ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಸಕ್ರಿಯ ರಾಜಕಾರಣಿಯೊಬ್ಬ ತಾನು ಮಾಡುವ ಜನಪರ ಕೆಲಸಗಳಿಗೆ ಚ್ಯುತಿ ಬಾರದಂತೆ ರಾಜಕಾರಣ ಮಾಡುವುದು ತೀರಾ ಅಪರೂಪ ಮತ್ತು ವಿಶೇಷ!. ಯಾಕೆಂದರೆ ಶಕ್ತಿರಾಜಕಾರಣದ ಕುತಂತ್ರಗಳಲ್ಲಿ ಮುಳುಗಿ ಹೋಗುವ ರಾಜಕೀಯ ನಾಯಕನೊಬ್ಬ ಜನಪರವಾಗಿ ಕೆಲಸ ಮಾಡಲಾಗದಷ್ಟು ಮಟ್ಟಿಗೆ ತನ್ನ ತಂತ್ರಗಾರಿಕೆಯಲ್ಲಿ ಮುಳುಗಿ ಹೋಗಿರುವುದನ್ನು ನಾವು ಇಂಡಿಯಾದ ಪ್ರಜಾಸತ್ತೆಯ ಇತಿಹಾಸದಲ್ಲಿ ಬಹಳಷ್ಟು ಉದಾಹರಣೆಗಳನ್ನು ಕಂಡಿದ್ದೇವೆ. ಹಾಗೆಯೇ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಭರದಲ್ಲಿ ರಾಜಕೀಯ ತಂತ್ರಗಾರಿಕೆಗಳಲ್ಲಿ ವಿಫಲರಾಗಿ ಹೋದ ಹಲವರನ್ನೂ ನಾವು ನೋಡಿರುವುದುಂಟು. ಇಂಡಿಯಾದ ಮಟ್ಟಿಗೆ ಜನಪರ ಕಾರ್ಯಗಳನ್ನೂ ಹಾಗು ಶಕ್ತಿ ರಾಜಕಾರಣವನ್ನೂ ಒಟ್ಟೊಟ್ಟಿಗೆ ಮಾಡಿಕೊಂಡು ಅದರಲ್ಲಿ ಗೆದ್ದವರ ಸಂಖ್ಯೆ ತೀರಾ ವಿರಳ.
ಬಹುಶ: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ದೇವರಾಜ್ ಅರಸುರವರು ಇಂತಹ ವಿರಳರ ಸಾಲಿಗೆ ಸೇರುತ್ತಾರೆ. ದೇವರಾಜ್ ಅರಸುರವರ ವ್ತಕ್ತಿತ್ವದ ಬಗ್ಗೆ ಹಾಗು ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಮಾಡಿದ ಜನೋಪಯೋಗಿ ಕೆಲಸಗಳ ಬಗ್ಗೆ(ಅದರಲ್ಲೂ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಶ್ರೇಯೋಭಿವೃದ್ದಿಗೆ) ಸಾಕಷ್ಟು ಜನ ಬರೆದಿದ್ದಾರೆ ಮತ್ತು ಇವತ್ತಿಗೂ ಬರೆಯುತ್ತಿದ್ದಾರೆ. ಆದರೆ ಅವರು ಅಂತಹ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಹಿಂದೆ ಅವರಿಗಿದ್ದ ಜನಪರ ಕಾಳಜಿಯನ್ನು ಗೌರವಿಸುತ್ತಲೇ ಅವರಿಗಿದ್ದಿರಬಹುದಾದ ಅಂದಿನ ರಾಜಕೀಯ ಅನಿವಾರ್ಯತೆಗಳನ್ನು ಮತ್ತು ಅವರು ಅದನ್ನು ನಿಬಾಯಿಸಿದ ರೀತಿಯ ಬಗ್ಗೆ ಒಂದಿಷ್ಟು ಅವಲೋಕಿಸುವುದಷ್ಟೇ ನನ್ನೀ ಲೇಖನದ ಉದ್ದೇಶ. ಯಾಕೆಂದರೆ ವಿಶ್ವದ ಯಾವುದೇ ದೇಶದ ಯಾವುದೇ ರಾಜಕಾರಣಿ ತೆಗೆದುಕೊಳ್ಳಬಹುದಾದ ನಿರ್ದಾರಗಳ ಹಿಂದೆ ಮತ್ತು ಮಾಡುವ ಕೆಲಸಗಳ ಹಿಂದೆ ಆತನಿಗೆ ಅರಿವಿದ್ದೋ ಇಲ್ಲದೆಯೋ ಆ ಕಾಲದ ರಾಜಕಾರಣಕೆಲಸ ಮಾಡಿರುತ್ತದೆ. ಹಾಗೆಯೇ ಶ್ರೀ ದೇವರಾಜ್ ಅರಸುರವರು ಮಾಡಿದ ಜನಪರ ಕೆಲಸಗಳ ಹಿಂದೆಯೂ ಅವತ್ತಿನ ಮಟ್ಟಿಗೆ ಅನಿವಾರ್ಯವಾದ ಹಲವು ರಾಜಕೀಯ ಕಾರಣಗಳಿದ್ದವೆಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗೆಂದು ಅರಸುರವರು ಮಾಡಿದ ಕೆಲಸಗಳ ಹಿಂದೆ ಕೇವಲ ರಾಜಕಾರಣವಿತ್ತೆಂದೇನು ಅಲ್ಲ. ಸಮಕಾಲೀನ ಶಕ್ತಿ ರಾಜಕಾರಣದ ಸವಾಲುಗಳನ್ನು ಯಶಸ್ವಿಯಾಗಿ ನಿಬಾಯಿಸುತ್ತಲೇ ಹಲವಾರು ಪ್ರಗತಿಪರ ಕೆಲಸಗಳನ್ನು ಅನುಷ್ಠಾನಗೊಳಿಸಿದ ಅರಸುರವರು ವಿಶಿಷ್ಠವಾದ ನಾಯಕರಾಗಿ ರೂಪುಗೊಳ್ಳುವುದೇ ಅವರ ಇಂತಹ ವ್ಯಕ್ತಿತ್ವದಿಂದ. ಬಹಳಷ್ಟು ಜನ ಅವರ ಜನಪರ ಕಾರ್ಯಗಳ ಬಗ್ಗೆ ಪ್ರಶಂಸಿಸುತ್ತ ಅವರೊಳಗಿದ್ದ ಒಬ್ಬ ನೈಜ ,ಚಾಣಾಕ್ಷ್ಯ ರಾಜಕಾರಣಿಯನ್ನು ನಿರ್ಲಕ್ಷಿಸುತ್ತ ಬಂದಿದ್ದಾರೆ.
ನಮ್ಮ ಬಹುತೇಕ ರಾಜಕಾರಣಿಗಳು ಹಳ್ಳಿಗಳಿಂದ ರೈತಾಪಿ ಹಿನ್ನೆಲೆಯಿಂದ ಬಂದವರಾಗಿದ್ದು, ಅವರುಗಳಿಗೆ ಹಳ್ಳಗಾಡಿನ ಕೂಲಿ ಕಾರ್ಮಿಕರ, ಕೃಷಿಕರ ಕಷ್ಟನಷ್ಟಗಳು ಗೊತ್ತಿಲ್ಲವೆಂದೇನು ಅಲ್ಲ. ಆದರೆ ತಮಗಿರುವ ಆ ತಿಳುವಳಿಕೆಯನ್ನು ಬಳಸಿ ಸರಕಾರದ ಮಟ್ಟಿಗೆ ಜನರ ಹಿತಕ್ಕಾಗಿ ಕೆಲಸ ಮಾಡಿದವರು ಬಹಳ ಅಪರೂಪ. ಆದರೆ ಸ್ವತ: ರೈತ ಕುಟುಂಬದಿಂದ ಬಂದು ಕೃಷಿ ಮಾಡುತ್ತಿದ್ದ ಅರಸುರವರು ವಿಶಿಷ್ಟ ರಾಜಕಾರಣಿಯಾಗಿದ್ದೇ ತಮ್ಮ ಕೃಷಿಬದುಕಿನ ಮತ್ತು ಗ್ರಾಮೀಣ ಬದುಕಿನ ಅನುಭವಗಳ ಆಧಾರದ ಮೇಲೆ ಅವರು ಜನರಿಗಾಗಿ ರೂಪಿಸಿ ಜಾರಿಗೆ ತಂದ ಯೋಜನೆಗಳಿಂದ.
1952ರಿಂದ ಸತತವಾಗಿ ಶಾಸಕರಾಗುತ್ತ ಬಂದು,ಒಬ್ಬ ಪ್ರಗತಿಪರ ರಾಜಕಾರಣಿಯಾಗಿದ್ದ ಅರಸುರವರನ್ನು ಇಂದಿರಾಗಾಂದಿಯವರು ಮುಖ್ಯಮಂತ್ರಿಯನ್ನಾಗಿ ಮಾಡಲು ಇದ್ದ ಬಲವಾದ ಕಾರಣಗಳೇನು ಎಂಬುದರ ಬಗ್ಗೆ ಅರ್ಥಮಾಡಿಕೊಂಡರೆ ಮಾತ್ರ ಅರಸುವರ ಅಧಿಕಾರದ ದಿನಗಳಲ್ಲಿನ ಪ್ರಗತಿಪರ ಕಾರ್ಯಗಳ ಬಗ್ಗೆ ನಮಗೆ ನಿಜವಾದ ಚಿತ್ರಣ ಸಿಗುತ್ತದೆ.1969ರಲ್ಲಿ ಕಾಂಗ್ರೇಸ್ ಇಬ್ಬಾಗವಾದಾಗ, ಇಂದಿರಾಗಾಂದಿಯವರನ್ನು ವಿರೋಧಿಸುತ್ತಿದ್ದ ಸಿಂಡಿಕೇಟನ್ನು ತೊರೆದು ಬಂದ ಅರಸುರವರು ಇಂದಿರಾರವರ ಜೊತೆನಿಂತರು. ಬಹುಶ: ಅವರ ಈ ನಿರ್ದಾರವೇ ಮುಂದೊಂದು ದಿನ ಅವರನ್ನು ಮುಖ್ಯಮಂತ್ರಿ ಪದವಿಗೇರಿಸಿತು ಎನ್ನಬಹುದು. ಇಂದಿರಾಗಾಂದಿಯವರ ವಿರೋದಿ ಬಣ ಕಾಂಗ್ರೇಸ್ (ಓ) ರಚಿಸಿಕೊಂಡಾಗ ಅದರಲ್ಲಿದ್ದ ಕರ್ನಾಟಕದ ರಾಜಕಾರಣಿಗಳನ್ನೇ ನೋಡಿ: ವೀರಶೈವ ಸಮಾಜದ ಶ್ರೀ ನಿಜಲಿಂಗಪ್ಪ, ಶ್ರೀ ವೀರೇಂದ್ರ ಪಾಟೀಲ್, ಒಕ್ಕಲಿಗ ಸಮುದಾಯದ ಶ್ರೀ ಹೆಚ್.ಡಿ.ದೇವೇಗೌಡರು ಮತ್ತು ಬ್ರಾಹ್ಮಣ ಸಮುದಾಯದ ಶ್ರೀ ರಾಮಕೃಷ್ಣ ಹೆಗಡೆಯವರು. ಹೀಗೆ ಇಂದಿರಾಗಾಂದಿಯ ಕಾಂಗ್ರೇಸ್ (ಆರ್) ವಿರುದ್ದ ಸಿಡಿದು ನಿಂತವರೆಲ್ಲ ಮೇಲ್ಜಾತಿಯ ನಾಯಕರುಗಳೇ ಆಗಿದ್ದರು.ಇಂತಹ ಸಮಯದಲ್ಲಿ ತೀರಾ ಅಲ್ಪಸಂಖ್ಯಾತ ಸಮುದಾಯದಿಂದ ಬಂದ ಶ್ರೀ ದೇವರಾಜು ಅರಸುರವರು ತಮ್ಮ ಜೊತೆಗೆ ಅಚಲವಾಗಿ ನಿಂತಿದ್ದು ಇಂದಿರಾರವರಿಗೆ ಅರಸುರವರ ಮೇಲೆ ವಿಶ್ವಾಸ ಮೂಡಲು ಒಂದು ಮುಖ್ಯ ಕಾರಣವಾಯಿತು. ಇದರ ಜೊತೆಗೆ ಶಾಸಕರಾಗಿ, ಮೈಸೂರುಭಾಗದ ಕಾಂಗ್ರೇಸ್ ನಾಯಕರಿಗೆ ಅವರು ಜನಸೇವೆ ಮಾಡುತ್ತಿದ್ದ ಪರಿಯನ್ನು, ಅವರ ಜನಪರ ಕಾಳಜಿಯನ್ನು ಕಂಡು ಕೇಳಿದ್ದ ಇಂದಿರಾಗಾಂದಿಯವರಿಗೆ ಸಿಂಡಿಕೇಟಿನ ಮೇಲ್ವರ್ಗದ ನಾಯಕರುಗಳನ್ನು ಹಣಿಯಲು ದಲಿತ, ಹಿಂದುಳಿದ ವರ್ಗಗಳ ಬೆಂಬಲದ ಅನಿವಾರ್ಯತೆಯಿತ್ತು. ಇದಕ್ಕೆ ಸೂಕ್ತವ್ಯಕ್ತಿ ಅರಸರೇ ಎಂದು ನಿರ್ದರಿಸಿದ ಶ್ರೀಮತಿ ಗಾಂದಿಯವರು 1972ರಲ್ಲಿ ರಾಜ್ಯವಿದಾನಸಭಾ ಚುನಾವಣೆಯನ್ನು ದೇವರಾಜು ಅರಸುರವರ ನೇತೃತ್ವದಲ್ಲಿ ಎದುರಿಸಿದರು. ಆ ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೇಸ್ ಅಧಿಕಾರದ ಗದ್ದುಗೆ ಹಿಡಿದು ಸಹಜವಾಗಿ ಅರಸುರವರು ಮುಖ್ಯಮಂತ್ರಿಯಾದರು. ಸದರಿ ಚುನಾವಣೆಯಲ್ಲಿ ಗೆಲ್ಲಲು ಕಾರಣವಾದದ್ದು ಇಂದಿರಾಗಾಂದಿಯವರ ಜನಪ್ರಿಯತೆ ಮತ್ತು ಅಹಿಂದ ವರ್ಗಗಳ ಬೆಂಬಲ.ಅರಸುರವರು ತಮ್ಮ ವೈಯುಕ್ತಿಕ ವರ್ಚಸ್ಸಿನಿಂದಲೂ ಈ ವರ್ಗಗಳ ಬೆಂಬಲವನ್ನು ಕಾಂಗ್ರೇಸ್ಸಿಗೆ ದೊರಕಿಸಿಕೊಡುವಲ್ಲಿಯೂ ಯಶಸ್ವಿಯಾಗಿದ್ದರು. ಯಾಕೆಂದರೆ ನಾನು ಮೇಲೆ ಉಲ್ಲೇಖಿಸಿದ ಅಷ್ಟೂ ಮೇಲ್ಜಾತಿಯ ನಾಯಕರುಗಳು ಇಂದಿರಾರವರ ವಿರುದ್ದ ನಿಂತಾಗ ಸಹಜವಾಗಿಯೇ ಕೆಳಜಾತಿಗಳು ಇಂದಿರಾ ಕಾಂಗ್ರೇಸ್ಸನ್ನು ಬೆಂಬಲಿಸಿದ್ದವು.
ಬಹುಶ: ಇದನ್ನು ದೇವರಾಜರಸುರವರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡವರು ಬೇರೆಯಾರೂ ಇರಲಿಲ್ಲ. ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡ ಅರಸುರವರು ತಮ್ಮ ಅಧಿಕಾರದ ಅವಧಿಯಲ್ಲಿ ಅಹಿಂದ ವರ್ಗಗಳ ಪರ ಕೆಲಸ ಮಾಡಲು ಇದೂ ಒಂದು ಕಾರಣವಾಗಿರಬಹುದೆಂದು ನನ್ನ ಅನಿಸಿಕೆ.ಹಳ್ಳಿಯ ಜನರ ನಡುವಿಂದ ಮೂಡಿಬಂದ ನಾಯಕನೊಬ್ಬ ನಿಜ ಅರ್ಥದಲ್ಲಿ ಹೇಗೆ ಕೆಲಸ ಮಾಡಬಹುದೋ ಆ ಅರ್ಥದಲ್ಲಿಯೇ ಅವರು ಕೆಲಸ ಮಾಡುತ್ತಾ ಹೋದರು. ಬಹುಶ: ಕರ್ನಾಟಕದ ಜಾತಿ ರಾಜಕಾರಣದ ಲೆಕ್ಕಾಚಾರಗಳನ್ನು ಅರ್ಥಮಾಡಿಕೊಂಡಿದ್ದ ಕಾಂಗ್ರೇಸ್ಸಿನ ಅಂದಿನ ಹೈಕಮ್ಯಾಂಡ್ ಅಂದರೆ ಇಂದಿರಾವರು ಸಹ ಅರಸುರವರ ಬೆಂಬಲಕ್ಕೆ ನಿಂತರು.. ದೇವರಾಜ್ ಅರಸುರವರು ಕಟ್ಟುನಿಟ್ಟಾಗಿ ಜಾರಿಗೆ ತಂದ ಭೂಸುಧಾರಣಾ ಕಾನೂನಿನ ಹಿಂದೆ ಉಳುವವನಿಗೇ ಭೂಮಿ ನೀಡಬೇಕೆಂಬ ಕಾಳಜಿಯ ಜೊತೆಗೆ ಅದುವರೆಗು ಭೂಮಾಲೀಕರಾಗಿದ್ದ ಮೇಲ್ಜಾತಿಗಳನ್ನು ಬಗ್ಗುಬಡಿಯುವ ರಾಜಕೀಯ ಕಾರಣವೂ ಇತ್ತೆನ್ನುವುದನ್ನು ಅಲ್ಲಗೆಳೆಯಲಾಗದು. ಇದೇ ರೀತಿ ಮೀಸಲಾತಿ ನಿಗದಿ ಪಡಿಸಲು ಅವರು ರಚಿಸಿದ ಹಾವನೂರು ಆಯೋಗದ ಹಿಂದೆಯೂ ಜನಪರ ಕಾಳಜಿಯ ಜೊತೆಗೆ ಮೇಲ್ಜಾತಿಗಳನ್ನು ರಾಜಕೀಯವಾಗಿ ದುರ್ಬಲರನ್ನಾಗಿ ಮಾಡುವ ಇರಾದೆಯು ಇತ್ತೆಂದರೆ ತಪ್ಪಾಗಲಾರದು. ಯಾಕೆಂದರೆ ರಾಜಕಾರಣಿಯೊಬ್ಬ ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸುವಾಗ ಅದಕ್ಕೆ ಪೂರಕವಾದ ರಾಜಕೀಯ ಕಾರಣಗಳಿಂದಲೂ ಪ್ರೇರೇಪಿತನಾಗಿರುತ್ತಾನೆಂಬುದು ಸಹಜವಾದ ವಿಷಯವಾಗಿದೆ. ಯಾಕೆಂದರೆ ರಾಜಕೀಯವೆಂದರೆ ಕೇವಲ ಜನೋಪಯೋಗಿ ಕೆಲಸಗಳನ್ನು ಮಾಡುವುದು ಮಾತ್ರವಲ್ಲ,ಅದರಿಂದ ಲಾಭ ಪಡೆದ ವರ್ಗಗಳು ತಮ್ಮನ್ನು ಬೆಂಬಲಿಸುವಂತೆ ನೋಡಿಕೊಳ್ಳುವುದೂ ಆಗಿರುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದರು. ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಷ್ಟೇ ಜನಪರ ಕೆಲಸ ಮಾಡಿದರೂ, ಸಂಬಂದಿಸಿದ ವರ್ಗಗಳ ಬೆಂಬಲ ಗಳಿಸಲು ವಿಫಲರಾಗಿರುವುದು ಅವರಿಗೆ ಅರಸುರವರಿಗಿದ್ದ ದೂರದೃಷ್ಠಿಯ ಕೊರತೆ. ತಾವು ದುರ್ಬಲ ವರ್ಗಗಳಿಗೆ ಮಾಡುವ ಜನಪರ ಕೆಲಸಗಳು ತಮಗೆ ಆ ವರ್ಗದ ಬೆಂಬಲವನ್ನು ದೊರಕಿಸಿಕೊಡುವಲ್ಲಿ ಸಫಲವಾಗುತ್ತದೆಯೆಂಬ ನಂಬಿಕೆ ಅರಸರಿಗಿತ್ತು. ನಂತರ ಅದು ನಿಜವೂ ಆಯಿತು. ತತುತುಸ್ಥಿತಿಯ ನಂತರ ಇಡೀದೇಶದಲ್ಲಿ ಕಾಂಗ್ರೇಸ್ ವಿರೋಧಿ ಅಲೆಯಲ್ಲಿ ಪಕ್ಷ ಸೋತರೂ ಕರ್ನಾಟಕದಲ್ಲಿ ಮಾತ್ರ ಅದು ಗೆಲುವನ್ನು ಕಂಡಿತ್ತು.
ಇನ್ನು ಕರ್ನಾಟಕದ ಮಟ್ಟಿಗೆ ಜಾತಿರಾಜಕಾರಣಕ್ಕೆ ಹೊಸ ಬಾಷ್ಯವೊಂದನ್ನು ಬರೆಯುವಲ್ಲಿಯೂ ಅವರು ಯಶಸ್ವಿಯಾಗಿದ್ದು ಸಹ, ಅವರ ರಾಜಕೀಯ ಚಾಣಾಕ್ಷ್ಯತೆಗೆ ಒಂದು ಉತ್ತಮ ನಿದರ್ಶನವೆನ್ನಬಹುದು.ಸಮಾಜದಲ್ಲಿ ತೀರಾ ನಗಣ್ಯವೆನಿಸಿದ್ದ ಮತ್ತು ಅದುವರೆಗೂ ರಾಜಕೀಯರಂಗದಲ್ಲಿ ಗುರುತಿಸಿಕೊಳ್ಳದೇ ಇದ್ದ ಹಲವಾರು ಸಣ್ಣಪುಟ್ಟ ಜಾತಿಗಳ ನಾಯಕರನ್ನು ಶಾಸಕರನ್ನಾಗಿ, ಸಚಿವರನ್ನಾಗಿ ಮಾಡುವ ಮೂಲಕ ಆ ಜಾತಿಗಳಿಗೆ ರಾಜಕೀಯ ಶಕ್ತಿ ತುಂಬುವಲ್ಲಿ ಸಫಲರಾದರು. ಹೀಗೆ ಮಾಡುವಾಗಲೂ ಅವರೆಂದೂ ಮೇಲ್ಜಾತಿಗಳ ಜೊತೆ ಸಂಘರ್ಷಕ್ಕೆ ಇಳಿಯದೆ, ಅವರಿಗೆ ನೀಡಬೇಕಾದ ಮನ್ನಣೆಯನ್ನು ನೀಡುತ್ತಲೇ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗಗಳ ಹಲವು ನಾಯಕರುಗಳನ್ನು ಅವರು ಬೆಳೆಸುತ್ತಾ ಹೋದರು.
ದೇವರಾಜ್ ಅರಸುರವರ ಜನಪರ ಕಾಳಜಿಯನ್ನು ಒಪ್ಪಿಕೊಂಡು ಗೌರವಿಸುತ್ತಲೇ ಅವರು ತೆಗೆದುಕೊಂಡ ನಿರ್ದಾರಗಳ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನೂ ನಾವು ವಿಶ್ಲೇಷಿಸಿ ನೋಡುವುದರಿಂದ ಮಾತ್ರ ದೇವರಾಜ್ ಅರಸರಿಗೆ ನಾವು ನ್ಯಾಯ ದೊರಕಿಸಿದಂತಾಗುತ್ತದೆ.ಇಲ್ಲದೇ ಹೋದಲ್ಲಿ ವ್ಯಕ್ತಿಪೂಜೆಯ ಮಂಪರು ನಮ್ಮನ್ನು ಕವಿಯುತ್ತದೆ. ಅಹಿಂದ ವರ್ಗಗಳನ್ನು ಬೆಳೆಸಿ ಅವರನ್ನು ಅಭಿವೃದ್ದಿಯತ್ತ ಕರೆದೊಯ್ಯುವುದರಿಂದ ಪಟ್ಟಭದ್ರ ಮೇಲ್ಜಾತಿಗಳ ರಾಜಕೀಯ ಏಕಸ್ವಾಮ್ಯತೆಯನ್ನು ಮುರಿಯಬಹುದೆಂಬುದು ಅರಸರ ಲೆಕ್ಕಾಚಾರವಾಗಿತ್ತು. ಅಂತೆಯೇ ಅವರು ತಳವರ್ಗಗಳ ಜನರಿಗೆ ರಾಜಕೀಯ ಶಕ್ತಿಯನ್ನು ತುಂಬುತ್ತ, ಮೇಲ್ಜಾತಿಗಳ ವಿರುದ್ದ ರಾಜಕೀಯವಾಗಿ ಹೋರಾಡುವ ಶಕ್ತಿಯೊಂದನ್ನು ಅವರಲ್ಲಿ ತುಂಬುತ್ತ ಹೋದರು. ಎಂಭತ್ತರ ದಶಕದ ನಂತರಕೆಲವರಾದರು ಹಿಂದುಳಿದ ವರ್ಗಗಳ ನಾಯಕರುಗಳು ರಾಜ್ಯದ ಮುಖ್ಯಮಂತ್ರಿಗಳಾಗಿ ಹೊರಹೊಮ್ಮಿದ್ದರೆ ಅದಕ್ಕೆ ನಾಂದಿ ಹಾಕಿ ಹೋದವರು ಅರಸರು ಎಂಬುದನ್ನು ನಾವು ಮರೆಯುವಂತಿಲ್ಲ. ಇವತ್ತು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದು ಅಹಿಂದ ವರ್ಗಗಳ ಬಗ್ಗೆ ಮಾತನಾಡುತ್ತಿರುವುದಕ್ಕೂ ಅಂದು ಅರಸರು ತೆಗೆದುಕೊಂಡ ಹಲವು ರಾಜಕೀಯ ನಿರ್ದಾರಗಳೇ ಕಾರಣ.
ಆದರೆ ಅರಸುರವರು ಮಾಡಿದ ಈ ರಾಜಕಾರಣದ ಹಿಂದೆ ನಿಜವಾದ ಜನಪರ ಕಾಳಜಿಯೂ ಇತ್ತು ಹಾಗು ಅವತ್ತಿನ ಮಟ್ಟಿಗಿನ ರಾಜಕೀಯ ಅನಿವಾರ್ಯತೆಯೂ ಇತ್ತೆಂಬುದನ್ನು ಅಲ್ಲಗೆಳೆಯಲಾಗದು. ಅದೇನೇ ಇದ್ದರೂ ಕರ್ನಾಟಕದ ಮಟ್ಟಿಗೆ ಅರಸುರವರು ಅಹಿಮದ ವರ್ಗಕ್ಕೆ ನಿಜವಾದ ರಾಜಕೀಯ ಶಕ್ತಿಯನ್ನು ತುಂಬಿದವರೆಂಬುದು ಸತ್ಯ
(ಈ ವರ್ಷದ ಬಾನುವಾರ ಮಾಸಪತ್ರಿಕೆಯ ಶ್ರೀದೇವರಾಜ್ ಅರಸ್ ವಿಶೇಷಾಂಕಕ್ಕಾಗಿ ಬರೆದ ಲೇಖನ)
No comments:
Post a Comment