Nov 23, 2016

ಬಾಜಪಕ್ಕೆ ಎದುರಾಗಿರುವ ಅಗ್ನಿಪರೀಕ್ಷೆ: ಗೋವಾ ವಿದಾನಸಭಾ ಚುನಾವಣೆ.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದುವರೆಗಿನ ರಾಷ್ಟ್ರ ರಾಜಕಾರಣದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಪಡೆಯದ ಗೋವಾ ರಾಜ್ಯದ ವಿದಾನಸಭಾ ಚುನಾವಣೆಗಳು ಮುಂದಿನ ವರ್ಷದ ಮೊದಲಭಾಗದಲ್ಲಿ ನಡೆಯಲಿವೆ. ಮೂರು ಕಾರಣಗಳಿಗಾಗಿ ಈ ಚುನಾವಣೆಗಳು ಮೊದಲಬಾರಿಗೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಮಹತ್ವ ಪಡೆಯಲಾರಂಬಿಸಿವೆ. ಈ ಮೂರು ಕಾರಣಗಳನ್ನು ತಿಳಿದು, ಸದ್ಯದ ಅಲ್ಲಿನ ರಾಜಕೀಯ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುವ ಮುಂಚೆ ಗೋವಾದ ರಾಜಕೀಯ ಹಿನ್ನೆಲೆಯನ್ನು ಒಮದಿಷ್ಟು ಅವಲೋಕಿಸೋಣ: 

1985ರವರೆಗು ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ, ನಂತರದಲ್ಲಿ ಪೂರ್ಣಪ್ರಮಾಣದ ರಾಜ್ಯ ಸ್ಥಾನಮಾನ ಪಡೆದು 40 ಸ್ಥಾನಗಳ ವಿದಾನಸಭೆ ರಚನೆಯಾಯಿತು. ಅಲ್ಲಿಯವರೆಗು ಶಕ್ತಿಶಾಲಿಯಾಗಿಯು, ಪ್ರಬಾವಶಾಲಿಯೂ ಆಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ನಂತರದ ದಿನಗಳಲ್ಲಿ ನಿದಾನವಾಗಿ ನೇಪಥ್ಯಕ್ಕೆ ಸರಿಯುತ್ತ ಕಾಂಗ್ರೆಸ್ ಮತ್ತು ಬಾಜಪಗಳು ಬೆಳೆಯುವಂತಾಯಿತು. ಅದುವರೆಗು ಗೋವಾದ ಜನತೆಯ ಮೇಲೆ ಪ್ರಬಾವ ಬೀರಿದ್ದ ಎಂಜಿಪಿ ಕ್ರಮೇಣ ಕಾಂಗ್ರೆಸ್ ಬಾಜಪಗಳ ಜೊತೆ ಆಯಾ ಸಂದರ್ಭಕ್ಕನುಗುಣವಾಗಿ ಅನುಕೂಲಸಿಂಧು ಮೈತ್ರಿ ಮಾಡಿಕೊಳ್ಳುತ್ತ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಹೆಣಗಾಡತೊಡಗಿತ್ತು.ಗೋವಾ ಚಿಕ್ಕ ರಾಜ್ಯವಾದರು ಅದರ ಸಾಕ್ಷರತಾ ಪ್ರಮಾಣ ಶೇಕಡಾ 88 ರಷ್ಟಿದೆ. ಹೀಗಾಗಿ ಅಲ್ಲಿ ಹೆಚ್ಚೇ ಎನ್ನಬಹುದಾದಷ್ಟು ಸಣ್ಣ ಪುಟ್ಟ ರಾಜಕೀಯ ಪಕ್ಷಗಳು ಜನ್ಮತಾಳಿದ್ದು ಸ್ಥಳೀಯ ರಾಜಕಾರಣದಲ್ಲಿ ಪರೋಕ್ಷವಾಗಿ ಮಹತ್ತರ ಪಾತ್ರ ವಹಿಸುತ್ತ ಬಂದಿವೆ. ತೊಂಭತ್ತರ ದಶಕದಲ್ಲಿ ಸ್ಥಾಪನೆಯಾದ ಶ್ರೀ ಶರದ್ ಪವಾರರ ಎನ್.ಸಿ.ಪಿ. ಸಹ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆದಿದ್ದು ಕಾಂಗ್ರೆಸ್ಸಿನ ಮಿತ್ರ ಪಕ್ಷವಾಗಿದೆ. 2012ರವರೆಗು ಅಧಿಕಾರ ನಡೆಸಿದ ಕಾಂಗ್ರೆಸ್ ಆ ವರ್ಷದ ಚುನಾವಣೆಯಲ್ಲಿ ಬಾಜಪದ ಎದುರು ಸೋಲನ್ನಪ್ಪಿಕೊಳ್ಳಬೇಕಾಯಿತು. ಆ ಚುನಾವಣೆಯಲ್ಲಿ ಗೋವಾದ ಒಟ್ಟು 40 ಕ್ಷೇತ್ರಗಳ ಪೈಕಿ ಬಾಜಪ ಮೈತ್ರಿಕೂಟ 24 ಸ್ಥಾನಗಳನ್ನು(ಬಾಜಪ-21,ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ-3), ಕಾಂಗ್ರೆಸ್ ಮೈತ್ರಿಕೂಟ 9 ಸ್ಥಾನಗಳನ್ನು ಗೆದ್ದವು. ಬಾಜಪದ ಮನೋಹರ್ ಪಣಿಕ್ಕರ್(ವರ್ತಮಾನದ ಕೇಂದ್ರದ ರಕ್ಷಣಾ ಸಚಿವರು) ಗೋವಾದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಎರಡೇ ವರ್ಷಗಳಲ್ಲಿ ಅಂದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸತ್ತಿಗೆ ಸ್ಪರ್ದಿಸಿಗೆದ್ದ ಪಣಿಕ್ಕರ್ ಕೇಂದ್ರದ ರಕ್ಷಣಾ ಸಚಿವರಾದ ನಂತರ ಗೋವಾದ ಮುಖ್ಯಮಂತ್ರಿಯಾಗಿ ಶ್ರೀ ಲಕ್ಷ್ಮಿಕಾಂತ್ ಪರೇಸ್ಕರ್ ಆಯ್ಕೆಯಾದರು. ಪರೇಸ್ಕರ್ ಅವರು ಪಣಿಕ್ಕರ್ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಸದಸ್ಯರೂ ಆಗಿದ್ದವರು. ಬರಲಿರುವ ವಿದಾನಸಭಾ ಚುನಾವಣೆಗಳನ್ನು ಮುಖ್ಯಮಂತ್ರಿಗಳಾದ ಪರೇಸ್ಕರ್ ಅವರ ನೇತೃತ್ವದಲ್ಲೆ ಎದುರಿಸುವ ತೀರ್ಮಾನ ಬಾಜಪದ್ದಾಗಿದ್ದರೂ, ಆಳದಲ್ಲಿ ಕಾರ್ಯಕರ್ತರ ಒಲವಿರುವುದು ಮನೋಹರ್ ಪಣಿಕ್ಕರ್ ಅವರ ಮೇಲೆಯೆ! ಆದರೆ ರಕ್ಷಣಾ ಸಚಿವರ ಸ್ಥಾನ ಕೈಬಿಟ್ಟು ರಾಜ್ಯರಾಜಕೀಯದತ್ತ ಬರಲು ಪರಿಕ್ಕರ್ ಯಾವುದೇ ಆಸಕ್ತಿ ತೋರಿಸುತ್ತಿಲ್ಲ.ಸದ್ಯಕ್ಕೆ ಮುಖ್ಯಮಂತ್ರಿಯಾಗಿರುವ ಪರೇಸ್ಕರ್ ಅವರೇ ಬಾಜಪವನ್ನು ದಡಸೇರಿಸುವ ಹೊಣೆ ಹೊತ್ತಿದ್ದಾರೆ.

ಲೇಖನದ ಆರಂಭದಲ್ಲಿ ನಾನು ಹೇಳಿದಂತೆ ಈ ಬಾರಿ ಗೋವಾದ ಚುನಾವಣೆಗಳು ರಾಷ್ಟ್ರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಆ ಕಾರಣಗಳನ್ನು ಒಂದೊಂದಾಗಿ ನೋಡೋಣ:

ಮೊದಲ ಕಾರಣ, ರಾಷ್ಟ್ರದ ರಕ್ಷಣಾ ಸಚಿವರಾಗಿರುವ ಮನೋಹರ್ ಪರಿಕ್ಕರ್ ಅವರು ಗೋವಾದ ಮಾಜಿಮುಖ್ಯಮಂತ್ರಿಯಾಗಿದ್ದು ಇತ್ತೀಚೆಗೆ ಗಡಿಯಾಚೆಗೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವಿಚಾರ ಗೋವಾ ಜನತೆಯ ಮೇಲೆ ಬೀರಬಹುದಾದ ಪರಿಣಾಮ ಏನಿರಬಹುದೆಂಬ ಕುತೂಹಲ ರಾಷ್ಟ್ರದ ಜನತೆಗೆ ಇದೆ.

ಎರಡನೆಯದು, ಈ ಬಾರಿಯ ಚುನಾವಣೆಯಲ್ಲಿ ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಹಾಕುತ್ತಿರುವುದಾಗಿದೆ. ಈಗಾಗಲೇ ಕೇಜ್ರೀವಾಲರು ಗೋವಾದಲ್ಲಿ ಕೆಲವು ಸಮಾವೇಶಗಳನ್ನು ನಡೆಸಿದ್ದು, ಗೋವಾದ ಜನರ ಸಮಸ್ಯೆಗಳನ್ನು ಚರ್ಚಿಸುವ ಗೋವಾ ಸಂವಾದ್ ಎಂಬ ಕೈಪಿಡಿಯನ್ನು ಮುದ್ರಿಸಿ ತನ್ನ ಕಾರ್ಯಕರ್ತರ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಗೋವಾದ ಸಾಕ್ಷರತಾ ಪ್ರಮಾಣ ಜಾಸ್ತಿಯಿರುವುದರಿಂದ ಆಮ್ಆದ್ಮಿಯ ಈ ಚಟುವಟಿಕೆ ಗೋವಾಜನರ ಮನಗೆಲ್ಲಬಹುದೆಂದು ಸ್ಥಳೀಯ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಬಾಜಪದ ವಿರುದ್ದವಿರಬಹುದಾದ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಕಾಂಗ್ರೇಸ್ಸಿಗೆ ಕಷ್ಟವಾಗಲಿದೆ.

ಇನ್ನು ಮೂರನೆಯ ಮತ್ತು ಅತ್ಯಂತ ಪ್ರಮುಖ ಕಾರಣ, ಗೋವಾ ಪ್ರಾಂತ್ಯದ ಆರ್.ಎಸ್.ಎಸ್. ನಲ್ಲಿ ನಡೆದಿರುವ ಭಿನ್ನಮತೀಯ ಚಟುವಟಿಕೆಗಳಿಂದಾಗಿ ಪರಿವಾರದವರಿಂದಲೇ ಬಾಜಪಕ್ಕೆ ವಿರುದ್ದವಾದ ರಾಜಕೀಯ ಪಕ್ಷವೊಂದು ಸೃಷ್ಠಿಯಾಗಿರುವುದಾಗಿದೆ. ಗೋವಾ ಆರ್.ಎಸ್.ಎಸ್. ನ ಮುಖ್ಯಸ್ಥರಾದ ಶ್ರೀ ಸುಬಾಶ್ ವೆಲಿಂಗಕರ್ ಅವರನ್ನು ಆರ್.ಎಸ್.ಎಸ್ ಉಚ್ಚಾಟಿಸಿದ್ದು, ಬಹುತೇಕ ಸ್ವಯಂಸೇವಕ ಸಂಘದ ಕಾರ್ಯಕರ್ತರು ವೆಲಿಂಗಕರ್ ಅವರ ಅನುಯಾಯಿಗಳಾಗಿರುವುದೇ ಈ ಬೆಳವಣಿಗೆಗಳಿಗೆ ಕಾರಣವೆನ್ನಬಹುದಾಗಿದೆ. ಸ್ಥಳೀಯ ಬಾಷೆಗೆ ಪ್ರಾದಾನ್ಯತೆ ನೀಡುವ ಸಲುವಾಗಿ ಆಂಗ್ಲಬಾಷೆಯ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವ ಅನುದಾನವನ್ನು ನಿಲ್ಲಿಸಬೇಕೆಂಬ ವೆಲ್ಲಿಂಗಕರ್ ಅವರ ಬೇಡಿಕೆಯನ್ನು ಒಪ್ಪದ ಗೋವಾದ ಆಡಳಿತಾರೂಢ ಬಾಜಪ ಸರಕಾರ, ಸ್ಥಳೀಯವಾಗಿ ಸಂಘದ ಮೇಲೆ ಹಿಡಿತವನ್ನು ಸಾದಿಸಲು ಪ್ರಯತ್ನಿಸಿದಾಗಲೇ ಈ ಭಿನ್ನಮತ ಸ್ಪೋಟಗೊಂಡಿತು. ಆಗ ವೆಲ್ಲಿಂಗಕರ್ ಅವರು ಗೋವಾ ಸುರಕ್ಷಾ ಮಂಚ್ ಎಂಬ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿ ಆಡಳಿತಾರೂಢ ಬಾಜಪಕ್ಕೆ ಸವಾಲೊಡ್ಡಿ ನಿಂತರು.. ಸ್ಥಳೀಯ ಆರ್.ಎಸ್.ಎಸ್. ಕಾರ್ಯಕರ್ತರ ಪ್ರಕಾರ, ಬಾಜಪ ಒಂದು ರಾಜಕೀಯ ಪಕ್ಷವಾಗಿ ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾಗಿದೆ. ಆದ್ದರಿಂದಲೇ ಅದು ಸಂಘದ ಆಂತರೀಕ ವಿದ್ಯಾಮಾನಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆಯೆಂಬ ಅಸಮಾದಾನವು ಭುಗಿಲೆದ್ದಿದೆ.ವೆಲಿಂಗಕರ್ ನೇತೃತ್ವದ ಭಾರತೀಯ ಬಹುಬಾಷಾ ಸುರಕ್ಷಾ ಮಂಚದ ಕಾರ್ಯಕರ್ತರು ಗೋವಾ ಸರಕಾರದ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವ ನೀತಿಯನ್ನು ವಿರೋಧಿಸುತ್ತಿದ್ದ ಸಂದರ್ಭದಲ್ಲಿಯೇ ಗೋವಾಗೆ ಬಂದಿದ್ದ ಬಾಜಪದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಮುಜುಗರಕ್ಕೀಡಾದ ಅಮಿತ್ ಷಾರವರೇ ವೆಲ್ಲಿಂಗಕರ್ ಉಚ್ಚಾಟನೆ ಮಾಡಿಸಿದ್ದಾರೆಂಬುದು ಗೋವಾ ಆರ್.ಸ್.ಎಸ್. ಕಾರ್ಯಕರ್ತರ ಆಪಾದನೆಯಾಗಿದ್ದು, ಇದೀಗ ಪ್ರತ್ಯೇಕ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಮಟ್ಟಕ್ಕೆ ಹೋಗಿದೆ.

ಆದರೆ ಈ ನೂತನ ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲಿ ವೆಲ್ಲಂಗಕರ್ ಯಾವುದೇ ಸ್ಥಾನ ಹೊಂದಿಲ್ಲ. ಬದಲಿಗೆ ಅವರ ಭಾರತೀಯ ಬಹುಬಾಷಾ ಮಂಚದ ಇನ್ನೊಬ್ಬ ನಾಯಕರಾಗಿರುವ ಶ್ರೀ ಆನಂದ್ ಶಿರೋಡ್ಕರ್ ಅವರು ಗೋವಾ ಸುರಕ್ಷಾ ಮಂಚ್ನ ಅದ್ಯಕ್ಷರಾಗಿದ್ದಾರೆ. ವೆಲ್ಲಿಂಗಕರ್ ಅವರ ಅಭಿಪ್ರಾಯದಂತೆ ಗೋವಾದ 40 ವಿದಾನಸಭಾ ಕ್ಷೇತ್ರಗಳ ಪೈಕಿ ಸುಮಾರು 35 ಕ್ಷೇತ್ರಗಳಲ್ಲಿ ಗೋವಾ ಸುರಕ್ಷಾ ಮಂಚ್ ತನ್ನ ಪ್ರಭಾವ ಹೊಂದಿದ್ದು, ಬಾಜಪವನ್ನು ಸೋಲಿಸುವುದೇ ಅದರ ಮುಖ್ಯ ಗುರಿಯಾಗಿರಲಿದೆ. ಈ ಕ್ಷಣಕ್ಕೂ ವೆಲ್ಲಂಗಕರ್ ಅವರ ಬಾಷಾ ಮತ್ತು ರಾಜಕೀಯ ವೇದಿಕೆಗಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಬೇಡಿಕೆಯನ್ನು ಮತ್ತು ಆಂಗ್ಲಬಾಷೆಯ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿರುವ ಅನುದಾನ ರದ್ದು ಪಡಿಸುವ ಬೇಡಿಕೆಯನ್ನು ಇಟ್ಟುಕೊಂಡು ಸರಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಲೇ ಇವೆ. ಇದರ ಜೊತೆಗೆ ವೆಲ್ಲಿಂಗ್ಕರ್ ಅವರು ಶಿವಸೇನೆ,ಗೋವಾ ಪ್ರಜಾಪಕ್ಷ, ಹಾಗು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷಗಳ ಜೊತೆ ಮೈತ್ರಿಯ ಮಾತುಕತೆ ನಡೆಸುತ್ತಿದ್ದಾರೆ. ಇಂತಹದೊಂದು ಮೈತ್ರಿಕೂಟಕ್ಕೆ ಉಳಿದ ಪಕ್ಷಗಳು ಸಮ್ಮತಿಸಿದಲ್ಲಿ, ಸ್ಥಾನ ಹಂಚಿಕೆಯ ಸೂತ್ರವೊಂದನ್ನು ರಚಿಸಿ ಹೋರಾಡುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಮೈತ್ರಿ ರಚನೆಯಾಗದೇ ಹೋದರು ತಮಗೆ ಬಾಜಪವನ್ನು ಸೋಲಿಸುವ ಶಕ್ತಿ ಇದೆಯೆಂಬ ಆತ್ಮವಿಶ್ವಾಸದ ಮಾತನ್ನೂ ಅವರು ಆಡಿದ್ದಾರೆ.ಬಾರತೀಯ ಬುಹಬಾಷಾ ಸುರಕ್ಷಾ ಮಂಚದ ರಾಜಕೀಯ ವಿಭಾಗದ ನಾಯಕರಾದ ಶ್ರೀ ಉದಯ್ ಬಾಂಬ್ರೆಯವರು ಬಾಷೆಯ ಜೊತೆಗೆ ಗೋವಾದ ಕುಡಿಯುವ ನೀರಿನ ಸಮಸ್ಯೆ ಮತ್ತು ವಿದ್ಯುತ್ ಕೊರತೆಯ ಸಮಸ್ಯೆಯನ್ನು ಕೈಗೆತ್ತಿಕೊಂಡು ಹೋರಾಡಲಿರುವುದಾಗಿ ಹೇಳಿದ್ದಾರೆ.

ಇದೆಲ್ಲದರ ಜೊತೆಗೆ ಗೋವಾ ಸುರಕ್ಷಾ ಮಂಚ್ ಒಂದು ರಾಜಕೀಯ ಪಕ್ಷವಾಗಿ ಅಸ್ಥಿತ್ವದಲ್ಲಿರುವುದರ ಜೊತೆಗೆ ತಮ್ಮ ಭಾರತೀಯ ಬಹುಬಾಷಾ ಸುರಕ್ಷಾ ಮಂಚ್ ಕೂಡ ತನ್ನ ಪ್ರತ್ಯೇಕ ಐಡೆಂಟಿಟಿಯನ್ನು ಉಳಿಸಿಕೊಂಡು ಗೋವಾ ನೆಲದ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಡಲಿದೆಯೆಂದು ಶ್ರೀ ವೆಲ್ಲಿಂಗಕರ್ ತಿಳಿಸಿದ್ದಾರೆ.

ಈ ಎಲ್ಲ ಕಾರಣಗಳಿಂದಾಗಿ ಈ ಬಾರಿಯ ಗೋವಾ ವಿದಾನಸಭಾ ಚುನಾವಣೆಗಳು ಬಾಜಪಕ್ಕೆ ಮಾತ್ರವಲ್ಲದೆ ರಾಷ್ಟ್ರೀಯ ಹಿತಾಸಕ್ತಿಯ ಕಾರಣಗಳಿಂದಲೂ ಮಹತ್ವ ಪಡೆದಿವೆ. ಏಕೆಂದರೆ ಇತಿಹಾಸದಲ್ಲಿ ಮೊದಲಬಾರಿಗೆ ರಾಷ್ಟ್ರೀಯ ಸ್ವಯಂಸೇವಸಂಘದ ನಾಯಕರೊಬ್ಬರು ಸಂಘದ ನಡೆಗಳ ವಿರುದ್ದ ಸಿಡಿದೆದ್ದು ಒಂದು ರಾಜಕೀಯ ಪಕ್ಷವನ್ನು ಕಟ್ಟಿ ತಮ್ಮ ಮಾತೃಪಕ್ಷವಾದ ಬಾಜಪಕ್ಕೆ ಸೆಡ್ಡು ಹೊಡೆದು ನಿಂತಿದ್ದಾರೆ.

ಹಾಗೆ ನೋಡಿದರೆ ಗೋವಾದ ಜೊತೆಗೆ ಗಡಿಯನ್ನು ಹಂಚಿಕೊಂಡಿರುವ ಕರ್ನಾಟಕದ ಜನತೆಗೂ ಅಲ್ಲಿನ ಚುನಾವಣೆ ಮಹತ್ವದ್ದಾಗಿದೆ. 

ಮೊದಲನೆಯದಾಗಿ, ಮಹಾದಾಯಿ ನೀರಿನ ಹಂಚಿಕೆಯ ವಿಷಯ ಎರಡೂ ರಾಜ್ಯಗಳ ಸಂಬಂದವನ್ನು ಹದಗೆಡಿಸುವ ಮಟ್ಟಕ್ಕೆ ಬಂದು ನಿಂತಿದೆ. ಎರಡೂ ಸರಕಾರಗಳು ಕೂತು ಮಾತಾಡಿದ್ದರೆ ಸುಲಭವಾಗಿ ಬಗೆಹರಿಯಬಹುದಾಗಿದ್ದ ಸಮಸ್ಯೆಯೊಂದು ರಾಜಕಾರಣಿಗಳ ಮತ್ತು ರಾಜಕೀಯ ಪಕ್ಷಗಳ ಕೈಯಲ್ಲಿ ಸಿಕ್ಕು ಅಗಾಧವಾಗಿ ಬೆಳೆದು ನಿಂತಿದೆ. ಕರ್ನಾಟಕದಲ್ಲಿ ಕಾಂಗ್ರೇಸ್ಸಿನ ಸರಕಾರವಿದ್ದು, ಗೋವಾದಲ್ಲಿ ಬಾಜಪ ಸರಕಾರವಿರುವುದರಿಂದ ಎರಡೂ ಸರಕಾರಗಳ ಮುಖ್ಯಸ್ಥರು ತಮ್ಮ ರಾಜಕೀಯ ಹಿತಕ್ಕಾಗಿ ಪರಸ್ಪರ ಮಾತುಕತೆ ನಡೆಸಲು ಸಹ ಹಿಂಜರಿಯುತ್ತಿದ್ದಾರೆ. ಈ ನಡುವೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಮಾತುಕತೆಗಾಗಿ ಗೋವಾ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದರು ಸಹ ರಾಜಕೀಯ ಕಾರಣಗಳಿಗಾಗಿ ಅವರು ಮಾತುಕತೆಗೆ ಬರಲು ನಿರಾಕರಿಸುತ್ತಿದ್ದಾರೆ. ಹಾಗಾಗಿ ಹೊಸದಾಗಿ ರಚನೆಯಾಗುವ ಸರಕಾರದ ಮುಖ್ಯಮಂತ್ರಿಗಳಾದರು ಮಾತುಕತೆಗೆ ಬರಬಹುದೇನೋ ಎಂಬ ನಿರೀಕ್ಷೆಯಲ್ಲಿರುವ ಕರ್ನಾಟಕದ ರೈತರು ಗೋವಾದ ಚುನಾವಣೆಗಳತ್ತ ಕಣ್ಣು ನೆಟ್ಟು ಕೂತಿದ್ದಾರೆ.

ಇನ್ನು ಗೋವಾದಲ್ಲಿರುವ ಕನ್ನಡ ಸಮುದಾಯದ ಮೇಲೆ ಆಗಿಂದಾಗ್ಗೆ ಅಲ್ಲಿನ ಸರಕಾರ ಮತ್ತು ಖಾಸಗಿ ವ್ಯಕ್ತಿಗಳಿಂದ ದೌರ್ಜನ್ಯ ನಡೆಯುತ್ತಲೇ ಇದ್ದು, ಅದನ್ನು ಅಲ್ಲಿಯ ಸರಕಾರ ಇದುವರೆಗು ಗಂಬೀರವಾದ ಕ್ರಮವನ್ನೇನು ಕೈಗೊಂಡಿರುವುದು ಕಂಡು ಬಂದಿಲ್ಲ. ಕಳೆದ ವರ್ಷ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಬೈನಾ ಬೀಚಿನಲ್ಲಿ ಸುಮಾರು 157 ಮನೆಗಳನ್ನು ನೆಲಸಮ ಮಾಡಿದಾಗಲೂ ಗೋವಾ ಸರಕಾರ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಹಾಗಾಗಿ ಗೋವಾ ಕನ್ನಡಿಗರನ್ನು ಸಂಪೂರ್ಣವಾಗಿ ರಕ್ಷಣೆ ಮಾಡಬಲ್ಲಂತಹ ಸರಕಾರವೊಂದು ಅಲ್ಲಿ ಅಸ್ಥಿತ್ವಕ್ಕೆ ಬರಬೇಕೆಂದು ರಾಜ್ಯದ ಜನತೆ ಬಯಸಿರುವುದು ಸಹಜವಾಗಿದೆ. ಆದ್ದರಿಂದ ಈ ಹಿನ್ನೆಲೆಯಲ್ಲಿ ಕರ್ನಾಟಕದ ಜನತೆ ಗೋವಾದ ವಿದಾನಸಭಾ ಚುನಾವಣೆಯನ್ನು ತೀವ್ರ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಕೊನೆಯದಾಗಿ:

ಬಹುಶ: ಇತ್ತೀಚೆಗಿನ ಸರ್ಜಿಕಲ್ ಸ್ಟ್ರೈಕ್ ಮತ್ತು ನೋಟು ಬ್ಯಾನುಗಳ ವಿಷಯಗಳನ್ನು ಇಟ್ಟುಕೊಂಡುಬರಲಿರುವ ಚುನಾವಣೆಗಳನ್ನು ತುಂಬಾ ಸುಲಭವಾಗಿ ಗೆಲ್ಲಬಹುದೆಂಬ ಆತ್ಮವಿಶ್ವಾಸದಿಂದ ಬೀಗುತ್ತಿರುವ ಬಾಜಪಕ್ಕಂತು ಇದು ಸವಾಲಿನ ಚುನಾವಣೆಯಾಗಲಿರುವುದು ಖಂಡಿತ!

No comments:

Post a Comment