ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಗೆರಿಲ್ಲಾ ಯುದ್ಧದ ಒಂದು ಪ್ರಮುಖ ಲಕ್ಷಣವೆಂದರೆ ನಿರ್ಣಾಯಕ ಯುದ್ಧಗಳಿಂದ ತಪ್ಪಿಸಿಕೊಳ್ಳುವುದು. ಪಾಳೇಗಾರ ಮುಖಂಡತ್ವವು ಹೆಚ್ಚಿದ್ದ ಮತ್ತು ಕೋಟೆ ಯುದ್ಧದ ನೆನಹುಗಳು ಸಶಕ್ತವಾಗಿದ್ದ ಕೆಲವು ಸಂದರ್ಭಗಳನ್ನು ಹೊರತುಪಡಿಸಿದರೆ, ಬಂಡಾಯಗಾರರು ಸುದೀರ್ಘ ಯುದ್ಧದಿಂದ ಸಾಮಾನ್ಯವಾಗಿ ದೂರವಿರುತ್ತಿದ್ದರು ಮತ್ತು ಶತ್ರುಗಳು ಸುತ್ತುವರಿಯಬಹುದು ಎನ್ನಿಸಿದಾಗ ಶೀಘ್ರವಾಗಿ ಹಿಮ್ಮೆಟ್ಟುತ್ತಿದ್ದರು. ಯುದ್ಧದಲ್ಲಿ ತೊಡಗಿದ್ದ ಬ್ರಿಟೀಷ್ ಅಧಿಕಾರಿಗಳ ವರದಿಗಳಲ್ಲಿ ಬಂಡಾಯಗಾರರು “ಚದುರಿದ” ಬಗ್ಗೆ ಹೆಚ್ಚು ಪ್ರಸ್ತಾಪವಿದೆಯೇ ಹೊರತು ಬಂಡಾಯಗಾರರ ಸಾವಿನ ಬಗ್ಗೆಯಲ್ಲ.
ಗೆರಿಲ್ಲಾಗಳಿಗೆ ಹೆಚ್ಚಿನ ನಷ್ಟವಾಗಿದ್ದು ಕೋಟೆ ಯುದ್ಧವನ್ನು ಮಾಡಿದಾಗ, ಪಾಳೇಗಾರರ ನಾಯಕತ್ವದಲ್ಲಿ ಎನ್ನುವುದನ್ನು ಹೇಳುವ ಅವಶ್ಯಕತೆಯಿಲ್ಲವೇನೋ ಅಲ್ಲವೇ. ರಂಗಪ್ಪ ನಾಯಕರ ಕೋಟೆ ಯುದ್ಧದ ತಂತ್ರವು ಗೆರಿಲ್ಲಾಗಳಿಗೆ ವಿಪತ್ತುಕಾರಿಯಾಗಿತ್ತು.
ಹೀಗಾಗಿ ತರೀಕೆರೆ, ಕಲದುರ್ಗ ಮತ್ತು ಕಮನದುರ್ಗವನ್ನುಳಿಸಿಕೊಳ್ಳಲು ನಡೆಸಿದ ಕದನಗಳಲ್ಲಿ ಹೆಚ್ಚಿನ ನಷ್ಟವಾಯಿತು. 1831ರ ಮಾರ್ಚಿ 4ರಂದು ಲೆಫ್ಟಿನೆಂಟ್ ಕಲೋನಲ್ ರೋಚ್ ಫರ್ಟ್ ಕಾಸಾಮೈಯೂರನಿಗೆ ಬರೆದ ಪತ್ರವು ಈ ರೀತಿಯ ಸಂದರ್ಭವೊಂದರಲ್ಲಿ ಗೆರಿಲ್ಲಾಗಳಿಗೆ ಆದ ಹಾನಿಯ ಬಗ್ಗೆ ತಿಳಿಸುತ್ತದೆ: “ಬಂಡಾಯಗಾರರಲ್ಲಿ ಹೆಚ್ಚಿನವರು ತಮ್ಮ ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ನೂರರಿಂದ ಇನ್ನೂರು ಅಡಿಯಷ್ಟು ಎತ್ತರವಿದ್ದ ಬೆಟ್ಟಗಳ ಮೇಲಿನಿಂದ ಕೆಳಕ್ಕೆ ಹಾರಿ ಪ್ರಾಣ ತೊರೆದರು….. ತಮ್ಮನ್ನು ಹುಡುಕುತ್ತಿದ್ದವರ ಕೈಯಿಂದ ತಪ್ಪಿಸಿಕೊಂಡರು”. (145) ಪಾಳೇಗಾರರಿಂದ ಉತ್ತೇಜಿತವಾಗಿ ಕೋಟೆ ರಕ್ಷಿಸುವ ಕೆಲಸ ನಡೆಸಿದ್ದು ಆತ್ಮಹತ್ಯಾಕಾರಕವಾಗಿತ್ತು.
ಇದರರ್ಥ ಗೆರಿಲ್ಲಾಗಳು ಕೋಟೆ ಮತ್ತು ಪಟ್ಟಣಗಳನ್ನು ವಶಪಡಿಸಿಕೊಳ್ಳಲೇ ಇಲ್ಲ ಎಂದೇನಲ್ಲ. ಬದಲಿಗೆ ಸತ್ಯ ಇದರ ತದ್ವಿರುದ್ಧವಾಗಿತ್ತು. ಸೈನ್ಯವು ಸುಸ್ತಾಗಿತ್ತು ಎನ್ನುವಂಶವನ್ನು ತನ್ನನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಂಡು ಶತ್ರುವಿನ ನೈತಿಕತೆಯನ್ನೇ ನಾಶ ಪಡಿಸುವಲ್ಲಿ ಗೆರಿಲ್ಲಾಗಳು ಯಶಸ್ವಿಯಾಗಿದ್ದರು. ನಗರದ ಹೋರಾಟ ಇದಕ್ಕೆ ಒಳ್ಳೆಯ ಉದಾಹರಣೆ ಮತ್ತು ಈ ಹೋರಾಟವು ರಂಗಪ್ಪ ನಾಯಕ ನಡೆಸಿದ ಹೋರಾಟಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿತ್ತು.
ಈಗ ಶಿವಮೊಗ್ಗ ತಾಲ್ಲೂಕಿನ ಹೊಸನಗರ ತಾಲ್ಲೂಕಿನಲ್ಲಿರುವ ನಗರ ಪಟ್ಟಣವನ್ನು ಗೆರಿಲ್ಲಾಗಳು 1831ರ ಮೊದಲ ಭಾಗದಲ್ಲಿ ಮುತ್ತಿಗೆ ಹಾಕಿ ವಶಪಡಿಸಿಕೊಂಡರು. ನಗರ ಫೌಜುದಾರಿಯ ದಕ್ಷಿಣ ಮತ್ತು ಪೂರ್ವ ಭಾಗಗಳನ್ನು ವಶಪಡಿಸಿಕೊಂಡಿದ್ದ ಲೆಫ್ಟಿನೆಂಟ್ ಕೊಲೊನಲ್ ರೋಚ್ ಫೋರ್ಟ್ ಮತ್ತು ಅಣ್ಣಪ್ಪನ ನೇತೃತ್ವದ ಜಂಟಿ ಸೈನ್ಯ ನಗರದ ಕಡೆಗೆ ಪಯಣ ಬೆಳೆಸಿತು. “ರೋಚ್ ಫೋರ್ಟ್ ಮತ್ತು ಅಣ್ಣಪ್ಪ ನಗರದ ಸಮೀಪ ಬಂದಾಗ ನಗರವು ಬಂಡಾಯಗಾರರ ಕೈವಶವಾಗಿದ್ದು ಅರಿವಾಯಿತು. ಒಂದಷ್ಟು ಪ್ರತಿರೋಧವನ್ನು ಬಂಡಾಯಗಾರರು ತೋರಿದರಾದರೂ ಮಾರ್ಚಿ 26ರ ಮುಂಜಾನೆ ನಗರವನ್ನು ಮೈಸೂರು ಪಡೆಗಳು ಸ್ವಾಧೀನ ಪಡಿಸಿಕೊಂಡವು, ಬಂಡಾಯಗಾರರರು ಹಿಂದಿನ ರಾತ್ರಿಯೇ ಜಾಗ ಖಾಲಿ ಮಾಡಿದ್ದರು”. (146)
ಇದರಿಂದ ಸ್ಪಷ್ಟವಾಗುವುದೇನೆಂದರೆ ಗೆರಿಲ್ಲಾಗಳು ಸಂವಹನದ ಉತ್ತಮ ವ್ಯವಸ್ಥೆಯನ್ನು ಹೊಂದಿದ್ದರು ಹಾಗೂ ಬ್ರಿಟೀಷರ ಸೈನ್ಯ ಮುತ್ತಿಗೆ ಹಾಕುವುದಕ್ಕೆ ಕೆಲವೇ ಘಂಟೆಗಳ ಮೊದಲು ಕೋಟೆಯಿಂದ ಜಾರಿಕೊಂಡಿದ್ದರು. ಹಾಗಾಗ್ಯೂ, ಹೋಗುವುದಕ್ಕೆ ಮೊದಲು, “22 ಜನರನ್ನು ಸಾವಿಗೆ ದೂಡಲಾಗಿತ್ತು; ಅದರಲ್ಲಿ ಬಹುತೇಕರು ಸರಕಾರಿ ಅಧಿಕಾರಿಗಳಾಗಿದ್ದರು, ಸಾಯಿಸುವುದಕ್ಕೆ ಮೊದಲು ಅನ್ನು, ಹಾಲು ಮತ್ತು ಸಕ್ಕರೆಯನ್ನು ನೀಡಲಾಗಿತ್ತು; ಮರಣದಂಡನೆ ವಿಧಿಸುವ ಮೊದಲು ನಡೆಸುತ್ತಿದ್ದ ವಿಧಿಯಾಗಿತ್ತಿದು”. (147)
1857ರಲ್ಲಿ ದೆಹಲಿ ಕೋಟೆಯು ಬಂಡಾಯಗಾರರ ಕೈವಶವಾಗಿದ್ದರ ಬಗ್ಗೆ ಮಾರ್ಕ್ಸ್ ನಡೆಸಿದ ವಿಶ್ಲೇಷಣೆಯನ್ನು ಕಡ ತೆಗೆದುಕೊಂಡರೆ; ನಗರವು “ಕೋಟೆಯ ಚಿತ್ರಣವನ್ನು ಕೊಟ್ಟು, ತನ್ನದೇ ದೇಶದ ಒಳಗಿನ ಸಂವಹನದ ದಾರಿಗಳನ್ನು ತೆರೆದಿರಿಸಿತ್ತು” ಎಂದು ಹೇಳಬಹುದು. (148)
ಅರಣ್ಯಕ್ಕೆ ಜಾರಿ ಹೋದ ಅವರು ಕೋಟೆಯ ಮೇಲೊಂದು ಕಣ್ಣಿಟ್ಟಿದ್ದರು. ವಸಾಹತು ಸೈನ್ಯ ತರಾತುರಿಯಲ್ಲಿತ್ತು ಮತ್ತು ಇತರೆ ಪಟ್ಟಣಗಳೆಡೆಗೆ ಮುಂದುವರೆಯಬೇಕಿತ್ತು. ಈ ಕಾರಣದಿಂದ ಒಂದು ಚಿಕ್ಕ ಪಡೆಯನ್ನು ಕೋಟೆ ರಕ್ಷಿಸಲೋಸುಗ ಹಿಂದೆ ಬಿಟ್ಟು ಸೈನ್ಯ ಮುಂದುವರೆಯಿತು. ಶತ್ರುಗಳ ಮುಖ್ಯ ಪಡೆಗಳು ಹಲವು ಮೈಲುಗಳಷ್ಟು ದೂರ ಕ್ರಮಿಸಿದ ಮೇಲೆ, ಗೆರಿಲ್ಲಾಗಳು ಕೋಟೆಯನ್ನು ಸುತ್ತುವರೆದರು ಮತ್ತು ದಾಳಿಯನ್ನಾರಂಭಿಸಿದರು; ಕೋಟೆಯ ಮೇಲಿನ ದಾಳಿಯು ಶತ್ರು ಪಡೆಗಳನ್ನು ಹತ್ಯೆಗೈದಿತು ಮತ್ತು ಕೆಲವೇ ದಿನಗಳ ಹಿಂದೆ ತಮ್ಮ ವಿರೋಧಿಗಳ ಕೇಂದ್ರವಾಗಿದ್ದ ಸ್ಥಳದಲ್ಲಿ ತಮ್ಮಧಿಕಾರವನ್ನು ಪುನರ್ ಸ್ಥಾಪಿಸಿದರು.
ನಗರವು ಕೈ ಬದಲಿಸಿದ್ದು ಆರಕ್ಕಿಂತ ಕಡಿಮೆ ಸಲವಂತೂ ಅಲ್ಲ ಎಂದು ನಮಗೆ ತಿಳಿದು ಬರುತ್ತದೆ. ಕೋಟೆಯನ್ನು ವಶಪಡಿಸಿಕೊಂಡ ಪ್ರತಿ ಸಂದರ್ಭದಲ್ಲೂ, ಗೆರಿಲ್ಲಾಗಳು ಅದನ್ನು ನಗರ ಜನರ ನಡುವೆ ತಮ್ಮ ಪ್ರಚಾರ ನಡೆಸುವ ಅವಕಾಶವಾಗಿ ಉಪಯೋಗಿಸಿಕೊಂಡರು, ಅವರ ಬೆಂಬಲವನ್ನು ಗೆದ್ದುಕೊಂಡರು ಮತ್ತು ಅವರ ನಡುವಿನಿಂದ ಯುದ್ಧಕ್ಕೆ ಬೇಕಾದ ಸದಸ್ಯರನ್ನು ನೇಮಿಸಿಕೊಂಡರು ಹಾಗೂ ಶತ್ರು ಪಡೆಗಳ ಜೊತೆಗೆ ಕೈ ಮಿಲಾಯಿಸಿದ್ದವರೆಲ್ಲರಿಗೂ ಶಿಕ್ಷೆ ನೀಡಿದರು.
ರೋಚ್ ಫೋರ್ಟನ ಪತ್ರಗಳು ಇದನ್ನು ನಿರೂಪಿಸುತ್ತದೆ: “ಹೆಚ್ಚುಕಡಿಮೆ ಮೂರು ಬದಿಗಳಲ್ಲೂ ಕೋಟೆಯು ಅರಣ್ಯದೊಟ್ಟಿಗೆ ಕೂಡಿಕೊಂಡಂತಿತ್ತು. ಈ ಕಾರಣದಿಂದಾಗಿ ಯಾವೊಬ್ಬನನ್ನೂ ಬಂಧಿತನಾಗಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ.” (149)
1831ರ ಮೇ 19ರಂದು ಕಾಸಾಮೈಯೂರ್ ಚಂದ್ರಗುತ್ತಿಯ ಬಗ್ಗೆ ಬರೆದ ಪತ್ರವು ಈ ವಿಧಾನದ ದಕ್ಷತೆ ಮತ್ತು ಪರಿಪೂರ್ಣತೆಯ ಬಗ್ಗೆ ತಿಳಿಸುತ್ತದೆ; ಇದು ಗೆರಿಲ್ಲಾ ಯುದ್ಧದ ಪ್ರಮುಖಾಂಶವಾಗಿತ್ತು: “ರೋಚ್ ಫೋರ್ಟ್ ಮುಂದುವರಿದಂತೆ, ಬಂಡಾಯಗಾರರು ದಟ್ಟ ಅರಣ್ಯಗಳಿಂದ ಗುಂಡು ಹಾರಿಸಿದರು ಮತ್ತು ಕೋಟೆಯೊಳಗೆ ಹಿಮ್ಮೆಟ್ಟಿದರು. ಆದರೆ, ರೋಚ್ ಫೋರ್ಟ್ ಕೋಟೆಯನ್ನು ವಶಪಡಿಸಿಕೊಳ್ಳಲು ಪೂರ್ಣ ಬಲದೊಂದಿಗೆ ಏರಲಾರಂಭಿಸಿದಾಗ ದಂಡಿನ ಪಟ್ಟಣವನ್ನು ತೊರೆದು, ಕೋಟೆಯನ್ನು ಸುತ್ತುವರೆದಿದ್ದ ದಟ್ಟ ಅರಣ್ಯದೊಳಗೆ ತಪ್ಪಿಸಿಕೊಂಡುಬಿಟ್ಟರು. ಚಂದ್ರಗುತ್ತಿಯಲ್ಲಿದ್ದ ಸಶಸ್ತ್ರ ಜನರ ಸಂಖೈ ಮುನ್ನೂರತ್ತಿರವಿತ್ತು ಎಂದು ಅಂದಾಜಿಸಲಾಗಿದೆ….” (150) ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಹಿಮ್ಮೆಟ್ಟುವಿಕೆ ಎಷ್ಟು ಯಶಸ್ವಿಯಾಗಿತ್ತೆಂದರೆ “ಬಂಡಾಯಗಾರರಿಗೆ ಒಂದೇ ಒಂದು ನಷ್ಟವೂ ಆಗಲಿಲ್ಲ”.
ಮೇಲ್ನೋಟಕ್ಕೆ ವಸಾಹತುಶಾಹಿಗಳಿಗೆ “ಚದುರುವಿಕೆ” ಅಥವಾ “ವಿಜಯ” ಎಂದು ತೋರಿದ್ದು ಕೇವಲ ‘ಹಿಮ್ಮೆಟ್ಟುವಿಕೆ’ಯಾಗಿತ್ತು, ಮುಖ್ಯ ಸೈನ್ಯವು ಕೋಟೆಯನ್ನು ತೊರೆದು ಹೋದ ನಂತರ ಮತ್ತೊಮ್ಮೆ ಸುತ್ತುವರಿದು ಶತ್ರುವಿಗೆ ‘ಸೋಲಿನ’ ಮೇಲೆ ‘ಸೋಲು’ಣಿಸುಲು ನಡೆಸಿದ ಹಿಮ್ಮೆಟ್ಟುವಿಕೆಯಾಗಿತ್ತಿದು. ಕೋಟೆಯನ್ನು ಮರುವಶಪಡಿಸಿಕೊಳ್ಳುವುದು ಎಷ್ಟು ವೇಗವಾಗಿ ನಡೆದಿತ್ತೆಂದರೆ, ವಿಜಯಶಾಯಿ ವಸಾಯತುಶಾಹಿ ಕೈಗೊಂಬೆ ಸೈನ್ಯ ಕೋಟೆಯನ್ನು ತೊರೆದ ಕೆಲವೇ ತಾಸುಗಳಲ್ಲಿ, ಬಂಡಾಯಗಾರರು ಕೋಟೆಯನ್ನು ವಶಪಡಿಸಿಕೊಂಡು ತಮ್ಮ ಸೈನಿಕರನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಅವರಿಗೆ ತಲುಪುತ್ತಿತ್ತು. ಉದಾಹರಣೆಗೆ, ಪ್ರಥಮ ಸೈನಿಕ ಕಾರ್ಯಾಚರಣೆಯ ಸಂದರ್ಭದಲ್ಲಿ, ಸೈನ್ಯವು ಸಾಗರವನ್ನು ತಲುಪುವ ಮೊದಲೇ ಆನಂದಪುರವು ಗೆರಿಲ್ಲಾಗಳ ವಶವಾಗಿತ್ತು ಮತ್ತು ಲೆಫ್ಟಿನೆಂಟ್ ಕೊಲೊನಲ್ ವೊಲ್ಫೆ ಶಿವಮೊಗ್ಗಕ್ಕೆ ಹೊರಟ ಕೆಲವೇ ಸಮಯದಲ್ಲಿ ಕಮನದುರ್ಗವನ್ನು ಮರಳಿ ಪಡೆದರು ಗೆರಿಲ್ಲಾಗಳು. ಸಬಲ, ಸಶಕ್ತ, ಪೂರ್ಣ ತಯಾರಾಗಿದ್ದ ಶತ್ರುವನ್ನು ಎದುರಿಸಲು ನಿರ್ಣಯದ ಯುದ್ಧಗಳನ್ನು ಪ್ರಾರಂಭಿಸದೆ, ಶತ್ರು ದುರ್ಬಲನಾಗಿದ್ದಾಗ ಅವನ ಮೇಲೆ ದಾಳಿ ನಡೆಸಿದರು, ಹೀಗೆ ಮಾಡುವುದರ ಮೂಲಕ ತಮ್ಮ ಪಡೆಗಳನ್ನು ರಕ್ಷಿಸಿಕೊಂಡರು ಮತ್ತು ಅಸಂಖ್ಯಾತ ಸಣ್ಣ ಪುಟ್ಟ ಗೆಲುವುಗಳನ್ನು ಪಡೆದುಕೊಂಡರು.
vii) ಶತ್ರುವಿಗೆ ಕೊಟ್ಟ ಉಪಟಳ
ಮುಂದುವರಿಯುತ್ತಿದ್ದಾಗ ಶತ್ರುವಿಗೆ ಉಪಟಳ ಕೊಡುವ ತಂತ್ರವು ಗೆರಿಲ್ಲಾ ಯುದ್ಧದಲ್ಲಿ ಹೇರಳವಾಗಿತ್ತು. ಇದು ಶತ್ರುವಿಗೆ ಸಣ್ಣ ಮಟ್ಟದಲ್ಲಿ ನಷ್ಟವನ್ನುಂಟುಮಾಡುತ್ತಿದ್ದುದೇ ಅಲ್ಲದೇ, ಪ್ರಮುಖ ಪರಿಣಾಮವೆಂಬಂತೆ ಸೈನ್ಯದ ಚಲನೆಯನ್ನು ತಡವಾಗಿಸುತ್ತಿತ್ತು, ಇದರಿಂದ ಸೈನ್ಯದ ವೇಳಾಪಟ್ಟಿ ಏರುಪೇರಾಗುತ್ತಿತ್ತು, ಆಹಾರವಿಲ್ಲದ ದಿನಗಳನ್ನು ಶತ್ರು ಅನುಭವಿಸುತ್ತಿದ್ದ, ಕದನದ ಸಂದರ್ಭದಲ್ಲಿ ಅವರ ಮೇಲೆ ನಿರಂತರ ಒತ್ತಡವುಂಟಾಗುತ್ತಿತ್ತು; ಚುಟುಕಾಗಿ ಹೇಳಬೇಕೆಂದರೆ ರೇಗಿ ಹೋಗುವವರೆಗೆ ಉಪಟಳ ನೀಡಲಾಗುತ್ತಿತ್ತು. ಕಾಪುಗೋಡೆಗಳನ್ನು ಈ ಕೆಲಸಕ್ಕೆ ತುಂಬಾ ಸಮರ್ಥವಾಗಿ ಉಪಯೋಗಿಸಿಕೊಳ್ಳಲಾಗುತ್ತಿತ್ತು, ಶತ್ರುವಿನ ಯುದ್ಧ ಪ್ರಗತಿಯನ್ನಿದು ತಡವಾಗಿಸುತ್ತಿತ್ತು ಹಾಗೂ ಗೆರಿಲ್ಲಾಗಳ ಹೂಡಿದ್ದ ಯುದ್ಧದ ಮುನ್ನಡೆಗಿದು ಕಾರಣವಾಗಿತ್ತು. ಈ ಕೆಳಗಿನ ಉದಾಹರಣೆಗಳು ಶತ್ರು ಸೈನ್ಯ ಮುಂದುವರೆಯುತ್ತಿದ್ದಾಗ ಗೆರಿಲ್ಲಾಗಳ ನಡೆಗಳೇಗಿದ್ದವು ಮತ್ತು ಹೇಗೆ ಅವರು ಕೋಟೆ ತಲುಪುವವರೆಗೆ ಶತ್ರು ಸೈನ್ಯಕ್ಕೆ ಉಪಟಳ ನೀಡುತ್ತಿದ್ದರು ಎನ್ನುವುದನ್ನು ವಿವರಿಸುತ್ತದೆ. ಶತ್ರುವನ್ನು ಸ್ವಂತ ನೆರಳಿನಂತೆ ಹಿಂಬಾಲಿಸಿದ್ದು ಮಾತ್ರವಲ್ಲ; ಅರಣ್ಯದಿಂದ ಕಾರ್ಯನಿರ್ವಹಿಸುತ್ತ, ಅವರು ನೆರಳಿನ ಸೈನ್ಯವೇ ಆಗಿಹೋಗಿದ್ದರು.
1831ರ ಪ್ರಾರಂಭದಲ್ಲೇ ಹಗೆತನ ಪ್ರಾರಂಭವಾಗಿದ್ದರೂ, ಈ ತಂತ್ರವನ್ನು ತುಂಬ ಪರಿಣಾಮಕಾರಿಯಾಗಿ ಉಪಯೋಗಿಸಲಾಗಿತ್ತು. ಅಣ್ಣಪ್ಪ ಕಡೂರಿನಿಂದ ತರೀಕೆರೆಯ ಕಡೆಗೆ ಪಯಣ ನಡೆಸಿದಾಗ, “ಅಣ್ಣಪ್ಪನ ಪಡೆಗಳು ಮತ್ತು ತರೀಕರೆಯ ಪಾಳೇಗಾರರ ಜನರ ನಡುವೆ ಹಲವಷ್ಟು ಕದನಗಳು ನಡೆದವು” ಎಂದು ನಮಗೆ ತಿಳಿದು ಬರುತ್ತದೆ. (151) ಅಣ್ಣಪ್ಪನನ್ನು ತರೀಕೆರೆಯಲ್ಲಿ ಸುತ್ತುವರೆದು ಆತ ಕೋಟೆಯಿಂದ ಓಡಿಹೋಗುವಂತಹ ಪರಿಸ್ಥಿತಿಯನ್ನು ನಿರ್ಮಿಸಿದಾಗ, ಅವನನ್ನು ಗೆರಿಲ್ಲಾಗಳು ಹುಡುಕಿದ್ದನ್ನು ನಾವು ನೋಡಿದ್ದೇವೆ; ಗೆರಿಲ್ಲಾಗಳು ಜೇನಿನಂತೆ ಅವನನ್ನು ಕುಟುಕುತ್ತಲೇ ಇದ್ದರು, ಅಣ್ಣಪ್ಪ ಶಿಕಾರಿಪುರ ತಲುಪುವವರೆಗೆ. ಸೈನ್ಯವು ಶಿಕಾರಿಪುರ ತಲುಪುವವರೆಗೆ “ಚಲಿಸುವ ಯುದ್ಧದಲ್ಲಿ” ತೊಡಗಿತ್ತೆಂದು ಹೇಳಲಾಗುತ್ತದೆ. (152) ಮತ್ತೆ, ರೋಚ್ ಫೋರ್ಟ್ – ಅಣ್ಣಪ್ಪನ ದಳಗಳು ಶಿಕಾರಿಪುರದಿಂದ ನಗರಕ್ಕೆ ಹೋಗುವಾಗಲೂ ಗೆರಿಲ್ಲಾ ಯುದ್ಧದ ರುಚಿಯನ್ನನುಭವಿಸಿದರು. (153)
ಈ ವಿಧಾನದಲ್ಲಿದ್ದ ನಿಖರತೆಯ ಬಗ್ಗೆ ನಮಗರಿವಾಗುವುದು ಕಮ್ಯಾಂಡರುಗಳು ಕಾಸಾಮೈಯೂರ್ ಗೆ ಕಳುಹಿಸಿದ ಪತ್ರಗಳ ಮೂಲಕ. ನಗರದ ಹಾದಿಯಲ್ಲಿದ್ದ ರೋಚ್ ಫೋರ್ಟನ ಪಡೆಯ ಮೇಲೆ ಅವಿನಹಳ್ಳಿ ತಲುಪುವ ಮೊದಲೇ ಹೊಂಚು ದಾಳಿ ನಡೆಸಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಅವನು ಬರೆಯುತ್ತಾನೆ: “1831ರ ಮಾರ್ಚಿ 23ರ ಬೆಳಿಗ್ಗೆ ನಾನು ಅವಿನಹಳ್ಳಿಯನ್ನು ಬಿಟ್ಟೆ ಮತ್ತು ಶರಾವತಿಯ ಎದುರು ದಂಡೆಯಲ್ಲಿ ಬೀಡುಬಿಟ್ಟಿದ್ದ ಬಂಡಾಯಗಾರರನ್ನು ಓಡಿಸಿದ ಮೇಲೆ ಹುಸೇಲಮಕ್ಕಿ ಎಂಬ ಚಿಕ್ಕ ಹಳ್ಳಿಯಲ್ಲಿ ಬೀಡು ಬಿಟ್ಟೆವು. ಅಲ್ಲಿ ರಾತ್ರಿ ಕಳೆಯಲು ಬೇಕಿದ್ದ ಬಯಲುಪ್ರದೇಶ ಬಹಳಷ್ಟಿತ್ತು. ಅಲ್ಲಿಂದ 20 ಮೈಲಿ ದೂರವಿರುವ ನಗರಕ್ಕೆ ಹೋಗುವುದೆಂದು ನಿರ್ಣಯಿಸಿದ್ದೆ, ಆದರೆ ಬಂಡಾಯಗಾರರು ದೊಡ್ಡ ದೊಡ್ಡ ಮರಗಳನ್ನು ಕಡಿದು ಹಾಕಿ ರಸ್ತೆಗೆ ಅಡ್ಡಲಾಗಿ ಹಾಕಿಬಿಟ್ಟಿದ್ದರು, ರಸ್ತೆಯನ್ನು ಕಾಲಾಳು ಸೈನಿಕರು ದಾಟುವುದೂ ಕಷ್ಟಸಾಧ್ಯವಾಗಿತ್ತು; ಇದರ ಜೊತೆಗೆ ಅಲ್ಲಲ್ಲಿ ಬಂದೂಕುಧಾರಿ ವ್ಯಕ್ತಿಗಳು ನಿಯೋಜಿತರಾಗಿದ್ದರು, ಅವರ ಪೀಡಕ ಗುಂಡಿನೇಟನ್ನನುಭವಿಸುತ್ತ, ದಾರಿ ಸವೆಸಿದ್ದು ಪಡೆಗಳಿಗೆ ಪ್ರಯಾಸಕರವಾಗಿತ್ತು. ಮುನ್ನೂರು ನಾಲ್ಕುನೂರು ಗಜಗಳನ್ನು ಕ್ರಮಿಸುವಷ್ಟರಲ್ಲಿ ಪಡೆಗಳನ್ನು ವಿಭಜಿಸಿ ಎಡಕ್ಕೆ ಬಲಕ್ಕೆ ಓಡಿಸುವುದು ಅವಶ್ಯವಾಗಿತ್ತು”. (154) ಈ ಕಾರಣದಿಂದಾಗಿ ಆ ಇಪ್ಪತ್ತು ಮೈಲುಗಳ ಹಾದಿ ಸವೆಸಲು ಬರೋಬ್ಬರಿ ಮೂರು ದಿನಗಳಿಡಿದವು ಮತ್ತು ನಗರಕ್ಕೆ ತಲುಪಿದಾಗ ತಾರೀಖು 25 ಆಗಿತ್ತು.
1831ರ ಮಾರ್ಚಿ 23ರ ಬರಹದಲ್ಲಿ ಕ್ಯಾಪ್ಟನ್ ಕ್ಲೆಮನ್ಸ್ ಮಂಡಗದ್ದೆಯ ಮೇಲೆ ದಾಳಿ ನಡೆಸಲು ತಾನು ನಡೆಸಿದ ಪ್ರಯತ್ನದಾರಂಭಕ್ಕೂ ಮೊದಲೇ “ಬಂಡಾಯಗಾರರು ಲಕ್ಕವಳ್ಳಿಗೆ ಓಡಿ ಹೋಗಿದ್ದರ” ಬಗ್ಗೆ ತಿಳಿಸುತ್ತಾನೆ. ಹಾಗಾಗಿ ಕ್ಲೆಮನ್ಸ್ ಬಂಡಾಯಗಾರರನ್ನು ಹುಡುಕಿಕೊಂಡು ಲಕ್ಕವಳ್ಳಿಯ ಕಡೆಗೆ ಪ್ರಯಾಣ ಆರಂಭಿಸುತ್ತಾನೆ. “ಲಕ್ಕವಳ್ಳಿಯ ಕಡೆಗೆ ಪಯಣ ಬೆಳೆಸಿದೆ. ಅಲ್ಲಿ ಮುನ್ನೂರು ಜನ ಬಂಡಾಯಗಾರರು ಕೋಟೆಯನ್ನು ವಶಕ್ಕೆ ಪಡೆದುಕೊಂಡಿದ್ದರು. ಅದರೆಡೆಗೆ ಅರಣ್ಯದ ಮೂಲಕ ನಾನು ಮುಂದುವರೆಯುತ್ತಿದ್ದಾಗ, ರಸ್ತೆಯ ಮಧ್ಯದಲ್ಲಾಕಿದ್ದ ಮರಗಳು, ಹಳ್ಳಗಳು ಆ ದಿಕ್ಕಿನಲ್ಲಿ ನಮ್ಮ ಪಡೆಗಳು ಮುನ್ನಡೆಯುವುದಕ್ಕಿದ್ದ ಪ್ರತಿರೋಧವನ್ನು ಸೂಚಿಸುತ್ತಿದ್ದವು”. (155)
1831ರ ಮೇ 3ರಂದು ಆನಂದಪುರದಿಂದ ಲೆಫ್ಟಿನೆಂಟ್ ಕೊಲೊನಲ್ ಈವಾನ್ಸ್ ಬರೆಯುತ್ತಾನೆ: “ಆನಂದಪುರದಿಂದ ಅರಣ್ಯ ಮಾರ್ಗವಾಗಿ ಎರಡು ಪ್ರಯಾಸಕರ ಪಯಣದ ಹಾದಿಯನ್ನು ದಾಟಿಕೊಂಡು ಫುಟ್ಟಿ ಬೆಟ್ಟದ ಎದುರಿಗಿನ ಬಯಲಿಗೆ ಬಂದಾಗ ಘಂಟೆ ಒಂದಾಗಿತ್ತು. ನಾನು ಕಂಡ ರಸ್ತೆಗಳೆಲ್ಲವುದರಲ್ಲೂ ಮರಗಳನ್ನು ಬೀಳಿಸಲಾಗಿತ್ತು, ಅದನ್ನು ತೆರವುಗೊಳಿಸಲು ಬಹಳಷ್ಟು ಸಮಯ ಹಿಡಿಯಿತು. ನನ್ನ ರಕ್ಷಣಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಲಾಯಿತು ಮತ್ತು ಮೊದಲಿಗಿದ್ದ ವ್ಯಕ್ತಿ ಶತ್ರುಗಳ ಗುಂಡಿಗೆ ಬಲಿಯಾದ. ದಟ್ಟಾರಣ್ಯದಲ್ಲಿ ಅವರು ಅವಿತು ಕುಳಿತುಕೊಂಡಿದ್ದರು, ಅಲ್ಲಿಗೆ ಯಾರೂ ಹೋಗಲಾಗುತ್ತಿರಲಿಲ್ಲ. ಒಮ್ಮೆಯೋ, ಎರಡು ಬಾರಿಯೋ ಅವರನ್ನು ಚದುರಿಸಲು ಯದ್ವಾತದ್ವಾ ಗುಂಡು ಹಾರಿಸಬೇಕಾಯಿತು”. (156)
ಯುದ್ಧದಲ್ಲಿ ಭಾಗವಹಿಸಿದ ಕಾಸಾಮೈಯೂರ್ ಕೂಡ ಈ ರೀತಿಯ ಉಪಚಾರವನ್ನನುಭವಿಸಿದ. 1831ರ ಮೇ 29ರಂದು ಶಿವಮೊಗ್ಗದಲ್ಲಿದ್ದಾಗ ಬರೆದ ಬರಹದಲ್ಲಿ, ಅವನು ಹೇಳುತ್ತಾನೆ: “ಅಪರೂಪಕ್ಕೆ, ಅರಣ್ಯದೊಳಗಿಂದ ನಮ್ಮ ಪಡೆಯ ಮೇಲೆ ಗುಂಡಿನ ದಾಳಿ ನಡೆಯುತ್ತಿತ್ತು”. (157)
ಗೆರಿಲ್ಲಾಗಳು ಶತ್ರುಗಳಿಗೆ ಸರಬರಾಜಾಗುತ್ತಿದ್ದ ಸಾಮಗ್ರಿಗಳ ಮೇಲೆ ದಾಳಿ ನಡೆಸಿದರು, ಅವರ ಸಂವಹನದ ಮಾರ್ಗಗಳನ್ನು ಅಸ್ತವ್ಯಸ್ತಗೊಳಿಸಿದರು ಮತ್ತು ಶತ್ರು ಸೈನ್ಯಕ್ಕೆ ಯಾವುದೇ ಸಂಪನ್ಮೂಲಗಳು ಕೊಡಬಾರದೆಂದು ಜನರನ್ನು ಉತ್ತೇಜಿಸಿದರು, ಹೀಗೆ ಯುದ್ಧದ ಜಾರಿಗೊಳಿಸುವ ಉತ್ಸಾಹದಲ್ಲಿದ್ದವರ ಯೋಜನೆಗಳನ್ನು ತಲೆಕೆಳಗು ಮಾಡಿದರು.
1831ರ ಮೇ 25ರ ಬರಹದಲ್ಲಿ ಕಾಸಾಮೈಯೂರ್ ಬಂಡಾಯಗಾರರು ಮೈಸೂರು ಸೈನ್ಯದ ಸಾಮಗ್ರಿಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಯಶಸ್ವಿಯಾಗಿ ಎತ್ತಿಕೊಂಡು ಹೋಗದ್ದರ ಕುರಿತು ತಿಳಿಸುತ್ತಾನೆ. ಸ್ವತಃ ಕಾಸಾಮೈಯೂರ್ 450 ಜನರ ಪಡೆಯೊಂದಿಗೆ ಓಬ್ರಾಣೆಯಿಂದ ಲಕ್ಕವಳ್ಳಿಗೆ ಅಜ್ಜಂಪುರದ ಮಾರ್ಗವಾಗಿ ಗೆರಿಲ್ಲಾಗಳನ್ನು ಬೆನ್ನತ್ತಿ ಹೋದರೂ ಯಾವುದೇ ಸಾಮಾನನ್ನು ಪುನರ್ ವಶಪಡಿಸಿಕೊಳ್ಳಲಾಗಲಿಲ್ಲ. (158)
1831ರ ಮೇ 21ರ ಬರಹದಲ್ಲಿ ಕುಮ್ಸಿಯಲ್ಲಿದ್ದ ಕ್ಯಾಪ್ಟನ್ ಹಚಿನ್ಸನ್, ಕುಮ್ಸಿಯಿಂದ ಮೂರು ಮೈಲು ದೂರದಲ್ಲಿ, ಆನಂದಪುರ ರಸ್ತೆಯಲ್ಲಿ ಧಾನ್ಯಗಳು ತುಂಬಿದ್ದ ನೂರು ಎತ್ತಿನ ಗಾಡಿಗಳ ಜೊತೆಗೆ ಬರುತ್ತಿದ್ದ ಮೈಸೂರು ಪಡೆಗಳ ಮೇಲೆ ಮನಪ್ಪ ನೇತೃತ್ವದ 500ರಿಂದ 600 ಬಂಡಾಯಗಾರರು ದಾಳಿ ನಡೆಸಿದರು.
No comments:
Post a Comment