Nov 8, 2016

ಮೊದಲು ಕವಿತೆ ಹೀಗಿರಲಿಲ್ಲ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈ ಮೊದಲು ಕವಿತೆ ಹೀಗಿರಲಿಲ್ಲ
ಕಾಡಂಚಲ್ಲಿ ದನಕರುಗಳ ಮೇಯಿಸುತ್ತಿದ್ದ ಹರಯದ ಹುಡುಗ ಹುಡುಗಿಯರ ಕೊರಳಲ್ಲಿ ಹುಟ್ಟಿ
ಊರೊಳಗಿನ
ರಾಗಿ ಬೀಸುವ ಹೆಂಗಸರ ಗಂಟಲೊಳಗೆ
ಹರಯದ ಹುಡುಗಿಯರ ಹೊಸಗೆಯ ಆರತಿಯೊಳಗೆ
ಜೋಳಿಗೆ ಹಾಕಿ ಕೇರಿಗಳ ತಿರುಗುತ್ತಿದ್ದಅಲೆಮಾರಿ ಕೊರಳುಗಳೊಳಗೆ
ಹಾಡುಗಳಾಗಿ ಬೆಳೆಯುತ್ತ ಹೋಯಿತು.

ನಂತರ ಅರಮನೆಗಳ ಖಾಸಗಿ ದರ್ಬಾರುಗಳಲ್ಲಿ
ರಾಜನರ್ತಕಿಯರ ಕುಣಿತ ಮಣಿತಗಳಲ್ಲಿ
ಅಂತ:ಪುರಗಳ ರಾಣಿಯರ ಸುದೀರ್ಘ ವಿರಹದುರಿಗಳ ದನಿಯಾಗಿ
ವಂದಿ ಮಾಗದರುಗಳ ಬೋಪರಾಕುಗಳಾಗಿ
ಭಟ್ಟಂಗಿಗಳ ಉತ್ತುಂಗದ್ವನಿಯ ಘೋಷಣೆಗಳಾಗಿ
ಬೆಳೆಯುತ್ತ ಕೊಳೆಯುತ್ತ ಹೋಯಿತು.

ಇದೀಗ ಅದು ಮತ್ತೆ ಬಂದು ನಿಂತಿದೆ ಬೀದಿಗೆ
ಎಲ್ಲ ಕಳೆದುಕೊಂಡವರ ಗಂಟಲಿಗೆ!

No comments:

Post a Comment