂದ ಈ ಪಡೆಗಳಲ್ಲಿ ಮಹಿಳಾ ಹೋರಾಟಗಾರರೂ ಇದ್ದರು ಎನ್ನುವುದು ತಿಳಿಯುತ್ತದೆ. “ಸೂಂಡಾ ತಾಲ್ಲೂಕಿನ ಔದಿಗೇರಿಯ ಅಣ್ಣಿಯ” ಬಗ್ಗೆ ಆತ ಪ್ರಸ್ತಾಪಿಸುತ್ತಾನೆ. (144)
ಗೆರಿಲ್ಲಾ ಯುದ್ಧವು ಬ್ರಿಟೀಷ್ ಸೈನ್ಯಕ್ಕೆ ಪ್ರತಿರೋಧವೊಡ್ಡಿತು, ಭೂಮಾಲೀಕರನ್ನು ಗುರಿಯಾಗಿಸಿತು ಮತ್ತು ದ್ವೇಷಪೂರಿತ ಅಧಿಕಾರಿಗಳನ್ನು ಇಲ್ಲವಾಗಿಸಿತು. ಈ ಗುರಿಗಳನ್ನೊರತುಪಡಿಸಿ, ಶತ್ರುಗಳ ಖಜಾನೆಯನ್ನು ವಶಪಡಿಸಿಕೊಳ್ಳಲು ತಮ್ಮ ಬಂದೂಕನ್ನು ಗುರಿಯಾಗಿಸಿದರು, ತಮ್ಮ ಹಸಿವು ನೀಗಿಸಲು ಮತ್ತು ಯುದ್ಧಕ್ಕೆ ನಿಧಿ ಸಂಗ್ರಹಿಸುವ ಸಲುವಾಗಿ ಶತ್ರುಗಳ ಸಂಪತ್ತನ್ನು ದೋಚಿದರು ಮತ್ತು ಸಂಪತ್ತಿನಿಂದ ತುಂಬಿದ್ದ ದೇವಸ್ಥಾನಗಳನ್ನು ಲೂಟಿ ಮಾಡಿದರು.
ಮುಂದಿನ ವಾರ: ನಿರ್ಣಾಯಕ ಯುದ್ಧಗಳಿಂದ ದೂರವಿರುವುದು
No comments:
Post a Comment