ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಅರ್ಥವಾಗುವ ಒಂದು ವಿಷಯವೆಂದರೆ: ಆಡಳಿತಾರೂಢ ಕಾಂಗ್ರೆಸ್ ವಿರೋಧಪಕ್ಷಗಳಿವೆಯೆಂಬುದನ್ನು ಮರೆತಂತೆ ತನ್ನ ಪಾಡಿಗೆ ತಾನು ಅಡರಿದ ಮಂಪರಿನಲ್ಲಿ ಆಡಳಿತ ನಡೆಸುತ್ತಿದ್ದರೆ (ಆಡಳಿತದ ವೈಖರಿಯ ಬಗ್ಗೆ ಬೇರೆಯದೇ ಆಗಿ ಬರೆಯಬೇಕಾಗುತ್ತದೆ), ಅಧಿಕೃತ ವಿರೋಧಪಕ್ಷವಾದ ಬಾಜಪ ವಸ್ತುನಿಷ್ಠವಾಗಿ ಆಡಳಿತದ ಲೋಪದೋಷಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಹಾಗು ಜನಪರ ಆಡಳಿತದ ಬಗ್ಗೆ ಸರಕಾರದ ಕಣ್ಣು ತೆರೆಸುವ ಯಾವುದೇ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳದೆ, ಕೇವಲ ಜನರನ್ನು ಬಾವನಾತ್ಮಕವಾಗಿ ಕೆರಳಿಸುವಂತಹ ಜನಪ್ರಿಯವಾಗಬಲ್ಲಂತ ವಿಷಯಗಳನ್ನೇ ಮುಂಚೂಣಿಯಲ್ಲಿಟ್ಟುಕೊಂಡು ತನ್ನ ರಾಜಕೀಯ ಮಾಡುತ್ತಿದೆ (ಇದನ್ನು ಸಹ ಪ್ರತ್ಯೇಕವಾಗಿ ಬರೆಯಬಹುದಾಗಿದೆ).
ಇನ್ನುಳಿದಿರುವ ಜಾತ್ಯಾತೀತ ಜನತಾದಳ ಒಂದು ರಾಜಕೀಯ ಪಕ್ಷವಾಗಿ ಉಳಿದಿದೆಯೇ ಮತ್ತು ವಿರೋಧಪಕ್ಷವಾಗಿ ಆ ನಿಟ್ಟಿನಲ್ಲಿ ಹೇಗೆ ಕೆಲಸ ಮಾಡುತ್ತಿದೆಯೇ ಎಂದು ನೋಡಿದರೆ ನಿರಾಶೆಯಾಗುವುದಂತು ನಿಜ. ಸದ್ಯಕ್ಕಂತು ಅದೊಂದು ಸ್ಪಷ್ಟ ಸಿದ್ದಾಂತವಿರದ ಅನುಕೂಲಸಿಂಧು ರಾಜಕಾರಣ ಮಾಡುವಂತಹ ಪಕ್ಷವೆಂಬಂತೆ ಕಾಣುತ್ತಿದೆ. ಇನ್ನು ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣವನ್ನು ಶತಾಯಗತಾಯ ವಿರೋಧಿಸುತ್ತಲೇ ಹುಟ್ಟಿದ ಜನತಾ ಪರಿವಾರದ ಒಂದು ಭಾಗವಾಗಿ ಉಳಿದಿರುವ ಅದೀಗ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಬಲ್ಲ ನೈತಿಕತೆಯನ್ನು ತೊಂಭತ್ತರ ದಶಕದಲ್ಲಿಯೇ ಕಳೆದುಕೊಂಡಿತು. ತೊಂಭತ್ತರ ದಶಕದ ನಂತರ ಬಾಜಪದ ಕೋಮುವಾದವನ್ನು ವಿರೋಧಿಸುತ್ತೇನೆಂದು ರಾಜಕೀಯ ಮಾಡಿಕೊಂಡು ಬಂದ ಅದು ನೋಡಿತು. ತದನಂತರದಲ್ಲಾದ ರಾಜಕೀಯ ಬೆಳವಣಿಗೆಗಳು ಕೋಮುವಾದವನ್ನು ಎದುರಿಸಿನಿಂತು ರಾಜಕಾರಣ ಮಾಡುವ ಅದರ ನೈತಿಕ ಬಲವನ್ನೇ ಉಡುಗಿಸಿಬಿಟ್ಟವು. 2006ರಲ್ಲಿ ನಡೆದ ಕುಮಾರಸ್ವಾಮಿಯವರ ರಾಜಕೀಯ ಕ್ಷಿಪ್ರಕ್ರಾಂತಿಯ ಪರಿಣಾಮವಾಗಿ ಬಾಜಪದ ಸಖ್ಯದೊಡನೆ ಇಪ್ಪತ್ತು ತಿಂಗಳು ಅಧಿಕಾರ ನಡೆಸಿದ ಅದು ನಂತರದಲ್ಲಿ ಸದರಿ ಮೈತ್ರಿಯನ್ನು ಮುರಿದುಕೊಂಡು ವಚನಭ್ರಷ್ಟತೆಯ ಕಳಂಕವನ್ನು ಹೊತ್ತು ಎರಡು ಚುನಾವಣೆಗಳನ್ನು ಎದುರಿಸಿತು. ಈ ನಡುವೆ ಕಾಂಗ್ರೇಸ್, ಬಾಜಪ ಸೇರಿದಂತೆ ದೇಶದ ಬಹುತೇಕ ಪ್ರಾದೇಶಿಕ ಪಕ್ಷಗಳು ಕೂಡ ಕುಟುಂಬ ರಾಜಕಾರಣದ ಫಲಾನುಭವಿಗಳಾಗುತ್ತ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತಾಡುವುದೇ ದೊಡ್ಡ ಕ್ಲೀಷೆಯಾಗಿಬಿಟ್ಟಿದೆ. ಹೀಗೆ ಭ್ರಷ್ಟಾಚಾರ,ಕುಟುಂಬರಾಜಕಾರಣ, ಕೋಮುವಾದ ಎಂದೆಲ್ಲ ಮಾತನಾಡುತ್ತಿದ್ದು, ಒಂದಷ್ಟು ಕಾಲ ತಾನೇ ಅವೆಲ್ಲದರ ಒಂದು ಭಾಗವಾಗಿ ಇದೀಗ ಕಾಂಗ್ರೆಸ್ ಮತ್ತು ಬಾಜಪದಿಂದ ಸಮಾನ ಅಂತರ ಕಾದುಕೊಂಡಿದ್ದೇನೆ ಎಂದು ಹೇಳುವ ಜನತಾದಳ ಇವತ್ತು ಕವಲುದಾರಿಯಲ್ಲಿ ನಿಂತಂತೆ ಕಾಣುತ್ತಿದೆ. ಪಕ್ಷದ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಹೆಚ್.ಡಿ.ದೇವೇಗೌಡರು ಹಾಗು ಪಕ್ಷದ ರಾಜ್ಯಾದ್ಯಕ್ಷರು ಆದ ಕುಮಾರಸ್ವಾಮಿಯವರ ನಡುವೆ ಸಿಲುಕಿಕೊಂಡಂತೆ ಕಾಣುತ್ತಿರುವ ದಳದ ಕಾರ್ಯಕರ್ತರು ಸಹ ತಮ್ಮ ಪಕ್ಷದ ಮುಂದಿನ ನಡೆಗಳ ಬಗ್ಗೆ ಗೊಂದಲಗೊಂಡಂತೆ ಕಾಣುತ್ತಿದೆ. ಪಕ್ಷದ ಹಿರಿಯ ನಾಯಕರುಗಳು ಸಹ ಈ ಬಗ್ಗೆ ಸ್ಪಷ್ಟವಾಗಿ ಮಾತಾಡದೆ ತಮ್ಮ ಮುಂದಿನ ಕಾರ್ಯಕ್ರಮಗಳ ಬಗ್ಗೆ ಯಾವ ಸೂಚನೆಯನ್ನೂ ನೀಡದೆ ಇರುವಾಗ ಸಹಜವಾಗಿಯೇ ಅದರ ಕಾರ್ಯಕರ್ತರಲ್ಲೂ ಗೊಂದಲ ಏರ್ಪಡುವುದು ಸಹಜ. ಇದೀಗ ಕವಲುದಾರಿಯಲ್ಲಿ ನಿಂತಂತೆ ಕಾಣುವ ಜನತಾದಳ ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ತನಗೆ ಅನುಕೂಲವಾಗುವ ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಾಜಪದೊಂದಿಗೆ ಸ್ಥಳೀಯವಾಗಿ ಮೈತ್ರಿಮಾಡಿಕೊಳ್ಳುತ್ತ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿದಿದೆ. ಬೆಂಗಳೂರು ನಗರ ಮಹಾಪಾಲಿಕೆಯಲ್ಲಿಯು ಅದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದೆ. ಅಧಿಕೃತ ವಿರೋಧಪಕ್ಷದ ಸ್ಥಾನ ಕಳೆದುಕೊಂಡನಂತರ ಮಂಕಾಗಿರುವಂತೆ ಕಾಣುವ ಕುಮಾರಸ್ವಾಮಿಯವರು ಆಗೀಗ ಆಡಳಿತಾರೂಢ ಕಾಂಗ್ರೆಸ್ನ ಭ್ರಷ್ಟತೆಯ ಬಗ್ಗೆ ಮುಖ್ಯಮಂತ್ರಿಗಳ ಕೆಲವು ನಿರ್ದಾರಗಳ ಬಗ್ಗೆ ಸ್ಪೋಟಕವಾಗಿ ಮಾತನಾಡಿದರೂ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂತಹ ಪ್ರಯತ್ನವನ್ನು ಅವರು ಮಾಡುತ್ತಿರುವಂತೆ ಕಾಣುತ್ತಿಲ್ಲ. ತಮ್ಮದೇ ಪಕ್ಷದ ಎಂಟು ಜನ ಶಾಸಕರು ಪಕ್ಷದ ಆದೇಶವನ್ನು ತಿರಸ್ಕರಿಸಿ ರಾಜ್ಯಸಭೆಯ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ನಂತರ, ಅವರನ್ನು ಅಮಾನತ್ತಿನಲ್ಲಿಟ್ಟಿರುವುದರಿಂದ ಈ ವಿಚಾರದಲ್ಲಿ ಅವರಿಗೆ ತಮ್ಮ ಪಕ್ಷದ ಶಾಸಕರ ಬೆಂಬಲವೂ ದೊರೆಯುತ್ತಿರುವಂತೆ ಕಾಣುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಕುಮಾರಸ್ವಾಮಿಯವರು ಮೌನಕ್ಕೆ ಶರಣಾದಂತೆ ಕಾಣುತ್ತಿದೆ. ಅದೂ ಅಲ್ಲದೆ ತಮ್ಮ ಪುತ್ರನ ಚೊಚ್ಚಲ ಸಿನಿಮಾ ತಯಾರಿಕೆ ಮತ್ತು ಬಿಡುಗಡೆಯ ಕಾರ್ಯಗಳಲ್ಲಿ ನಿರತವಾಗಿದ್ದ ಕುಮಾರಸ್ವಾಮಿಯವರು ನವೆಂಬರ್ ಮೊದಲ ವಾರದಿಂದ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆ ಮಾಡುವುದಾಗಿ ಹೇಳಿಕೊಂಡಿದ್ದರೂ ಅದಿನ್ನೂ ಸಾದ್ಯವಾಗಿಲ್ಲ. ಈ ನಡುವೆ ಕಾವೇರಿ ವಿವಾದ ಭುಗಿಲೆದ್ದ ಸನ್ನಿವೇಶದಲ್ಲಿ ಮುಖ್ಯಮಂತ್ರಿಯವರನ್ನು ಬೇಟಿಮಾಡಿ ಸೂಕ್ತ ಸಲಹೆಗಳನ್ನು ನೀಡಿದ ಮಾಜಿ ಪ್ರದಾನಿ ದೇವೇಗೌಡರು, ಕೇಂದ್ರದ ಗಮನ ಸೆಳೆಯಲು ನಡೆಸಿದ ಉಪವಾಸ ಸತ್ಯಾಗ್ರಹ ಜನರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಿದೆ. ಕುಗ್ಗುತ್ತಿದ್ದ ಪಕ್ಷದ ವರ್ಚಸ್ಸನ್ನು ಸ್ವಲ್ಪವಾದರು ವೃದ್ದಿಸಲು ನೆರವಾದ ದೇವೇಗೌಡರ ಈ ನಡೆಗಳು ಕುಮಾರಸ್ವಾಮಿಯವರಿಗೆ ಪ್ರೇರಣೆಯಾಗಬೇಕಾಗಿದೆ.
ಈಗಲಾದರು ಜನತಾದಳವು ತನ್ನ ಗೊಂದಲಗಳನ್ನು ಬದಿಗೊತ್ತಿ ಬಾಜಪ ಮತ್ತು ಕಾಂಗ್ರೆಸ್ಗೆ ಪರ್ಯಾಯ ಶಕ್ತಿಯಾಗಿ ಮತ್ತೊಮ್ಮೆ ಬೆಳೆಯುವತ್ತ ಯೋಚಿಸಬೇಕಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ನೀತಿಗಳಿಂದ ಬೇಸತ್ತಿರಬಹುದಾದ ಜನತೆಗೆ ಮೂರನೇ ಶಕ್ತಿಯೊಂದರ ಹುಡುಕಾಟವಿರುವುದು ವರ್ತಮಾನದ ರಾಕಾರಣದಲ್ಲಿ ಸಹಜವಾಗಿದ್ದು. ಈ ದಿಸೆಯಲ್ಲಿ ಆ ಮೂರನೇ ಶಕ್ತಿಯಾಗಿ ಜನತಾದಳ ಹೊರಹೊಮ್ಮಬಲ್ಲದೆಂಬ ನಂಬಿಕೆಯಿನ್ನೂ ಜನರ ಮನಸಲ್ಲಿದೆ. ಆದರೆ ಈ ನಂಬಿಕೆಯನ್ನು ಸಾಕಾರಗೊಳಿಸುವುದು ಇದೀಗ ಜನತಾದಳದ ನಾಯಕರುಗಳ ಕೈಲಿದೆ. ಮೊನ್ನೆ ತಾನೇ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ದೇವೇಗೌಡರು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಾಜಪವನ್ನು ಎದುರಿಸಲು ಮೂರನೇ ಶಕ್ತಿಯೊಂದು ಸೃಷ್ಠಿಯಾಗಬೇಕೆಂಬ ಹೇಳಿಕೆ ನೀಡಿದ್ದರು. ರಾಷ್ಟ್ರ ರಾಜಕಾರಣದಲ್ಲಿ ತೃತೀಯರಂಗದ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಗೌಡರು ರಾಜ್ಯ ರಾಜಕಾರಣದಲ್ಲಿಯೂ ಅಂತಹದೊಂದು ಪ್ರಯೋಗ ನಡೆಸಲು ಮುಂದಾಗಬೇಕಿರುವುದು ಕರ್ನಾಟಕದ ಜನತೆಯ ಬಯಕೆಯಾಗಿದೆ. ಹೀಗೆ ತೃತೀಯ ಶಕ್ತಿಯೊಂದನ್ನು ಸೃಷ್ಠಿಸುವಾಗ ಈ ನೆಲದ ರೈತ,ದಲಿತ ಮತ್ತು ಕನ್ನಡ ಸಂಘಟನೆಗಳನ್ನು ಜೊತೆ ಕರೆದೊಯ್ಯಲು ಅವರು ಪ್ರಯತ್ನಿಸಬೇಕಾಗಿದೆ. ಜಾಗತೀಕರಣದ ಮುಕ್ತ ಆರ್ಥಿಕ ನೀತಿಯ ಜೊತೆಗೆ ರಾಷ್ಟ್ರೀಯ ಪಕ್ಷಗಳ ಅವಕಾಶವಾದಿ ಅನುಕೂಲಸಿಂಧು ನೀತಿಗಳಿಂದ ಬೇಸತ್ತಿರುವ ಕನ್ನಡಿಗರಿಗೆ ತಮ್ಮದೇ ಆದ ರಾಜಕೀಯ ಶಕ್ತಿಯೊಂದರ ಅಗತ್ಯವಿದ್ದು ಅದನ್ನು ನನಸು ಮಾಡಬಲ್ಲಂತಹ ಸುವರ್ಣಾವಕಾಶ ಇವತ್ತು ಜನತಾದಳದ ಪಾಲಿಗೆ ಬಂದಿದೆ .ಸಮಾಜವಾದಿ ಹಿನ್ನೆಲೆಯಿಂದ ಬಂದು, ಸರಿಸುಮಾರು ಐದು ದಶಕಗಳ ಕಾಲ ರಾಜಕಾರಣ ಮಾಡಿಕೊಂಡು ಬಂದ ದೇವೇಗೌಡರಿಗೆ ಜನರ ಈ ಆಶಯ ಅರ್ಥವಾಗುವುದು ಕಷ್ಟವೇನಲ್ಲ. ಆದರೆ ಶಕ್ತಿರಾಜಕಾರಣ ತರುವ ಅಧಿಕಾರದ ರುಚಿಯನ್ನು ಕಂಡಿರುವ ಕುಮಾರಸ್ವಾಮಿಯವರಿಗು ಇದು ಅರ್ಥವಾದರೆ ಒಳ್ಳೆಯದು.
ಕಾಂಗ್ರೆಸಸ್ಸಿನ ಏಕತಾನತೆಯ ಜಡಗೊಂಡ ಆಡಳಿತದಿಂದ ಮತ್ತು ಬಾಜಪದ ಮತೀಯ ರಾಜಕಾರಣದ ವರಸೆಗಳಿಂದ ಬೇಸತ್ತಿರುವ ಕರ್ನಾಟಕದ ಜನತೆ ಜನತಾದಳದಿಂದ ಇಂತಹದೊಂದು ಗಟ್ಟಿನಡೆಯನ್ನು ನಿರೀಕ್ಷಿಸಿದರೆ ಅದು ಅವರ ತಪ್ಪಲ್ಲ. ಜನತಾದಳದ ನಾಯಕರುಗಳು ಇದನ್ನು ಅರ್ಥಮಾಡಿಕೊಂಡು ಮುಂದಿನ ಹೆಜ್ಜೆಗಳನ್ನು ಇಡುವುದು ರಾಜ್ಯದ ಭವಿಷ್ಯದ ದೃಷ್ಠಿಯಿಂದ ಮಾತ್ರವಲ್ಲ ಜನತಾದಳದ ಭವಿಷ್ಯದ ದೃಷ್ಠಿಯಿಂದಲೂ ಒಳ್ಳೆಯದು. ಇನ್ನಾದರು ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಈ ಬಗ್ಗೆ ಗಂಬೀರವಾದ ಆದರೆ ದೃಢವಾದ ನಿದಾರವೊಂದನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಈ ಹಿಂದೆ ನಾನು ಬಹಳ ಸಾರಿ ಬರೆದಿರುವಂತೆ ಕನ್ನಡ ಬಾಷಿಕ ಸಮುದಾಯವೊಂದು ರಾಜಕೀಯವಾಗಿ ಬಲಿಷ್ಠವಾಗಲು ತಾನು ಕಾರಣವಾಗುವ ಮೂಲಕ ಜನತಾದಳ ಐತಿಹಾಸಿಕವಾದ ನಿರ್ದಾರವೊಂದನ್ನು ತೆಗೆದುಕೊಳ್ಳುವ ಸಮಯ ಸನ್ನಿಹಿತವಾಗಿದೆ. ಈಗಲೂ ಅದು ಈ ವಿಚಾರದಲ್ಲಿ ವಿಫಲವಾದರೆ ಅದರ ರಾಜಕೀಯ ಭವಿಷ್ಯ ಮಾತ್ರವಲ್ಲ ಕನ್ನಡ ಜನಸಮುದಾಯದ ಭವಿಷ್ಯವೂ ಗೋಜಲಾಗಲಿದೆ.
No comments:
Post a Comment