ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈಗಾಗಲೇ ದೆಹಲಿಯ ಗದ್ದುಗೆಯನ್ನು ಹಿಡಿದಿರುವ ಶ್ರೀ ಅರವಿಂದ್ ಕೇಜ್ರೀವಾಲಾರವರ ಆಮ್ ಆದ್ಮಿ ಪಕ್ಷ ಇದೀಗ ಮುಂದಿನ ವರ್ಷದ ಪೂರ್ವಾರ್ದದಲ್ಲಿ ನಡೆಯಲಿರುವ ಪಂಜಾಬ್ ಮತ್ತು ಗೋವಾ ರಾಜ್ಯಗಳ ವಿದಾನಸಭಾ ಚುನಾವಣೆಗಳ ಮೇಲೆ ಕಣ್ಣು ನೆಟ್ಟಿದೆ. ಅಷ್ಟು ಮಾತ್ರವಲ್ಲದೆ ಈಗಾಗಲೇ ಈ ಎರಡೂ ರಾಜ್ಯಗಳಲ್ಲಿ ಕೆಲವು ಪ್ರಮುಖ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನೂ ಘೋಷಿಸಿದೆ. ಜೊತೆಗೆ ಲಭ್ಯವಿರುವ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣಾ ಪ್ರಚಾರವನ್ನೂ ಪ್ರಾರಂಭಿಸಿದೆ. ಈಗಾಗಲೇ ಕಳೆದ 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿರುವ ಪಂಜಾಬನ್ನು ಹೊರತು ಪಡಿಸಿ ಇದೇ ಮೊದಲ ಬಾರಿಗೆ ಚುನಾವಣಾ ರಂಗಕ್ಕೆ ಕಾಲಿರಿಸಿರುವ ಗೋವಾ ರಾಜ್ಯದಲ್ಲಿ ಆ ಪಕ್ಷ ತೀರಾ ಆಕ್ರಮಣಾ ಕಾರಿ ರಾಜಕಾರಣ ಶುರು ಮಾಡಿದೆ. ಈಗಾಗಲೇ ಗೋವಾದಲ್ಲಿ ಒಂದು ರ್ಯಾಲಿಯನ್ನೂ ನಡೆಸಿರುವ ಅರವಿಂದ್ ಕೇಜ್ರೀವಾಲರ ಸಿದ್ದತೆಗಳನ್ನು ಮತ್ತು ಪಕ್ಷದ ನಾಯಕರುಗಳ ಉತ್ಸಾಹವನ್ನು ನೋಡಿದರೆ ಈ ಬಾರಿ ಕಾಂಗ್ರೆಸ್ ಮತ್ತು ಬಾಜಪಕ್ಕೆ ಈ ಚುನಾವಣೆ ಕಷ್ಟವಾಗುವುದಂತು ಖಚಿತವೆನಿಸುತ್ತಿದೆ.
ಜೊತೆಗೆ ಇದುವರೆಗೂ ಕಾಂಗ್ರೆಸ್ಪಕ್ಷ ಯಾವ ಯಾವ ವಿಷಯಗಳನ್ನು ಇಟ್ಟುಕೊಂಡು ಗೋವಾದ ಆಡಳಿತ ಪಕ್ಷವಾದ ಬಾಜಪವನ್ನು ಎದುರಿಸಲು ಸಿದ್ದತೆ ನಡೆಸಿತ್ತೋ ಆಪ್ ಸಹ ಅವೇ ವಿಷಯಗಳನ್ನು ಕೈಗೆತ್ತಿಕೊಂಡು ಹೋರಾಡಲು ಸಿದ್ದವಾಗಿದೆ. ಇದುವರೆಗು ಕಾಂಗ್ರೆಸ್ಸಿನ ಗೋವಾ ಘಟಕದ ಅದ್ಯಕ್ಷರಾದ ಶ್ರೀ ಲೂಸಿಯಾನೊ ಫೆಲಿರೊ ಕ್ಯಾಸಿನೋ ಮಾಫೀಯಾದ ವಿರುದ್ದ ಮಾಧ್ಯಮಗಳ ಮೂಲಕ ಹೋರಾಡುತ್ತಿದ್ದರು. ಯಾಕೆಂದರೆ ಕಳೆದ ವಿದಾನಸಭಾ ಚುನಾವಣೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ಕ್ಯಾಸಿನೋಗಳನ್ನು ಮುಚ್ಚುವುದಾಗಿ ಹೇಳಿಕೊಂಡು ಅಧಿಕಾರ ಹಿಡಿದಿದ್ದ ಬಾಜಪ ನಂತರದಲ್ಲಿ ಆ ವಿಚಾರದಲ್ಲಿ ಮೌನವಾಗಿಬಿಟ್ಟಿತ್ತು. ಇದುವರೆಗು ಗೋವಾದಲ್ಲಿ ಕಾಂಗ್ರೆಸ್ಮತ್ತು ಬಾಜಪ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕ್ಯಾಸಿನೋಗಳು ಮಾತ್ರ ನಿರಾತಂಕವಾಗಿ ನಡೆಯುತ್ತಿರುತ್ತವೆ. ಹೀಗಾಗಿ ಜನತೆ ಕ್ಯಾಸಿನೊಗಳ ವಿಚಾರದಲ್ಲಿ ಇವೆರಡೂ ಪಕ್ಷಗಳನ್ನು ನಂಬುವ ಸ್ಥಿತಿಯಲ್ಲಿಲ್ಲ.
ಹೀಗಾಗಿ ಈ ಪಕ್ಷಗಳ ದೌರ್ಬಲ್ಯಗಳನ್ನು ಬಳಸಿಕೊಂಡು ಚುನಾವಣಾ ಪ್ರಚಾರ ಕೈಗೊಳ್ಳಲು ನಿರ್ದರಿಸಿದ ಆಮ್ ಆದ್ಮಿ ಪಕ್ಷ 17 ನಿಮಿಷಗಳ ಆಡಿಯೋ ಒಂದನ್ನು ಬಿಡುಗಡೆ ಮಾಡಿ ಪ್ರಚಾರ ಮಾಡುತ್ತಿದೆ. ಇದರಲ್ಲಿ ಕೇಜ್ರೀವಾಲರು ಗೋವಾದಲ್ಲಿನ ಕ್ಯಾಸಿನೋಗಳ ಬಗ್ಗೆ ಮಾತಾಡಿದ್ದು, ಕಾಂಗ್ರೆಸ್ಮತ್ತು ಬಾಜಪಗಳೆರಡು ಈ ವಿಚಾರದಲ್ಲಿ ಜನರಿಗೆ ದ್ರೋಹ ಬಗೆದಿರುವುದರಿಂದ ಅವುಗಳನ್ನು ಜನ ತಿರಸ್ಕರಿಸಬೇಕೆಂದು ಕರೆ ನೀಡಿದ್ದಾರೆ. ಕ್ಯಾಸಿನೊಗಳನ್ನು ಬಂದ್ ಮಾಡಿ ಗೋವಾದ ಸಂಸ್ಕೃತಿಯನ್ನು ಆಮ್ ಆದ್ಮಿ ಮಾತ್ರ ಉಳಿಸಬಲ್ಲದು, ಈ ವಿಚಾರದಲ್ಲಿ ನೀವು ಆಡಳಿತ ವಿರೋಧಿ ಅಲೆಯಿಂದ ಕಾಂಗ್ರೆಸ್ಸಿಗೆ ಮತ ಚಲಾಯಿಸಿದರೆ ವಿರೋಧಿ ಮತಗಳು ಚದುರಿ ಹೋಗಿ ಬಾಜಪಕ್ಕೆ ಮತ್ತೆ ಅಧಿಕಾರ ಲಬಿಸುವ ಸಾದ್ಯತೆ ಇರುವುದರಿಂದ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕೆಂದು ಕೇಜ್ರೀವಾಲರು ಮಾತಾಡಿದ್ದಾರೆ. ಈ ವಿಚಾರದಲ್ಲಿ ಬಾಜಪ ಗೋವಾಗೆ ದ್ರೋಹ ಮಾಡಿದ್ದು, ಅದಾಗಲೇ ದೆಹಲಿಯ ಆಮ್ ಆದ್ಮಿ ಸರಕಾರದ ಸಾಧನೆಗಳನ್ನು ನೋಡಿಯಾದರು ನಮ್ಮ ಪಕ್ಷಕ್ಕೆ ಮತ ಚಲಾಯಿಸಿ ಎಂದು ಜನರಿಗೆ ಆ ಆಡಿಯೋದಲ್ಲಿ ವಿನಂತಿಸಿಕೊಂಡಿದ್ದಾರೆ.
ಗೋವಾ ಚುನಾವಣಾ ಪ್ರಚಾರವನ್ನು ಲಕ್ಷ್ಯದಲ್ಲಿಟ್ಟುಕೊಂಡ ಆಮ್ ಆದ್ಮಿ ಪಕ್ಷವು ಮೂರು ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರವನ್ನು ಕೈಗೊಂಡಿದೆ. ಅವೆಂದರೆ: 1.ಕ್ಯಾಸಿನೋಗಳನ್ನು ಬಂದ್ ಮಾಡುವುದು. 2. ಗಣಿಗಾರಿಕೆಯ ನಿಷೇದ ಮತ್ತು ಪರಿಸರ ಸಂರಕ್ಷಣೆ. 3. ನಿರುದ್ಯೋಗ ಸಮಸ್ಯೆ.
1.ಕ್ಯಾಸಿನೋಗಳನ್ನು ಬಂದ್ ಮಾಡುವುದು:
ಗೋವಾಗಳಲ್ಲಿರುವ ಕ್ಯಾಸಿನೋಗಳದೇ ಇವತ್ತು ಒಂದು ಮಾಫಿಯಾವಾಗಿ ಬೆಳೆದು ನಿಂತಿದೆ. ಪ್ರತಿ ಚುನಾವಣೆಯಲ್ಲು ವಿರೋಧಪಕ್ಷಗಳು ಕ್ಯಾಸಿನೊಗಳನ್ನು ಬಂದ್ ಮಾಡುತ್ತೇವೆಂಬ ಆಶ್ವಾಸನೆ ನೀಡುವುದು, ಅಧಿಕಾರಕ್ಕೆ ಬಂದನಂತರ ಅದನ್ನು ಮರೆತುಬಿಡುವುದು ನಡೆಯುತ್ತಲೇ ಇದೆ. ಇದನ್ನು ಬಳಸಿಕೊಂಡ ಆಮ್ ಆದ್ಮಿ ಪಕ್ಷವು ಕ್ಯಾಸಿನೋಗಳನ್ನು ಬಂದ್ ಮಾಡುವ ವಿಚಾರವನ್ನು ತನ್ನ ಪ್ರಚಾರದ ಮುಖ್ಯವಿಚಾರವನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್ಮತ್ತು ಬಾಜಪಗಳು ಕ್ಯಾಸಿನೋ ಲಾಬಿಯ ಪರವಾಗಿ ಕೆಲಸ ಮಾಡುತ್ತಿದ್ದು, ಆ ಪಕ್ಷಗಳ ಚುನಾವಣೆಯ ಖರ್ಚನ್ನು ಸದರಿ ಲಾಬಿಯೇ ನೋಡಿಕೊಳ್ಳುತ್ತಿದೆ ಎಂದು ಸಹ ಆಮ್ ಆದ್ಮಿ ಟೀಕಿಸುತ್ತಿದೆ. ಸಾಮಾಜಿಕ ತಾಲಜಾಣವನ್ನು ಬಳಸಿಕೊಂಡು ಈ ವಿಚಾರದಲ್ಲಿ ಯುವಜನತೆಯ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ. ಈ ವಿಚಾರವಾಗಿ ಪಕ್ಷವು ಮುಖ್ಯಮಂತ್ರಿಯವರಿಗೆ ಪತ್ರವೊಂದನ್ನು ಬರೆಯಲು ನಿರ್ದರಿಸಿದ್ದು, ಇದಕ್ಕೆ ಸಾರ್ವಜನಿಕರ ಬೆಂಬಲ ಗಳಿಸಲು ಸತತ ಪ್ರಯತ್ನ ನಡೆಸುತ್ತಲಿದೆ.
2. ಗಣಿಗಾರಿಕೆಯನ್ನು ನಿಷೇಧಿಸಿ, ಪರಿಸರ ಸಂರಕ್ಷಣೆ ಮಾಡುವುದು:
ಗೋವಾ ರಾಜ್ಯವು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದು ಇತ್ತೀಚೆಗೆ ಅಲ್ಲಿ ಗಣಿಗಾರಿಕೆಯ ಹಾವಳಿ ಹೆಚ್ಚಿದ್ದು, ಅನೇಕ ಬಹುರಾಷ್ಟ್ರೀಯ ಕಂಪನಿಗಳು ಈ ದಂದೆಯಲ್ಲಿ ತೊಡಗಿವೆ. ಸರಕಾರಗಳು ಈ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿರುವುದರಿಂದ ಸಾರ್ವಜನಿಕರು ಅದರಲ್ಲೂ ಪರಿಸರವಾದಿಗಳು ತೀವ್ರವಾದ ಅಸಮಾದಾನ ಹೊಂದಿದ್ದಾರೆ. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಆಮ್ ಆದ್ಮಿ ಪ್ರಯತ್ನಿಸುತ್ತಿದೆ. ಪರಿಸರಕ್ಕೆ ದಕ್ಕೆ ಬಾರದ ರೀತಿಯಲ್ಲಿ ಗಣಿಗಾರಿಕೆ ಮಾಡುವ ವಿದಾನಗಳ ಬಗ್ಗೆ ಮತ್ತು ಇದಕ್ಕಾಗಿ ನೀತಿಯೊಂದನ್ನು ರಚಿಸುವ ದಿಸೆಯಲ್ಲಿಯೂ ಅದು ಯೋಚಿಸುತ್ತಿದೆ.
3. ನಿರುದ್ಯೋಗ ಸಮಸ್ಯೆ:
ಗೋವಾದಲ್ಲಿ ಅಷ್ಟೇನು ಕೈಗಾರಿಕೆಗಳು ಇಲ್ಲದ ಕಾರಣ ವಿದ್ಯಾವಂತ ಯುವಕರು ಉದ್ಯೋಗವನ್ನು ಅರಸಿ ದೇಶದ ಬೇರೆ ರಾಜ್ಯಗಳಿಗೆ ಹೋಗುವುದು ಮಾಮೂಲಿಯಾಗಿದೆ. ಸ್ಥಳೀಯವಾಗಿ ಯುವಜನತೆಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಬಗ್ಗೆ ಯೋಜನೆಯೊಂದನ್ನು ರೂಪಿಸುವ ಬಗ್ಗೆ ಮಾತಾಡುತ್ತಿರುವ ಆಮ್ ಆದ್ಮಿ ಪಕ್ಷ ಯುವಜನತೆಯನ್ನು ತನ್ನೆಡೆಗೆ ಸೆಳೆಯಲು ಯತ್ನಿಸುತ್ತಿದೆ. ಪ್ರತಿವರ್ಷ ಐದುಸಾವಿರ ಯುವಕರು ಬೇರೆ ಕಡೆಗಳಿಗೆ ವಲಸೆ ಹೋಗುತ್ತಿದ್ದು, ಇದನ್ನು ತಾನು ಅಧಿಕಾರಕ್ಕೆ ಬಂದರೆ ತಡೆಯುವುದಾಗಿ ಹೇಳಿದೆ.ಇಷ್ಟಲ್ಲದೆ ಗೋವಾದಲ್ಲಿ ಬೇರೆ ರಾಜ್ಯದಿಂದ ಬಂದಂತಹ ವಲಸಿಗರ ಸಂಖ್ಯೆ ಹೆಚ್ಚಿದ್ದು,ಅವರುಗಳ ಉದ್ಯೋಗಭದ್ರತೆಯನ್ನು ಖಾತ್ರಿ ಪಡಿಸುವ ಮಾತನ್ನೂ ಆಮ್ ಆದ್ಮಿ ಹೇಳುತ್ತಿದೆ.ಹಾಗಾಗಿ ತಾನು ವಲಸಿಗರ ವಿರೋಧಿಯಲ್ಲ ಎಂಬುದನ್ನು ಸಹ ಹೇಳುತ್ತಿದೆ.
ಈ ಎಲ್ಲ ವಿಚಾರಗಳನ್ನ ಜನರಿಗೆ ತಲುಪಿಸಿ ಅವರ ಪ್ರತಿಕ್ರಿಯೆಗಳನ್ನು ಪಡೆಯಲು ಸಮಿತಿಗಳನ್ನು ರಚಿಸಿ, ತಳಮಟ್ಟದಲ್ಲಿ ಪ್ರಚಾರ ಕಾರ್ಯನಡೆಸುತ್ತಿದೆ.ಹೀಗೆ ಗೋವಾದ ರಾಜಕಾರಣಕ್ಕೆ ಪ್ರಥಮಬಾರಿಗೆ ಕಾಲಿಟ್ಟಿರುವ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ಮತ್ತು ಬಾಜಪದ ವಿರುದ್ದ ತೀವ್ರತರವಾದ ಆಕ್ರಮಣಕಾರಿ ಪ್ರಚಾರ ಕಾರ್ಯವನ್ನು ಪ್ರಾರಂಬಿಸಿದೆ. ಈಗಾಗಲೇ ದೆಹಲಿಯಲ್ಲಿ ಅಧಿಕಾರ ಹಿಡಿದಿರುವ ಆಮ್ ಆದ್ಮಿ ಪಕ್ಷವು ಗೋವಾದಲ್ಲಿ ಗೆಲ್ಲದೇ ಹೋದರು ಅತಂತ್ರ ವಿದಾನಸಭೆಯೊಂದನ್ನು ಸೃಷ್ಠಿಸುವ ಮಟ್ಟಿಗೆ ಪ್ರಬಲವಾಗುತ್ತ ಹೋಗುತ್ತಿದೆ ಎನ್ನುವುದು ರಾಜಕೀಯ ಪಂಡಿತರ ವಿಶ್ಲೇಷಣೆಯಾಗಿದೆ.
No comments:
Post a Comment